ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರಿಯ ಉಸಾಬರಿ!

Last Updated 19 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಇದು ರೂಪಾಂತರದ ಕಾಲ. ಎಲೆಗಳುದುರಿ ಬಡವಾಗಿದ್ದ ಮರಗಳೆಲ್ಲ ಚೆಂದನೆಯ ಚಿಗುರೆಲೆಗಳು, ಬಣ್ಣಬಣ್ಣದ ಹೂಗಳನ್ನು ತಳೆದು ಸಿಂಗರಿಸಿಕೊಂಡಿವೆ; ಆದರೆ, ಇದು ‘ರೂಪಾಂತರಿ’ಯ ಕಾಲವೂ ಹೌದೋ? ಕಾದು ನೋಡಬೇಕಷ್ಟೆ.

ಕೋವಿಡ್-19 ವೈರಾಣುವಿನ ಅಟಾಟೋಪದ ಬೆನ್ನಲ್ಲೇ ಎಲ್ಲೆಲ್ಲೂ ರೂಪಾಂತರಿ ವೈರಸ್‌ನ ಮಾತು; ಅದು ಮೊದಲ ವೈರಾಣುವಿಗಿಂತ ಬೇಗ ಹರಡುತ್ತಂತೆ, ಮಣಿಸಲು ಸುಲಭವಂತೆ, ಮತ್ತೊಂದು ಬಂದಿದೆಯಂತೆ, ಅದು ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ತಪ್ಪಿಸಿಕೊಳ್ಳುವ ಕಳ್ಳರೂಪಾಂತರಿಯಂತೆ ಇತ್ಯಾದಿ ಚರ್ಚೆ - ಟಿವಿ ನ್ಯೂಸ್‌ರೂಂನಿಂದ ಮದುವೆಮನೆಯವರೆಗೂ ನಡೆದಿದೆ. ಈ ರೂಪಾಂತರಿ ಎಂದರೇನು? ಅದು ಯಾಕೆ ಹಾಗೂ ಹೇಗೆ ಸೃಷ್ಟಿಯಾಗುತ್ತದೆ ಎಂಬುದರೆ ಬಗ್ಗೆ ಕೊಂಚ ಪರಿಚಯ ಮಾಡಿಕೊಳ್ಳೋಣ.

ನಮ್ಮ ಪ್ರತಿ ಜೀವಕೋಶದಲ್ಲೂ ವಂಶವಾಹಿ ವರ್ಣತಂತುಗಳಿರುತ್ತವೆಯಲ್ಲವೆ (ಕ್ರೋಮೋಸೋಮ್ಸ್)? ಅವುಗಳೊಳಗೆ ಇರುತ್ತದೆ ಡಿ.ಎನ್.ಎ. ಎಂಬ ಮೂಲಭೂತ ಸತ್ವ. ಈ ಡಿ.ಎನ್.ಎ. ಎಂಬ ಎರಡೆಳೆ ಸುರುಳಿಯು ಪ್ರತಿ ಜೀವಿಯ, ಪ್ರತಿ ವ್ಯಕ್ತಿಯ ಜೈವಿಕ ಜಾತಕವನ್ನು ಅಡಕವಾಗಿಸಿಕೊಂಡಿರುತ್ತದೆ. ಅಂತಹ ಡಿ.ಎನ್.ಎ.ಯೊಳಗೆ ನಾಲ್ಕು ಬಗೆಯ ನ್ಯುಕ್ಲಿಸೋಸೈಡ್‌ಗಳು ಇರುತ್ತವೆ - ಅಡಿನೈನ್ (A), ಗುವನೈನ್ (G), ಸೈಟೋಸಿನ್ (C) ಹಾಗೂ ಥಯಮಿನ್ (T) ಮತ್ತು ಅವುಗಳಿಗೆ ಬೆಸೆದುಕೊಂಡ ‘ಡಿಆಕ್ಸಿರೈಬೋಸ್’ ಎಂಬ ಸಕ್ಕರೆ, ಜೊತೆಗೊಂದಷ್ಟು ಫಾಸ್ಫೇಟ್ ಅಣು. ಇವು ಬೇರೆ ಬೇರೆ ಕ್ರಮದಲ್ಲಿ ಒಂದರ ಪಕ್ಕ ಒಂದು ಕೂತು ಒಂದು ಕೋಡ್ ಸೃಷ್ಟಿಸುತ್ತವೆ. ಅಂದರೆ TCG ಎಂಬ ಕ್ರಮ ಒಂದು ಕೋಡ್ ಆದರೆ, AGT ಎಂಬುದು ಮತ್ತೊಂದು, TTA ಎಂಬುದು ಮಗದೊಂದು. ಹೀಗೆ ಬಗೆಬಗೆ ಅನುಕ್ರಮಗಳಲ್ಲಿ ಅಡಗಿರುವ ಸಂದೇಶವನ್ನು ‘ಪಾಲಿಮರೇಸ್‌’ನಂತಹ ವಿಶೇಷವಾದ ಕಿಣ್ವಗಳು ಅರ್ಥೈಸಿಕೊಂಡು, ಅವುಗಳಿಗೆ ಆರ್.ಎನ್.ಎ. ರೂಪ ಕೊಡುತ್ತವೆ; ನಂತರ ಈ ಆರ್.ಎನ್.ಎ.ಯೊಳಗೆ ಅಡಗಿದ ಸಂದೇಶವು ಒಂದು ಪ್ರೊಟೀನ್‌ನ ರೂಪ ತಾಳುತ್ತದೆ ಮತ್ತು ತನಗೆಂದೇ ವಿಶೇಷವಾಗಿ ಇರುವ ಕೆಲಸವನ್ನು ಕೈಗೊಳ್ಳುತ್ತದೆ. ಆ ಕೆಲಸ, ನಮ್ಮ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವುದು, ನಮಗೆ ಗಾಯವಾದಾಗ ಅದು ಮಾಯಲು ಬೇಕಾದ ಹೊಸ ಜೀವಕಣಗಳನ್ನು ತಯಾರಿಸುವುದು – ಹೀಗೆ ಯಾವುದೇ ಆಗಿರಬಹುದು.

ಇದರ ಅರ್ಥವೇನು ಗೊತ್ತೆ? ಈ ಡಿಎನ್ಎ ಇಂದ ಆರ್‌ಎನ್‌ಎ ಮತ್ತು ಅಲ್ಲಿಂದ ಪ್ರೊಟೀನ್‌ನ ತಯಾರಿಯ ಈ ಮೂರು ಹಂತದ ಪ್ರಕ್ರಿಯೆಯಿದೆಯಲ್ಲ – ಎಲ್ಲ ಜೀವರಾಸಾಯನಿಕ ಕ್ರಿಯೆಗಳ ಸೂತ್ರವಿರುವುದು ಇದರ ಕೈಯಲ್ಲೇ ಎಂದು ಅರ್ಥ. ಇಂತಹ ಡಿಎನ್ಎಯ ನಕಲುಪ್ರತಿ ಮಾಡಿಕೊಂಡು, ಹೊಸ ಜೀವಕೋಶ ಉದಯಿಸುವಾಗಲೇ ಒಮ್ಮೊಮ್ಮೆ ಎಡವಟ್ಟು ಆಗುತ್ತದೆ. ಅದು ಸುಖಾಸುಮ್ಮನೆ ಆಗುವುದಲ್ಲ. ಆ ಜೀವಿಗೆ ಯಾವುದೋ ಬಗೆಯಲ್ಲಿ ಮುಂದೆ ಅನುಕೂಲಕರ ಎಂಬ ಕಾರಣದಿಂದ ಆ ಬದಲಾವಣೆಯಾಗುತ್ತದೆ. ಉದಾಹರಣೆಗೆ, CCG ಎಂದಿದ್ದ ಕೋಡ್ ಈ ನಕಲು ಮಾಡುವ ಪ್ರಕ್ರಿಯೆಯಲ್ಲಿ CCA ಎಂದಾಯಿತು ಎಂದಿಟ್ಟುಕೊಳ್ಳಿ; ಆಗ ಆಲ್ಲಿಂದ ಮುಂದೆ ಹೋಗುವ ಸಂದೇಶದಲ್ಲೂ ಬದಲಾವಣೆ ಆಯಿತಲ್ಲ! ಸೇಬನ್ನು ಸೀಬೆ ಎಂದರೆ ವ್ಯತ್ಯಾಸವಿಲ್ಲವೇ? ಹಾಗೆ!

ಇಂತಹ ಅಚಾನಕ್ ಬದಲಾವಣೆಗಳನ್ನು ‘ಮ್ಯುಟೇಶನ್’ ಅಥವಾ ‘ರೂಪಾಂತರ’ ಎಂದು ಕರೆಯುತ್ತಾರೆ. ಈ ಅಚಾನಕ್ಕಾಗಿ ಆಗುವ ಬದಲಾವಣೆಗಳು ಪೂರ್ವಯೋಜಿತವಿರಬಹುದು, ಇಲ್ಲದೆಯೂ ಇರಬಹುದು. ಆದರೆ ಇವುಗಳಲ್ಲಿ ಹಲವು, ವಂಶವಾಹಿಗಳ ಭಾಗವಾಗಿ ಒಂದು ತಲೆಮಾರಿನಿಂದ ಮತ್ತೊಂದಕ್ಕೆ ವರ್ಗಾಯಿಸಲಾಗುತ್ತವೆ. ಡಿಎನ್ಎ ಕೋಡ್‌ನ ಒಳಗೆ ಆದ ಈ ಬದಲಾವಣೆಯು, ಒಳ್ಳೆಯ ಪರಿಣಾಮ ಉಂಟುಮಾಡಿದ್ದರೆ ಅದು ಅನೇಕ ತಲೆಮಾರುಗಳಿಗೆ ವರ್ಗಾವಣೆಯಾಗುವುದು ಖಂಡಿತ. ಅಚಾನಕ್ಕಾಗಿ ಆದ ಇಂತಹ ಒಂದು ರೂಪಾಂತರದಿಂದ ಆ ಜೀವಿಗೆ ತೊಂದರೆಯಾಗಿದ್ದರೆ, ಬರಬರುತ್ತಾ ಮುಂದಿನ ತಲೆಮಾರುಗಳಲ್ಲಿ ಈ ಪರಿಣಾಮವು ಕಾಣದಂತೆ ಮಾಯವಾಗುವುದು ನಿಶ್ಚಿತ. ಇಂತಹ ರೂಪಾಂತರಗಳು, ಜೀವಿಗಳ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಮ್ಮ ಪೂರ್ವಜರು ಇದ್ದಂತೆ ನಾವಿಲ್ಲ. ಸಾವಿರಾರು ವರ್ಷಗಳ ಹಿಂದೆ ಇದ್ದಂತೆಯೇ ಪಕ್ಷಿಗಳಾಗಲೀ ಕೀಟಗಳಾಗಲೀ ಇತರ ದೊಡ್ಡ ಪ್ರಾಣಿಗಳಾಗಲೀ ಈಗಿಲ್ಲ. ಅವುಗಳ ಜೀವಿತಕ್ಕೆ ಅತ್ಯಾವಶ್ಯಕವಾದ ದೈಹಿಕ ಗುಣಲಕ್ಷಣಗಳು ಉಳಿದುಕೊಂಡಿವೆಯೇ ಹೊರತು, ಬೇಡದ್ದು ಕಾಲಾಂತರದಲ್ಲಿ ಹೊರಟುಹೋಗಿವೆ. ಉದಾಹರಣೆಗೆ, ಕಿರಿದಾದ ಸಂದಿಗಳೊಳಗೆ ಸರಿದಾಡಲು ಹಾವುಗಳಿಗೆ ಅಡ್ಡ ಬಂದು ತೊಂದರೆ ಮಾಡುತ್ತಿದ್ದ ಕಾಲುಗಳು ಕಾಲಾನುಕ್ರಮದಲ್ಲಿ ಇಲ್ಲವಾದದ್ದು, ನಮ್ಮ ಉದರದಲ್ಲಿ ಇರುವ ಅಷ್ಟೇನೂ ಬೇಕಿಲ್ಲದ ಅಪೆಂಡಿಕ್ಸ್‌ನ ಗಾತ್ರ ಕಡಿಮೆಯಾಗುತ್ತಾ ಸಾಗಿರುವುದು – ಇವೆಲ್ಲವೂ ವಿಕಾಸದ ಭಾಗ. ಇಂತಹ ಬದಲಾವಣೆಗಳಿಗೆ ‘ರೂಪಾಂತರ’ಗಳು ಕಾರಣ. ದೊಡ್ಡಜೀವಿಗಳಲ್ಲಿ ಇಂತಹ ರೂಪಾಂತರಗಳು ಕಡಿಮೆ ಮತ್ತು ಕಂಡುಬರುವುದಕ್ಕೆ ಶತಮಾನಗಳೇ ಬೇಕಾಗುತ್ತದೆ. ಆದರೆ ಸೂಕ್ಷ್ಮಾಣುಜೀವಿಗಳಲ್ಲಿ ಹಾಗಲ್ಲ. ಅವುಗಳ ಇರುವಿಗೆ, ಸಂತಾನೋತ್ಪತ್ತಿಗೆ ಅಡ್ಡಿ ಎನಿಸುವ ಗುಣಲಕ್ಷಣವನ್ನು ನೀಗಿಸಿಕೊಳ್ಳಲು, ಥಟ್ ಅಂತ ಹೊಸದೊಂದು ರೂಪಾಂತರಕ್ಕೆ ಒಳಗಾಗುತ್ತವೆ, ಹೊಸದೊಂದು ರೂಪಾಂತರಿ ಸಿದ್ಧವಾಗುತ್ತದೆ.

ಉದಾಹರಣೆಗೆ, ಕೋವಿಡ್-19 ವೈರಾಣುವನ್ನೇ ತೆಗೆದುಕೊಳ್ಳಿ. ಮೊದಲು ಸೋಂಕನ್ನು ಉಂಟುಮಾಡಿ ಸಮಸ್ಯೆ ಒಡ್ಡಿದ ವೈರಾಣುವಿನ ವಿರುದ್ಧ ವ್ಯಾಕ್ಸಿನ್ ತಯಾರಾಗಿದ್ದೇ ತಡ, ರೂಪಾಂತರಿಯೊಂದು ಹೊರಬಂತು. ಪ್ರತಿಜೀವಕಗಳು ಅಥವಾ ಆಂಟಿಬಯಾಟಿಕ್‌ಗಳ ಸೇವನೆ ಜನರಲ್ಲಿ ಹೆಚ್ಚಿದಂತೆಲ್ಲ, ಅವುಗಳಿಂದ ತಪ್ಪಿಸಿಕೊಂಡು ಬದುಕುವ ಸಲುವಾಗಿ, ರೂಪಾಂತರಕ್ಕೆ ಒಳಪಟ್ಟು, ಹೊಸ ರೂಪ ತಳೆದು ಹೊರಬಂದವು ವೈರಾಣುಗಳು. ಆಗ ಅವುಗಳ ಮೇಲೆ ಕೆಲಸ ಮಾಡುತ್ತಿದ್ದ ಔಷಧಗಳು ಕೆಲಸ ಮಾಡುವುದಿಲ್ಲ ಮತ್ತು ವೈರಾಣುಗಳು ಹಾಯಾಗಿ ಬದುಕಿಕೊಳ್ಳಬಹುದು. ಅದು ಎಲ್ಲಿಯವರೆಗೆ? ಈ ರೂಪಾಂತರಿಯ ಮೇಲ್ಮೈಯ ಒಂದು ಆಯಕಟ್ಟಿನ ಸ್ಥಳವನ್ನು ವಿಜ್ಞಾನಿಗಳು ಕಂಡುಹಿಡಿದು, ಅದನ್ನೇ ಗುರಿಯಾಗಿಸಿ ನಾಶಮಾಡುವ ಆಯುಧ, ಅಂದರೆ, ಲಸಿಕೆಯನ್ನೋ ಔಷಧಿಯನ್ನೋ ಕಂಡುಹಿಡಿಯುವವರೆಗೂ ಅಷ್ಟೇ. ಹಾಗೆ ಹೊಸದೊಂದು ಔಷಧ ತಯಾರಾಯ್ತೋ, ಅದರಿಂದ ಬಚಾವಾಗಲು ವೈರಾಣು ಮತ್ತೆ ರೂಪಾಂತರದ ಮೊರೆ ಹೋಗಬೇಕಾಗುತ್ತದೆ. ಇದೊಂದು ಹಾವು–ಏಣಿ ಆಟದ ಹಾಗೆ. ಒಮ್ಮೆ ವೈರಾಣು ಗೆದ್ದರೆ ಮತ್ತೊಮ್ಮೆ ಲಸಿಕೆಯೋ ಔಷಧವೋ ಗೆಲ್ಲುತ್ತದೆ. ಈ ಆಟದಲ್ಲಿ ಜನರ ಪ್ರಾಣಕ್ಕೆ ಕಂಟಕವಾದಾಗ ಇದು ಎಲ್ಲರ ಗಮನಕ್ಕೆ ಬರುತ್ತದೆಯೇ ಹೊರತು ಇಂತಹ ರೂಪಾಂತರಗಳು ಭೂಮಿಯಲ್ಲಿ ಜೀವಿಗಳ ಉಗಮವಾದಾಗಿನಿಂದಲೂ ಸಾಗಿಬಂದಿದೆ.

ರೂಪಾಂತರವು ಡಿಎನ್ಎ ಮಾತ್ರವಲ್ಲ, ನೇರವಾಗಿ ಆರ್‌ಎನ್‌ಎಯಲ್ಲೂ ಆಗಬಹುದು. ಜೀನ್‌ಗಳಲ್ಲಿ ಆಗುವ ಈ ಪಲ್ಲಟಗಳಲ್ಲದೇ, ಕೆಲವು ಜೀನ್‌ಗಳ ಹೊಸ ಸೇರ್ಪಡೆ ಅಥವಾ ನಿರ್ದಿಷ್ಟ ಜೀನ್‌ನ ನಿರ್ಮೂಲನೆ ಕೂಡ ರೂಪಾಂತರವೇ. ಇವು ನೈಸರ್ಗಿಕವಾಗಿ ಪರಿಸ್ಥಿತಿಯ ಒತ್ತಡದ ಕಾರಣದಿಂದ, ವಾತಾವರಣದ ಬದಲಾವಣೆಯಿಂದ ಆಗಬಹುದು. ಇವುಗಳನ್ನು ಕೃತಕವಾಗಿಯೂ ಸಾಧ್ಯವಾಗಿಸಿ ಹೊಸ ತಳಿಗಳನ್ನು ಸೃಷ್ಟಿಸಬಹುದು. ರೂಪಾಂತರಕ್ಕೆ ಇಷ್ಟೆಲ್ಲಾ ಶಕ್ತಿಯಿದ್ದು, ಅದರ ಬಗ್ಗೆ ತಿಳಿದುಕೊಂಡಷ್ಟೂ ಅದನ್ನು ನಿರ್ವಹಿಸುವ ಕ್ಷಮತೆ ಹೆಚ್ಚುತ್ತದೆ ಎಂಬುದಂತೂ ಖಚಿತ. ಹೊಸ ರೂಪಾಂತರಿ ವೈರಾಣುವಿಗೆ ಹೆದರದೆ, ಅದು ವಿಕಾಸದ ಹಾದಿಯ ಮತ್ತೊಂದು ಮೈಲುಗಲ್ಲು ಎಂಬಂತೆ ನೋಡಿ ಬದಿಗಿರಿಸಿ, ವಿಜ್ಞಾನಿಗಳನ್ನು ನಂಬಿ ನಮ್ಮ ದೈನಂದಿನ ಬದುಕಿನಲ್ಲಿ ತೊಡಗಿಕೊಳ್ಳುವುದೇ ಬುದ್ಧಿವಂತಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT