ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆಗೊಂದು ಕುಲಾಂತರಿ ಗಿಡ!

Published 21 ಫೆಬ್ರುವರಿ 2024, 0:30 IST
Last Updated 21 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಕ್ಷಮಿಸಿ; ತಪ್ಪಾಗಿ ಟೈಪಾಗಿಲ್ಲ.

ಪ್ರಿಯತಮೆಗೋ, ಪ್ರಿಯಕರನಿಗೋ ಬೇರಾರೂ ನೀಡದ ಕೊಡುಗೆಯನ್ನು ನೀಡಬೇಕೆಂದು ಕೊಂಡಿದ್ದೀರಾ? ತಡ ಯಾಕೆ? ‘ಲೈಟ್ಬಯೋ’ ಎನ್ನುವ ಕಂಪೆನಿಯು ಸೃಷ್ಟಿಸಿರುವ ಕುಲಾಂತರಿ ‘ಪೆಟೂನಿಯಾ’ಗಳನ್ನು ನಿಮ್ಮ ಪ್ರೇಯಸಿಗೆ ಕಳಿಸಿ. ಕೆಂಪು ಗುಲಾಬಿಯಂತೆ ಅವು ತಕ್ಷಣಕ್ಕೆ ಮನಸೆಳೆಯದಿದ್ದರೂ, ರಾತ್ರಿಯ ಕತ್ತಲಲ್ಲಿ ಹಸಿರುಬಣ್ಣದಿಂದ ಹೊಳೆಯುತ್ತವೆ. ಮಿಂಚುಹುಳ ಬೆಳಗುವಂತೆ, ಎಲೆಗಳನ್ನು ಮಿರುಗಿಸಿ ಮನಸೆಳೆಯುತ್ತವೆಯಂತೆ.

ಕುಲಾಂತರಿ ಸಸ್ಯವೇ? ಮನೆಯೊಳಗೇ? ಹೊಲದಲ್ಲಿ ಬೇಡ ಎನ್ನುವ ಪಿಶಾಚಿಯನ್ನು ಮನೆಯೊಳಗೆ ಬಿಟ್ಟುಕೊಂಡಂತೆ ಆಗಲಿಲ್ಲವೇ? - ಹೀಗೆಲ್ಲ ಎಂದಿರಾ? ಅಮೆರಿಕೆಯ ಕೃಷಿ ಇಲಾಖೆಯು ಇದೀಗ ಈ ಗಿಡಗಳು ಮಾರಾಟಕ್ಕೆ, ಹಾಗೂ ಸಾರ್ವಜನಿಕ ಬಳಕೆಗೆ ಸುರಕ್ಷಿತ ಎಂದು ಸರ್ಟಿಫಿಕೇಟು ಕೊಟ್ಟಿದೆ. ಈ ತಿಂಗಳಿನಿಂದ ಲೈಟ್ಬಯೋ ಕಂಪೆನಿಯ ಹೊಳೆಯುವ ಗಿಡಗಳು ಅಮೆರಿಕದ ನಲವತ್ತನಾಲ್ಕೂ ರಾಜ್ಯಗಳಲ್ಲಿ ಮಾರಾಟವಾಗಲಿವೆ ಎಂದು ‘ನೇಚರ್’ ಪತ್ರಿಕೆ ವರದಿ ಮಾಡಿದೆ.

ಲೈಟ್ಬಯೋ ಕಂಪೆನಿಯ ಸಂಸ್ಥಾಪಕ ಕೀತ್ ವುಡ್ ಎನ್ನುವವನ ಕನಸು ಈ ‘ಪೆಟೂನಿಯಾ’. ನಲವತ್ತು ವರ್ಷಗಳ ಹಿಂದೆ ಕುಲಾಂತರಿ ಸಸ್ಯಗಳು ಇನ್ನೂ ಹೊಸತಾಗಿದ್ದಾಗ, ತಳಿಗುಣಗಳನ್ನು ನಿಕಟ ಸಂಬಂಧಿಗಳೇ ಅಲ್ಲದ ಜೀವಿಗಳಿಗೆ ವರ್ಗಾಯಿಸಿದರೆ ಏನಾಗಬಹುದು ಎನ್ನುವ ಪ್ರಯೋಗಗಳು ನಡೆಯುತ್ತಿದ್ದುವು. ಜೀವಕೋಶಗಳೊಳಗೆ ನಡೆಯುವ ವಿದ್ಯಮಾನಗಳು ಎದ್ದುಕಾಣಲಿ ಎಂದು ಅದಕ್ಕಾಗಿ ಒಂದು ಹಸಿರುಬಣ್ಣ ಸೂಸುವ ಪ್ರೊಟೀನನ್ನು ಬಳಸುತ್ತಿದ್ದರು. ಇಂತಹ ಪ್ರಯೋಗಗಳ ವೇಳೆ ತಂಬಾಕಿನ ಗಿಡದಲ್ಲಿ ಮಿಂಚುಹುಳದಲ್ಲಿ ಬೆಳಕು ಸೂಸುವ ‘ಲುಸಿಫರೇಸ್’ ಎನ್ನುವ ಜೀನನ್ನು ಕೀತ್ ವುಡ್ ಹುದುಗಿಸಿದ್ದ. ಅದರ ಜೊತೆಗೆ ತಳುಕಿಕೊಂಡ ಯಾವುದೇ ಜೀನ್ ಕಾರ್ಯಪ್ರವೃತ್ತವಾದರೂ, ಈ ಪ್ರೊಟೀನು ಲುಸಿಫೆರಿನನ್ನು ತಯಾರಿಸುತ್ತಿತ್ತು. ಸಸ್ಯಗಳು ಹೊಳೆಯುತ್ತಿದ್ದುವು. ಇದು ಕೇವಲ ಅಧ್ಯಯನದ ವಿಷಯವಾಗಿತ್ತಷ್ಟೆ. ಮನೆಯೊಳಗೆ ಅಲಂಕಾರಕ್ಕೆ ಇರಿಸಿಕೊಳ್ಳುವ ಗಿಡಗಳನ್ನೂ ಹೀಗೆ ಹೊಳೆಯುವಂತೆ ಮಾಡಬಹುದಲ್ಲ? ವಿಜ್ಞಾನ ಮತ್ತು ಸೌಂದರ್ಯ – ಎರಡರ ಮಿಲನದಿಂದ ರಾತ್ರಿಯೂ ದಿಕ್ಕು ತೋರುವಂತಹ ಗಿಡಗಳನ್ನು ಹುಟ್ಟಿಸಬಹುದು ಎನ್ನುವ ಬಯಕೆಯಿಂದ ಕೀತ್ ವುಡ್ ಲೈಟ್ ಬಯೋ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ. ಆದರೆ ಅವನ ಕನಸು ನನಸಾಗುವುದು ಅಷ್ಟು ಸುಲಭವಾಗಿರಲಿಲ್ಲ.

ಲುಸಿಫರೇಸ್ ಎನ್ನುವುದು ಒಂದು ಕಿಣ್ವ. ಅದು ಲುಸಿಫೆರಿನ್ ಎನ್ನುವ ವಸ್ತುವನ್ನು ಅರಗಿಸಿದಾಗಷ್ಟೆ ಬೆಳಕು ಹೊರ ಹೊಮ್ಮುತ್ತದೆ. ಅಂದರೆ ಗಿಡದಲ್ಲಿ ಲುಸಿಫೆರಿನ್ ಕೂಡ ಇರಬೇಕು. ಅದಕ್ಕಾಗಿ ವಿಶೇಷ ಆಹಾರವನ್ನು ಒದಗಿಸಬೇಕು. ಇಲ್ಲದಿದ್ದರೆ ಲುಸಿಫೆರೇಸ್ ಇದ್ದರೂ ಪ್ರಯೋಜನವಿಲ್ಲ. ಲೂಸಿಫೆರಿನ್ ನಂತೆಯೇ ಹೊಳೆಯುವ ಇನ್ನೊಂದು ಹಸಿರು ಪ್ರೊಟೀನು ಇದೆ. ಮೀನಿನಲ್ಲಿ ಕಾಣುವ ಇದನ್ನು ‘ಜಿಎಫ್ಪಿ’ ಎನ್ನುತ್ತಾರೆ. ಇದನ್ನು ವಿವಿಧ ಗಿಡಗಳಲ್ಲಿ ಉತ್ಪಾದಿಸಿದರೂ, ಅವು ಸ್ವತಃ ಹೊಳೆಯುವುದಿಲ್ಲ. ಯೂವಿ ಕಿರಣಗಳು ಅಥವಾ ಬಿಸಿಲು ಬೀಳದಿದ್ದರೆ ಅವು ತಣ್ಣಗೆ ಇರುತ್ತವೆ.

ಲೈಟ್ಬಯೋದ ಪೆಟುನಿಯಾ ಇವ್ಯಾವ ತೊಂದರೆಯೂ ಇಲ್ಲದಂತೆ ಸ್ವಯಂ ಬೆಳಗುತ್ತದೆ; ಮಿನುಗುತ್ತದೆ. ಇದಕ್ಕೆ ಕಾರಣ ಕಾಡಿನಲ್ಲಿ ಮರಗಳ ಮೇಲೆ ಬೆಳೆಯುವ ಒಂದು ಅಣಬೆ. ‘ನಿಯೊನಾಥೋಪ್ಯಾನಸ್ ನಂಬಿ’ ಎನ್ನುವ ಈ ಅಣಬೆ ರಾತ್ರಿಯ ಹೊತ್ತು ದೀಪದಂತೆ ಹೊಳೆಯುತ್ತದೆ. ಎಷ್ಟೋ ಮಂದಿ ಅದನ್ನು ಹೊತ್ತ ಮರವನ್ನು ರಾತ್ರಿ ನೋಡಿ ದೆವ್ವ ಎಂದು ಭಯಪಟ್ಟದ್ದೂ ಉಂಟು! ಅಣಬೆಯಲ್ಲಿ ಇರುವ ಹೊಳೆಯುವ ಪ್ರೊಟೀನನ್ನು ಬಳಸಿದರೆ ಹೇಗೆ ಎಂದು ಯೋಚಿಸಿದ ಲೈಟ್ ಬಯೋ ಇತ್ತೀಚಿನ ಹಲವು ತಂತ್ರಗಳನ್ನು ಬಳಸಿಕೊಂಡು ಪೆಟೂನಿಯಾವನ್ನು ಕುಲಾಂತರಗೊಳಿಸಿತು.

ಪೆಟೂನಿಯಾ

ಪೆಟೂನಿಯಾ

ಪೆಟೂನಿಯಾದೊಳಗೆ ಅಣಬೆಯ ಜೀನನ್ನು ಹಾಕಿದ್ದಲ್ಲದೆ, ಅದು ಸೃಷ್ಟಿಸಿದ ಪ್ರೊಟೀನನ್ನು ಗಿಡ ಅರಗಿಸಿಕೊಂಡು, ಮರಳಿ ಮೂಲರೂಪಕ್ಕೆ ಪರಿವರ್ತಿಸುವಂತೆಯೂ ಮಾಡಿದೆ. ಈ ಅಣಬೆ ‘ಕೆಫೀಕ್ ಆಮ್ಲ’ ಎನ್ನುವ ವಸ್ತುವನ್ನು ಅರಗಿಸಿದಾಗ ಬೆಳಕು ಚೆಲ್ಲುತ್ತದೆ. ವಿಶೇಷ ಎಂದರೆ ಈ ಆಮ್ಲ ಬಹುತೇಕ ಗಿಡಗಳಲ್ಲಿಯೂ ತಯಾರಾಗುವ ವಸ್ತು, ಅಣಬೆಗಷ್ಟೆ ವಿಶೇಷವಲ್ಲ. ಹೀಗಾಗಿ ಈ ಬೆಳಕು ಚೆಲ್ಲುವ ಕ್ರಿಯೆ, ಗಿಡದಲ್ಲಿ ನಡೆಯುವ ಉಸಿರಾಟ, ದ್ಯುತಿಸಂಶ್ಲೇಷಣೆಯಂತೆಯೇ ಅದರದ್ದೇ ಅಂಗವಾದೊಂದು ಜೈವಿಕ ಕ್ರಿಯೆ ಆಗಿಬಿಟ್ಟಿದೆ. ಇಂತಹ ಪೆಟೂನಿಯಾಗಳು ರಾತ್ರಿ ತಮ್ಮಂತಾವೇ ಕತ್ತಲಲ್ಲಿ ಬೆಳಕು ಚೆಲ್ಲುತ್ತಾ ಹೊಳೆಯುತ್ತವೆ. ಅದುವೂ ಮಸುಕಾದ ಬೆಳಕಲ್ಲ. ‘ಗಾಳಿ, ಬೆಳಕು ಚೆನ್ನಾಗಿದ್ದು, ಗಿಡ ಚೆನ್ನಾಗಿ ಆರೋಗ್ಯಕರವಾಗಿ ಬೆಳೆದರೆ, ಸಾಕಷ್ಟು ಗಾಢವಾದ ಬೆಳಕನ್ನೇ ಚೆಲ್ಲುತ್ತವೆ,’ ಎನ್ನುತ್ತಾರೆ, ಕೀತ್ ವುಡ್.

ಪೆಟೂನಿಯಾಗಳೇ ಏಕೆ? ಗುಲಾಬಿಯನ್ನೂ ಹೊಳೆಯುವಂತೆ ಮಾಡಬಹುದಿತ್ತಲ್ಲ? – ಹೀಗೆ ಪ್ರಶ್ನಿಸಿದಿರಾ? ಅದಕ್ಕೆ ಕಾರಣವೂ ಇದೆ. ಪೆಟೂನಿಯಾಗಳನ್ನು ಅಲಂಕಾರಿಕ ಗಿಡವನ್ನಾಗಿ ಅಮೆರಿಕದಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ. ಲಂಟಾನಾದಂತೆ ಇದು ನುಸುಳುಕೋರ ಗಿಡವಂತೂ ಅಲ್ಲ. ಉಳಿದೆಲ್ಲವನ್ನೂ ಹತ್ತಿಕ್ಕಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದೂ ಅಲ್ಲ. ಹೀಗಾಗಿ ಇದರಿಂದ ಇತರೆ ಸಸ್ಯಗಳಿಗೆ ಅಪಾಯ ಕಡಿಮೆ ಎನ್ನುವುದು ಪ್ರಮುಖ ಕಾರಣ. ಹೀಗಾಗಿ ಇದರಲ್ಲಿರುವ ಕುಲಾಂತರಿ ಜೀನುಗಳು, ಇತರೆ ಗಿಡಗಳಿಗೆ ಹರಸುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ, ಕೀತ್ ವುಡ್.

ಇತ್ತೀಚೆಗೆ ಅಮೆರಿಕದ ಫ್ಲಾರಿಡಾ ರಾಜ್ಯದಲ್ಲಿ ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಲೆಂದು ಕುಲಾಂತರಿ ಗಂಡುಸೊಳ್ಳೆಗಳನ್ನು ‘ಆಕ್ಸಿಟೆಕ್’ ಎನ್ನುವ ಕಂಪೆನಿ ಬಿಡುಗಡೆ ಮಾಡಿತ್ತು. ಆ ಪ್ರಯೋಗ ಇನ್ನೂ ನಡೆಯುತ್ತಲಿದೆ. ಕುಲಾಂತರಿ ಪೆಟೂನಿಯ ಅದಕ್ಕಿಂತಲೂ ನಿರಪಾಯಕಾರಿ ಎನ್ನಬಹುದು. ಏಕೆಂದರೆ, ಕುಲಾಂತರಿ ಸೊಳ್ಳೆಯನ್ನು ಬರಿಗಣ್ಣಿನಲ್ಲಿ ಪತ್ತೆ ಮಾಡುವುದು ಕಷ್ಟ. ಪೆಟೂನಿಯ ತಾನು ಕುಲಾಂತರಿ ಎಂದು ಪ್ರಖರವಾಗಿ ತಿಳಿಸಿಬಿಡುತ್ತದಲ್ಲ!

‘ಲೈಟ್ ಬಯೋ ಸಂಸ್ಥೆ’ ಇದೇ ಏಪ್ರಿಲಿನಲ್ಲಿ ಸುಮಾರು 50 ಸಾವಿರ ಪೆಟೂನಿಯಾ ಗಿಡಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ವೇಲೆಂಟೈನ್ ದಿನಕ್ಕೆ ಭರವಸೆ ನೀಡಿ, ಏಪ್ರಿಲಿನಲ್ಲಿ ಕೊಡುಗೆಯಾಗಿ ಕೊಡಬಹುದು. ಗಿಡವೊಂದಕ್ಕೆ ಕೇವಲ ಮೂವತ್ತು ಡಾಲರುಗಳು (ಸುಮಾರು ₹2,000) ಅಷ್ಟೆ. ಈ ಗಿಡದ ಬೆಳಕನ್ನು ನೋಡಿ, ಸೊಳ್ಳೆ, ನೊಣಗಳು ಹತ್ತಿರ ಬರಬಹುದೋ, ಇಲ್ಲವೋ ಗೊತ್ತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT