ಭಾನುವಾರ, ಸೆಪ್ಟೆಂಬರ್ 27, 2020
27 °C
ಮಣ್ಣು, ಮೂತ್ರ, ಗೋರಿಕಾಯಿ ಇದ್ದರೆ ಸಾಕು * ಐಐಎಸ್‌ಸಿ–ಇಸ್ರೊ ಜಂಟಿ ಸಂಶೋಧನೆ

ಚಂದಿರನಂಗಳದಲ್ಲಿ ‘ಮನೆ’ ಕಟ್ಟಲು ಇಟ್ಟಿಗೆ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಂದ್ರನ ಮೇಲೆ ಮನೆಯ ಮಾಡಿ ವಿಹರಿಸುವುದು ಇನ್ನು ಕೇವಲ ಕವಿಗಳ ಕಲ್ಪನಾ ಲೋಕದ ವಿಹಾರವಲ್ಲ. ಮುಂದೊಂದು ದಿನ ಇದು ಸಾಕಾರಗೊಳ್ಳಲೂಬಹುದು. ಆದರೆ, ಅಲ್ಲಿ ಮನೆ ಕಟ್ಟಿಕೊಳ್ಳಲು ಇಟ್ಟಿಗೆ ಬೇಕಲ್ಲ, ಅದಕ್ಕೇನು ಮಾಡುವುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ!

ಚಂದ್ರನ ಮೇಲೆ ವಾಸಕ್ಕೆ ಬೇಕಾದ ರಚನೆಗಳನ್ನು ನಿರ್ಮಿಸಲು ಇಟ್ಟಿಗೆಯನ್ನು ರೂಪಿಸುವ ಪ್ರಕ್ರಿಯೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಇಸ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದಕ್ಕೆ ಚಂದ್ರನಲ್ಲಿನ ಮಣ್ಣು, ಬ್ಯಾಕ್ಟೀರಿಯಾ ಮತ್ತು ಗೋರಿಕಾಯಿಯ ಗೋಂದು ಬೇಕು. ಇವುಗಳನ್ನು ಬಳಸಿ ತೂಕ ಹಿಡಿದಿಡುವ ಮತ್ತು ರಚನೆಗೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಮಣ್ಣಿಗೆ ಗಟ್ಟಿತನದ ಸಾಮರ್ಥ್ಯವನ್ನು ನೀಡುವ ಗಟ್ಟಿಮುಟ್ಟಾದ ಇಟ್ಟಿಗೆ ತಯಾರಿಸಬಹುದು.

ಈ ‘ಬಾಹ್ಯಾಕಾಶದ ಇಟ್ಟಿಗೆ’ ಬಳಸಿ ಚಂದ್ರದ ನೆಲದ ಮೇಲೆ ಮಾನವರ ವಾಸಕ್ಕೆ ಸಣ್ಣಪುಟ್ಟ ಕಟ್ಟಡದಂತಹ ರಚನೆಗಳನ್ನು ನಿರ್ಮಿಸಬಹುದು ಎನ್ನುತ್ತಾರೆ ಸಂಶೋಧಕರು.

‘ನಿಜಕ್ಕೂ ಇದೊಂದು ಅಚ್ಚರಿಯ ಸಂಗತಿ. ಈ ಯೋಜನೆಯಲ್ಲಿ ಎರಡು ವಿಭಿನ್ನ ಕ್ಷೇತ್ರಗಳಾದ ಜೀವ ವಿಜ್ಞಾನ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಹತ್ತಿರ ತರಲಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಲೋಕೆ ಕುಮಾರ್ ಹೇಳಿದ್ದಾರೆ.

ಕಳೆದ ಒಂದು ಶತಮಾನದಿಂದ ಬಾಹ್ಯಾಕಾಶ ಕ್ಷೇತ್ರದ ಅನ್ವೇಷಣೆ ಹಿಂದೆಂದಿಗಿಂತಲೂ ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಭೂಮಿಯಲ್ಲಿ ಸಂಪನ್ಮೂಲಗಳು ಕರಗುತ್ತಿರುವುದರಿಂದ ಹೀಲಿಯಂ3, ಟೈಟೇನಿಯಂನಂತಹ  ಅಪರೂಪದ ಖನಿಜಗಳಿಗೆ ಚಂದ್ರ ಮತ್ತು ಅನ್ಯಗ್ರಹಗಳತ್ತ ವಿಜ್ಞಾನಿಗಳು ಮುಖ ಮಾಡಿದ್ದಾರೆ. ಭವಿಷ್ಯದಲ್ಲಿ ಅನ್ಯಗ್ರಹಗಳಲ್ಲಿ ನೆಲೆ ನಿಂತು ಕೆಲಸ ಮಾಡುವ ಪ್ರಸಂಗ ಬರಲಿದೆ. ಆ ನಿಟ್ಟಿನಲ್ಲಿ ಭಾರತೀಯ ವೈಜ್ಞಾನಿಕ ಸಂಸ್ಥೆಗಳ ಈ ಆವಿಷ್ಕಾರ ಮಹತ್ವ ಪಡೆದಿದೆ.

ಇಟ್ಟಿಗೆ ತಂತ್ರಜ್ಞಾನ ಹೀಗಿದೆ: ಬಾಹ್ಯಾಕಾಶಕ್ಕೆ ಒಂದು ಪೌಂಡ್‌ ಸಾಮಗ್ರಿ ಕಳುಹಿಸಲು ₹7.5 ಲಕ್ಷ ಬೇಕಾಗುತ್ತದೆ. ಭೂಮಿಯಿಂದ ಸಾಮಗ್ರಿ ಸಾಗಿಸುವುದು ಸುಲಭವೂ ಅಲ್ಲ. ಭಾರತೀಯ ವಿಜ್ಞಾನಿಗಳ ತಂಡ ಇದಕ್ಕೊಂದು ಪರ್ಯಾಯ ವಿಧಾನ ಹುಡುಕಿದೆ.  ಚಂದ್ರನ ಮೇಲೆ ಇಟ್ಟಿಗೆ ಮಾಡಲು ಈ ತಂಡ ಪ್ರಧಾನವಾಗಿ ಯೂರಿಯಾ ಬಳಸಿಕೊಂಡಿದೆ. ಅಲ್ಲಿಗೆ ಎಲ್ಲಿಂದ ಯೂರಿಯಾ ತರುತ್ತಾರೆ ಎಂಬ
ಸಂದೇಹ ಮೂಡುವುದು ಸಹಜ. ಇದಕ್ಕೆ ಮಾನವ ಮೂತ್ರವನ್ನು ಬಳಸಲಾಗುತ್ತದೆ. ಚಂದ್ರನ ಮೇಲಿನ ಮಣ್ಣನ್ನು ಕಚ್ಚಾ ಪದಾರ್ಥವಾಗಿ ಬಳಸಲಾಗುತ್ತದೆ. ಸಿಮೆಂಟಿನ ಬದಲಿಗೆ ಗೋರಿಕಾಯಿಯಿಂದ ತಯಾರಿಸಿದ ಗೋಂದನ್ನು ಬಳಸಲಾಗುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರ ಮೇಲೆ ಮಾತ್ರವಲ್ಲ, ಭೂಮಿಯಲ್ಲೂ ಕಡಿಮೆ ಬೆಲೆಗೆ ಸುಸ್ಥಿರ ಇಟ್ಟಿಗೆಗಳನ್ನು ತಯಾರಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಕೆಲವು ಬಗೆಯ ಸೂಕ್ಷ್ಮ ಜೀವಿಗಳು ಚಯಾಪಚಯ (ಮೆಟಬಾಲಿಕ್) ಕ್ರಿಯೆಯ ಸಂದರ್ಭದಲ್ಲಿ (ಅಂದರೆ, ಜೀವವನ್ನು ಜೀವಂತವಾಗಿ ಇರಿಸಲು ನಡೆಯುವ ರಾಸಾಯನಿಕ ಕ್ರಿಯೆ) ಸೂಕ್ಷ್ಮರೂಪಿ ಖನಿಜಗಳನ್ನು ತಯಾರಿಸುತ್ತವೆ. ಅಂತಹ ಒಂದು ಸೂಕ್ಷ್ಮ ಜೀವಿ (Sporosarcina pasteurii) ಬ್ಯಾಕ್ಟೀರಿಯಾ ಕ್ಯಾಲ್ಸಿಯಂ ಕಾರ್ಬೊನೆಟ್‌ ಹರಳುಗಳನ್ನು ತಯಾರಿಸುತ್ತವೆ. ಇದನ್ನು ಯುರಿಲೈಟಿಕ್‌ ಸೈಕಲ್‌ ಎನ್ನಲಾಗುತ್ತದೆ. ಯುರಿಯಾ ಮತ್ತು ಕ್ಯಾಲ್ಸಿಯಂ ಬಳಸಿ ಇಂತಹ ಹರಳುಗಳನ್ನು ತಯಾರಿಸಬಹುದು ಎಂದು ಕುಮಾರ್‌ ಹೇಳಿದ್ದಾರೆ.

ಈ ‍ಪ್ರಕ್ರಿಯೆಯಲ್ಲಿ ಕುಮಾರ್ ಅವರ ಜತೆ ಇಸ್ರೊ ವಿಜ್ಞಾನಿಗಳಾದ ಅರ್ಜುನ್ ದೇ ಮತ್ತು ವೇಣುಗೋಪಾಲ್‌ ಅವರೂ ಸೇರಿದ್ದಾರೆ. ಯೂರಿಯಾ, ಮಣ್ಣು ಮತ್ತು ಗೋರಿಕಾಯಿ ಗೋಂದನ್ನು ಬಳಸಿ ಇಟ್ಟಿಗೆಗಳನ್ನು ವಿಭಿನ್ನ ಆಕಾರಗಳಲ್ಲಿ ಒಂದಕ್ಕೊಂದು ಬೆಸೆದುಕೊಳ್ಳುವಂತೆ ಸಹಾಯಕವಾಗುವಂತೆ ರೂಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು