ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಏಕೆ ವಕ್ರ?

Last Updated 8 ಫೆಬ್ರುವರಿ 2023, 0:00 IST
ಅಕ್ಷರ ಗಾತ್ರ

ನೆಟ್ಟಗೆ ನೀಳವಾಗಿರುವ ಒಣಮೆಣಸಿನಕಾಯಿ ನೋಡಿದ್ದೀರಾ? ಇಲ್ಲ ತಾನೇ? ಇದೇಕೆ ಹೀಗೆ ಎಂಬ ಪ್ರಶ್ನೆ ಬಂದಿದ್ದರೆ, ಅದು ಲೋಕದ ರೀತಿ. ಅದು ಹಾಗೆಯೇ ಇರುವುದು ಎಂದು ನಾವೆಲ್ಲ ನಂಬುತ್ತೇವೆ. ಆದರೆ ವಿಜ್ಞಾನಿಗಳಿಗೆ ಹಾಗಲ್ಲ. ಮೆಣಸಿನ ಅಂಕು–ಡೊಂಕಿನಲ್ಲಿಯೂ ಒಂದು ವಿನ್ಯಾಸ ಇದೆ. ಅದರ ವಿಚಿತ್ರ ಆಕಾರಕ್ಕೆ ಕೆಲವು ಸಾಮಾನ್ಯ ನಿಯಮಗಳು ಕಾರಣವಿರಬಹುದು ಎಂದೇ ನಂಬುತ್ತಾರೆ. ಮೆಣಸಿನಕಾಯಿಯ ಮುರುಟು ಆಕಾರವಷ್ಟೆ ಅಲ್ಲ, ಅದರಂತೆಯೇ ಇರುವ ಇತರೆ ಆಕಾರಗಳಿಗೂ ಒಂದೇ ಸಾಮಾನ್ಯ ಕಾರಣವಿರಬಹುದಂತೆ. ಹಾಗೆಂದು ಚೀನಾದ ಶಾಂಘಾಯಿಯಲ್ಲಿರುವ ಫ್ಯೂಡಾಯಿ ವಿಶ್ವವಿದ್ಯಾನಿಲಯದ ವಾಯುತಂತ್ರ ಹಾಗೂ ವಾಯುಚಲನೆಯ ವಿಜ್ಞಾನಿ ಟಿಂಗ್‌ ವಾಂಗ್‌ ಮತ್ತು ಸಂಗಡಿಗರು ಪತ್ತೆ ಮಾಡಿದ್ದಾರೆ ಎಂದು ‘ಫಿಸಿಕಲ್‌ ರಿವ್ಯೂ ಲೆಟರ್ಸ್‌’ ಪತ್ರಿಕೆ ಮೊನ್ನೆ ವರದಿ ಮಾಡಿದೆ.

ಮೆಣಸಿನಕಾಯಿಯ ಗಣಿತವೇ? ಇದೇನು ಆಶ್ಚರ್ಯ ಎನ್ನಬೇಡಿ. ಈ ಲೋಕವೇ ಬೆರಗುಗೊಳಿಸುವಂಥದ್ದು. ಅದರಲ್ಲಿಯೂ ಜೀವಿಗಳಲ್ಲಿನ ವೈವಿಧ್ಯ ವಿಶೇಷವಾದದ್ದು. ಒಂದೇ ಬಗೆಯ ಜೀವಿಯಲ್ಲಿಯೂ ನೂರೆಂಟು ವೈವಿಧ್ಯ ಇರುತ್ತದೆ. ಗಾತ್ರ, ಆಕಾರ, ಬಣ್ಣ ಇವೆಲ್ಲವುಗಳಲ್ಲಿಯೂ ಯಾವುದೆರಡು ಜೀವಿಯೂ, ವ್ಯಕ್ತಿಯೂ ಸಮಾನರಾಗಿದ್ದು ಕಂಡಿಲ್ಲ. ಇನ್ನು ಒಣಮೆಣಸಿನ ಕಾಯಿಯ ಕಥೆ ಕೇಳಬೇಕೇ? ಪ್ರತಿಯೊಂದು ಕಾಯಿಯ ಉದ್ದವೂ ಬೇರೆ, ಬೇರೆ. ಅವು ಬಾಗಿರುವ ರೀತಿಯೂ ಬೇರೆಯೇ. ಇನ್ನು ಅವುಗಳ ಮೇಲಿರುವ ಉಬ್ಬುತಗ್ಗುಗಳು. ಅವುಗಳೂ ಒಂದೇ ತೆರನಾಗಿರವು.

ಭೌತವಿಜ್ಞಾನಿಗಳು ಪ್ರಪಂಚದ ಎಲ್ಲ ವಿದ್ಯಮಾನಗಳಿಗೂ ಯಾವುದಾದರೂ ಸಾಮಾನ್ಯ ನಿಯಮವಿರುತ್ತದೆ ಎಂದು ನಂಬುತ್ತಾರೆ. ಸೂರ್ಯಮಂಡಲದ ಗ್ರಹಗಳ ಅಡ್ಡಾದಿಡ್ಡಿ ಎನ್ನಿಸುವ ಚಲನೆಯಲ್ಲಿಯೂ ಒಂದು ಸಾಮಾನ್ಯ ನಿಯಮವನ್ನು ಪತ್ತೆ ಮಾಡಿದ್ದರು. ಅದುವೇ ಇಂದು ದೂರ, ದೂರದ ಗ್ರಹಗಳಿಗೆ ಶೋಧನೌಕೆಗಳನ್ನು ಕಳಿಸಲು ನೆರವಾಗಿದೆ. ಹೀಗೆಯೇ ಜೀವಜಗತ್ತಿನ ವಿದ್ಯಮಾನಗಳಲ್ಲಿಯೂ ಒಂದು ಭೌತನಿಯಮ ಇರಬೇಕು ಎನ್ನುವುದು ಇವರ ತರ್ಕ. ಮೆಣಸಿನಕಾಯಿಯ ಮುರುಟುವಿಕೆಗೂ ಇಂತಹುದೇ ನಿಯಮವಿರಬೇಕು ಎಂಬ ತರ್ಕದಿಂದ ಟಿಂಗ್‌ ವಾಂಗ್‌ ತಂಡ ಈ ಅಧ್ಯಯನವನ್ನು ಕೈಗೊಂಡಿತು.

ಮೆಣಸಿನಕಾಯಿ ಪುಟ್ಟದಾಗಿದ್ದಾಗ, ಅಂದರೆ ನಾವು ಚೋಟುಮೆಣಸಿನಕಾಯಿ ಎನ್ನುವ ಸ್ಥಿತಿಯಲ್ಲಿ, ಆಕಾರ ನೆಟ್ಟಗೆ, ಒಂದು ಶಂಖುವಿನಾಕಾರದಲ್ಲಿ ಇರುತ್ತದಷ್ಟೆ. ಆದರೆ ಅದು ಉದ್ದುದ್ದವಾಗಿ ಬೆಳೆಯುತ್ತಾ ಹೋದಂತೆಲ್ಲ, ತುದಿ ಬಾಗಿ ವಕ್ರವಾಗುತ್ತದೆ. ಗಿಡದಿಂದ ಕಿತ್ತು ಒಣಗಿಸುತ್ತಿದ್ದಂತೆ, ಮೈಯೆಲ್ಲಾ ಸುಕ್ಕು, ಸುಕ್ಕಾಗುತ್ತದೆ. ಗುಳಿ ಬೀಳುತ್ತದೆ. ಹೀಗೆ ಮೆಣಸಿನಕಾಯಿ ಮುರುಟುವುದು ಏಕೆ? ಯಾವ ಬಲ ಅವನ್ನು ಮುರುಟಿಸುತ್ತವೆ? ಒಣಗಿದಾಗ ನೀರು ಕಡಿಮೆಯಾಗುತ್ತದೆಯೇನೋ ನಿಜ. ಆದರೆ ಹಾಗಿದ್ದೂ ಅದು ಹಾಗೆಯೇ, ಹಪ್ಪಳ ಒಣಗಿದಂತೆ ಸುಕ್ಕಾಗದೆ, ನಯವಾಗಿಯೇ ಇರಬಹುದಿತ್ತಲ್ಲ?

ಈ ಎಲ್ಲ ಪ್ರಶ್ನೆಗಳ ಬೆನ್ನು ಹತ್ತಿದ ಟಿಂಗ್‌ ವಾಂಗ್‌ ತಂಡ ಮೆಣಸಿನಕಾಯಿ ಮುರುಟಿ, ಸುಕ್ಕಾಗುವುದಕ್ಕೆ ಅದರ ವಕ್ರ ಬೆಳೆವಣಿಗೆಯೇ ಕಾರಣವಿರಬಹುದು ಎಂದು ತರ್ಕಿಸಿ ಲೆಕ್ಕಾಚಾರ ಮಾಡಿದ್ದಾರೆ. ಮೆಣಸಿನಕಾಯಿಯನ್ನು ಒಂದು ಟೋರಾಯಿಡ್‌ ಆಕಾರ ಎಂದು ಪರಿಗಣಿಸಿ ಲೆಕ್ಕಾಚಾರ ಮಾಡಿದ್ದಾರೆ. ‘ಟೋರಾಯಿಡ್‌’ ಎಂದರೆ ಕೋಡುಬಳೆಯಂತಹ ಆಕಾರ. ಆದರೆ ಮೃದುವಾದ, ಇನ್ನೂ ಹುರಿಯದ ಕೋಡುಬಳೆ ಹಿಟ್ಟು ಎನ್ನಬಹುದು. ಮೈಯೆಲ್ಲ ನಯವಾಗಿರುತ್ತದೆ. ಈ ಕೋಡುಬಳೆ ಹಿಟ್ಟಿನ ಒಂದು ತುಂಡು ದೊಡ್ಡದಾಗುತ್ತ ಬಂದಂತೆ ಅದು ಒಣಗಿದರೆ ಮೈಯಲ್ಲಿ ಸುಕ್ಕು ಹೇಗೆ ಆಗುತ್ತದೆ ಎಂದು ಲೆಕ್ಕ ಹಾಕಬಹುದು. ಗಣಿತಜ್ಞರು ಇದಕ್ಕಾಗಿ ಕೆಲವು ಸೂತ್ರಗಳನ್ನು ಬಳಸುತ್ತಾರೆ. ಅದರಲ್ಲಿ, ಕೋಡುಬಳೆಯ ದಪ್ಪ, ಅದರ ವ್ಯಾಸ, ಹಿಟ್ಟಿನ ಮೃದುತ್ವ ಇವೆಲ್ಲವೂ ಮುಖ್ಯವಾಗುತ್ತವೆ.

ಬಳೆಯ ದಪ್ಪ ಎಂದರೆ ಇನ್ನೇನಲ್ಲ, ಅದರ ವಕ್ರತೆಯ ಅಳತೆ ಎನ್ನಬಹುದು. ದಪ್ಪವಾಗುತ್ತ ಹೋದಂತೆಲ್ಲ ಮೈಯ ವಕ್ರತೆ ಹೆಚ್ಚಾಗುತ್ತದೆ; ಸಣ್ಣವಾದಂತೆ ವಕ್ರತೆ ಕಡಿಮೆಯಾಗುತ್ತದೆ. ಮೇಲ್ಮೈ ಕೂಡ ಚಿಕ್ಕದಾಗುತ್ತದೆ. ಹಿಟ್ಟು ಎಷ್ಟು ಬೇಗ ಒಣಗುತ್ತದೆ ಎನ್ನುವುದನ್ನು ಇದು ಪ್ರಭಾವಿಸುತ್ತದಷ್ಟೆ.

ಹೀಗೆ ಟೋರಾಯಿಡ್ಡಿನ ಮೈಯ ಆಕಾರವನ್ನು ಪ್ರಭಾವಿಸುವ ಅಂಶಗಳನ್ನು ಮನದಲ್ಲಿಟ್ಟುಕೊಂಡು, ಅದು ಒಣಗಿದ ಹಾಗೆ ಆಕಾರ ಹೇಗೆ ಬದಲಾಗಬಹುದು ಎಂದು ಗಣಕ ಯಂತ್ರದ ಮೂಲಕ ಲೆಕ್ಕಿಸಿದ್ದಾರೆ. ಇಡೀ ಮೈಯನ್ನು ಪುಟ್ಟ, ಪುಟ್ಟ ಅಂಶಗಳನ್ನಾಗಿ ಪರಿಗಣಿಸಿ, ಅವುಗಳು ಒಂದೊಂದರದ್ದೂ ವಕ್ರತೆ, ಉದ್ದ, ದಪ್ಪ, ಇತರೆ ಒತ್ತಡಗಳನ್ನೆಲ್ಲ ಲೆಕ್ಕ ಹಾಕಿದ್ದಾರೆ. ಅವೆಲ್ಲವುಗಳಲ್ಲಿ ಆಗುವ ಬದಲಾವಣೆಯ ಒಟ್ಟಾರೆ ಫಲಗಳು ಇಡೀ ಟೋರಾಯಿಡ್ಡಿನ ಆಕಾರವನ್ನು ಹೇಗೆ ಬದಲಿಸುತ್ತವೆ ಎಂದು ಗಮನಿಸಿದ್ದಾರೆ. ಕಂಪ್ಯೂಟರಿಗೆ ಅಂತಹ ಟೋರಾಯಿಡ್ಡುಗಳ ಚಿತ್ರವನ್ನು ರೂಪಿಸಲು ಆದೇಶ ನೀಡಿದ್ದಾರೆ. ಟೋರಾಯಿಡ್ಡುಗಳು ಒಣಗುತ್ತಿದ್ದ ಹಾಗೆ ಅವುಗಳ ಮೈ ಕೂಡ ಸುಕ್ಕಾಗತೊಡಗಿತಂತೆ. ಆದರೆ ಆ ಸುಕ್ಕು ಹೇಗೆ ಆಗುತ್ತದೆ? ಎಷ್ಟು ಗುಳಿಗಳು ಬೀಳುತ್ತವೆ? ಯಾವಾಗ ದೊಡ್ಡ ಗುಳಿಗಳು ಬೀಳುತ್ತವೆ? ಯಾವಾಗ ಸಣ್ಣವು? ಇವನ್ನೆಲ್ಲ ಲೆಕ್ಕ ಹಾಕಿದಾಗ, ಒಂದು ವಿಷಯ ಗಮನಕ್ಕೆ ಬಂದಿತು. ಇದು ಆ ಟೋರಾಯಿಡ್ಡಿನ ಉದ್ದವನ್ನಾಗಲಿ, ದಪ್ಪವನ್ನಾಗಲಿ ಅವಲಂಬಿಸಿರುವುದಿಲ್ಲವಂತೆ. ಏನಿದ್ದರೂ, ಆ ಟೋರಾಯಿಡ್ಡು ಎಷ್ಟು ಬಾಗಿದೆ, ಎಷ್ಟು ಮೃದುವಾಗಿದೆ ಎನ್ನುವುದಷ್ಟೆ ಅದರ ಮೇಲಿನ ಸುಕ್ಕುಗಳಿಗೆ ಕಾರಣವಂತೆ.

ಈ ನಿಯಮಗಳು ಕೇವಲ ಮೆಣಸಿನಕಾಯಿಯೊಂದಕ್ಕಷ್ಟೆ ಅಲ್ಲ. ಬೆಳ್ಳುಳ್ಳಿಯ ಸಿಪ್ಪೆಯ ಸುಕ್ಕುಗಳಿಗೂ, ಪುಟ್ಟದೊಂದು ಹುಳುವಿನ ಮೈ ಮೇಲಿನ ಸುಕ್ಕುಗಳಿಗೂ ಇಂತಹುದೇ ನಿಯಮಗಳು ಒಪ್ಪುತ್ತವೆ ಎಂದು ಟಿಂಗ್‌ ವಾಂಗ್‌ ತಂಡ ತಿಳಿಸಿದೆ. ಹೀಗೆ ಟೋರಾಯಿಡ್ಡಿನಂತಹ ಉದ್ದನೆಯ, ವಕ್ರದೇಹ ಇರುವ ಜೀವಿಗಳಲ್ಲಿ ಸುಕ್ಕುಗಳೇಕಾಗುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ, ಟಿಂಗ್‌ ವಾಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT