ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Artificial Intelligence: ಕೃತಕ ಬುದ್ಧಿಮತ್ತೆಯ ಕಥೆ

Published 23 ಮೇ 2023, 23:43 IST
Last Updated 23 ಮೇ 2023, 23:43 IST
ಅಕ್ಷರ ಗಾತ್ರ

-ಶರತ್ ಭಟ್ ಸೇರಾಜೆ

ಗಿಳಿಗಳು ನಮ್ಮಂತೆ ಮಾತಾಡುವುದನ್ನು ನೋಡಿ, ‘ಏನೇ ಶುಕಭಾಷಿಣೀ’ ಎಂಬ ಉದ್ಗಾರ ತೆಗೆದಾಗಿದೆ; ನಾಯಿಗಳಿಗೆ ಬುದ್ಧಿ ಕಲಿಸುವುದನ್ನು ಕಂಡಿದ್ದೇವೆ, ಡಾಲ್ಫಿನ್ನುಗಳ ಚುರುಕು, ಚಿಂಪಾಂಜಿಗಳೆಲ್ಲ ಜಾಣ್ಮೆ, ಕಲಿಯುವ ಬಲ್ಮೆ ಎಲ್ಲವನ್ನು ವಿಜ್ಞಾನಿಗಳು ಹೊರಗೆಳೆದಿದ್ದಾರೆ, ನಾವದನ್ನು ಗಮನಿಸಿದ್ದೇವೆ. ಹಕ್ಕಿ ಹಾರುವುದನ್ನು ನೋಡಿ ಸಿಕ್ಕಿದ ಪ್ರೇರಣೆ, ಉತ್ತೇಜನಗಳಿಂದ ವಿಮಾನ ಎತ್ತರೆತ್ತರ ಹಾರಿತು. ಕುದುರೆ, ಕತ್ತೆ, ಒಂಟೆಗಳ ಜಾಗಕ್ಕೆ ಬಸ್ಸು ಕಾರುಗಳು ಹಾರ್ನು ಮೊಳಗಿಸುತ್ತಾ ಗತ್ತಿನಿಂದ ಬಂದವು; ಎತ್ತುಗಳಿದ್ದಲ್ಲಿ ಟ್ರ್ಯಾಕ್ಟರ್ ಗದ್ದೆಗಿಳಿಯಿತು; ಬಾವಲಿಯನ್ನು ಮೀರಿಸುವಂತಹಾ ರಾಡಾರ್‌ಗಳು ತಯಾರಾದವು. ಪ್ರಾಣಿಗಳಿಗೆ ಬುದ್ಧಿ ಇಲ್ಲವೆಂದು ನಾವು ಭಾವಿಸಿಲ್ಲ; ಅವಕ್ಕೆ ಬುದ್ಧಿ ನಮ್ಮಷ್ಟಿಲ್ಲ ಎಂದು ಮಾತ್ರ ನಮ್ಮ ತಿಳಿವಳಿಕೆ. ಇದೇನೋ ಸರಿ. ಪ್ರಾಣಿಗಳಿಗೆ ಬುದ್ಧಿಯಿದೆ, ಯಂತ್ರಗಳಿಗೆ? ಯಂತ್ರಗಳಿಗೆ ಅದೆಲ್ಲಿಯ ಬುದ್ಧಿ?! ಇದೀಗ ಹೊಸದಾದ ಕಲ್ಪನೆ. ಎಪ್ಪತ್ತು ಎಂಬತ್ತು ವರ್ಷಗಳಷ್ಟು ಹಿಂದೆ ಚಾಲ್ತಿಗೆ ಬಂದ ಕೃತಕ ಬುದ್ಧಿಮತ್ತೆ ಎಂಬ ಕಲ್ಪನೆ. ಆ ಕಲ್ಪನೆಯೀಗ ಬೆಳೆದು ಗಣಕಯಂತ್ರದಂತಹ ನಿರ್ಜೀವಿಗಳಿಗೂ ಬುದ್ಧಿಯನ್ನು ಹೇಳಿಕೊಡುವ, ಅವು ಅದನ್ನು ಕಲಿಯುತ್ತಿರುವ ಕಲಿಗಾಲದಲ್ಲಿ ಈಗ ನಾವಿದ್ದೇವೆ.

ಈ ಕೃತಕ ಬುದ್ಧಿಮತ್ತೆ ಎಂಬ ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದ ಬೀಜಾವಾಪವು ದೊಡ್ಡ ಮಟ್ಟದಲ್ಲಿ ಆದದ್ದು ಅಮೆರಿಕಾದ ಡಾರ್ಟ್ಮೌಥ್ ಕಾಲೇಜಿನಲ್ಲಿ. ಅಲ್ಲಿ ಜಾನ್ ಮೆಕ್ಕಾರ್ತಿ ಮತ್ತು ಮಾರ್ವಿನ್ ಮಿಂಸ್ಕಿ ಎಂಬ ಗಣಿತಜ್ಞರು ಆಯೋಜಿಸಿದ್ದ ವಿಜ್ಞಾನಿಗಳ, ಗಣಿತಜ್ಞರ ಗೋಷ್ಠಿಯೊಂದರಲ್ಲಿ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೂ ಮೊದಲೇ ಈ ನಿಟ್ಟಿನಲ್ಲಿ ಯೋಚನೆ ಮಾಡಿದವರಿದ್ದಾರೆ. ಅಂಥವರಲ್ಲಿ ಮುಖ್ಯನಾದವನು ಅಲನ್ ಟ್ಯೂರಿಂಗ್ ಎಂಬ ಮಹಾಮೇಧಾವಿ ವಿಜ್ಞಾನಿ. ಅದು ಎರಡನೆಯ ಮಹಾಯುದ್ಧದ ಕಾಲ. ಜರ್ಮನರು ಗೂಢ ಲಿಪಿಗಳಲ್ಲಿ ಕಲಿಸುತ್ತಿದ್ದ ರಹಸ್ಯ ಸಂದೇಶಗಳನ್ನು ಭೇದಿಸಿದರೆ ಯುದ್ಧವನ್ನೇ ಗೆಲ್ಲಬಹುದು ಎಂದು ಇಂಗ್ಲೆಂಡಿಗೆ ತೋರಿತು. ಆದರೆ ಸಂಕೇತ ಲಿಪಿಯ ಗುಟ್ಟು ಬಿಡಿಸುವುದಕ್ಕೆ ಕೋಟಿಗಟ್ಟಲೆ ಲೆಕ್ಕ ಮಾಡಬೇಕಾಗುತ್ತದೆ ಎಂಬ ವಾಸ್ತವ ಗಮನಕ್ಕೆ ಬಂತು. ಆಗ ಬಂದವನು ಅಲನ್ ಟ್ಯೂರಿಂಗ್. ಈ ಕೆಲಸಕ್ಕೆ ಯಂತ್ರಗಳನ್ನು ಯಾಕೆ ಬಳಸಬಾರದು, ಆ ಯಂತ್ರಗಳು ಯಾಕೆ ಬುದ್ಧಿಶಾಲಿಗಳಾಗಬಾರದು ಎಂಬ ದಿಕ್ಕಿನಲ್ಲಿ ಯೋಚಿಸಿದ್ದು ಅವನು. ಅವನು ಹಾಗೆ ರಚಿಸಿದ ಯಂತ್ರ ಯಶಸ್ವಿಯೂ ಆಯಿತು (ಇದರ ಬಗ್ಗೆ The Imitation Game ಎಂಬ ಹೃದಯಸ್ಪರ್ಶಿ ಎಂಬ ಚಲನಚಿತ್ರವೊಂದು ಬಂದಿದೆ, ಆಸಕ್ತರು ನೋಡಿ). ಈ ಕ್ಷೇತ್ರದ ಮೊದಲ ಅಂಬೆಗಾಲು ಆ ಯಂತ್ರದ್ದೇ ಎನ್ನಬಹುದು.

ಬುದ್ಧಿಶಾಲಿ ಗಣಕಯಂತ್ರಗಳು ಅಂತಲೋ ಕೃತಕ ಬುದ್ಧಿಮತ್ತೆ ಎಂದೋ ಹೇಳುವಾಗ, ಜಾಣ್ಮೆಯನ್ನು ಕಟ್ಟಲಾಗುತ್ತಿದೆ ಅನ್ನುವಾಗ, ಬುದ್ಧಿ ಎಂದರೇನು, ಅದರ ಸ್ವರೂಪನಿರ್ಣಯ ಹೇಗೆ? ಆ ಪದದ ವ್ಯಾಪ್ತಿಯೆಷ್ಟು ಎಂದು ನೋಡಿಕೊಂಡರೆ, ಗಣಕಯಂತ್ರಗಳು ಬುದ್ಧಿಯ ಪ್ರಕಾರಗಳಲ್ಲಿ ಎಷ್ಟನ್ನು ಕಲಿಯಬಲ್ಲವು ಎಂಬುದರ ವಿವೇಚನೆ ಸಾಧ್ಯವಾದೀತು. ತದನಂತರ ಈ ಕೃತಕ ಬುದ್ಧಿಯನ್ನು ಉಳ್ಳ ಕಂಪ್ಯೂಟರು ನಮ್ಮಂತೆ ಆದೀತೇ ಎಂಬ ಪ್ರಶ್ನೆಯ ವಿಮರ್ಶೆಗೆ ತೊಡಗಬಹುದು. ಇಂಥ ಚಿಂತನೆಯನ್ನೂ ಟ್ಯೂರಿಂಗ್ ಮಾಡಿದ. ಯಂತ್ರವು ಬುದ್ಧಿಶಾಲಿಯಾಯಿತೇ ಎಂದು ನಿರ್ಣಯಿಸಲು ‘ಟ್ಯೂರಿಂಗ್ ಟೆಸ್ಟ್’ ಎಂಬ ಪರೀಕ್ಷೆಯನ್ನೂ ಆತ ರೂಪಿಸಿದ. ಅವನ ಯೋಜನೆಯನ್ನು ಇವತ್ತಿಗೆ ಅನ್ವಯಿಸಿ ಹೇಳುವುದಾದರೆ, ಹೀಗೆ ಹೇಳಬಹುದು: ನೀವು ವಾಟ್ಸಪ್ಪಿನಲ್ಲೋ, ಇನ್ಯಾವುದೋ ಚಾಟಿನಲ್ಲೋ ನಿಮ್ಮ ಕಣ್ಣಿಗೆ ಕಾಣದ ಯಾರೊಟ್ಟಿಗೋ ಮಾತಾಡುತ್ತೀರಿ ಅಂತಿಟ್ಟುಕೊಳ್ಳಿ, ಹಾಗೆ ಮಾತಾಡುವಾಗ ಆ ಕಡೆ ಇರುವುದು ನಿಜವಾದ ವ್ಯಕ್ತಿ ಅಲ್ಲ ಅಂತಾದರೆ, ಆ ಸಂವಾದದ ಗುಣಮಟ್ಟವನ್ನು ಮಾತ್ರ ನೋಡಿ, ‘ನಾನೊಂದು ಯಂತ್ರದ ಜೊತೆ ಮಾತಾಡುತ್ತಿದ್ದೇನೆ’ ಎಂದು ನಿಮಗೆ ಕಂಡುಹಿಡಿಯಲು ಸಾಧ್ಯವೇ? ಸಾಧ್ಯವಿಲ್ಲವಾದರೆ, ಒಂದು ವೇಳೆ ನಿಮ್ಮನ್ನು ಆ ಯಂತ್ರ ಯಶಸ್ವಿಯಾಗಿ ಮನವೊಪ್ಪುವಂತೆ ಮಾಡಬಲ್ಲದು ಅಂತಾದರೆ, ಟ್ಯೂರಿಂಗ್ ಟೆಸ್ಟಿನಲ್ಲಿ ಅದು ಪಾಸಾದಂತೆ, ಅದನ್ನೊಂದು ಬುದ್ಧಿವಂತ ಗಣಕಯಂತ್ರ ಅನ್ನುವುದಕ್ಕೆ ಟ್ಯೂರಿಂಗನದೇನೂ ಅಡ್ಡಿಯಿಲ್ಲ.

ಇದಕ್ಕೆ ಪ್ರತಿಯಾಗಿ ಜಾನ್‌ ಸಿರ್ಲ್‌ (John Searle) ಎಂಬವನು ಇನ್ನೊಂದು ವಾದವನ್ನೂ ಹೂಡಿದ: ಒಂದು ಕೋಣೆಯಲ್ಲೊಬ್ಬ ಬಾಗಿಲು ಹಾಕಿ ಕೂತಿದ್ದಾನೆ ಅಂದುಕೊಳ್ಳಿ, ಅವನಿಗೆ ಚೀನೀ ಭಾಷೆ ಬರುವುದಿಲ್ಲ. ಆದರೆ ಚೀನೀ ಭಾಷೆಯ ಯಾವ ಅಕ್ಷರ ಕಂಡರೆ ಏನು ಮಾಡಬೇಕು ಎಂಬುದರ ಸೂಚನೆಯನ್ನು ಅವನಿಗೆ ಇಂಗ್ಲಿಷಿನಲ್ಲಿ ಬರೆದು ಕೊಡಲಾಗಿದೆ. ಬಾಗಿಲಿನ ಅಡಿಯಿಂದ ಅವನಿಗೆ ಚೀನೀ ಭಾಷೆಯ ಪ್ರಶ್ನೆಯೊಂದಿರುವ ಚೀಟಿಯನ್ನು ಕೊಡಲಾಗುತ್ತದೆ. ಇಂಗ್ಲಿಷಿನ ಸೂಚನೆಯನ್ನು ಓದಿ, ಅದರ ಪ್ರಕಾರ ಚೀನೀ ಅಕ್ಷರಗಳನ್ನು ಯಾಂತ್ರಿಕವಾಗಿ ಜೋಡಿಸಿ ಉತ್ತರವನ್ನು ತಯಾರು ಮಾಡಿ ಆತ ಕೊಡುತ್ತಾನೆ. ಉತ್ತರ ಸರಿಯಾಗಿಯೇ ಇರುತ್ತದೆ. ಆದರೆ ಆತ ಪಾಲಿಸಿದ್ದು ಇಂಗ್ಲಿಷಿನಲ್ಲಿದ್ದ ಸೂಚನೆಗಳನ್ನು ಮಾತ್ರ. ಹೊರಗೆ ಇರುವವರಿಗೆ ಅವರ ಪ್ರಶ್ನೆಗೆ ಸರಿಯಾದ ಉತ್ತರವೇ ಸಿಕ್ಕಿದೆ (ಉತ್ತರವನ್ನು ತಯಾರಿಸಿದವನಿಗೆ ಅದರ ತಲೆಬುಡ ಗೊತ್ತಿಲ್ಲದಿದ್ದರೂ). ಈಗ ಈ ವ್ಯಕ್ತಿಗೆ ಚೀನೀ ಭಾಷೆ ಬರುತ್ತದೆ ಎಂದು ಹೇಳಲಾದೀತೇ? ಕೃತಕ ಬುದ್ದಿಮತ್ತೆ ಇರುವ ಯಂತ್ರಗಳ ವರ್ತನೆಯೂ ಹೀಗೆಯೇ ಅಲ್ಲವೇ? ಇದು ಜಾನ್‌ ಸಿರ್ಲ್‌ನ ತಾತ್ತ್ವಿಕ ವಾದದ ತಿರುಳು.

ಇದೆಲ್ಲ ಏನೇ ಇದ್ದರೂ ಅಮೆರಿಕಾದ ಡಾರ್ಟ್ಮೌಥ್ ಕಾಲೇಜಿನ ಗೋಷ್ಠಿಯಾದ ಮೇಲೆ ಇದಕ್ಕೆ ವಿಶೇಷ ಪ್ರಚಾರ ಸಿಕ್ಕಿತು. ದುಡ್ಡೂ ಬಂತು, ಮನುಷ್ಯನ ಮೆದುಳು, ನರಮಂಡಲ ಇವುಗಳನ್ನು ಅನುಕರಣೆ ಮಾಡುವ ವಿಧಾನಗಳೆಲ್ಲ ಹುಟ್ಟಿಕೊಂಡವು. ಸ್ವಲ್ಪ ಪ್ರಗತಿಯಾಗುವುದು, ಅದಾದ ಮೇಲೆ ಎಲ್ಲ ಇಳಿಮುಖವಾಗುವುದು, ಪ್ರಗತಿಯಾಗುತ್ತಿಲ್ಲ ಅನ್ನಿಸುವಾಗ ಮತ್ತೆ ಏನಾದರೂ ಹೊಸತು ಹುಟ್ಟುವುದುವ– ಹೀಗೆ ಎರಡು ಮೂರು ದಶಕ ಏರಿಳಿತಗಳನ್ನು ಈ ಕ್ಷೇತ್ರ ಕಂಡಿತು. ಐಬಿಎಂನವರು ತಯಾರಿಸಿದ ಗಣಕಯಂತ್ರವೊಂದು ಕಾಸ್ಪರೋವನನ್ನು ಚೆಸ್ನಲ್ಲಿ ಒಮ್ಮೆ ಸೋಲಿಸಿದಾಗ ಅದು ದೊಡ್ಡ ಪ್ರಮಾಣದಲ್ಲಿ ಸುದ್ದಿಯನ್ನು ಉಂಟು ಮಾಡಿ ಈ ಕ್ಷೇತ್ರ ಮತ್ತೆ ಗರಿಗೆದರುವ ಹಾಗೆ ಮಾಡಿತು. ಅಲ್ಲಿಂದ ಹೊರಟದ್ದು ಈಗ ಚಾಟ್ ಜಿಪಿಟಿಯವರೆಗೆ ಬಂದು ನಿಂತಿದೆ. ಮುಂದೇನಾಗುವುದೋ ಎಂಬ ಕುತೂಹಲ ಎಲ್ಲರಿಗೂ ಇದ್ದದ್ದೇ. (ಈ ವಿಚಾರವಾಗಿ  ವಿಸ್ತೃತ ಪ್ರಬಂಧವೊಂದು ‘ಬಾಗಿಲು ತೆರೆಯೇ ಸೇಸಮ್ಮ’ ಎಂಬ ಪುಸ್ತಕದಲ್ಲಿ ಸಿಗುತ್ತದೆ, ಆಸಕ್ತರು ಓದಬಹುದು.)

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT