ಗುರುವಾರ , ಅಕ್ಟೋಬರ್ 1, 2020
22 °C

ಕೋವಿಡ್ ತಪ್ಪು ಮಾಹಿತಿ: ಟ್ರಂಪ್ ವಿಡಿಯೊ ನಿಷೇಧಿಸಿದ ಟ್ವಿಟರ್, ಫೇಸ್‌ಬುಕ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಾಷಿಂಗ್‌ಟನ್: ಕೋವಿಡ್-19ರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡುತ್ತವೆ ಎನ್ನುವ ಕಾರಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಸೇರಿದ್ದ ಟ್ವಿಟರ್ ಮತ್ತು ಫೇಸ್‌ಬುಕ್ ಅಕೌಂಟ್‌ಗಳಿಂದ ಹಂಚಿಕೊಂಡಿದ್ದ ವಿಡಿಯೊ ಒಂದನ್ನು ಟ್ವಿಟರ್ ಮತ್ತು ಫೇಸ್‌ಬುಕ್ ಸಂಸ್ಥೆಗಳು ನಿರ್ಬಂಧಿಸಿವೆ.

'ಮಕ್ಕಳಿಗೆ ಕೋವಿಡ್-19ರ ಬಾಧೆ ಇರುವುದಿಲ್ಲ. ಅವರಿಗೆ ಇದರಿಂದ ಏನೂ ಸಮಸ್ಯೆಯಿಲ್ಲ. ಮಕ್ಕಳಿಗೆ ಸಮಸ್ಯೆಯಿಲ್ಲ ಎಂಬ ವೈದ್ಯರ ಮಾತನ್ನು ನಾನು ಕೇಳಿಸಿಕೊಂಡಿದ್ದೇನೆ' ಎಂದು ಫಾಕ್ಸ್‌ ನ್ಯೂಸ್‌ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದರು. ಶಾಲೆಗಳು ಶೀಘ್ರ ಆರಂಭವಾಗಬೇಕು ಎಂಬ ಅವರ ವಾದದ ವೈಖರಿಯಿದ್ದ ಈ ವಿಡಿಯೊ ತುಣುಕನ್ನು ಅವರ ಚುನಾವಣಾ ಆಂದೋಲನದ ಟ್ವಿಟರ್ ಅಕೌಂಟ್ @TeamTrump ಹಂಚಿಕೊಂಡಿತ್ತು. 

ಇದೇ ವಿಡಿಯೊ ತುಣುಕನ್ನು ಟ್ರಂಪ್ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿಯೂ ಶೇರ್ ಮಾಡಿಕೊಂಡಿದ್ದರು. ಟ್ವಿಟರ್‌ @TeamTrump ಅಕೌಂಟ್ ನಿರ್ಬಂಧಿಸುವ ಮೊದಲೇ ಫೇಸ್‌ಬುಕ್ ಈ ವಿಡಿಯೊವನ್ನು ತೆಗೆದುಹಾಕಿತ್ತು. ಕೊರೊನಾ ಬಗ್ಗೆ ತಪ್ಪು ಮಾಹಿತಿ ನೀಡುವ ಮಾಹಿತಿ ಹಂಚಿಕೊಳ್ಳುವುದನ್ನು ನಿರ್ಬಂಧಿಸುವುದನ್ನು ಈ ಎರಡೂ ಸಂಸ್ಥೆಗಳು ತಮ್ಮ ನೀತಿಯಾಗಿ ಅಂಗೀಕರಿಸಿವೆ.

ಈ ಕುರಿತು ಮೊದಲು ವರದಿ ಮಾಡಿದ್ದು 'ವಾಷಿಂಗ್‌ಟನ್ ಪೋಸ್ಟ್'. 'ಟ್ರಂಪ್ ಅವರ ವೈಯಕ್ತಿಕ ಅಕೌಂಟ್‌ ನಿರ್ಬಂಧಿಸಲಾಗಿದೆ' ಎಂದು ವಾಷಿಂಗ್‌ಟನ್ ಪೋಸ್ಟ್ ವರದಿ ಮಾಡಿತ್ತು. ನಂತರ ಅದನ್ನು ಮಾರ್ಪಡಿಸಿ, ಅವರ ಪ್ರಚಾರಾಂದೋಲನದ ಅಕೌಂಟ್‌ಗೆ ಮಾತ್ರ ನಿರ್ಬಂಧ ಅನ್ವಯಿಸಲಿದೆ ಎಂದು ಹೇಳಿತ್ತು.

@TeamTrump ವಿಡಿಯೊ ಅಕೌಂಟ್ ಬುಧವಾರ ಸಂಜೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿತು. ಆದರೆ ಟ್ರಂಪ್ ಸಂದರ್ಶನದ ವಿಡಿಯೊ ಇರಲಿಲ್ಲ. ಈ ಕುರಿತು ಸ್ಪಷ್ಟನೆ ನೀಡಿದ ಟ್ವಿಟರ್ ವಕ್ತಾರ ನಿಕ್ ಪಾಸಿಲಿಯೊ, '@TeamTrumpನ ವಿಡಿಯೊ ಪೋಸ್ಟ್‌ ನಮ್ಮ ನಿಯಮಗಳನ್ನು ಉಲ್ಲಂಘಿಸುವಂತಿತ್ತು. ಅದನ್ನು ತೆಗೆದುಹಾಕಬೇಕೆಂದು ಸೂಚಿಸಿದ್ದೆವು. ಟ್ರಂಪ್ ಅವರು ನಂತರ ಇದನ್ನು @realDonaldTrump ಅಕೌಂಟ್ ಮೂಲಕ ರಿಟ್ವೀಟ್‌ ಮಾಡಿಕೊಂಡಿದ್ದರು. ಆದರೆ ಅವರು ಮೊದಲು ಟ್ವೀಟ್ ಮಾಡಿರಲಿಲ್ಲ' ಎಂದು ನಂತರ ಸ್ಪಷ್ಟಪಡಿಸಿದರು.

ವಾಸ್ತವ ಏನು?

'ಮಕ್ಕಳಿಗೆ ಕೋವಿಡ್ ಬಾಧೆಯಿಲ್ಲ' ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆ ವಾಸ್ತವದಿಂದ ಬಹುದೂರ. ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್ ಪ್ರಕಾರ, 'ಮಕ್ಕಳು ಮತ್ತು ಹದಿಹರೆಯದವರೂ ಸಹ ಇತರ ವಯೋಮಾನದವರಂತೆಯೇ ಕೋವಿಡ್-19ರ ಬಾಧೆಗೆ ಗುರಿಯಾಗುತ್ತಾರೆ. ಕೊರೊನಾ ಸೋಂಕನ್ನು ಹರಡುತ್ತಾರೆ'.

'ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಅತಿಯಾಗಿ ಹರಡುವ ಅಥವಾ ಹೆಚ್ಚು ಬಾಧೆಗೆ ಒಳಪಡಿಸುವ ಆತಂಕ ಕಂಡುಬರುತ್ತಿಲ್ಲ. ಆದರೆ ಅವರೂ ಸಹ ಇತರ ಎಲ್ಲರಂತೆ ಅಂತರ ಕಾಪಾಡಿಕೊಳ್ಳುವ ಮತ್ತು ಶುಚಿತ್ವದ ನಿಯಮಗಳನ್ನು ಪಾಲಿಸಬೇಕು' ಎಂದು ಅಮೆರಿಕದ ಸೋಂಕು ರೋಗಗಳ ಸಂಸ್ಥೆಯು ಸ್ಪಷ್ಟಪಡಿಸಿತ್ತು. ಮಕ್ಕಳಿಗೂ ವಯಸ್ಕರಂತೆಯೇ ಸೋಂಕು ಹರಡುವ ಆತಂಕ ಇದೆ ಎಂಬುದು ಇದರ ಅರ್ಥ.

ಟ್ರಂಪ್ ಬೆಂಬಲಿಗರ ಟೀಕೆ

ಟ್ವಿಟರ್ ಮತ್ತು ಫೇಸ್‌ಬುಕ್ ಸಂಸ್ಥೆಗಳ ಈ ದಿಟ್ಟ ನಿರ್ಧಾರದ ಬಗ್ಗೆ ಟ್ರಂಪ್ ಬೆಂಬಲಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 'ಸಿಲಿಕಾನ್ ವ್ಯಾಲಿ (ಅಮೆರಿಕದ ಐಟಿ ಉದ್ಯಮ) ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಪೂರ್ವಗ್ರಹ ಪೀಡಿತವಾಗಿದೆ. ಅವರ ವಿರುದ್ಧವೇ ನಿಯಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ' ಎಂದು ಟ್ರಂಪ್ ಪ್ರಚಾರಾಂದೋಲನದ ವಕ್ತಾರ ಟಿಪ್ ಮುರ್ತುಹ್ ಟ್ವೀಟ್ ಒಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ಷೇಪಾರ್ಹ ಪೋಸ್ಟ್‌ಗಳು

ಡೊನಾಲ್ಡ್‌ ಟ್ರಂಪ್ ಅವರ ವಿವಾದಾತ್ಮಕ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಟ್ವಿಟರ್ ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಚುನಾವಣೆ ಕಾವೇರಿದ್ದಂತೆ ಟ್ರಂಪ್ ಸಹ ಕಾವೇರಿದ ಟ್ವೀಟ್ ಮಾಡುವುದು ಹೆಚ್ಚಾಗಿತ್ತು.

ಕಳೆದ ಮೇ ತಿಂಗಳಲ್ಲಿ ಇಮೇಲ್ ಮೂಲಕ ಮತ ಚಲಾವಣೆ ಬಗ್ಗೆ ಟ್ರಂಪ್ ಮಾಡಿದ್ದ ಎರಡು ಟ್ವೀಟ್‌ಗಳನ್ನು ಟ್ವಿಟರ್‌ ಆಕ್ಷೇಪಾರ್ಹ ಎಂದು ಘೋಷಿಸಿತ್ತು. “when the looting starts, the shooting starts” ಎಂದು ಟ್ರಂಪ್ ಮಾಡಿದ್ದ ಟ್ವೀಟ್‌ ಅನ್ನು ಸಹ ಟ್ವಿಟರ್ 'ಹಿಂಸೆ ಪ್ರಚೋದಿಸುವ ಆಕ್ಷೇಪಾರ್ಹ ಟ್ವೀಟ್' ಎಂದು ಘೋಷಿಸಿತ್ತು.

ಅಧ್ಯಕ್ಷರ ಪೋಸ್ಟ್‌ಗಳ ಬಗ್ಗೆ ಕ್ರಮ ಜರುಗಿಸುತ್ತಿಲ್ಲ ಎಂಬ ಟೀಕೆಯನ್ನು ಬಹುಕಾಲದಿಂದ ಎದುರಿಸುತ್ತಿದ್ದ ಫೇಸ್‌ಬುಕ್ ಸಹ ಟೀಕೆಗೆ ಗುರಿಯಾಗಿತ್ತು. ಇಮೇಲ್ ಮೂಲಕ ಮತ ಚಲಾವಣೆ ಬಗ್ಗೆ ಫೇಸ್‌ಬುಕ್ ತನ್ನ ನೀತಿಗಳ ಅನ್ವಯ ಕ್ರಮ ಜರುಗಿಸಿಲ್ಲ ಎಂದು ಫೇಸ್‌ಬುಕ್‌ನ ಪರಿಶೋಧಕರೊಬ್ಬರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದರು.

'ಕೋವಿಡ್-19ರ ಬಗ್ಗೆ ತಪ್ಪು ಮಾಹಿತಿಯನ್ನು ಗುರುತಿಸಿ, ಕ್ರಮ ತೆಗೆದುಕೊಳ್ಳುವುದು ಸುಲಭ. ಇತರ ವಿಷಯಗಳ ಬಗ್ಗೆ ಕ್ರಮ ಜರುಗಿಸಲು ಸಮಯ ಬೇಕಾಗಬಹುದು' ಎಂದು ಫೇಸ್‌ಬುಕ್‌ನ ಸಿಇಒ ಮಾರ್ಕ್ ಝುಕರ್‌ಬರ್ಗ್‌ ಹೇಳಿದ್ದರು.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು