ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು!

ಪ್ರಿಸರ್ವೆನ್ಸ್ ರೋವರ್‌ ಮಂಗಳ ಅಂಗಳದಲ್ಲಿನ ಮಣ್ಣು, ಕಲ್ಲುಗಳ ಮಾದರಿಗಳನ್ನು (Samples) ನಾಸಾಕ್ಕೆ ಕಳಿಸಿ ಕೊಡುತ್ತಿದೆ ಎಂದು ನಾಸಾ ಹೇಳಿದೆ
Last Updated 29 ಆಗಸ್ಟ್ 2021, 7:28 IST
ಅಕ್ಷರ ಗಾತ್ರ

ಬೆಂಗಳೂರು: ಭೂಮಿ ಹೊರತುಪಡಿಸಿ ಮಾನವ ವಾಸಕ್ಕೆ ಯೋಗ್ಯವಾದ ಗ್ರಹದ ಬಗ್ಗೆ ಕಳೆದ ಹಲವು ದಶಕಗಳಿಂದ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ), ಭಾರತದ ಇಸ್ರೋ ಸೇರಿದಂತೆ ಅನೇಕ ಖಗೋಳ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅದರಲ್ಲೂ ಸದ್ಯ ನಾಸಾದ ಕಣ್ಣು ಈಗ ಭೂಮಿ ಪಕ್ಕದ ಕೆಂಪು ಗ್ರಹ ‘ಮಂಗಳ‘ನ ಮೇಲೆ ಬಿದ್ದಿದೆ.

‘ಮಂಗಳನಲ್ಲಿ (Mars) ಹಿಂದೊಮ್ಮೆ ನೀರಿತ್ತು, ಜೀವಿಗಳಿದ್ದವು. ಈಗಲೂ ಕೂಡ ಅಲ್ಲಿ ಜೀವಿಗಳು ಬದುಕಬಹುದಾದ ಸಾಧ್ಯತೆಗಳು ಇವೆಯೆನೋ‘ ಎಂದು ಭಾರಿ ಅಧ್ಯಯನ ನಡೆಯುತ್ತಿವೆ. ಇದಕ್ಕಾಗಿ 2020 ಜುಲೈ 30 ರಂದು ನಾಸಾ ಅಟ್ಲಾಸ್ ವಿ 541 ರಾಕೆಟ್ ಮೂಲಕ ಪ್ರಿಸರ್ವೆನ್ಸ್ ರೋವರ್‌ನ್ನು ಮಂಗಳನ ಮೇಲೆ ಫೆಬ್ರವರಿ18, 2021 ರಂದು ಯಶಸ್ವಿಯಾಗಿ ಇಳಿಸಿತು.

ಅಂದಿನಿಂದ ಇಲ್ಲಿಯವರೆಗೆ ಈ ಪ್ರಿಸರ್ವೆನ್ಸ್ ರೋವರ್‌ ಮಂಗಳನ ಮೇಲೆ ಯಶಸ್ವಿಯಾಗಿ ಅಡ್ಡಾಡುತ್ತಾ ಅದರ ಬಗ್ಗೆ ನಿಗೂಢ ಅಂಶಗಳನ್ನು ನಾಸಾಕ್ಕೆ ಕಳಿಸಿಕೊಡುತ್ತಿದೆ. ಇನ್ನು ಇದರಲ್ಲಿ ಹೊಸ ಬೆಳವಣಿಗೆ ಏನೆಂದರೆ, ಶೀಘ್ರದಲ್ಲೇ ಈ ಪ್ರಿಸರ್ವೆನ್ಸ್ ರೋವರ್‌ ಮಂಗಳ ಅಂಗಳದಲ್ಲಿನ ಮಣ್ಣು, ಕಲ್ಲುಗಳ ಮಾದರಿಗಳನ್ನು (Samples) ಭೂಮಿಗೆ ಕಳುಹಿಸಿ ಕೊಡುತ್ತಿದೆ ಎಂದು ನಾಸಾ ಹೇಳಿದೆ.

ಈ ಮೊದಲು 2020 ಮೇನಲ್ಲಿ ಅಂಗಾರಕನ ಮೇಲಿನ ಮಣ್ಣು ಹಾಗೂ ಕಲ್ಲಿನ ಮಾದರಿಯನ್ನು ಕಳಿಸಿಕೊಡುವಲ್ಲಿ ಪ್ರಿಸರ್ವೆನ್ಸ್ ರೋವರ್‌ ವಿಫಲವಾಗಿತ್ತು. ಇದೀಗ ಮತ್ತೆ ತನ್ನ ಪ್ರಯತ್ನವನ್ನು ಮುಂದುವರೆಸಿರುವ ರೋವರ್, ‘ಮಂಗಳನ ಜೆಜಿರೊ ಕಾರ್ಟರ್ ವಲಯದ ಕಡೆಗೆ ಪ್ರಯಾಣ ಬೆಳೆಸಿದ್ದು ಅಲ್ಲಿಯ ಮಣ್ಣು ಹಾಗೂ ಕಲ್ಲನ್ನು ತನ್ನ ಏಳು ಅಡಿಯ ರೊಬಾಟಿಕ್ ಕೈಗಳಿಂದ ಅಗೆಯಲಿದೆ. ಇದರ ಫಲಿತಾಂಶಗಳನ್ನು ಮುಂದಿನ ಎರಡು ವಾರದಲ್ಲಿ ರೋವರ್ ಭೂಮಿಗೆ ಕಳುಹಿಸಿ ಕೊಡಲಿದೆ. ಇದರಿಂದ ಮಂಗಳನ ಅಧ್ಯಯನಕ್ಕೆ ಹೊಸ ದಿಕ್ಕು ಸಿಗಲಿದೆ‘ ಎಂದು ನಾಸಾ ಹೇಳಿದೆ.

‘ಈ ಜೆಜಿರೊ ಕಾರ್ಟರ್ ವಲಯ ಈ ಮೊದಲು ರೋವರ್ ನಡೆಸಿದ ಮಣ್ಣಿನ ಪರೀಕ್ಷೆ ಪ್ರದೇಶದಿಂದ ಕೇವಲ 445 ಮೀಟರ್ ಅಂತರದಲ್ಲಿದೆ‘ ಎಂದು ನಾಸಾ ಹೇಳಿದೆ. ಒಟ್ಟಿನಲ್ಲಿ ನಾಸಾದ ಸಂಶೋಧನೆ ಫಲ ನೀಡಿದರೆ ಮುಂಬರುವ ದಿನಗಳಲ್ಲಿ ಮಂಗಳನ ಅಂಗಳಕ್ಕೆ ಮಾನವರನ್ನು ಕಳುಹಿಸಿ ಕೊಡುವ ಭಾರಿ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.

ಇನ್ನು ಅಂಗಾರಕನ ಬಗ್ಗೆ ಅಧ್ಯಯನ ನಡೆಸುವಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ನವೆಂಬರ್ 5, 2013 ರಂದು ಮಂಗಳಯಾನ ಯೋಜನೆಯ ಅಂಗವಾಗಿ ಇಸ್ರೋ ಮಾರ್ಸ್‌ ಆರ್ಬಿಟರ್ ಮಿಷನ್‌ (MOM) ನ್ನು ಕಳಿಸಿತ್ತು. ಅದು ಯಶಸ್ವಿಯಾಗಿ 2014 ಸೆಪ್ಟೆಂಬರ್ 24 ರಂದು ಮಂಗಳನ ಕಕ್ಷೆ ಸೇರಿತ್ತು. ಇಂದಿಗೂ ಕೂಡ ಅದು ಕೆಲಸ ಮಾಡುತ್ತಿದ್ದು ಮಂಗಳನ ವಾತಾವರಣದ ಬಗ್ಗೆ ಇಸ್ರೋಕ್ಕೆ ಅದ್ಭುತ ಮಾಹಿತಿ ಕೊಡುತ್ತಿದೆ.

ಕೃಪೆ–ನಾಸಾ

ಪ್ರಿಸರ್ವೆನ್ಸ್ ರೋವರ್‌ ಲ್ಯಾಂಡ್ ಆದ ಅನಿಮೇಷನ್ ವಿಡಿಯೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT