ಮಂಗಳವಾರ, ಜೂನ್ 2, 2020
27 °C

ಎಚ್ಚರ, ಪರೀಕ್ಷಾ ವರದಿ ನೆಗೆಟಿವ್ ಬಂದವರಲ್ಲಿಯೂ ಇರಬಹುದು ಕೊರೊನಾ: ಅಧ್ಯಯನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Coronavirus

ವಾಷಿಂಗ್ಟನ್: ಕೊರೊನಾ ವೈರಸ್ ಪತ್ತೆ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದವರಲ್ಲಿಯೂ ಸೋಂಕು ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಾದ್ಯಂತ ಹೆಚ್ಚಿನ ಕಡೆಗಳಲ್ಲಿ ಕೊರೊನಾ ಪತ್ತೆ ಪರೀಕ್ಷೆ ಸೌಲಭ್ಯ ದೊರೆಯುತ್ತಿದ್ದಂತೆಯೇ, ಈ ಪರೀಕ್ಷೆಗಳು ಶೇ 100ರಷ್ಟು ವಿಶ್ವಾಸಾರ್ಹ ಎನ್ನಲಾಗದು ಎಂದಿದ್ದಾರೆ ವಿಜ್ಞಾನಿಗಳು.

ಇದು ಇನ್ನಷ್ಟು ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು ಎನ್ನಲಾಗಿದೆ. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ವಿಶ್ವದಾದ್ಯಂತ ಈಗಾಗಲೇ ನೂರಾರು ಕೋಟಿ ಜನ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಆರ್ಥಿಕತೆ ಸ್ಥಗಿತವಾಗಿದೆ.

ಇದನ್ನೂ ಓದಿ: 

ಜಗತ್ತಿನಾದ್ಯಂತ ಸಾಮಾನ್ಯವಾಗಿ ಪಿಸಿಆರ್ ಎಂಬ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ಲೋಳೆಯ ಮಾದರಿಯಿಂದ (ಕೊರೊನಾ ಪ್ರಕರಣಗಳಲ್ಲಿ ಗಂಟಲಿನ ದ್ರವ ಮತ್ತು ಇತರ ಮಾದರಿಗಳನ್ನು ಬಳಸುತ್ತಿದ್ದಾರೆ) ಕೊರೊನಾ ವೈರಾಣುವನ್ನು ಪತ್ತೆ ಮಾಡುತ್ತದೆ.

ಆದರೆ, ‘ಪರೀಕ್ಷೆಯು ವಾಸ್ತವದಲ್ಲಿ ವೈರಸ್ ಅನ್ನು ಪತ್ತೆ ಮಾಡುತ್ತದೆಯೋ ಇಲ್ಲವೋ ಎಂಬುದರ ಮೇಲೆ ಪರಿಣಾಮ ಬೀರುವ ಸಾಕಷ್ಟು ಅಂಶಗಳಿವೆ’ ಎಂದು ಮಿನ್ನೆಸೋಟದಲ್ಲಿರುವ ಮೇಯೋ ಕ್ಲಿನಿಕ್‌ನ ಸಾಂಕ್ರಾಮಿಕ ರೋಗಗಳ ತಜ್ಞೆ ಪ್ರಿಯಾ ಸಂಪತ್‌ಕುಮಾರ್ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಸೋಂಕಿತ ವ್ಯಕ್ತಿಯು ಎಷ್ಟು ವೈರಸ್ ಅನ್ನು ಹೊರಹಾಕುತ್ತಾನೆ (ಸೀನುವಿಕೆ, ಕೆಮ್ಮು ಹಾಗೂ ಇತರ ಕಾರ್ಯಗಳ ಮೂಲಕ), ಸರಿಯಾಗಿ ಮಾದರಿಯನ್ನು ಸಂಗ್ರಹಿಸಲಾಗಿದೆಯೋ ಇಲ್ಲವೋ, ಸಂಗ್ರಹಿಸಿದ ಮಾದರಿಯನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲು ಎಷ್ಟು ಹೊತ್ತು ತೆಗೆದುಕೊಳ್ಳಲಾಗಿದೆ ಎಂಬುದರ ಮೇಲೆ ಇದು (ಪತ್ತೆ ಮಾಡುವ ವಿಚಾರ) ಅವಲಂಬಿತವಾಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 

ಈ ವೈರಸ್ ಕೇವಲ ನಾಲ್ಕು ತಿಂಗಳುಗಳಿಂದ ಮಾನವನಲ್ಲಿ ಹರಡುತ್ತಿದೆ. ಹಾಗಾಗಿ ಪರೀಕ್ಷಾ ವಿಶ್ವಾಸಾರ್ಹತೆಯ ಮೇಲಿನ ಅಧ್ಯಯನಗಳನ್ನು ಇನ್ನೂ ಪ್ರಾಥಮಿಕ ಎಂದಷ್ಟೇ ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ವೈರಸ್ ಇದ್ದಾಗ ಸರಿಯಾದ ಫಲಿತಾಂಶ ನೀಡುವಲ್ಲಿ ಪರೀಕ್ಷೆಗಳು ಎಷ್ಟು ಸಮರ್ಥವಾಗಿವೆ ಎಂಬುದರ ಸೂಕ್ಷ್ಮತೆಯನ್ನು ಚೀನಾದಲ್ಲಿನ ಆರಂಭಿಕ ವರದಿಗಳು ತೆರೆದಿಟ್ಟಿವೆ. ಸರಿಯಾದ ಫಲಿತಾಂಶದ ಪ್ರಮಾಣ ಶೇ 60ರಿಂದ 70ರಷ್ಟು ಇದೆಯಷ್ಟೇ ಎಂದು ಪ್ರಿಯಾ ಹೇಳಿದ್ದಾರೆ.

ವಿಶ್ವದಾದ್ಯಂತ ವಿವಿಧ ಕಂಪೆನಿಗಳು ಪ್ರಸ್ತುತ ವಿಭಿನ್ನ ಪರೀಕ್ಷಾ ಮಾದರಿಗಳನ್ನು ಅನುಸರಿಸುತ್ತಿವೆ. ಹೀಗಾಗಿ ಇವುಗಳ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಪರೀಕ್ಷಾ ಫಲಿತಾಂಶದ ಖಚಿತತೆಯ ಪ್ರಮಾಣವನ್ನು ಶೇ 90ಕ್ಕೆ ಹೆಚ್ಚಿಸಿದರೂ ಪರೀಕ್ಷೆಗೆ ಒಳಪಡುವ ಜನರ ಸಂಖ್ಯೆ ಹೆಚ್ಚಾದಂತೆ ಅಪಾಯದ ಪ್ರಮಾಣವು ಹೆಚ್ಚು ಎಂದು ಮೇಯೋ ಕ್ಲಿನಿಕ್ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಪ್ರಿಯಾ ಸಂಪತ್‌ಕುಮಾರ್ ಪ್ರತಿಪಾದಿಸಿದ್ದಾರೆ.

‘ಕ್ಯಾಲಿಫೋರ್ನಿಯಾದಲ್ಲಿ 2020ರ ಮೇ ತಿಂಗಳ ವೇಳೆಗೆ ಕೋವಿಡ್–19 ಸೋಂಕಿತರ ಪ್ರಮಾಣ ಶೇ 50 ಮೀರುವ ಸಾಧ್ಯತೆ ಇದೆ’ ಎಂದೂ ಅವರು ಅಂದಾಜಿಸಿದ್ದಾರೆ.

ಇದನ್ನೂ ಓದಿ: 

‘40 ಲಕ್ಷ ಜನರಲ್ಲಿ ಕೇವಲ ಶೇ 1ರಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೂ ಅದರಲ್ಲಿ 20 ಸಾವಿರದಷ್ಟು ತಪ್ಪು ನೆಗೆಟಿವ್ ವರದಿಗಳು ಇರಬಹುದು’ ಎಂದು ಪ್ರಿಯಾ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ವೈದ್ಯರು ಮಾದರಿಯ ಪರೀಕ್ಷಾ ವರದಿಯನ್ನು ಮಾತ್ರ ಪರಿಗಣಿಸುವ ಬದಲು ರೋಗಿಯಲ್ಲಿ ಕಾಣಿಸುವ ಗುಣಲಕ್ಷಣಗಳು, ಅವರ ಪ್ರಯಾಣದ ಹಿನ್ನೆಲೆ, ಇತರ ಅಂಶಗಳನ್ನು ಪರಿಗಣಿಸುವುದು ಉತ್ತಮ ಎಂದೂ ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು