ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಗುಲಾಮಗಿರಿ ಬೇಡ... ಟ್ವಿಟರ್‌ನಲ್ಲಿ ಟ್ರೆಂಡ್‌

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿ ಬಳಕೆಗೆ ಆಕ್ರೋಶ * ಟ್ವಿಟರ್‌ನಲ್ಲಿ ಅಭಿಯಾನ
Last Updated 17 ಜನವರಿ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಬ್ಯಾನರ್‌ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿದ್ದುದನ್ನು ಖಂಡಿಸಿದ ಕನ್ನಡಿಗರು ‘ಹಿಂದಿ ಗುಲಾಮಗಿರಿ ಬೇಡ’ ಹೆಸರಿನಲ್ಲಿ ಟ್ವಿಟರ್‌ನಲ್ಲಿ ಭಾನುವಾರ ಅಭಿಯಾನ ನಡೆಸಿದರು.

#ಹಿಂದಿಗುಲಾಮಗಿರಿಬೇಡ, #NoToHindiSlavery ಹ್ಯಾಶ್‌ಟ್ಯಾಗ್‌ ಅಡಿ ನಡೆದ ಅಭಿಯಾನದಡಿ ಸಾವಿರಾರು ಜನರು ಟ್ವೀಟ್‌ ಮಾಡಿದರು. ರಾಷ್ಟ್ರೀಯ ಮಟ್ಟದಲ್ಲಿ ಈ ಹ್ಯಾಶ್‌ಟ್ಯಾಗ್‌ ಹಲವು ಗಂಟೆಗಳ ಕಾಲ ಟ್ರೆಂಡಿಂಗ್‌ನಲ್ಲಿತ್ತು.

ಅಮಿತ್‌ ಶಾ ಪಾಲ್ಗೊಂಡಿದ್ದ ಸಿಆರ್‌ಪಿಎಫ್‌ ಕುರಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಹಾಜರಿದ್ದರು. ಹಿಂದೆ ಹಾಕಿದ್ದ ಬ್ಯಾನರ್‌ನಲ್ಲಿ ಕನ್ನಡಕ್ಕೆ ಸ್ಥಾನವೇ ಇರಲಿಲ್ಲ.

‘ಕನ್ನಡನಾಡಲ್ಲಿ ಕನ್ನಡವನ್ನೇ ಬಳಸಬೇಕೆಂಬುದು ಯಾವುದೇ ಸರ್ಕಾರಕ್ಕೆ ಇರಬೇಕಾದ ಸಾಮಾನ್ಯ ಪ್ರಜ್ಞೆ. ಇದು ಅವರಿಗೆ ಗೊತ್ತಿಲ್ಲವೆಂದೇನಿಲ್ಲ. ಉದ್ದೇಶಪೂರ್ವಕವಾಗಿಯೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತಿರುವ ಈ ದುರಹಂಕಾರವನ್ನು ಕನ್ನಡಿಗರು ಸಹಿಸಬೇಕಿಲ್ಲ. ನಾವು ಸಹಸ್ರಾರು ವರ್ಷಗಳಿಂದ ಕನ್ನಡಿಗರು, ಇಂಥ ಹುನ್ನಾರಗಳಿಗೆ ತಲೆಬಾಗುವುದಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದರು.

‘ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಾದ ತಮಿಳು, ತೆಲುಗು, ಮಲಯಾಳ ಮಾತನಾಡುವವರೆಲ್ಲ ಒಗ್ಗೂಡಿ ಇದನ್ನು ವಿರೋಧಿಸಬೇಕು. ಈ ಸೋಂಕು (ಹಿಂದಿ ಹೇರಿಕೆ) ಕೊರೊನಾ ಸೋಂಕಿಗಿಂತಲೂ ಅಪಾಯಕಾರಿ’ ಎಂದು ಆಕಾಶ್ ಜರಿಕಟ್ಟೆ ಟ್ವೀಟ್ ಮಾಡಿದರು.

‘ಕನ್ನಡಪರ ರಾಜಕೀಯ ಪಕ್ಷವೊಂದು ರಾಜ್ಯದಲ್ಲಿ ಅಧಿಕಾರಕ್ಕೆ ಏರುವಂತಾಗಬೇಕು. ಹಾಗಾದರೆ ಮಾತ್ರ ಬಿ.ಎಸ್. ಯಡಿಯೂರಪ್ಪನವರು ನಡೆಸುತ್ತಿರುವ ಅವಕಾಶವಾದಿ ರಾಜಕಾರಣ ಕೊನೆಗೊಳ್ಳುತ್ತದೆ’ ಎಂದು ಪ್ರದ್ಯುಮ್ನ ಟ್ವೀಟ್ ಮಾಡಿದರು.

‘ಬೆಂಗಳೂರು, ಬೆಳಗಾವಿ ಮತ್ತು ಶಿವಮೊಗ್ಗದ ಕನ್ನಡಿಗ ರೈತರು ಸೇರಿ 2000 ಎಕರೆಗೂ ಹೆಚ್ಚು ಭೂಮಿಯನ್ನು ಸಿಆರ್‌ಪಿಎಫ್‌ಗೆ ನೀಡಿದ್ದಾರೆ. ಈ ರೈತರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾದರೂ ಬ್ಯಾನರ್‌ನಲ್ಲಿ ಕನ್ನಡ ಇರಬೇಕಾಗಿತ್ತು. ಸಿಆರ್‌ಪಿಎಫ್‌ನಂತಹ ಕೃತಘ್ನ ಸಂಘಟನೆ ವಿಶ್ವದಲ್ಲಿಯೇ ಬೇರೆಲ್ಲೂ ಇಲ್ಲ’ ಎಂದು ಮೋಹನ್‌ ಹಳ್ಳಿಕಾರ್ ಅಸಮಾಧಾನ ವ್ಯಕ್ತಪಡಿಸಿದರು.

‘ಇರುವುದು ಮೂರೇ ದಿನವಾದರೂ ಸರಿ, ಗುಲಾಮರಾಗಿ ಹಿಂದಿಯನ್ನರ ಬೂಟು ನೆಕ್ಕಿ ಬದುಕುವುದಕ್ಕಿಂತ, ಸ್ವಾಭಿಮಾನಿ ಕನ್ನಡಿಗರಾಗಿ ಬದುಕಿ. ನಿಮ್ಮ ಹುಟ್ಟಿಗೂ ಒಂದು ಅರ್ಥ ಸಿಗುತ್ತದೆ’ ಎಂದು ಕೆ.ಎಂ. ಮಧುಸೂದನ್ ಟ್ವೀಟ್ ಮಾಡಿದರು.

ಕುವೆಂಪು ಹೇಳಿಕೆ ವೈರಲ್

ಅಭಿಯಾನದ ವೇಳೆ ಹೆಚ್ಚು ಕಂಡು ಬಂದಿದ್ದು ಕುವೆಂಪು ಅವರು ಹೇಳಿದ್ದರು ಎನ್ನಲಾದ ಹೇಳಿಕೆ. ‘ಕನ್ನಡಕ್ಕಿಂತ ನೆಹರೂ ದೊಡ್ಡವರಲ್ಲ. ಅವರಿಗೆ ಕನ್ನಡ ಕಲಿಸಿ ಅಥವಾ ಅವರ ಭಾಷಣವನ್ನು ಭಾಷಾಂತರಿಸಿ’ ಎಂಬ ಹೇಳಿಕೆಯಲ್ಲಿದ್ದ ಸಾಲುಗಳನ್ನು ಬಹುತೇಕರು ಹಂಚಿಕೊಂಡರು.

‘ಅಮಿತ್‌ ಶಾ ಕೂಡ ಕನ್ನಡಕ್ಕಿಂತ ದೊಡ್ಡವರಲ್ಲ’ ಎಂದು ಶ್ರೀಕಾಂತ್ ತೆಲಗಿ ಟ್ವೀಟ್ ಮಾಡಿದರು.

‘ತೇಜಸ್ವಿ ಸೂರ್ಯ ಎಲ್ಲಿದ್ದೀರಿ?’

ಸಂಸದ ತೇಜಸ್ವಿ ಸೂರ್ಯ 2017ರಲ್ಲಿ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿತು.

‘ಕನ್ನಡ ಪರವಾಗಿರಬೇಕು ಎಂದರೆ ಹಿಂದಿ ವಿರೋಧಿಯಾಗಬೇಕು ಎಂದರ್ಥವಲ್ಲ. ಹಾಗೊಂದು ವೇಳೆ, ಕರ್ನಾಟಕದಲ್ಲಿ ಯಾವುದೇ ಅಧಿಕೃತ ಬ್ಯಾನರ್‌ನಲ್ಲಿ ಕನ್ನಡ ಬದಲು ಹಿಂದಿ ಮಾತ್ರ ಇದ್ದರೆ ಅದನ್ನು ವಿರೋಧಿಸಿ, ಪ್ರತಿಭಟಿಸುವಲ್ಲಿ ನಾನೇ ಮುಂದಿರುತ್ತೇನೆ’ ಎಂಬರ್ಥದ ಟ್ವೀಟ್‌ ಅನ್ನು 2017ರ ಜೂನ್‌ನಲ್ಲಿ ತೇಜಸ್ವಿ ಸೂರ್ಯ ಮಾಡಿದ್ದರು. ಅವರು ಆಗಿನ್ನೂ ಸಂಸದ
ರಾಗಿರಲಿಲ್ಲ.

ಇದರ ಸ್ಕ್ರೀನ್‌ಶಾಟ್‌ ಹಂಚಿಕೊಂಡ ವಿವೇಕ್‌ ಎಂಬುವರು, ‘ತೇಜಸ್ವಿ ಸೂರ್ಯ ಎಲ್ಲಿದ್ದೀರಿ? ಯಾವಾಗ ಪ್ರತಿಭಟನೆ ಆರಂಭಿಸುತ್ತೀರಿ’ ಎಂದು ಕೆಣಕಿದರು.

ತ್ರಿಭಾಷಾ ಸೂತ್ರ ಕಡೆಗಣನೆ

‘ಶಾಂತಿ ಸುವ್ಯವಸ್ಥೆ ಕಾಪಾಡಲು ನೆರವಾಗುವ ಈ ಕಾರ್ಯಪಡೆ ರಾಜ್ಯಕ್ಕೆ ಬಂದಿರುವುದು ಸ್ವಾಗತಾರ್ಹ. ಆದರೆ, ಅಡಿಗಲ್ಲು ಫಲಕದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಕೆ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿಯೇ ಕನ್ನಡವನ್ನು ಅವಗಣನೆ ಮಾಡಿ, ಹಿಂದಿಯನ್ನು ಮೆರೆಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ತ್ರಿಭಾಷಾ ಸೂತ್ರವನ್ನೂ ಕಡೆಗಣಿಸಲಾಗಿದೆ’ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಬೇಸರ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ನಡೆಯುವ ಎಲ್ಲ ಸಾರ್ವಜನಿಕ ಸಮಾರಂಭಗಳ ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಪ್ರಧಾನವಾಗಿರಬೇಕೆಂದುರಾಜ್ಯ ಸರ್ಕಾರವು ಆದೇಶ ಮಾಡಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಕನ್ನಡವು ಮೊದಲ ಸಾಲಿನಲ್ಲಿ ಇರಬೇಕು. ರಾಜ್ಯದಲ್ಲಿ ಕನ್ನಡ ಕಾಯಕ ವರ್ಷ ಆಚರಣೆ ಮಾಡುತ್ತಿರುವಾಗ ಮುಖ್ಯಮಂತ್ರಿ ಪಾಲ್ಗೊಂಡ ಕಾರ್ಯಕ್ರಮದಲ್ಲಿಯೇ ಕನ್ನಡವನ್ನು ಕಡೆಗಣಿಸಿರುವುದು ವಿಪರ್ಯಾಸ. ಇದಕ್ಕೆ ಕಾರಣರಾದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳುವ ಜತೆಗೆ ಕನ್ನಡಕ್ಕೆ ಇಂತಹ ಅಪಚಾರವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT