ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್

Published : 23 ಮಾರ್ಚ್ 2024, 9:56 IST
Last Updated : 23 ಮಾರ್ಚ್ 2024, 9:56 IST
ಫಾಲೋ ಮಾಡಿ
Comments

ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ - ಕೃತಕ ಬುದ್ಧಿಮತ್ತೆ) ಕಾಲ. ಇದನ್ನು ಸಮರ್ಥವಾಗಿ ಬಳಸಿದರೆ ಕೆಲಸ ಸರಳವೂ, ವೇಗವೂ ಆಗಬಹುದು. ಇಂಥ ಸಂದರ್ಭದಲ್ಲಿ ಈ ಸಮಯದ ಟ್ರೆಂಡ್ ಎಐ ಅನ್ನೇ ಕೇಂದ್ರೀಕರಿಸಿಕೊಂಡು ಕಳೆದ ತಿಂಗಳು ಮಾರುಕಟ್ಟೆಗೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಎಂಬ, ದುಬಾರಿ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಫೋನನ್ನು ಎರಡು ವಾರ ಬಳಸಿ ನೋಡಿದಾಗ ಹೇಗನಿಸಿತು ಎಂಬ ವಿಚಾರ ಇಲ್ಲಿದೆ.

ಗೂಗಲ್ ಮತ್ತು ಆ್ಯಪಲ್ ಫೋನ್‌ಗಳಿಗೆ ತೀವ್ರ ಪೈಪೋಟಿಯಾಗಿ ಕಳೆದ ಜನವರಿ ತಿಂಗಳಲ್ಲಿ ಸ್ಯಾಮ್‌ಸಂಗ್ ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Galaxy S24 Ultra ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ, ಇದನ್ನು ಅತ್ಯಾಧುನಿಕ ಎಐ ಫೋನ್ ಎಂದೇ ಸ್ಯಾಮ್‌ಸಂಗ್ ನೇರವಾಗಿ ಪರಿಚಯಿಸುತ್ತಾ ಮಾರುಕಟ್ಟೆಗೆ ಕಾಲಿಟ್ಟಿದೆ. ಎಐ ಜೊತೆಗೂಡಿ ಸ್ಮಾರ್ಟ್‌ಫೋನನ್ನು ಹೇಗೆಲ್ಲಾ ಬಳಸಿ, ಆನಂದಿಸಬಹುದು ಎಂಬುದನ್ನು ಈ ಫೋನ್ ತೋರಿಸಿಕೊಟ್ಟಿದೆ. ಗೂಗಲ್‌ನ ಜೆಮಿನಿ ಎಐ ತಂತ್ರಜ್ಞಾನದ ಸಾಧ್ಯತೆಗಳನ್ನೂ ಎಸ್24 ಅಲ್ಟ್ರಾ ಫೋನ್ ಬಳಕೆದಾರರಿಗೆ ಪರಿಚಯಿಸಿದೆ.

ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವುದು ಆಂಡ್ರಾಯ್ಡ್ 14 ಕಾರ್ಯಾಚರಣೆ ವ್ಯವಸ್ಥೆಯಿರುವ 12ಜಿಬಿ RAM/256GB ಮೆಮೊರಿ ಸಹಿತವಾದ 2024ರ ಅತ್ಯಂತ ದುಬಾರಿ ಆಂಡ್ರಾಯ್ಡ್ ಫೋನ್. ಇದರ ಬೆಲೆ ₹1,29,999. ಕ್ವಾಲ್‌ಕಂನ ಇತ್ತೀಚಿನ ಮೊಬೈಲ್ ಪ್ಲ್ಯಾಟ್‌ಫಾರ್ಮ್ ಸ್ನ್ಯಾಪ್‌ಡ್ರ್ಯಾಗನ್ 8 (3ನೇ ಪೀಳಿಗೆ) ಮೂಲಕ ಕೆಲಸ ಮಾಡುತ್ತದೆ.

ವಿನ್ಯಾಸ, ಸ್ಕ್ರೀನ್

ಕಳೆದ ವರ್ಷದ ಗ್ಯಾಲಕ್ಸಿ ಎಸ್23 ಅಲ್ಟ್ರಾಕ್ಕಿಂತ ವಿನ್ಯಾಸದಲ್ಲಿ ಹೆಚ್ಚೇನೂ ಬದಲಾವಣೆಯಿಲ್ಲ. ಟೈಟಾನಿಯಂ ಚೌಕಟ್ಟು ಇದರಲ್ಲಿದ್ದು, ಹಗುರವೂ ಶಕ್ತಿಶಾಲಿಯಾಗಿಯೂ ಇದೆ. ಕೈಯಲ್ಲಿ ಜಾರದಂತೆ ಕೂರುತ್ತದೆ ಮತ್ತು ಡಿಸ್‌ಪ್ಲೇಯಲ್ಲಿ ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾ ಇದೆ. ಎಸ್-ಪೆನ್, ಸ್ಪೀಕರ್ ಗ್ರಿಲ್, ಟೈಪ್ ಸಿ ಪೋರ್ಟ್ ಮತ್ತು ಸಿಮ್ ಟ್ರೇಗಳು ಕೆಳಭಾಗದಲ್ಲಿವೆ. ಸುಮಾರು 239 ಗ್ರಾಂ ತೂಕವಿದ್ದು, 6.8 ಇಂಚಿನ ಸ್ಕ್ರೀನ್‌ಗೆ ಗೊರಿಲ್ಲಾ ಗ್ಲಾಸ್ ರಕ್ಷಣೆಯಿದೆ. ಐಪಿ68 (ಧೂಳು, ನೀರಿನ ಹನಿಗಳಿಂದ ರಕ್ಷಣೆ) ಪ್ರಮಾಣಪತ್ರವಿದೆ.

ಡೈನಮಿಕ್ ಅಮೋಲೆಡ್ (AMOLED) ಡಿಸ್‌ಪ್ಲೇ ಇರುವುದರಿಂದ ಚಿತ್ರಗಳು, ಬಣ್ಣಗಳು ಅತ್ಯಂತ ಸ್ಫುಟವಾಗಿ ಕಾಣಿಸುತ್ತವೆ. ಬಿಸಿಲಿನಲ್ಲಿ ಕೂಡ ಸ್ಕ್ರೀನನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್, ಗೇಮಿಂಗ್ ಸುಲಲಿತವಾಗಿದೆ.

AI ವಿಶೇಷತೆ

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸಾಧನದಲ್ಲಿರುವ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯಗಳನ್ನು ಹೆಚ್ಚು ಕೇಂದ್ರೀಕರಿಸಿ ಪ್ರಚಾರ ಮಾಡುತ್ತಿದೆ. ಅದರಲ್ಲೇನು ವಿಶೇಷ ಇದೆ ಎಂದು ಪರಿಶೀಲಿಸಲಾಗಿ, ಪ್ರಧಾನವಾಗಿ ಕರೆಗಳ ವೇಳೆ ಲೈವ್ ಅನುವಾದ ಮತ್ತು ಸರ್ಕಲ್ ಟು ಸರ್ಚ್ ಎಂಬ ವೈಶಿಷ್ಟ್ಯ ಗಮನ ಸೆಳೆಯಿತು. ಅಡ್ವಾನ್ಸ್‌ಡ್ ಫೀಚರ್ಸ್ ವಿಭಾಗದಲ್ಲಿ ಲೈವ್ ಟ್ರಾನ್ಸ್‌ಲೈಟ್ ವೈಶಿಷ್ಟ್ಯವನ್ನು ಆನ್ ಮಾಡಿಕೊಂಡರೆ, ಕರೆಯಲ್ಲಿ ಕೇಳಿಸಿಕೊಳ್ಳುವ ಧ್ವನಿಯು ನಾವು ಹೊಂದಿಸಿದ ಭಾಷೆಗೆ ಅನುವಾದವಾಗುತ್ತದೆ. ಸರ್ಕಲ್ ಟು ಸರ್ಚ್ ವೈಶಿಷ್ಟ್ಯವು, ಫೋನ್‌ನಲ್ಲೇ ಇರುವ ಎಸ್-ಪೆನ್ ತೆಗೆದು, ಯಾವುದಾದರೂ ಚಿತ್ರ ಅಥವಾ ಪಠ್ಯದ ಸುತ್ತ ವೃತ್ತಾಕಾರದಲ್ಲಿ ಗೆರೆ ಎಳೆದರೆ, ಅದಕ್ಕೆ ಸಂಬಂಧಿಸಿದ ವಿವರಗಳನ್ನು ಗೂಗಲ್‌ನಲ್ಲಿ ಹುಡುಕಿ ನಮ್ಮ ಮುಂದಿಡುತ್ತದೆ. ಈ ಎಸ್-ಪೆನ್ ಮೂಲಕ ಟಿಪ್ಪಣಿಯನ್ನೂ ಕೈಬರಹದಲ್ಲೇ ನೋಟ್ ಆ್ಯಪ್‌ನಲ್ಲಿ ಬರೆದುಕೊಳ್ಳಬಹುದು.

ಉದಾಹರಣೆಗೆ, ಸೋಷಿಯಲ್ ಮೀಡಿಯಾದಲ್ಲಿ ನೀವು ಯಾವುದೋ ಒಂದು ಗಿಡದ ಚಿತ್ರವನ್ನು ನೋಡಿದಿರಿ ಎಂದಿಟ್ಟುಕೊಳ್ಳೋಣ. ಅದು ಯಾವ ಗಿಡ, ಅದರ ವಿಶೇಷತೆ ಏನು ಎಂದೆಲ್ಲ ತಿಳಿಯಬೇಕಿದ್ದರೆ, ಹೋಂ ಬಟನ್ ಒತ್ತಿಹಿಡಿದು ಬಿಟ್ಟ ಬಳಿಕ ಎಸ್-ಪೆನ್ ಅಥವಾ ನಮ್ಮ ಕೈಬೆರಳಿನಿಂದ ಆ ಗಿಡದ ಸುತ್ತ ವೃತ್ತಾಕಾರದಲ್ಲಿ ಗೆರೆ ಎಳೆದರೆ, ಗೂಗಲ್ ಸರ್ಚ್ ಮೂಲಕ ನಿಮಗೆ ಆ ಗಿಡದ ಕುರಿತಾದ ಮಾಹಿತಿ ದೊರೆಯುತ್ತದೆ. ಸರ್ಚ್ ಮಾಡಲು ಬರೆಯಬೇಕಾಗಿಲ್ಲ ಎಂಬುದೊಂದು ಅನುಕೂಲ.

ಚಾಟ್ ಅಸಿಸ್ಟ್ ವೈಶಿಷ್ಟ್ಯವು ನಾವು ಬರೆಯುವ ಪಠ್ಯದ ಟೋನ್ ಬದಲಿಸಲು ಸಲಹೆ ನೀಡುತ್ತದೆ. ಜನರೇಟಿವ್ ಎಡಿಟ್ ಎಂಬ ವೈಶಿಷ್ಟ್ಯವು ಫೋಟೊ ತಿದ್ದುಪಡಿಗೆ ನೆರವಾಗುತ್ತದೆ. ಇದನ್ನು ಬಳಸಿ ಚಿತ್ರದಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವನ್ನು ತೆಗೆಯಬಹುದು. ನೋಟ್ ಅಸಿಸ್ಟ್ ಎಂಬ ವೈಶಿಷ್ಟ್ಯವು, ನಾವು ನೋಟ್ ಆ್ಯಪ್‌ನಲ್ಲಿ ಬರೆದುಕೊಂಡ ಟಿಪ್ಪಣಿಗಳ ಸಾರಾಂಶವನ್ನು ರಚಿಸಿ ತೋರಿಸುತ್ತದೆ ಮತ್ತು ಬೇರೆ ಭಾಷೆಗಳಿಗೆ ಅನುವಾದಿಸಿಯೂ ಕೊಡುತ್ತದೆ. ಆದರೆ ಅನುವಾದ ಎಂಬುದು ಶೇ.100ರಷ್ಟು ಖಚಿತವಲ್ಲ. ಯಂತ್ರವು ಎಷ್ಟೇ ಮಾಡಿದರೂ, ಇದಕ್ಕೆ ಮಾನವನ ಹಸ್ತಕ್ಷೇಪ ಬೇಕೇಬೇಕಾಗುತ್ತದೆ. ಈ ಎಲ್ಲ ಕೃತಕ ಬುದ್ಧಿಮತ್ತೆ ಟೂಲ್‌ಗಳು ನಮ್ಮ ಸಂವಹನ, ಚಿತ್ರಗಳ ನೋಟ ಹಾಗೂ ಭಾಷೆ - ಈ ವಿಚಾರಗಳಲ್ಲಿ ನೆರವಿಗೆ ಬರುತ್ತದೆ. ಹಾಗೂ ಇವನ್ನು ಸಮರ್ಪಕವಾಗಿ ಬಳಕೆ ಮಾಡಲು ಅಭ್ಯಾಸ ಮಾಡಿಕೊಂಡರೆ ನಮ್ಮ ಕೆಲಸದ ಉತ್ಪಾದಕತೆಯನ್ನೂ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಹೀಗಾಗಿ, ಎಸ್ 24 ಅಲ್ಟ್ರಾ ಈ ನಿಟ್ಟಿನಲ್ಲಿ ಹೊಸತನವನ್ನು ನೀಡಿದೆ ಎನ್ನಬಹುದು.

ಕಾರ್ಯಾಚರಣೆ

ತೀರಾ ಹೊಸದಾದ ಸ್ನ್ಯಾಪ್‌ಡ್ರ್ಯಾಗನ್ 8 ಮೂರನೇ ಪೀಳಿಗೆಯ ಚಿಪ್‌ಸೆಟ್ ಹಾಗೂ ಅಡ್ರಿನೋ 740 GPU ಮೂಲಕ, ಎಸ್ 24 ಅಲ್ಟ್ರಾ ಸಾಧನದಲ್ಲಿ ಎಲ್ಲ ಕೆಲಸಗಳೂ, ಹೆಚ್ಚು ತೂಕದ, ಗರಿಷ್ಠ ಗ್ರಾಫಿಕ್ಸ್ ಇರುವ ಗೇಮಿಂಗ್ ಕೂಡ ಅತ್ಯಂತ ವೇಗವಾಗಿ ಸಾಗುತ್ತದೆ. ಒಕ್ಟಾ ಕೋರ್ ಪ್ರೊಸೆಸರ್, ವೇಪರ್ ಕೂಲಿಂಗ್ ವ್ಯವಸ್ಥೆ, ಟೈಟಾನಿಯಂ ಬಿಲ್ಡ್ - ಇವುಗಳೊಂದಿಗೆ ಇದೊಂದು ಶಕ್ತಿಶಾಲಿ ಫೋನ್ ಎಂಬುದು ಸಾಬೀತಾಗಿದೆ.

ಕ್ಯಾಮೆರಾ

ಸ್ಯಾಮ್‌ಸಂಗ್ ಕ್ಯಾಮೆರಾದಲ್ಲಿ ಮೂಡಿಬರುವ ಚಿತ್ರಗಳ ಬಗ್ಗೆ ಹೇಳುವಂತಿಲ್ಲ. ಐದು ಲೆನ್ಸ್‌ಗಳಿರುವ ಕ್ಯಾಮೆರಾ ವ್ಯವಸ್ಥೆ ಗಮನ ಸೆಳೆದಿದೆ. 200 ಮೆಗಾಪಿಕ್ಸೆಲ್ ಸಾಮರ್ಥ್ಯದ ವೈಡ್ ಸೆನ್ಸರ್, 12MP ಅಲ್ಟ್ರಾ ವೈಡ್ ಸೆನ್ಸರ್ ಜೊತೆಗೆ 5 ಪಟ್ಟು ಆಪ್ಟಿಕಲ್ ಝೂಮ್ ವ್ಯವಸ್ಥೆ, 50 ಮೆಗಾಪಿಕ್ಸೆಲ್ ಸಾಮರ್ಥ್ಯದ 5x ಝೂಮ್ ಸಾಮರ್ಥ್ಯದ ಟೆಲಿಫೋಟೊ ಲೆನ್ಸ್ ಇರುವುದು ಛಾಯಾಗ್ರಹಣ ಪ್ರಿಯರಿಗಂತೂ ಅತ್ಯಂತ ಇಷ್ಟವಾಗಬಹುದು. ಜೊತೆಗೆ 10 ಮೆಗಾಪಿಕ್ಸೆಲ್‌ನ ಇನ್ನೊಂದು ಟೆಲಿಫೋಟೊ ಲೆನ್ಸ್ 3x ಝೂಮ್ ಸಾಮರ್ಥ್ಯದೊಂದಿಗೆ ಫೋಟೊ, ವಿಡಿಯೊ ಸೆರೆಹಿಡಿಯುವುದಕ್ಕೆ ಪೂರಕವಾಗಿದೆ. ಆಪ್ಟಿಕಲ್ ಝೂಮ್ ನಂತರವೂ ಕೆಲಸ ಮಾಡುವ ಡಿಜಿಟಲ್ ಝೂಮ್‌ನಲ್ಲಿ ಚಿತ್ರಗಳ ಸ್ಪಷ್ಟತೆ ಕ್ಷೀಣವಾಗುತ್ತದೆಯಾದರೂ, ಸಾಮಾನ್ಯ ಕ್ಯಾಮೆರಾಗಳ ಬದಲು ಈ ಫೋನ್ ಸಾಕಾಗಬಲ್ಲದು ಎಂದು ಹೇಳಲಡ್ಡಿಯಿಲ್ಲ.

ಸೆಲ್ಫಿ ಕ್ಯಾಮೆರಾವು 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಲೆನ್ಸ್ ಹೊಂದಿದೆ. ಪ್ರಧಾನ ಮತ್ತು ಸೆಲ್ಫಿ ಕ್ಯಾಮೆರಾ ಎರಡರ ಫೋಟೊಗಳಲ್ಲಿ ಉತ್ತಮ ಡೀಟೇಲ್‌ಗಳು ಸೆರೆಯಾಗುತ್ತವೆ. ರಾತ್ರಿಯ ವೇಳೆಯಲ್ಲೂ ಉತ್ತಮ ಚಿತ್ರಗಳು ಸೆರೆಯಾಗಿವೆ.

5000 mAh ಬ್ಯಾಟರಿ ಸಾಮರ್ಥ್ಯವಿದ್ದು, ಚಿಪ್ ಸೆಟ್ ಇತರ ಹಾರ್ಡ್‌ವೇರ್‌ಗಳ ಪೂರಕ ಕಾರ್ಯಗಳಿಂದಾಗಿ, ಸಾಮಾನ್ಯ ಬಳಕೆಯಲ್ಲಿ ಒಂದೂವರೆ - ಎರಡು ದಿನಗಳಷ್ಟು ಕಾಲ ಬ್ಯಾಟರಿ ಚಾರ್ಜ್‌ಗೆ ಕೊರತೆಯಾಗಿಲ್ಲ. 45W ವೇಗದ ಚಾರ್ಜಿಂಗ್ ಬೆಂಬಲಿಸುತ್ತಿದ್ದು, ಶೂನ್ಯದಿಂದ ಶೇ.100ರಷ್ಟು ಚಾರ್ಜ್ ಆಗುವುದಕ್ಕೆ ಸುಮಾರು ಒಂದು ಗಂಟೆಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು.

ಒಟ್ಟಿನಲ್ಲಿ, ಇತ್ತೀಚಿನ ಆ್ಯಪಲ್ ಐಫೋನ್ 15 ಪ್ರೊಗೆ ಸವಾಲೊಡ್ಡುವಲ್ಲಿ ಆಂಡ್ರಾಯ್ಡ್‌ನ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಯಶಸ್ವಿಯಾಗಿದೆ. ಇದರ ಕ್ಯಾಮೆರಾ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಎಲ್ಲದಕ್ಕೂ ಮಿಗಿಲಾಗಿ ಎಐ ಸಾಮರ್ಥ್ಯಗಳು ಈ ದುಬಾರಿ ಫೋನ್‌ನ ಪ್ಲಸ್ ಪಾಯಿಂಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT