ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ರೈತರ 'ದೆಹಲಿ ಧರಣಿ'ಯಿಂದ ಎದ್ದ ಟ್ವಿಟರ್‌ ಬಿರುಗಾಳಿ!

#TractorToTwitter: ಟ್ರ್ಯಾಕ್ಟರ್‌ ಇಳಿದು ಟ್ವಿಟರ್‌ ಹತ್ತಿದ ಪಂಜಾಬ್ ರೈತರ ಮಕ್ಕಳು
Last Updated 10 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""

'ಸರ್ಕಾರವನ್ನು ಓಲೈಸಲು ನಿಂತ ಮುಖ್ಯವಾಹಿನಿಯ ಹಲವು ಮಾಧ್ಯಮಗಳು ದೆಹಲಿಯಲ್ಲಿ ರೈತರ ಹೋರಾಟದ ಕುರಿತು ಅಪವ್ಯಾಖ್ಯಾನ ಮಾಡುತ್ತಿವೆ' ಎಂಬ ಅಸಹನೆ, ಆಕ್ರೋಶ ಮತ್ತು ಅಸಹಾಯಕತೆಯನ್ನು ಮೆಟ್ಟಿ ನಿಲ್ಲಲು ಅದೇ ರೈತರ ಮಕ್ಕಳು, ಅದರಲ್ಲೂ ಪಂಜಾಬ್‌ನ ಟೆಕ್ಕಿಗಳ ನೆರವಿಗೆ ಬಂದಿದ್ದು ಪುಟಾಣಿ ಹಕ್ಕಿ. ಅರ್ಥವಾಗಲಿಲ್ಲವೇ. ಅದೇ ಟ್ವಿಟರ್‌!

‘ಇದುವರೆಗೂ ರೈತರ ಮಕ್ಕಳು ಟ್ರ್ಯಾಕ್ಟರ್‌ ಓಡಿಸುತ್ತಿದ್ದರು. ಈಗ ಟ್ವಿಟರ್‌ ಓಡಿಸುತ್ತಿದ್ದಾರೆ’ !

ರಾಜಧಾನಿ ದೆಹಲಿಯಿಂದ ಅಖಿಲ ಭಾರತ ಮಟ್ಟಕ್ಕೆ ಹಬ್ಬಿದ ರೈತರ ಮುಷ್ಕರದ ಕುರಿತು ಮುಖ್ಯವಾಹಿನಿ ಮಾಧ್ಯಮಗಳನ್ನೂ ಮೀರಿ ಬಿರುಗಾಳಿಯಂತೆ ಪ್ರಚಾರ ಮಾಡಿದ ಟ್ವೀಟ್‌ ಅಭಿಯಾನದ ಘೋಷಣೆಯಂಥ ಮಾತು ಇದು.

ಒಂದು ಸಾಮಾನ್ಯ ಹಕ್ಕಿಯ ಇನಿದನಿ (ಟ್ವೀಟ್‌)ಗೆ ಇಂಥ ಶಕ್ತಿ ಇರಬಹುದೇ ಎಂದು ಕೇಂದ್ರ ಸರ್ಕಾರ ಕೂಡ ಕೇಳಿಕೊಂಡಿರಲು ಸಾಧ್ಯವಿಲ್ಲ.
ಆದರೆ ಟ್ವಿಟರ್‌ ಅಭಿಯಾನವು, ರೈತರ ಹೋರಾಟವನ್ನು ಸಾಮಾಜಿಕ ಜಾಲ ತಾಣದ ಮೂಲಕ ಹರಡುವ ಹೊಸ ಪ್ರಯತ್ನಕ್ಕೆ ಸಾಕ್ಷಿಯಾಯಿತು.

ಎಲ್ಲಿ ಹೋರಾಟವೋ ಆ ನೆಲದಿಂದಲೇ ಹೋರಾಟದ ಕೂಗೂ ಏಳಬೇಕು. ಆದರೆ ಅಲ್ಲಿಂದ ಎಲ್ಲೆಡೆಯ ಜನರ ಮನೆ–ಮನ ಮುಟ್ಟಿ ತಟ್ಟುವುದು ಹೇಗೆ? ಇದು ಅಸಲಿ ಸವಾಲು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು. ಆದರೆ ಹೋರಾಟದ ದನಿ ಕೇಳದೆ ನದಿಗಳು ಹರಿದು ಬರುವುದಾದರೂ ಹೇಗೆ?

ದೆಹಲಿಯ ಸಿಂಘು ಗಡಿಯ ಹೋರಾಟದ ನೆಲದಲ್ಲೇ ಹೋರಾಟದ ಸತ್ಯಪ್ರತಿಪಾದನೆ ಮತ್ತು ಪರ್ಯಾಯ ಪ್ರಚಾರಕ್ಕೂ ಚಾಲನೆ ದೊರಕಿದ್ದು ಇದೇ ಟ್ವಿಟರ್‌ನಿಂದಲೇ.

ಭಾರತ ಬಂದ್‌ಗೂ ಮುನ್ನ #TractorTotwitr ಹ್ಯಾಷ್‌ಟಾಗ್‌ ಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡಿಂಗ್‌ ಆಗಿ ಗಮನ ಸೆಳೆದಿದ್ದು ಇಡೀ ಹೋರಾಟದ ಇನ್ನೊಂದು ಗೆಲುವಿನ ಆಯಾಮ. ಹೋರಾಟದ ಬೆನ್ನೆಲುಬಾದ ತೆಳು ಪಾಂಪ್ಲೆಟ್‌ಗಳ ರೀತಿಯಲ್ಲೇ, ತೂಕವೇ ಇಲ್ಲದ ಟ್ವೀಟ್‌ಗಳು ಸಾವಿರಾರು ಮಂದಿಯನ್ನು ಮುಟ್ಟಿ ಹೋರಾಟದ ತೂಕವನ್ನು ಹೆಚ್ಚಿಸಿದವು!

ರಸ್ತೆ ಬದಿ ನಿಂತ ಸಂತ್ರಸ್ತರು ಮೆರವಣಿಗೆಯಲ್ಲಿ ಒಬ್ಬೊಬ್ಬರಾಗಿ ಸೇರುವ ರೀತಿಯಲ್ಲೇ ಹೋರಾಟವು ದೆಹಲಿಯಿಂದ ದೂರವಿದ್ದವರ ಮನದಲ್ಲೂ ಹೋರಾಟದ ಕೆಚ್ಚನ್ನು ಮೂಡಿಸಿತ್ತು. ಇದು ಸಾಮಾಜಿಕ ಮಾಧ್ಯಮವೊಂದರ ಮೂಲಕ ರೈತರ ಹೋರಾಟವು ಹಲವು ರೂಪಗಳಲ್ಲಿ ವಿಸ್ತರಿಸಿದ ಹೊಸ ಬಗೆ.

ಲೂಧಿಯಾನದ 25ರ ಹರೆಯದ ಪ್ರಿದ್ಯುನ್‌ ಸಿಂಗ್‌ ದೆಹಲಿಗೆ ನವೆಂಬರ್‌ 30ರಂದು ಬಂದಿಳಿದಾಗ ಗೋದಿಮೀಡಿಯಾ– Godi media (ಸಾಕುನಾಯಿ ಮಾಧ್ಯಮ)ಗಳ ಕುರಿತು ತೀವ್ರ ಅಸಹನೆಯಿತ್ತು. ಏಕೆಂದರೆ ರೈತ ಹೋರಾಟದಲ್ಲಿ ಪಾಲ್ಗೊಂಡವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪಂಜಾಬಿನವರನ್ನು ಖಲಿಸ್ತಾನಿಗಳು (ಪ್ರತ್ಯೇಕ ರಾಷ್ಟ್ರವಾದಿಗಳು) ಎಂದು ಆ ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು.

(ಗೋದಿ ಮೀಡಿಯಾ: ಈ ಪದಪುಂಜವನ್ನು ಮೊದಲು ಬಳಸಿದ್ದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರವೀಶ್‌ಕುಮಾರ್‌. ಸಂತ್ರಸ್ತರು ಮತ್ತು ನ್ಯಾಯದ ಪರ ನಿಲ್ಲೆ ಸರ್ಕಾರವನ್ನು ಓಲೈಸಲು ನಿಲ್ಲುವ ಮಾಧ್ಯಮಗಳನ್ನು ಅವರು ಸಾಕುನಾಯಿ ಮಾಧ್ಯಮಗಳು ಎಂದು ಕರೆದರು)

‘ಈ ದೇಶಕ್ಕಾಗಿ ನಮ್ಮ ಹಿರಿಯರು ಈಗಾಗಲೇ ಜೀವ ತೆತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಪ್ರತ್ಯೇಕ ರಾಷ್ಟ್ರವನ್ನು ಯಾಕಾದರೂ ಕೇಳುತ್ತೇವೆ ಎಂಬುದು ಸಿಂಗ್ ಅವರ ಪ್ರಶ್ನೆ.

’ಕೇಸರಿ ಕಣ್ಣುಪಟ್ಟಿಯನ್ನು ಕಟ್ಟಿಕೊಂಡಿರುವ ಅವರಿಗೆ ಬೇರೇನೂ ಕಾಣುವುದಿಲ್ಲ. ಹೀಗಾಗಿಯೇ ನಾವು # ರೈತರನ್ನು ರಕ್ಷಿಸಿ, # ದ್ವೇಷ ಬೇಡ ಎಂಬ ಹ್ಯಾಷ್‌ಟಾಗ್‌ ಮುಂದೊಡ್ಡಿದ್ದೇವೆ’ ಎನ್ನುತ್ತಾರೆ ಅವರು.

ಪಂಜಾಬ್‌ನಲ್ಲಿ ರೈತರ ಹೋರಾಟ ಆರಂಭವಾದ ಹೊತ್ತಿನಲ್ಲಿ ಲೂಧಿಯಾನದ 38ರ ಭವಜೀತ್‌ಸಿಂಗ್‌ ತಮ್ಮ ಕೆಲವು ಗೆಳೆಯರ ಜೊತೆ ಸೇರಿ @Tractor2twitr ಹೆಸರಿನ ಖಾತೆಯನ್ನು ತೆರೆದ ಬಳಿಕ ಹೋರಾಟದ ಮಗ್ಗುಲು ಬದಲಾಯಿತು.

ಅದೇ ಲೂಧಿಯಾನದ ಯುವಕ ರಣ್‌ವೀರ್‌ ಸಿಂಗ್‌ ಉತ್ಸಾಹದ ಮಾತು ನೋಡಿ: ‘ಇಷ್ಟು ದಿನ ಟ್ರ್ಯಾಕ್ಟರ್‌ ಓಡಿಸುತ್ತಿದ್ದೆ. ಈಗ ಅನಿವಾರ್ಯವಾಗಿ ಟ್ವಿಟರ್‌ ಓಡಿಸಬೇಕಾಗಿದೆ’

ಅವರ ಪ್ರಕಾರ, ‘ಅದು ಆಜ್‌ ತಕ್‌ ಅಥವಾ ಝೀ ನ್ಯೂಸ್ ವಾಹಿನಿಯಾಗಿರಲಿ, ಮುಂಬೈನ ಪತ್ರಕರ್ತರಾಗಿರಲಿ, ಅವರಿಗೆ ನಾವು ವ್ಯಂಗ್ಯಚಿತ್ರಗಳಾಗಿ ಮಾತ್ರ ಕಾಣುತ್ತೇವೆ. ಎನ್‌ಡಿ ಟಿವಿ ಮಾತ್ರ ನಿಜವಾದ ಸುದ್ದಿ ತೋರಿಸುತ್ತಿದೆ’.

‘ಝೀ ನ್ಯೂಸ್‌ ನಮ್ಮನ್ನು ಖಲಿಸ್ತಾನ್‌ ಬೆಂಬಲಿಗರೆಂದು ತೋರಿಸಲು ಹವಣಿಸುತ್ತದೆ. ನಾವು ಸಮಸ್ಯೆಗಳನ್ನು ಸೃಷ್ಟಿಸುವವರಂತೆ ಕಾಣುತ್ತೇವೆಯೇ? ಅದಕ್ಕೆಂದೇ ನಾವು ಅಂಥ ಮಾಧ್ಯಮಗಳನ್ನು # ಗೋದಿಮೀಡಿಯಾಗಳೆಂದು,# ಗೋಬ್ಯಾಕ್‌ ಗೋದಿಮೀಡಿಯಾಗಳೆಂದು ಮರುಟ್ವೀಟ್ ಮಾಡಿದ್ದೇವೆ’.

ಟ್ರ್ಯಾಕ್ಟರ್‌ ಮತ್ತು ಟ್ವಿಟರ್ ಕುರಿತು ಪ್ರಾಸದಿಂದ ಕೂಡಿದ ಮಾತು ಸರಳವೆಂಬಂತೆ ಕಂಡರೂ ಸಾಮಾನ್ಯವಾದುದಂತೂ ಅಲ್ಲ.ರೈತರ ಒಡನಾಡಿಗಳಲ್ಲಿ ಪರಂಪರೆಯ ಎತ್ತುಗಳು ಮತ್ತು ಆಧುನಿಕತೆಯ ಟ್ರ್ಯಾಕ್ಟರ್‌ಗಳು ಪ್ರಮುಖವಾದವು. ಆದರೆ ಅತ್ಯಾಧುನಿಕ ಕಾಲಘಟ್ಟದ ಸಾಮಾಜಿಕ ಮಾಧ್ಯಮಗಳ ಸನ್ನಿವೇಶದಲ್ಲಿ ಹೊಲದೊಳಗಿನ ಟ್ರ್ಯಾಕ್ಟರ್ ಅನ್ನೂ ಮೀರಿ, ಹೊಲದಾಚೆಗಿನ ಹೋರಾಟದ ಸಾಧನವಾಗಿ ಟ್ವಿಟರ್‌ ಯುವ ರೈತ ತಲೆಮಾರಿನ ತಲೆ ಕಾಯುತ್ತಿದೆ ಎಂಬುದರ ಸಂತೇಕವಾಗಿ ಈ ಮಾತನ್ನು ನೋಡಬೇಕಾಗಿದೆ. ಈ ದೇಶಕಾಲಕ್ಕೆ ತಕ್ಕಂತೆ ಸಾಧನ, ಚಾಲಕ ಹಾಗೂ ಚಾಲಕಶಕ್ತಿ ಎಲ್ಲವೂ ಬದಲಾಗಿದೆ.

ರೈತರ ಮಕ್ಕಳು ತಂತ್ರಜ್ಞಾನದಲ್ಲಿ ಮುಂದೆ ಬಂದರೆ ಹೇಗೆ ತಮ್ಮ ಹಿರಿಯ ತಲೆಮಾರಿಗೆ ಬೆಂಬಲವಾಗಿ ನಿಲ್ಲಬಲ್ಲರು ಎಂಬುದಕ್ಕೂ ಈ ಸನ್ನಿವೇಶ ಸಾಕ್ಷಿ.

ಹಾಗೆ ನೋಡಿದರೆ ಪಂಜಾಬಿನ ಯುವ ಸಮೂಹ ಫೇಸ್‌ಬುಕ್‌ನಲ್ಲೇ ಹೆಚ್ಚು ಸಂಘಟಿತರಾಗಿದ್ದವರು. ಆದರೆ ಟ್ವಿಟರ್ ಅನ್ನು ಅವರು ಬಳಸಲು ಆರಂಭಿಸಿದ್ದು ಕೂಡ ಹೋರಾಟದ ಹೊಸ ಹೆಜ್ಜೆ. ರೈತರನ್ನು ವ್ಯಂಗ್ಯಚಿತ್ರಗಳಂತೆ ಚಿತ್ರಿಸುತ್ತಿದ್ದ ಮಾಧ್ಯಮಗಳನ್ನು ಮೀರಿ ನಿಂತ ನವಮಾಧ್ಯಮ ವಕ್ತಾರಿಕೆ.

ಇನ್‌ಸ್ಟಾಗ್ರಾಂನಲ್ಲಿ 15 ಸಾವಿರ ಫಾಲೋಯರ್‌ಗಳಿರುವ ತರುಣಿ ಮುಸ್ಕಾನ್, ಹೋರಾಟದ ಕುರಿತು ಬಿತ್ತರಗೊಂಡ ತಪ್ಪು ಮಾಹಿತಿಗಳನ್ನೂ ಪ್ರಕಟಿಸುವ ಮಾಧ್ಯಮದ ತುಣುಕುಗಳನ್ನು ಪತ್ತೆ ಹಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಮುಸ್ಕಾನ್‌ ಬಗ್ಗೆ ಛಂಡೀಗಡದ 23ರ ಹರೆಯದ ಹಸನ್‌ಪ್ರೀತ್‌ ಸಿಂಗ್‌ಗೆ ಹೆಮ್ಮೆ. ಹೋರಾಟದ ಕುರಿತು ಮಾಹಿತಿಯೇ ಇಲ್ಲದಿದ್ದ ಪುಣೆ, ಮುಂಬೈ ಹಾಗೂ ವಿದೇಶಗಳ ಗೆಳೆಯರಿಗೂ ಅವರು ನವಮಾಧ್ಯಮಗಳ ಮೂಲಕವೇ ಅರಿವು ಮೂಡಿಸಿದ್ದಾರೆ.

ಯುವಜನರ ಈ ಟ್ವಿಟರ್‌ ಅಭಿಯಾನಕ್ಕೆ ಪ್ರಬಲ ಸವಾಲು ಒಡ್ಡಿರುವುದು ಬಿಜೆಪಿ ಐಟಿ ಸೆಲ್‌. ’ಹೋರಾಟದ ಬಗ್ಗೆ ಏನೋ ಒಂದು ಅಪಪ್ರಚಾರ ಮಾಡುವ ಅದರಷ್ಟು ಶಕ್ತಿಶಾಲಿ ಸಂಪನ್ಮೂಲಗಳು ನಮ್ಮ ಬಳಿ ಇಲ್ಲ’ ಎಂಬ ಅಸಹಾಯಕತೆಯ ನಡುವೆಯೂ ಯುವಜನ ಸಕ್ರಿಯರಾಗಿರುವುದರ ಪರಿಣಾಮವಾಗಿಯೇ, ಹೊಸ ಟ್ವಿಟರ್‌ ಖಾತೆಗಳು ತೆರೆದುಕೊಳ್ಳುತ್ತಲೇ ಇವೆ.

ಇದು ಅವರ ಆಶಾವಾದಕ್ಕೆ ಹಿಡಿದ ಕನ್ನಡಿಯಾಗಿ, ಟ್ವಿಟರ್‌ನ ಹೊಸ ಸಂವಹನ ಶಕ್ತಿಯೂ ಆಗಿ ಗೋಚರಿಸಲಾರಂಭಿಸಿದೆ.

(ಆಧಾರ: www.newslaundry.com ನಲ್ಲಿ ಡಿ.4ರಂದು ಪ್ರಕಟವಾದ How Punjabi youth are using social media to back up farmer protests, and counter ‘Godi Media’ ವರದಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT