ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತವೈಭವ ಮರು ಸೃಷ್ಟಿಯ ತವಕ

ಬಿಜೆಪಿ ಕನಸು ಭಗ್ನಗೊಳಿಸಲು ಕಾಂಗ್ರೆಸ್, ಜೆಡಿಎಸ್ ಪ್ರತಿತಂತ್ರ
Last Updated 5 ಮೇ 2018, 19:30 IST
ಅಕ್ಷರ ಗಾತ್ರ

ರಾಜಕೀಯ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿರುವ ‘ಮಲೆನಾಡಿನ ತವರು’ ಶಿವಮೊಗ್ಗ ಜಿಲ್ಲೆಯಲ್ಲಿ ಗತ ವೈಭವವನ್ನು ಮತ್ತೆ ಸೃಷ್ಟಿಸುವ ಹುಮ್ಮಸ್ಸಿನೊಂದಿಗೆ ಬಿಜೆಪಿ ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಘೋಷಿಸಿರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಪ್ರಮುಖ ಸಮುದಾಯಗಳ ಮತಬುಟ್ಟಿ ಕೈಗೆ ಸಿಗುತ್ತದೆ ಎಂಬ ಲೆಕ್ಕಾಚಾರ ಪಕ್ಷದ ಮುಖಂಡರಲ್ಲಿದೆ.

ಸ್ವಾತಂತ್ರ್ಯಾ ನಂತರ ಸಮಾಜವಾದಿಗಳ ಭದ್ರ ನೆಲೆಯಾಗಿ ರೂಪುಗೊಂಡಿದ್ದ ಜಿಲ್ಲೆಯಲ್ಲಿ ಅಂದಿನಿಂದ ಇಂದಿನವರೆಗೂ ರಾಜಕೀಯ ನೆಲೆಗಟ್ಟು ತೀರಾ ಕುಸಿಯದಂತೆ ಕಾಪಾಡಿಕೊಂಡು ಬಂದಿರುವ ಕಾಂಗ್ರೆಸ್‌, ಸಮಾಜವಾದದ ಬದಲಾದ ಸ್ವರೂಪದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಜೆಡಿಎಸ್ ಪಕ್ಷಗಳು, ಬಿಜೆಪಿ ಮುಖಂಡರ ಕನಸು ಸಾಕಾರಗೊಳ್ಳದಂತೆ ತಡೆಯಲು ಹಲವು ರಾಜಕೀಯ ತಂತ್ರಗಳನ್ನು ಹೆಣೆದಿವೆ.

2004ಕ್ಕೂ ಮೊದಲು ಬಿಜೆಪಿ, ಜಿಲ್ಲೆಯ ಎರಡು ಮೂರು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಕೆಲವೇ ವರ್ಗಗಳ ಜನರ ಪಕ್ಷ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಪಕ್ಷದಲ್ಲಿ ತಳಸಮುದಾಯದ ಜನರೂ ಒಳಗೊಳ್ಳುವಂತೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ.

ಸಮಾಜವಾದಿ ಬುನಾದಿಯ ಮೇಲೆ ರಾಜಕೀಯ ಪ್ರವೇಶಿಸಿದ್ದ ಸಾರೇಕೊಪ್ಪ ಬಂಗಾರಪ್ಪ, ಬದಲಾದ ಕಾಲಘಟ್ಟದಲ್ಲಿ ಬಿಜೆಪಿ ಸೇರಿದ್ದು ಆ ಪಕ್ಷಕ್ಕೆ ಆನೆ ಬಲ ತಂದುಕೊಟ್ಟಿತ್ತು. 2004ರ ಚುನಾವಣೆಯ ನಂತರ ಬಂಗಾರಪ್ಪ ಪಕ್ಷ ತೊರೆದರೂ ಅವರು ಕರೆತಂದಿದ್ದ ಬಹುತೇಕ ಕಾರ್ಯಕರ್ತರ ಪಡೆ ಅಲ್ಲೇ ಉಳಿದುಕೊಂಡ ಪರಿಣಾಮ ಬಿಜೆಪಿ ನೆಲೆ ಗಟ್ಟಿಕೊಂಡಿತ್ತು.

ಹೀಗೆ ಹಂತ ಹಂತವಾಗಿ ನೆಲೆ ಕಂಡುಕೊಂಡಿದ್ದ ಬಿಜೆಪಿ 2013ರಲ್ಲಿ ಕೆಜೆಪಿ ಹೊಡೆತಕ್ಕೆ ತತ್ತರಿಸಿತ್ತು. ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದ್ದು, ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ಈಗ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಆ ಪಕ್ಷಕ್ಕೆ ವರದಾನವಾಗಿವೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಎರಡು ವರ್ಷ ಯಡಿಯೂರಪ್ಪ ಅವರನ್ನು ಕಾಡಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಈಗ ಮತ್ತೆ ಒಂದಾಗಿದ್ದಾರೆ.

ಮೂರು ವರ್ಷ ಮುಖ್ಯಮಂತ್ರಿಯಾದರೂ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಲಿಲ್ಲ ಎಂಬ ಆರೋಪ ಯಡಿಯೂರಪ್ಪ ಅವರ ಮೇಲಿದೆ. ಇಂತಹ ಆರೋಪಗಳನ್ನು ನಿರಾಕರಿಸುತ್ತಾ, ಮುಂದೆ ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿ, ಮತ ಸೆಳೆಯಲು ಅವರು ಮುಂದಾಗಿದ್ದಾರೆ.

ಲಾಭದ ಲೆಕ್ಕಾಚಾರ: ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾದ ನಂತರ, ಮುಳುಗಡೆ ಸಂತ್ರಸ್ತರ ಪುನರ್ವಸತಿ, ಬಗರ್‌ಹುಕುಂ ಸಾಗುವಳಿ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ತೆಗೆದುಕೊಂಡ ದೃಢ ನಿರ್ಧಾರಗಳು ಕಾಂಗ್ರೆಸ್‌ಗೆ ಮಲೆನಾಡು ಭಾಗದಲ್ಲಿ ಬಲ ತಂದಿವೆ, ಈ ವಿಷಯಗಳು ಚುನಾವಣೆಯಲ್ಲಿ ಲಾಭ ತರುತ್ತವೆ ಎನ್ನುವುದು ಆ ಪಕ್ಷದ ಲೆಕ್ಕಾಚಾರ. ರಾಜ್ಯದಲ್ಲಿ ಹಲವು ದಶಕಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್‌ಗೆ ಈ ಸಮಸ್ಯೆ ಬಗೆಹರಿಸಲು ಇಷ್ಟು ವರ್ಷ ಬೇಕಾಯಿತೇ ಎಂದು ಬಿಜೆಪಿ, ಜೆಡಿಎಸ್ ತಿರುಗೇಟು ನೀಡುತ್ತಿವೆ.

ಸಿದ್ದರಾಮಯ್ಯ ಈಗಾಗಲೇ ಮೂರು ಬಾರಿ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವುದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶಿವಮೊಗ್ಗದಲ್ಲಿ ರೋಡ್‌ ಷೋ ನಡೆಸಿದ್ದು ಸ್ಥಳೀಯ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ.

ಮಲೆನಾಡಿನ ಪ್ರಮುಖ ಬೆಳೆ ಅಡಿಕೆ ಬೆಳೆಗಾರರ ಸಮಸ್ಯೆಗಳು ತೀರ್ಥಹಳ್ಳಿ, ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿವೆ. ಬಿಜೆಪಿ ಮುಖಂಡರು ಅಡಿಕೆ ಬೆಳೆಗಾರರ ಸಮಾವೇಶ ನಡೆಸಿ, ಬೆಳೆಗಾರರ ಹಿತ ಕಾಪಾಡುವುದಾಗಿ ಅಮಿತ್ ಶಾ ಅವರ ಮೂಲಕ ಭರವಸೆ ಕೊಡಿಸಿದ್ದಾರೆ.

ಜಿಲ್ಲೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿಕಾಸಕ್ಕೆ ಹಾಗೂ ಯೋಗಿ ಆದಿತ್ಯನಾಥ ಹಿಂದುತ್ವಕ್ಕೆ ಒತ್ತು ನೀಡಿ ಮಾತನಾಡಿದ್ದಾರೆ.

ಪಕ್ಷಾಂತರ ಸಮೀಕರಣ: ಒಂದು ಕಾಲದಲ್ಲಿ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ತೊಡೆತಟ್ಟಿ, ಎರಡು ಬಾರಿ ಮಣಿಸಿದ್ದ ಅವರ ಅಳಿಯ ಬೇಳೂರು ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡಿದೆ.

ಹರತಾಳು ಹಾಲಪ್ಪ ಸೊರಬ ಕ್ಷೇತ್ರ ಬದಲಿಸಿ ಸಾಗರಕ್ಕೆ ಬಂದಿದ್ದಾರೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸೊರಬದಲ್ಲಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಲ್ಲಿದ್ದ ರಾಜು ತಲ್ಲೂರು ಈಗ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ.

ಕೆಜೆಪಿ ನಂತರ ಕಾಂಗ್ರೆಸ್‌ ಸೇರಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಈಗ ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರವೀಣ್ ಪಟೇಲ್ ಈಗ ಭದ್ರಾವತಿ ಬಿಜೆಪಿ ಅಭ್ಯರ್ಥಿ. ಹೊಸ ರಾಜಕೀಯ ಸಮೀಕರಣಗಳ ಲಾಭ ಪಡೆಯಲು ಮೂರೂ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ‘ಕುಮಾರ ಪರ್ವ’ ಹೆಸರಿನಲ್ಲಿ ಚುನಾವಣಾ ಪ್ರಚಾರ, ರೈತರ ಸಮಸ್ಯೆ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಮಧು ಬಂಗಾರಪ್ಪ ನಡೆಸಿದ ಪಾದಯಾತ್ರೆಯ ಫಲ ಮತಗಳಾಗಿ ಪರಿವರ್ತಿತವಾಗುವ ನಿರೀಕ್ಷೆ ಜೆಡಿಎಸ್‌ಗಿದೆ.

ವ್ಯಕ್ತಿ ಪ್ರತಿಷ್ಠೆಯೇ ಮುಖ್ಯವಾದ ಭದ್ರಾವತಿ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ. ಅಲ್ಲಿ ಪಕ್ಷಕ್ಕಿಂತ ಎಂ.ಜೆ. ಅಪ್ಪಾಜಿ, ಬಿ.ಕೆ. ಸಂಗಮೇಶ್ವರ ಅವರ ವರ್ಚಸ್ಸೇ ನಿರ್ಣಾಯಕ. ವಿಐಎಸ್‌ಎಲ್‌, ಎಂಪಿಎಂ ಅವನತಿ ತಡೆಗೆ ಒಲವು ತೋರಿ, ಈಚೆಗೆ ಕೇಂದ್ರ ಉಕ್ಕು ಸಚಿವರನ್ನು ಕರೆಸಿ ಅವುಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಸಿರುವುದು ತನಗೆ ಅನುಕೂಲವಾಗುತ್ತದೆ ಎಂದು ಬಿಜೆಪಿ ನಂಬಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT