ಮಂಗಳವಾರ, ಆಗಸ್ಟ್ 16, 2022
20 °C

ಹಿಂದಿ ರಾಷ್ಟ್ರ ಭಾಷೆ ವಿವಾದದ ಬೆನ್ನಲ್ಲೇ ಟ್ರೆಂಡ್ ಆಯ್ತು #BoycottBollywood

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಭಾಷೆ ಕುರಿತು ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌ ಅವರ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 

ಬಾಲಿವುಡ್‌ (ಹಿಂದಿ) ಮತ್ತು ದಕ್ಷಿಣ ಭಾರತ (ಪ್ರಾದೇಶಿಕ) ಭಾಷಾ ಸಿನಿಮಾಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚೆ ಆರಂಭಿಸಿದ್ದು, ಟ್ವಿಟರ್‌ನಲ್ಲಿ #BoycottBollywood ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.

ಸಿನಿ ರಸಿಕರು ಹಿಂದಿ ಹಾಗೂ ಇತರೆ ಭಾಷಾ ಸಿನಿಮಾಗಳ ನಡುವಿನ ವ್ಯತ್ಯಾಸದ ಬಗ್ಗೆ ನಡೆಸುತ್ತಿರುವ ಚರ್ಚೆ ಜೋರಾಗಿದೆ.

‘ಹಿಂದಿ ಸಿನಿಮಾಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಸನ್ನಿವೇಶಗಳನ್ನು ಹೆಚ್ಚು ಚಿತ್ರೀಕರಿಸಲಾಗುತ್ತದೆ’ ಎಂದು ಅನ್ಯಾ ಠಾಕೂರ್ ಟ್ವೀಟ್ ಮಾಡಿದ್ದಾರೆ. 
 
‘ಸ್ವಜನಪಕ್ಷಪಾತದಿಂದ ಮಾತ್ರ ಬೆಳೆಯಬಲ್ಲ ಬಾಲಿವುಡ್ ಅನ್ನು ಬಹಿಷ್ಕರಿಸಿ’ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. 

‘ಪ್ಯಾನ್ ಇಂಡಿಯಾದಲ್ಲಿ ಪಾನ್ ಮಸಾಲ ಮಾರುತ್ತಿರುವ ಗುಟ್ಕಾ ಸ್ಟಾರ್‌ಗಳು ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ದಕ್ಷಿಣ ಭಾರತದ ನಟರು ತಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳನ್ನು ತೋರಿಸುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಹೊರಹೊಮ್ಮುತ್ತಿದ್ದಾರೆ’ ಎಂದು ಸುಮಿತಾ ದಾಸ್‌ ಟ್ವೀಟ್ ಮಾಡಿದ್ದಾರೆ. 

‘ಇದು ಅದ್ಭುತವಾಗಿದೆ #BoycottBollywood ಮತ್ತೊಮ್ಮೆ ಟ್ರೆಂಡಿಂಗ್ ಆಗಿದೆ. ಈಗ ನಾನು ಚೆನ್ನಾಗಿ ನಿದ್ರಿಸುತ್ತೇನೆ. ಆತ್ಮೀಯ ಹಾಲಿವುಡ್, ಟಾಲಿವುಡ್, ಮಾಲಿವುಡ್, ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ, ಯೂಟ್ಯೂಬರ್‌ಗಳು ಮತ್ತು ಇತರರು ಸಾಧ್ಯವಾದರೆ ದಯವಿಟ್ಟು ಬಾಲಿವುಡ್‌ನೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಬೇಡಿ. ಹಣವೇ ಸರ್ವಸ್ವವಲ್ಲ ಎಂಬುದನ್ನು ನೆನಪಿಡಿ’ ಎಂದು ರುದ್ರಭಾ ಮುಖರ್ಜಿ ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ. 

‘ಸೆಕ್ಯುಲರಿಸಂ ಎಂಬುದು ದುರ್ಬಲರಿಗೆ... ದಕ್ಷಿಣ ಭಾರತದ ಹೀರೋಗಳನ್ನು ನೋಡಿ ಕಲಿಯಿರಿ’ ... ಎಂದೆಲ್ಲ ಅನೇಕರು ಟ್ವೀಟ್‌ ಮಾಡುವ ಮೂಲಕ ಬಾಲಿವುಡ್‌ ನಟರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಇತ್ತೀಚೆಗೆ ತೆರೆಕಂಡ ಪ್ರಶಾಂತ್‌ ನೀಲ್‌ ನಿರ್ದೇಶನದ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ 'ಕೆಜಿಎಫ್‌–2' ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದಕ್ಕೂ ಮೊದಲು ತೆಲುಗು ಸಿನಿಮಾಗಳಾದ ಅಲ್ಲು ಅರ್ಜುನ್ ನಟನೆಯ 'ಪುಷ್ಪ', ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಉತ್ತಮ ಗಳಿಕೆ ಕಂಡಿದ್ದವು.

ಕನ್ನಡದ ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ 'ಹಿಂದಿ ರಾಷ್ಟ್ರಭಾಷೆ ಅಲ್ಲ' ಎಂದು ಹೇಳಿದ್ದರು. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಬಾಲಿವುಡ್‌ ನಟ ಅಜಯ್ ದೇವಗನ್, 'ಹಿಂದಿ ರಾಷ್ಟ್ರ ಭಾಷೆ' ಎಂದು ಪ್ರತಿಪಾದಿಸಿದ್ದರು. ಅದಾದ ಬಳಿಕ, 'ರಾಷ್ಟ್ರ ಭಾಷೆ' ವಿಚಾರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. 

ಓದಿ... 

 ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಕಿಡಿ

 

ಹಿಂದಿ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್ ಹೇಳಿಕೆಗೆ ನಟಿ ರಮ್ಯಾ ಕಿಡಿ

ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ: ಅಜಯ್‌ಗೆ ಸೋನು ಸೂದ್‌ ತಿರುಗೇಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು