ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆಗಳೇಕೆ ಕೆಲವರನ್ನೇ ಹೆಚ್ಚು ಕಚ್ಚುತ್ತವೆ? ಇಲ್ಲಿದೆ ತಜ್ಞರ ಉತ್ತರ...

ಅಕ್ಷರ ಗಾತ್ರ

ಮಳೆಗಾಲ ಬಂತೆಂದರೆ ಸಾಕು ಶೀತ ಮತ್ತು ಜ್ವರಗಳಂತಹ ಕಾಯಿಲೆಯಿಂದ ಹಿಡಿದು ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಮೂಲಕ ಆರೋಗ್ಯದ ಮೇಲೆ ಪರಿಣಾಮ ಬೀರಿ ಅಪಾಯವನ್ನುಂಟು ಮಾಡುವ ಬಹುತೇಕ ರೋಗಗಳ ಮೂಲ ಸೊಳ್ಳೆ ಕಚ್ಚುವಿಕೆಯೇ ಆಗಿರುತ್ತದೆ.

ಸಾಮಾನ್ಯವಾಗಿ ಗುಂಪೊಂದರಲ್ಲಿ ವ್ಯಕ್ತಿಯೊಬ್ಬನನ್ನು ಮಾತ್ರ ಸೊಳ್ಳೆಗಳು ಕಚ್ಚುತ್ತಿರುತ್ತವೆ. ಈ ಸೊಳ್ಳೆಗಳು ನನಗೆ ಮಾತ್ರವೇ ಕಚ್ಚುತ್ತಿವೆ ಎಂದು ವ್ಯಕ್ತಿ ದೂರುವುದನ್ನು ನೀವು ಕೇಳಿರುತ್ತೀರ. ಸೊಳ್ಳೆಗಳು ಏಕೆ ನಿರ್ದಿಷ್ಟ ವ್ಯಕ್ತಿಯನ್ನು ಮಾತ್ರ ಕಚ್ಚುತ್ತವೆ ಎಂಬುದಕ್ಕೆ ಉತ್ತರ ಕಂಡುಕೊಳ್ಳೋಣ. ಹಫ್ ಪೋಸ್ಟ್‌ನ (Huff Post) ವರದಿಯ ಪ್ರಕಾರ, ಸೊಳ್ಳೆಗಳು ಆಯ್ದ ಕೆಲವು ಜನರಿಗೆ ಮಾತ್ರ ಇತರರಿಗಿಂತ ಕಚ್ಚುವ ಸಾಧ್ಯತೆ ಹೆಚ್ಚಿರುತ್ತದೆ.

ಜರ್ನಲ್ ಆಫ್ ಮೆಡಿಕಲ್ ಎಂಟೊಮಾಲಜಿಯ ಅಧ್ಯಯನದ ಪ್ರಕಾರ, ಎ ಗುಂಪಿನ ರಕ್ತವನ್ನು ಹೊಂದಿರುವ ಜನರಿಗಿಂತಲೂ ಎರಡು ಪಟ್ಟು ಹೆಚ್ಚಾಗಿ ಸೊಳ್ಳೆಗಳು ‘ಒ’ ರಕ್ತದ ಗುಂಪಿನ ಜನರತ್ತ ಆಕರ್ಷಿತವಾಗುತ್ತವೆ. ಯಾರೆಲ್ಲಾ ‘ಒ’ ರಕ್ತದ ಗುಂಪಿನವರಾಗಿರುವರೋ ಅವರು ಇತರರಿಗಿಂತ ಎರಡು ಪಟ್ಟು ಹೆಚ್ಚು ಸೊಳ್ಳೆಯಿಂದ ಕಚ್ಚಿಸಿಕೊಂಡಿರುತ್ತಾರೆ.

ಫ್ಲೋರಿಡಾ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ಪ್ರಾಧ್ಯಾಪಕ ಜೊನಾಥನ್ ಎಫ್. ಡೇ ಪ್ರಕಾರ, 'ಸೊಳ್ಳೆಗಳು ಅತ್ಯುತ್ತಮ ದೃಷ್ಟಿಯನ್ನು ಹೊಂದಿವೆ, ಅವು ಗಾಳಿಯಿಂದ ತಪ್ಪಿಸಿಕೊಳ್ಳಲು ನೆಲದ ಮಟ್ಟದಲ್ಲಿಯೇ ಹಾರುತ್ತವೆ. ಸೊಳ್ಳೆಗಳು ಕಚ್ಚದಿರಲು ನೀವು ಯಾವ ಬಣ್ಣದ ಬಟ್ಟೆ ಧರಿಸಿದ್ದೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಗಾಢವಾದ ಬಣ್ಣಗಳ ಬಟ್ಟೆಗಳನ್ನು ಧರಿಸಿದ್ದರೆ ಕೂಡ ಸೊಳ್ಳೆಗಳಿಗೆ ಹೆಚ್ಚು ಆಕರ್ಷಿತವಾಗುತ್ತೀರಿ. ಆದರೆ ತಿಳಿ ಬಣ್ಣಗಳನ್ನು ಧರಿಸಿದವರು ಅಷ್ಟಾಗಿ ಆಕರ್ಷಿತರಾಗುವುದಿಲ್ಲ' ಎಂದು ತಿಳಿಸಿದ್ದಾರೆ.

'ಸೊಳ್ಳೆಗಳ ವಿಚಾರದಲ್ಲಿ ಕಾರ್ಬನ್ ಡೈ ಆಕ್ಸೈಡ್ ಕೂಡ ಮುಖ್ಯವಾಗುತ್ತದೆ. ಹೆಚ್ಚಿನ ಇಂಗಾಲವನ್ನು ಹೊರ ಹಾಕುವ ಜನರತ್ತ ಸೊಳ್ಳೆಗಳು ಆಕರ್ಷಿತವಾಗುತ್ತವೆ. ವಾಹನಗಳಂತ ನಿರ್ಜೀವ ಘಟಕಗಳಿಂದ ಬರುವ ಇಂಗಾಲದ ಡೈ ಆಕ್ಸೈಡ್‌ಗಿಂತ ಮಾನವನಿಂದ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಕಡೆಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ' ಎಂದು ಹೇಳಿದ್ದಾರೆ.

ವ್ಯಾಯಾಮ ನಿರತರು: ವ್ಯಾಯಾಮ ನಿರತರನ್ನು ಸೊಳ್ಳೆಗಳು ಕಚ್ಚುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ. ಬೆವರಿದಾಗ ಶರೀರದಿಂದ ಹೊರಹೊಮ್ಮುವ ಲ್ಯಾಕ್ಟಿಕ್ ಆಮ್ಲ ಇದಕ್ಕೆ ಕಾರಣವಾಗಿದೆ. ಲ್ಯಾಕ್ಟಿಕ್ ಆಮ್ಲದತ್ತ ಸೊಳ್ಳೆಗಳು ಮುಖಮಾಡುತ್ತವೆ.

'ಸೊಳ್ಳೆ ಕಚ್ಚುವಿಕೆಯಲ್ಲಿ 'ದೇಹದ ಉಷ್ಣತೆಯು ಪ್ರಮುಖವಾಗಿದೆ. ಅದು ಅನುವಂಶಿಕ ವ್ಯತ್ಯಾಸಗಳು ಅಥವಾ ಶಾರೀರಿಕ ವ್ಯತ್ಯಾಸಗಳೊಂದಿಗೆ ಕಂಡುಬರುತ್ತದೆ. ಹೀಗಾಗಿ ಸೊಳ್ಳೆಗಳು ಯಾರ ದೇಹದ ತಾಪಮಾನ ಸ್ವಲ್ಪ ಹೆಚ್ಚಾಗಿದೆಯೋ ಅಂಥವರನ್ನು ಕಚ್ಚುವ ಸಾಧ್ಯತೆ ಹೆಚ್ಚಿರುತ್ತದೆ' ಎಂದು ತಿಳಿಸಿದ್ದಾರೆ.

ಮದ್ಯಪಾನ ಮಾಡಿದ್ದರೆ ಹೆಚ್ಚು!: ಮದ್ಯಪಾನ ಮಾಡಿದ ವ್ಯಕ್ತಿಗಳತ್ತ ಸೊಳ್ಳೆಗಳು ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ತಿಳಿಸಿದೆ. ಶರೀರ ಬಿಸಿಯಾಗುವುದರಿಂದ ಸೊಳ್ಳೆಗಳಿಗೆ ಮದ್ಯದ ಗುಂಗಿನಲ್ಲಿರುವವರನ್ನು ಪತ್ತೆ ಮಾಡುವುದು ಸುಲಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT