ಮಂಗಳವಾರ, ಜೂನ್ 2, 2020
27 °C

ಕೊರೊನಾ ವೈರಾಣು ಮಣಿಸಲು ಬ್ಯಾಕ್ಟೀರಿಯಾಕ್ಕೆ ಮೊರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವವನ್ನೇ ತತ್ತರಿಸುವಂತೆ ಮಾಡಿರುವ ಕೊರೊನಾ ವೈರಸ್‌ ವಿರುದ್ಧ ಸೆಣಸಲು ಮತ್ತೊಂದು ಸೂಕ್ಚ್ಮಾಣುಜೀವಿ ಬ್ಯಾಕ್ಟೀರಿಯಾ ಬಳಸಿ ತಯಾರಿಸಿರುವ ಔಷಧಿಯನ್ನು ಬಳಸಲು ಭಾರತದ ವೈದ್ಯವಿಜ್ಞಾನಿಗಳು ತಯಾರಾಗಿದ್ದಾರೆ.

ಅದೂ, ಕೀವುತುಂಬಿದ ಗಾಯಗಳನ್ನು (ಸೆಪ್ಸಿಸ್‌) ವಾಸಿ ಮಾಡಲು 50 ವರ್ಷಗಳ ಹಿಂದೆ ಭಾರತದ ಜೀವವಿಜ್ಞಾನಿ ಡಾ.ಗುರುಸರಣ್‌ ಪ್ರಾಣ್‌ ತಲ್ವಾರ್‌ ಎಂಬುವವರು ಸಂಶೋಧಿಸಿರುವ ‘ಸೆಪ್ಸಿವ್ಯಾಕ್‌’ ಎಂಬ ಔಷಧಿಯನ್ನು ಬಳಸಲಾಗುತ್ತದೆ.

ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಬ್ಯಾಕ್ಟೀರಿಯಾ ಒಳಗೊಂಡ ಈ ಔಷಧಿಯನ್ನು ಮೂರು ಹಂತದ ’ಕ್ಲಿನಿಕಲ್‌ ಟ್ರಯಲ್‌’ನಲ್ಲಿ (ಮಾನವನ ಮೇಲೆ ಔಷಧಿಯ ಪರಿಣಾಮವನ್ನು ತಿಳಿಯಲು ನಡೆಸುವ ಪ್ರಯೋಗ) ಬಳಸಲು ಮುಂದಾಗಿದೆ. ಈ ‘ಕ್ಲಿನಿಕಲ್‌ ಟ್ರಯಲ್ಸ್‌’ ನಡೆಸಲು ಭಾರತೀಯ ಔಷಧಿಗಳ ಮಹಾನಿಯಂತ್ರಕರ ಕಚೇರಿ ಅನುಮೋದನೆ ನೀಡಿದೆ. 

ಮೊದಲ ಹಂತದ ಪರೀಕ್ಷೆಯಲ್ಲಿ, ಗಂಭೀರ ಆರೋಗ್ಯ ಸ್ಥಿತಿಯಲ್ಲಿರುವ 50 ಜನ ಕೋವಿಡ್‌–19 ರೋಗಿಗಳಿಗೆ ‘ಸೆಪ್ಸಿವ್ಯಾಕ್‌’ ನೀಡಲಾಗುತ್ತದೆ. ಎರಡನೇ ಹಂತದಲ್ಲಿ, ಕೋವಿಡ್‌–19 ಇದ್ದರೂ ಕಾಯಿಲೆಯ ಲಕ್ಷಣಗಳು ಗೋಚರಿಸದೇ ಇರುವ 500 ರೋಗಿಗಳಿಗೆ ನೀಡಲಾಗುತ್ತದೆ. ವಿವಿಧ ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯ ರೋಗಿಗಳು ದಾಖಲಾಗಿದ್ದು, ಅವರಿಗೆ ಮೂರನೇ ಹಂತದಲ್ಲಿ ಈ ಔಷಧಿಯನ್ನು ನೀಡಲಾಗುತ್ತದೆ. 

‘ಸೆಪ್ಸಿವ್ಯಾಕ್ ನೀಡುವ ಮೂಲಕ ಕೋವಿಡ್‌–19 ಇರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಈ ಪ್ರಯೋಗದ ಮುಖ್ಯ ಉದ್ದೇಶ’ ಎಂದು ಸಿಎಸ್‌ಐಆರ್‌ನ ಕೈಗೊಂಡಿರುವ ಈ ಪ್ರಯೋಗದ ಸಮನ್ವಯಾಧಿಕಾರಿಯೂ ಆಗಿರುವ ಜಮ್ಮುವಿನಲ್ಲಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಟಿಗ್ರೇಟಿವ್‌ ಮೆಡಿಸಿನ್‌ನ ನಿರ್ದೇಶಕ ರಾಮ್‌ ವಿಶ್ವಕರ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮೊದಲ ಹಂತದ ಪರೀಕ್ಷೆಯನ್ನು ಶೀಘ್ರವೇ ಆರಂಭಿಸಲಾಗುವುದು. ಅದರ ಫಲಿತಾಂಶ ಬರಲು 35–40 ದಿನ ಬೇಕಾಗುತ್ತದೆ. ಈ ಫಲಿತಾಂಶದ ಆಧಾರದಲ್ಲಿ ಉಳಿದೆರಡು ಹಂತದ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದೂ ರಾಮ್‌ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು