ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗಾಗಿ ಸಮುದ್ರಮಥನ

Last Updated 28 ಫೆಬ್ರವರಿ 2023, 19:30 IST
ಅಕ್ಷರ ಗಾತ್ರ

ಸಮುದ್ರ ಮಥನ ನಡೆದಾಗ ಹಾಲಾಹಲ ಮತ್ತು ಅಮೃತ ದೊರೆತ್ತಿತ್ತು ಎಂದು ಪುರಾಣಗಳಲ್ಲಿ ಹೇಳುವುದು ಅನೇಕರಿಗೆ ಗೊತ್ತಿರಬಹುದು. ಆದರೆ ನಮ್ಮ ಪರಿಸರ ಸಂರಕ್ಷಣೆಗಾಗಿ, ಇಂತಹದೊಂದು ಸಮುದ್ರ ಮಥನವನ್ನು ಮಾಡಲು ವಿಜ್ಞಾನಿಗಳು ಈಗ ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕರಿಗೆ ತಿಳಿದಿರಲಾರದು.

ಹವಾಗುಣ ಬದಲಾವಣೆಯಿಂದಾಗಿ ಜಗತ್ತಿನಾದ್ಯಂತ ಉಂಟಾಗುತ್ತಿರುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು, ವಾತಾವರಣ ಸೇರಿರುವ ಇಂಗಾಲ ಡೈಯಾಕ್ಸೈಡನ್ನು ಕಡಿಮೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ವಿಜ್ಞಾನಿಗಳಿದ್ದಾರೆ.

ಆದರೆ, ಗಾಳಿಯಲ್ಲಿ ಸೇರಿರುವ ಪ್ರತಿಯೊಂದು ಟನ್‌ ಇಂಗಾಲ ಡೈಯಾಕ್ಸೈಡನ್ನು ಪ್ರತ್ಯೇಕಿಸಲು, ಪ್ರತಿಗಂಟೆಗೆ 1.83 ಮೆಗಾವ್ಯಾಟ್‌ ವಿದ್ಯುತ್‌ ಬೇಕಾಗುತ್ತಿದೆ. ಹೀಗೆ ಮಾಡಿದರೆ, ಪ್ರತಿ ಟನ್‌ ಇಂಗಾಲ ಡೈಯಾಕ್ಸೈಡ್‌ಗೆ 300ರಿಂದ 1000 ಡಾಲರ್‌ವರೆಗೂ ವೆಚ್ಚವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂತಹ ಯೋಜನೆಗಳಿಗಾಗಿ ಇಷ್ಟು ಹಣ ಮತ್ತು ವಿದ್ಯುತ್‌ ಖರ್ಚು ಮಾಡುವುದು ಅನೇಕ ದೇಶಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ವಾತಾವರಣ ಸೇರಿರುವ ಇಂಗಾಲ ಡೈಯಾಕ್ಸೈಡನ್ನು ಪ್ರತ್ಯೇಕಿಸಲು ಇಷ್ಟೊಂದು ವಿದ್ಯುತ್‌, ಹಣ ವೆಚ್ಚ ಮಾಡುವ ಬದಲು, ಸಮುದ್ರದ ನೀರಿನಲ್ಲಿ ಸೇರಿರುವ ಇಂಗಾಲ ಡೈಯಾಕ್ಸೈಡನ್ನು ಪ್ರತ್ಯೇಕ ಮಾಡಿದರೆ ಹೇಗೆ ಎಂದು ಅಮೆರಿಕದ ಎಂಐಟಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಪ್ರತಿವರ್ಷ ಮನುಷ್ಯನಿಂದ ಉತ್ಪತ್ತಿಯಾಗಿ, ಪರಿಸರ ಮಾಲಿನ್ಯ ಮಾಡುತ್ತಿರುವ ಇಂಗಾಲ ಡೈಯಾಕ್ಸೈಡ್‌ನಲ್ಲಿ ಶೇ 30ರಿಂದ 40ರಷ್ಟನ್ನು, ವಾತಾವರಣದಿಂದ ಸಮುದ್ರ ಹೀರಿಕೊಂಡಿದೆ. ಸಮುದ್ರದಲ್ಲಿ ಸೇರಿರುವ ಇಂಗಾಲ ಡೈಯಾಕ್ಸೈಡನ್ನು ನಾವು ಪ್ರತ್ಯೇಕಿಸಿ ಹೊರತಗೆದಾಗ, ವಾತಾವರಣದಲ್ಲಿರುವ ಹೆಚ್ಚಿನ ಇಂಗಾಲ ಡೈಯಾಕ್ಸೈಡನ್ನು ಸಮುದ್ರ ಹೀರಿಕೊಳ್ಳಲು ಪ್ರಾರಂಭಿಸುತ್ತದೆ. ಹೀಗೆ ಸಮುದ್ರ ಮತ್ತು ವಾತಾವರಣದಲ್ಲಿರುವ ಇಂಗಾಲ ಡೈಯಾಕ್ಸೈಡ್‌ನ ಪ್ರಮಾಣವನ್ನು ನಾವು ಕಡಿಮೆ ಮಾಡಬಹುದು ಎಂದು ಈ ವಿಜ್ಞಾನಿಗಳು ವಿವರಿಸುತ್ತಾರೆ.

ಸಮುದ್ರದಲ್ಲಿ ಸೇರಿರುವ ಇಂಗಾಲ ಡೈಯಾಕ್ಸೈಡನ್ನು ಪ್ರತ್ಯೇಕಿಸಿ, ಹೊರತಗೆಯಲು ಈ ಮೊದಲು ಕೂಡ ವಿಜ್ಞಾನಿಗಳು ಪ್ರಯತ್ನಿಸಿದ್ದರು. ಆದರೆ ಅವರಂತೆ ಅತ್ಯಂತ ದುಬಾರಿಯಾದ ವಿಶೇಷ ಮೆಂಬ್ರೇನ್‌ಗಳು ಮತ್ತು ಕೆಮಿಕಲ್‌ಗಳನ್ನು ಬಳಸುವ ವಿಧಾನವಾಗಲಿ ಅಥವಾ ವಾತಾವರಣದಿಂದ ಇಂಗಾಲ ಡೈಯಾಕ್ಸೈಡನ್ನು ಪ್ರತ್ಯೇಕಿಸಲು ಅಪಾರ ಪ್ರಮಾಣದ ವಿದ್ಯುತ್‌ ಬಳಸುವುದಾಗಲಿ, ಎಂಐಟಿ ವಿಜ್ಞಾನಿಗಳು ಮಾಡುತ್ತಿಲ್ಲ.

ಪರಿಸರ ಸಂರಕ್ಷಣೆಗಾಗಿ ಸಮುದ್ರಮಥನ

ಎಂಐಟಿ ವಿಜ್ಞಾನಿಗಳ ವಿಧಾನದಲ್ಲಿ ಮೊದಲು ಸಾವಿರಾರು ಲೀಟರ್ ಸಮುದ್ರದ ನೀರನ್ನು ಶೋಧಿಸಿ, ಯಾವುದೇ ಕಸ, ಜಲಚರಗಳು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತದೆ. ಶೋಧಿಸಲಾದ ಒಂದು ಬೃಹತ್‌ ಚೇಂಬರ್‌ನೊಳಗೆ ತುಂಬಿಸಲಾಗುತ್ತದೆ. ನಂತರ ಪ್ರೋಟಾನ್‌ಗಳನ್ನು ಬಳಸಿ, ಈ ನೀರಿನ ಆಮ್ಲತೆಯನ್ನು ಹೆಚ್ಚು ಮಾಡುವ ಮೂಲಕ ಸಮುದ್ರದ ನೀರಿನಲ್ಲಿರುವ ಇಂಗಾಲ ಡೈಯಾಕ್ಸೈಡ್‌ ಪ್ರತ್ಯೇಕಿಸಿ, ಸಂಗ್ರಹಿಸಲಾಗುತ್ತದೆ. ನಂತರ ಮೊದಲ ಚೇಂಬರ್‌ನಿಂದ ಎರಡನೆಯ ಚೇಂಬರ್‌ನಲ್ಲಿ ಈ ಸಮುದ್ರದ ನೀರನ್ನು ತುಂಬಿಸಲಾಗುತ್ತದೆ. ಇಲ್ಲಿ ನೀರಿನ ಅಮ್ಲತೆಯನ್ನು ತಗೆದು, ಮತ್ತೊಮ್ಮೆ ನೀರು ಆಲ್ಕಲೈನ್‌ ಆಗುವಂತೆ ಮಾಡಲಾಗುತ್ತದೆ. ಸಮುದ್ರದ ಜಲಚರಗಳು, ಸಸ್ಯ ಮತ್ತು ಸೂಕ್ಷ್ಮಜೀವಿಗಳಿಗೆ ಈ ನೀರು ಸೂಕ್ತವಾಗಿದೆ ಎಂದು ಗುಣಮಟ್ಟ ಪರೀಕ್ಷೆಗಳನ್ನು ಮಾಡಿದ ನಂತರ, ಈ ನೀರನ್ನು ಎರಡನೆಯ ಚೇಂಬರ್‌ನಿಂದ ಸಮುದ್ರಕ್ಕೆ ಬಿಡಲಾಗುತ್ತದೆ.

ಈ ವಿಧಾನವನ್ನು ಬಳಸಿ, ಪ್ರಾಯೋಗಿಕವಾಗಿ ಸಮುದ್ರದ ನೀರಿನಿಂದ ಇಂಗಾಲ ಡೈಯಾಕ್ಸೈಡನ್ನು ಪ್ರತ್ಯೇಕಿಸಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ವಿಧಾನದಲ್ಲಿ ಪ್ರತಿಯೊಂದು ಟನ್‌ ಇಂಗಾಲ ಡೈಯಾಕ್ಸೈಡ್‌ ಪ್ರತ್ಯೇಕಿಸಲು 0.77ಮೆಗಾವ್ಯಾಟ್‌ ವಿದ್ಯುತ್‌ ಬೇಕಾಗುತ್ತದೆ. ತಮ್ಮ ಸಂಶೋಧನೆಯನ್ನು ಮುಂದುವರೆಸಿರುವ ವಿಜ್ಞಾನಿಗಳು, ಬೃಹತ್‌ ಪ್ರಮಾಣದಲ್ಲಿ ಈ ರೀತಿ ಸಮುದ್ರನೀರನ್ನು ಬಳಸುವ ಘಟಕಗಳು ಕೆಲಸ ಮಾಡಲು ಪ್ರಾರಂಭಿಸಿದಾಗ, ಬೇಕಾಗುವ ವಿದ್ಯುತ್‌ ಪ್ರಮಾಣವನ್ನು ಇನ್ನೂ ಕಡಿಮೆ ಮಾಡಲು ಸಾಧ್ಯವಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

ಸಮುದ್ರವನ್ನು ಸೇರಿರುವ ತ್ಯಾಜ್ಯವನ್ನು ಕೂಡ ಒಂದು ಮಟ್ಟದಲ್ಲಿ ಪ್ರತ್ಯೇಕಿಸಲು ಸಾಧ್ಯವಿದೆ ಮತ್ತು ಯಾವುದೇ ಜಲಚರ, ಸಸ್ಯ ಮತ್ತು ಸೂಕ್ಷ್ಮಜೀವಿಗಳಿಗೆ ಅಪಾಯವಾಗುವುದಿಲ್ಲ ಎನ್ನುವ ನಂಬಿಕೆ ಈ ವಿಜ್ಞಾನಿಗಳಿಗೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT