ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ವಿಶ್ವದ ಮೊದಲ ಮರದ ರೇಡಿಯೊ!

ವಿಜ್ಞಾನಿಗಳು ಸಂಪೂರ್ಣವಾಗಿ ಮರದಿಂದ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಟ್ರಾನ್ಸಿಸ್ಟರ್‌ ಅನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
Published 10 ಮೇ 2023, 1:29 IST
Last Updated 10 ಮೇ 2023, 1:29 IST
ಅಕ್ಷರ ಗಾತ್ರ

1896ರಲ್ಲಿ ಮಾರ್ಕೋನಿ ರೇಡಿಯೊವನ್ನು ಕಂಡುಹಿಡಿದಾಗ ಅದು ಸಾಧಾರಣವೂ ಸರಳವೂ ಆಗಿತ್ತು. ಅದರ ಬಹುತೇಕ ಒಳ-ಹೊರ ಸಾಮಗ್ರಿಗಳಲ್ಲಿ ಲೋಹ, ಅಲೋಹಗಳ ಬಳಕೆಯಾಗಿತ್ತು. ಹೊರಮೈ ಮಾತ್ರ ಮರದಿಂದ ನಿರ್ಮಾಣವಾಗಿತ್ತು. ಇದೀಗ ಸ್ವಾರಸ್ಯಕರ ಸಂಶೋಧನೆಯೊಂದು ನಡೆದಿದೆ. ಸ್ವೀಡನ್‌ನ ಲಿಂಕೋಪಿಂಗ್ ವಿಶ್ವವಿದ್ಯಾಲಯ ಹಾಗೂ ಕೆಟಿಎಚ್ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿಜ್ಞಾನಿಗಳು ಸಂಪೂರ್ಣವಾಗಿ ಮರದಿಂದ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಟ್ರಾನ್ಸಿಸ್ಟರ್‌ ಅನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.

ಒಣಗಿದ ಮರದ ಮೂಲಕ ವಿದ್ಯುತ್‌ ಪ್ರವಹಿಸುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ, ಮರದ ಮೂಲಕವೂ ವಿದ್ಯುತ್‌ ಸಂಜ್ಞೆಗಳನ್ನು ರವಾನೆ ಮಾಡಬಹುದು ಎನ್ನುವುದು ಈ ವಿಜ್ಞಾನಿಗಳ ವಾದ. ಅಮೆರಿಕ ಮೂಲದ ಬಲ್ಸಾ ಮರವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಂಡು ಅದಕ್ಕೊಂದಿಷ್ಟು ಮಾರ್ಪಾಟುಗಳನ್ನು ಮಾಡಿ ವಿದ್ಯುತ್‌ ವಾಹಕವಾಗಿ ಪರಿವರ್ತಿಸಿದ್ದಾರೆ. ಬಳಿಕ ಅದರ ಮೂಲಕ ರೇಡಿಯೋ ಸಂಜ್ಞೆಗಳನ್ನು ಬಿತ್ತರಿಸಿ ಒಂದು ಪರಿಸರಪ್ರೇಮಿ ಮಾದರಿಯನ್ನು ರೂಪಿಸಿದ್ದಾರೆ.

ಥಾರ್ ಹೈರ್ಡಾಲ್ ರ ‘ಕೊಂಟಿಕಿ ಎಕ್ಸ್‌ ಪಿಡಿಷನ್’ ಕೃತಿಯನ್ನು ಓದಿದವರಿಗೆ ಬಲ್ಸಾ ಮರದ ಪರಿಚಯ ಇರಬಹುದು. ಈ ಮರದಿಂದ ತಯಾರಿಸಿದ ತೆಪ್ಪದಲ್ಲಿ ಪೆಸಿಫಿಕ್‌ ಮಹಾಸಾಗರವನ್ನು ಸಾಹಸಿಗಳ ತಂಡವೊಂದು ದಾಟುತ್ತದೆ. ಬಲ್ಸಾ ಮರವು ಅತಿ ಹಗುರವೂ ಅತಿ ಗಟ್ಟಿಯೂ ಆದ ಗುಣಲಕ್ಷಣಗಳುಳ್ಳ ಮರವಾಗಿ ಈ ಕೃತಿಯ ಒಂದು ಪಾತ್ರವೇ ಆಗಿದೆ. (ಈ ಕೃತಿಯನ್ನು ಪ್ರದೀಪ ಕೆಂಜಿಗೆ ಅವರು ‘ಅದ್ಭುತ ಯಾನ’ವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.)

ಸ್ವೀಡನ್‌ನ ವಿಜ್ಞಾನಿಗಳ ತಂಡವು ಇದೇ ಬಲ್ಸಾ ಮರವನ್ನು ತಮ್ಮ ನೂತನ ಸಂಶೋಧನೆಯನ್ನು ಸಾಬೀತುಗೊಳಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಮರದ ತುಂಡೊಂದನ್ನು ತೆಗೆದುಕೊಂಡರೂ ಅದರಲ್ಲಿ ಸಣ್ಣ ಸಣ್ಣನೆಯ ಚುಕ್ಕಿ (ಗ್ರೈನ್) ಮಾದರಿಯ ರಚನೆ ಇರುತ್ತದೆ. ಇದು ಮರದ ಗುಣಲಕ್ಷಣವನ್ನು ನಿರ್ಧರಿಸುತ್ತದೆ. ಈ ಚುಕ್ಕಿಗಳ ಸಾಂಧ್ರತೆಯ ಮೇಲೆ ಮರದ ಗಟ್ಟಿತನ ನಿರ್ಧಾರವಾಗುತ್ತದೆ. ಆದರೆ ಈ ಚುಕ್ಕಿಗಳು ಮರವನ್ನು ವಿದ್ಯುತ್‌ ಅವಾಹಕವಾಗಿಯೂ ಮಾಡುತ್ತದೆ. ಆದರೆ, ಬಲ್ಸಾ ಮಾತ್ರ ಇದಕ್ಕೆ ವಿರುದ್ಧ. ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿ ಬಲ್ಸಾ ಮರದಲ್ಲಿ ಚುಕ್ಕಿಗಳಿರುತ್ತವೆ. ಈ ಮರವನ್ನು ಆಯ್ಕೆ ಮಾಡಿಕೊಂಡು ಅತಿ ತೆಳುವಾದ ಪದರಗಳನ್ನು ಸಿದ್ಧಪಡಿಸಿಕೊಂಡು ಟ್ರಾಸ್ಟಿಸ್ಟರ್‌ಗೆ ವೇದಿಕೆಯನ್ನು ನಿರ್ಮಿಸಿಕೊಂಡಿದ್ದಾರೆ.

‘ತೆಳುವಾದ ಬಲ್ಸಾ ಪದರಗಳ ಮೇಲೆ ‘ಪಿಡಾಡ್‌: ಪಿಎಸ್‌ಎಸ್‌’ ಎನ್ನುವ ಪಾಲಿಮರ್‌ ರಾಸಾಯನಿಕವನ್ನು ಲೇಪಿಸಿದೆವು. ಈ ಲೇಪನದಿಂದಾಗಿ ಬಲ್ಸಾ ಮರವು ನಿರಂತರವಾಗಿ ವಿದ್ಯುತ್‌ ಅನ್ನು ತನ್ನ ಮೂಲಕ ಹಾದು ಹೋಗಲು ಅವಕಾಶ ಮಾಡಿಕೊಟ್ಟಿತು. ಈ ಟ್ರಾನ್ಸಿಸ್ಟರ್‌ ತಯಾರಾದ ಕೂಡಲೇ ನಾವು ರೇಡಿಯೋ ಸಂಜ್ಞೆಗಳನ್ನು ಇದರ ಮೂಲಕ ಹಾಯಿಸಿ ಧ್ವನಿಯನ್ನು ಪಡೆಯಲು ಯಶಸ್ವಿಯಾಗಿದ್ದೇವೆ’ ಎಂದು ಜೈವಿಕ ಎಲೆಕ್ಟ್ರಾನಿಕ್ಸ್‌ ಹಿರಿಯ ಸಹ ಪ್ರಾಧ್ಯಾಪಕ ಐಸಾಕ್‌ ಎಂಗ್ವಿಸ್ಟ್‌ ತಿಳಿಸಿದ್ದಾರೆ.

‘ಈ ಅನ್ವೇಷಣೆ ಕೇವಲ ರೇಡಿಯೋಗಳ ನಿರ್ಮಾಣಕ್ಕಷ್ಟೆ ಸೀಮಿತ ಮಾಡಿಕೊಳ್ಳಕೂಡದು. ನಾವು ಇಂದು ಬಳಸುವ ಬಹುತೇಕ ಎಲ್ಲ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಸಿಲಿಕಾನ್‌ ಆಧರಿತ ಚಿಪ್‌ಗಳ ಬಳಕೆ ಇರುತ್ತದೆ. ಅಲ್ಲದೇ, ಕಂಡಕ್ಟರ್‌ಗಳು, ಸೆಮಿಕಂಡಕ್ಟರ್‌ಗಳಲ್ಲಿ ಲೋಹ ಹಾಗೂ ರಾಸಾಯನಿಕಗಳ ಬಳಕೆ ಇರುತ್ತದೆ. ಇವೆಲ್ಲವೂ ಪರಿಸರಕ್ಕೆ ಹಾನಿ ಮಾಡುವಂಥವು. ನಮ್ಮ ಈ ಸಂಶೋಧನೆಯಿಂದ ಲೋಹ ಹಾಗೂ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಪರಿಸರದ ಮೇಲಿನ ಹಾನಿ ಕ್ಷೀಣವಾಗುತ್ತದೆ’ ಎನ್ನುತ್ತಾರೆ ಐಸಾಕ್.

ಬಲ್ಸಾ ಮರದಂತೆ ಇನ್ನೂ ಅನೇಕ ಜಾತಿಯ ಮರಗಳಿವೆ. ಅವುಗಳನ್ನೂ ಈ ಟ್ರಾನ್ಸಿಸ್ಟರ್‌ ನಿರ್ಮಾಣಕ್ಕೆ ಬಳಸಬಹುದು. ಈ ಬಗೆಯ ಮರಗಳನ್ನು ನೆಡುತೋಪುಗಳಲ್ಲಿ ಕೃತಕವಾಗಿ ಬೆಳೆಸಿ ಬಳಿಕ ಬಳಸಬಹುದು. ಇದರಿಂದ ಪರಿಸರದಲ್ಲಿ ಆಮ್ಲಜನಕದ ಪ್ರಮಾಣವೂ ಹೆಚ್ಚುತ್ತದೆ ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ವ್ಯಾಖ್ಯಾನಿಸಿದ್ದಾರೆ.

ಮರದ ಟ್ರಾನ್ಸಿಸ್ಟರ್‌ಗೆ ಅದರದೇ ಆದ ವೇಗ, ಬಾಳಿಕೆಯಂತಹ ಇತಿಮಿತಿಗಳಿರಬಹುದು. ಈ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸಿ ಇತಿಮಿತಿಗಳಿಂದ ಆಚೆ ಬರಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಪರಿಹಾರೋಪಾಯವನ್ನೂ ಸೂಚಿಸಿದ್ದಾರೆ.

–––

ಲೇಖಕರು– ನೇಸರ ಕಾಡನಕು‍ಪ್ಪೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT