ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಕ್‌ಟಾಕ್‌ ಮೋಹದಲ್ಲಿ ಸರ್ಚ್‌ ಇಂಜಿನ್‌ಗಳು ದೂರ

Last Updated 26 ಜುಲೈ 2022, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್‌ ಜನಪ್ರಿಯವಾಗುತ್ತಿದ್ದ ಕಾಲದಲ್ಲಿ ಸರ್ಚ್‌ ಇಂಜಿನ್‌ಗಳೇ ಒಂದು ಅದ್ಭುತವಾಗಿದ್ದವು. ಜಗತ್ತಿನ ಯಾವುದೇ ಸಂಗತಿಗಳ ಬಗ್ಗೆಯೂ ಅದರಲ್ಲಿ ಹುಡುಕಿ ತಿಳಿದುಕೊಳ್ಳಬಹುದು ಎಂಬುದೇ ಒಂದು ಅಚ್ಚರಿಯ ಸಂಗತಿಯಾಗಿತ್ತು. ಇಂಟರ್‌ನೆಟ್ ಬಳಕೆ ಮಾಡುತ್ತಿದ್ದ ಮೂಲ ಧ್ಯೇಯವೇ ಸರ್ಚ್‌ ಇಂಜಿನ್‌ಗಳಲ್ಲಿ ಮಾಹಿತಿ ಹುಡುಕುವುದಾಗಿರುತ್ತಿತ್ತು. ಕಾಲ ಕ್ರಮೇಣ ಇಂಟರ್‌ನೆಟ್‌ನ ವೇಗ ಹೆಚ್ಚಿದಂತೆ ಪಠ್ಯಮಾಹಿತಿಯನ್ನು ಹುಡುಕುವುದರಾಚೆಗೂ ನಮ್ಮ ಇಂಟರ್ನೆಟ್ ಅವಲಂಬನೆ ಬೆಳೆಯಿತು.

ಆದರೆ, 4ಜಿ ಬಂದ ನಂತರ ಇಂಟರ್ನೆಟ್ ಅನ್ನು ನಾವು ಬಳಸುವ ಪ್ರಮಾಣ ಹೆಚ್ಚಿದೆಯಾದರೂ, ಅದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂಬ ಬಗ್ಗೆ ಕೆಲವು ಆತಂಕಕಾರಿ ಸಂಗತಿಗಳು ಹೊರಬರುತ್ತಿವೆ. ಇತ್ತೀಚೆಗೆ ಗೂಗಲ್‌ ನಡೆಸಿದ ಸಮೀಕ್ಷೆಯೊಂದರಲ್ಲಿ ಹೊಸ ತಲೆಮಾರಿನ ಶೇ. 40ರಷ್ಟು ಬಳಕೆದಾರರು ಗೂಗಲ್‌ ಮತ್ತು ಮ್ಯಾಪ್ಸ್‌ ರೀತಿಯ ಸರ್ಚ್‌ ಇಂಜಿನ್‌ಗಳನ್ನು ಬಳಸುವುದರ ಬದಲಿಗೆ ಟಿಕ್‌ಟಾಕ್‌ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಣ್ಣ ವೀಡಿಯೋ ಹಾಗೂ ಫೋಟೋ ಸೈಟ್‌ಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅತ್ಯಂತ ಜನಪ್ರಿಯವಾಗುತ್ತಿರುವ ಸಣ್ಣ ವೀಡಿಯೋ ಕ್ಲಿಪ್‌ಗಳನ್ನು ಒಳಗೊಂಡಿರುವ ಆ್ಯಪ್‌ ‘ಟಿಕ್‌ಟಾಕ್’ ಮತ್ತು ‘ಇನ್‌ಸ್ಟಾಗ್ರಾಮ್‌’ ರೀತಿಯವು ಈಗ ಗೂಗಲ್‌ನಂತಹ ಸರ್ಚ್‌ ಇಂಜಿನ್‌ಗೆ ಪ್ರತಿಸ್ಪರ್ಧೆ ಒಡ್ಡುತ್ತಿವೆ. ಬರಿ ಸ್ಪರ್ಧೆ ಒಡ್ಡುವುದಷ್ಟೇ ಅಲ್ಲ, ಇವು ಹೊಸ ಕಾಲದ ಜನರು ಇಂಟರ್‌ನೆಟ್‌ನ ಬಳಕೆ ಮಾಡುವ ವಿಧಾನವನ್ನೇ ಬದಲಿಸಿವೆ. ಈ ನವ ಯುವಕ–ಯುವತಿಯರು ಗೂಗಲ್‌ನಲ್ಲಿ ಸರ್ಚ್‌ ಮಾಡುವುದಕ್ಕಿಂತ ಹೆಚ್ಚಾಗಿ, ಟಿಕ್‌ಟಾಕ್‌ ಅಥವಾ ಇನ್‌ಸ್ಟಾಗ್ರಾಮ್‌ ತೆರೆದುಕೊಂಡು ಅದರಲ್ಲಿ ಬರುವ ವೀಡಿಯೋಗಳನ್ನು ಸ್ಕ್ರೋಲ್ ಮಾಡುತ್ತಾ ಹೋಗುತ್ತಾರೆ. ತಮ್ಮ ಮನಸ್ಸಿಗೆ ಸಮಾಧಾನವಾಗುವವರೆಗೂ ಅದರಲ್ಲಿ ಸ್ಕ್ರೋಲ್ ಮಾಡುತ್ತಾರೆ. ಆದರೆ, ಅವರು ಮಾಹಿತಿಗಾಗಿ ಇಂಟರ್ನೆಟ್‌ಗೆ ಬರುವುದಿಲ್ಲ. ಮಾಹಿತಿಯ ಆದ್ಯತೆ ಎರಡನೆಯದಾಗಿರುತ್ತದೆ. ಈ ಬಗ್ಗೆ ಫಾರ್ಚೂನ್‌ ಬ್ರೇನ್‌ಸ್ಟಾರ್ಮ್‌ ಟೆಕ್‌ನಲ್ಲಿ ಗೂಗಲ್‌ನ ಹಿರಿಯ ಉಪಾಧ್ಯಕ್ಷ ಪ್ರಭಾಕರ್ ರಾಘವನ್‌ ಮಾತನಾಡುತ್ತಾ ‘ಊಟ ಎಲ್ಲಿ ಮಾಡಲಿ ಎಂದು ಹುಡುಕುವಾಗ ಶೇ. 40ರಷ್ಟು ಯುವಕರು ಗೂಗಲ್‌ ಮ್ಯಾಪ್ಸ್‌ ಅಥವಾ ಸರ್ಚ್‌ಗೆ ಹೋಗುವುದಿಲ್ಲ. ಬದಲಿಗೆ ಅವರು ಟಿಕ್‌ಟಾಕ್‌ ಅಥವಾ ಇನ್‌ಸ್ಟಾಗ್ರಾಮ್‌ಗೆ ಹೋಗಿ ಹುಡುಕಾಟ ನಡೆಸುತ್ತಾರೆ’ ಎಂದಿದ್ದಾರೆ.

ಯುವಜನತೆಯಲ್ಲಿ ಆಗುತ್ತಿರುವ ಈ ಬದಲಾವಣೆ ಬಹಳ ಮುಖ್ಯ ಟ್ರೆಂಡ್‌ ಅನ್ನು ಸೂಚಿಸುತ್ತದೆ. ಯುವಜನರಿಗೆ ಈಗ ಮಾಹಿತಿಗಿಂತ ಹೆಚ್ಚು ಮನೋರಂಜನೆಯೇ ಆದ್ಯತೆಯಾಗಿದೆ. ಮಾಹಿತಿಗಾಗಿ ಅವರು ಇಂಟರ್‌ನೆಟ್‌ಗೆ ಬರುವುದಕ್ಕಿಂತ ಹೆಚ್ಚಾಗಿ ಮನೋರಂಜನೆಗಾಗಿ ಅವರು ಇಂಟರ್‌ನೆಟ್‌ಗೆ ಬರುತ್ತಿದ್ದಾರೆ.

ಊಟ ಅಥವಾ ತಿಂಡಿ ಮಾಡಲು ಒಳ್ಳೆಯ ಹೋಟೆಲ್ ಹುಡುಕಲು ಜನರು ಗೂಗಲ್‌ಗೆ ಹೋಗುವುದರ ಬದಲಿಗೆ, ಟಿಕ್‌ಟಾಕ್‌ನಲ್ಲೋ ಅಥವಾ ಇತರ ಆ್ಯಪ್‌ಗಳಲ್ಲಿ ತಮ್ಮ ಮೆಚ್ಚಿನ ತಿಂಡಿ ತಿನಿಸುಗಳ ಪರಿಚಯ ಮಾಡಿಸುವ ವೀಡಿಯೋ ಬ್ಲಾಗರ್‌ ಅಕೌಂಟಿಗೆ ಹೋಗಿ ಆತ ಮಾಡಿದ ವೀಡಿಯೋಗಳನ್ನು ಹುಡುಕಬಹುದು. ಆತ ಶಿಫಾರಸು ಮಾಡಿದ ಹೋಟೆಲ್‌ಗೆ ಹೋಗುವುದಕ್ಕೆ ಇಷ್ಟಪಡಬಹುದು. ಏಕೆಂದರೆ, ಗೂಗಲ್‌ನಲ್ಲಿ ಹೋಟೆಲ್‌ಗಳ ಪಟ್ಟಿ ನೋಡಿಕೊಂಡು, ಅದರ ರೇಟಿಂಗ್‌ಗಳನ್ನೆಲ್ಲ ಗಮನಿಸಿ, ನಿರ್ಧಾರ ಮಾಡುವಷ್ಟು ಸಹನೆ ಆತನಿಗೆ ಇಲ್ಲದಿರಬಹುದು. ಅಷ್ಟೇ ಅಲ್ಲ, ಟಿಕ್‌ಟಾಕ್‌ ಸೇರಿದಂತೆ ಹಲವು ಶಾರ್ಟ್‌ ವೀಡಿಯೋ ಆ್ಯಪ್‌ಗಳಲ್ಲಿ ವಿವಿಧ ರೀತಿ ಮಾಹಿತಿಯುಕ್ತ ವೀಡಿಯೋಗಳೂ ಇವೆ. ಪ್ರಯಾಣ ಮಾಡುವಾಗ ಸೂಟ್‌ಕೇಸ್‌ನಲ್ಲಿ ಹೆಚ್ಚು ಸಾಮಗ್ರಿಗಳನ್ನು ತುಂಬಿಸುವುದು ಹೇಗೆ ಎಂಬ ಟ್ರಿಕ್‌ಗಳಿಂದ ‘ಜನಪ್ರಿಯ ಪ್ರವಾಸಿ ತಾಣ ಯಾವುದು’ ಎಂಬ ಬಗ್ಗೆಯೂ ವೀಡಿಯೋಗಳಿವೆ.

ಇದಕ್ಕೆ ಹಲವು ಕಾರಣಗಳೂ ಇರಬಹುದು. ಗೂಗಲ್‌ ಅಥವಾ ಸರ್ಚ್‌ ಇಂಜಿನ್‌ಗಳು ಯುವಜನರಿಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ನೀಡುತ್ತಿಲ್ಲದಿರಬಹುದು ಅಥವಾ ಟಿಕ್‌ಟಾಕ್‌ನಂತಹ ಸೋಷಿಯಲ್‌ ಮೀಡಿಯಾ ಆ್ಯಪ್‌ಗಳು ಹೊಸ ತಲೆಮಾರಿನ ಬಳಕೆದಾರರನ್ನು ಇಂಟರ್ನೆಟ್‌ಗೆ ಕರೆತರುತ್ತಿದ್ದು, ಮುಂದಿನ ದಿನಗಳಲ್ಲಿ ಇವರೇ ಮಾಹಿತಿಗಾಗಿ ಸರ್ಚ್‌ ಇಂಜಿನ್‌ಗಳಿಗೆ ಮೊರೆ ಹೋಗಲೂಬಹುದು.

ಈ ಮಹತ್ವದ ಬದಲಾವಣೆ ಈಗ ಸರ್ಚ್‌ ಇಂಜಿನ್‌ಗಳಿಗೆ ತಲೆನೋವಾಗಿದೆ. 2024ರ ವೇಳೆಗೆ ಟಿಕ್‌ಟಾಕ್‌ನ ಜಾಹೀರಾತುಗಳ ಆದಾಯವು ಯೂಟ್ಯೂಬ್‌ ಅನ್ನೂ ಮೀರಿಸಲಿದೆ ಎಂದು ಸದ್ಯಕ್ಕೆ ಊಹಿಸಲಾಗಿದೆ. ಇನ್ನು ಗೂಗಲ್ ಕೂಡ ತನ್ನ ಸರ್ಚ್‌ ಇಂಜಿನ್ನಿನ ರೂಪವನ್ನೇ ಈ ದೃಷ್ಟಿಯಲ್ಲಿ ಮುಂದಿನ ವರ್ಷಗಳಲ್ಲಿ ಬದಲಿಸಿದರೆ ಅಚ್ಚರಿಯಿಲ್ಲ. ಏಕೆಂದರೆ, ಹಳೆಯ ವಿಧಾನಗಳಲ್ಲೇ ‘ಸರ್ಚ್‌ ಇಂಜಿನನ್ನು ಆಪ್ಟಿಮೈಸ್’ ಮಾಡುವ ಗೂಗಲ್‌ನ ಶ್ರಮ ಇನ್ನು ಮುಂದಿನ ದಿನಗಳಲ್ಲಿ ಪ್ರಯೋಜನ ನೀಡದಿರಬಹುದು.

ಈಗಾಗಲೇ ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಗೂಗಲ್‌ ನಡೆಸಿದೆ. ಉದಾಹರಣೆಗೆ, ಆಗ್ಮೆಂಟೆಡ್ ರಿಯಾಲಿಟಿ ಗ್ಲಾಸ್‌ಗಳ ಮೂಲಕ ಪಠ್ಯಗಳು ಮತ್ತು ಚಿತ್ರಗಳೆರಡನ್ನೂ ಸರ್ಚ್‌ ರಿಸಲ್ಟ್‌ಗಳಲ್ಲಿ ತೋರಿಸಲು ಗೂಗಲ್ ಯೋಜನೆ ರೂಪಿಸುತ್ತಿದೆ. ಇನ್ನೊಂದು ಮಹತ್ವದ ಬದಲಾವಣೆಗಳಲ್ಲಿ, ಯಾವುದೋ ಒಂದು ವಿಷಯವನ್ನು ಹುಡುಕುವಾಗ ಅದರಲ್ಲಿ ಟಿಕ್‌ಟಾಕ್‌ ಅಥವಾ ಶಾರ್ಟ್‌ ವೀಡಿಯೋ ಆ್ಯಪ್‌ನ ಹೆಸರನ್ನು ಟೈಪಿಸಿದರೆ, ಆಗ ಆ ಶಾರ್ಟ್‌ ವೀಡಿಯೋ ಆ್ಯಪ್‌ನಲ್ಲಿ ಆ ವಿಷಯದ ಕುರಿತ ವೀಡಿಯೋಗಳು ಕಾಣಿಸಿಕೊಳ್ಳುತ್ತವೆ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT