ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ರೆಡ್‌ಮಿ ಫೋನ್‌ನಲ್ಲಿ Captcha ಹಾವಳಿಯೇ? ಹೀಗೆ ಮಾಡಿ!

ಶವೊಮಿ ರೆಡ್‌ಮಿ ಹಾಗೂ ಪೋಕೋ ಫೋನ್‌ಗಳಲ್ಲಿ ಹೆಚ್ಚು ಸಮಸ್ಯೆ
Last Updated 25 ಸೆಪ್ಟೆಂಬರ್ 2020, 7:37 IST
ಅಕ್ಷರ ಗಾತ್ರ

ಮೊಬೈಲ್ ಫೋನ್‌ನಲ್ಲಿ ಯಾವುದೇ ವೆಬ್‌ಸೈಟ್ ಬ್ರೌಸ್ ಮಾಡಬೇಕಿದ್ದರೆ ಕ್ಯಾಪ್ಚಾ (Captcha) ಅಡ್ಡಬರುತ್ತದೆ, ಸಮಸ್ಯೆಯಾಗುತ್ತಿದೆ ಅಂತ ಇತ್ತೀಚೆಗೆ ಹಲವು ಸ್ನೇಹಿತರು ಹೇಳಿಕೊಂಡಿದ್ದರು. ಕ್ಯಾಪ್ಚಾ ಎಂದರೆ, ಬಳಕೆದಾರರು ಮಾನವರೋಅಥವಾ ಕಂಪ್ಯೂಟರೋ ಎಂಬುದನ್ನು ಗುರುತಿಸುವುದಕ್ಕಾಗಿ ಇರುವ ಒಂದು ಪ್ರೋಗ್ರಾಂ. ಸ್ಪ್ಯಾಮ್‌ಗಳನ್ನು ತಡೆಯುವುದಕ್ಕಾಗಿ ಇರುವಂಥಾ ಸುರಕ್ಷತಾ ಹೆಜ್ಜೆಯಿದು. ಬ್ರೌಸರ್‌ನಲ್ಲಿ ಪ್ರದರ್ಶಿತವಾಗುವ ಅಕ್ಷರ, ಅಂಕಿಗಳನ್ನು ಅಥವಾ ಗಣಿತದ ಸರಳ ಲೆಕ್ಕಕ್ಕೆ ಉತ್ತರವನ್ನು ನಾವು ಪಕ್ಕದ ಬಾಕ್ಸ್‌ನಲ್ಲಿ ನಮೂದಿಸಬೇಕಾಗುತ್ತದೆ. ಕೆಲವೊಮ್ಮೆ ಚಿತ್ರಗಳ ಸರಣಿಯನ್ನು ನಾವು ಗುರುತಿಸಿ, ಆಯ್ಕೆ ಮಾಡಬೇಕಾದ ಪರಿಸ್ಥಿತಿಯೂ ಇರುತ್ತದೆ.ಆದರೆ, ಇದು ಪದೇ ಪದೇ ಕಾಣಿಸಿಕೊಂಡರೆ, ಖಂಡಿತವಾಗಿಯೂ ಕಿರಿಕಿರಿಯೇ.

ಇದನ್ನು ನೋಡಿ ಕೆಲವರು 'ಫೋನ್ ಸರಿ ಇಲ್ಲ, ವೈರಸ್ ಅಟ್ಯಾಕ್ ಆಗಿದೆ' ಎಂದುಕೊಂಡು ಫೋನ್ ದುರಸ್ತಿ ಮಳಿಗೆಗಳಿಗೆ ಹೋಗಿದ್ದರೆ, ಮತ್ತೆ ಕೆಲವರು ತಮ್ಮ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ಐಎಸ್‌ಪಿ)ಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ದೇಶದಲ್ಲಿ ಗರಿಷ್ಠ ಮಾರಾಟ ಕಂಡಿರುವ (ಅಂದರೆ 10 ಕೋಟಿಗೂ ಹೆಚ್ಚು) ಶವೊಮಿ (Xiaomi - ಉಚ್ಚಾರಣೆ ಶಓಮಿ) ಕಂಪನಿಯ ರೆಡ್‌ಮಿ, ಪೋಕೋ ಮುಂತಾದ ಫೋನ್‌ಗಳನ್ನು ಬಳಸುತ್ತಿರುವವರಿಗೆ ಇದರ ಸಮಸ್ಯೆ ಕಾಣಿಸಿಕೊಂಡಿದ್ದು ಹೆಚ್ಚು. ಇದಕ್ಕೆ ಕಾರಣವೇನು?

ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಭಾರತೀಯ ಬಳಕೆದಾರರ ಖಾಸಗಿ ಮಾಹಿತಿಯು ಚೀನಾದ ಸರ್ವರ್‌ಗಳಲ್ಲಿ ಶೇಖರಣೆಯಾಗುತ್ತಿವೆ ಎಂಬ ಕಾರಣಕ್ಕೆ ಈ ವರ್ಷದ ಜುಲೈ ತಿಂಗಳಲ್ಲಿ 47, ಆಗಸ್ಟ್‌ನಲ್ಲಿ 59 ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 117 ಚೀನಾ ಮೂಲದ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರವು ನಿರ್ಬಂಧ ಘೋಷಿಸಿತ್ತು. ನಿಷೇಧಿತವಾಗಿರುವ ಟಿಕ್‌ಟಾಕ್, ಪಬ್‌ಜಿ, ವಿ-ಚಾಟ್ ಮುಂತಾದ ಆ್ಯಪ್‌ಗಳೊಂದಿಗೆ, ಶವೊಮಿ (Xiaomi) ಕಂಪನಿಯ 'ಮಿ' (Mi) ಫೋನ್‌ಗಳಲ್ಲಿ ಡೀಫಾಲ್ಟ್ ಆಗಿ ಬರುವ ಬ್ರೌಸರ್‌ಗಳು ಕೂಡ ಸೇರಿದ್ದವು. ಅವೆಂದರೆ ಮಿ ಬ್ರೌಸರ್, ಮಿ ಬ್ರೌಸರ್ ಪ್ರೋ ಹಾಗೂ ಮಿಂಟ್ ಬ್ರೌಸರ್. ಮಿ ಕಮ್ಯೂನಿಟಿ ಆ್ಯಪ್ ಕೂಡ ನಿಷೇಧಿಸಲಾಗಿದೆ.

ಶವೊಮಿಯ ರೆಡ್ಮಿ ಹಾಗೂ ಪೊಕೊ (Poco) ಫೋನ್‌ಗಳಲ್ಲಿ ಹಲವರು ಈಗಾಗಲೇ ಈ ಸಮಸ್ಯೆ ಎದುರಿಸಿದ್ದಾರೆ. ಇದಕ್ಕೆ ಕಾರಣವೆಂದರೆ ಈ ಬ್ರೌಸರ್ ಆ್ಯಪ್‌ಗಳು ಅವುಗಳಲ್ಲಿ ಮೊದಲೇ ಇನ್‌ಸ್ಟಾಲ್ ಆಗಿ ಬಂದಿರುತ್ತವೆ. ಡೀಫಾಲ್ಟ್ ಬ್ರೌಸರ್ ಆಗಿರುವ ಇವುಗಳ ಮೂಲಕ ಇಂಟರ್ನೆಟ್‌ನಲ್ಲಿ ಜಾಲಾಡಲು ಹೊರಟಾಗ ಕ್ಯಾಪ್ಚಾ ಕಾಣಿಸಿಕೊಳ್ಳುತ್ತದೆ. ಸರ್ಕಾರದ ಆದೇಶದಂತೆ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳು (ISPಗಳು) ಈ ಆ್ಯಪ್‌ಗೆ ನಿರ್ಬಂಧ ವಿಧಿಸಿರುವುದೇ ಇದಕ್ಕೆ ಕಾರಣ.

ನಿಷೇಧ ಘೋಷಣೆಯಾದ ತಕ್ಷಣ ಶವೊಮಿ ಕಂಪನಿಯು ತನ್ನ MIUI ಕಾರ್ಯಾಚರಣಾ ವ್ಯವಸ್ಥೆಯನ್ನೇ ಪರಿಷ್ಕರಿಸುವುದಾಗಿಯೂ, ಅದರಲ್ಲಿ ಡೀಫಾಲ್ಟ್ ಬ್ರೌಸರ್ ಆ್ಯಪ್‌ಗಳಿರುವುದಿಲ್ಲ ಎಂದೂ ಹೇಳಿತ್ತು. ಅದನ್ನು ಅಪ್‌ಡೇಟ್ ಮಾಡಿಕೊಂಡರೆ, ನಿಷೇಧಿತ ಆ್ಯಪ್‌ಗಳು ತಾನಾಗಿ ಅನ್‌ಇನ್‌ಸ್ಟಾಲ್ ಆಗುತ್ತವೆ. ಈಗಾಗಲೇ ಈ ಸಮಸ್ಯೆ ಎದುರಿಸುತ್ತಿರುವವರು, ತಮ್ಮ ಫೋನ್‌ಗಳಿಂದ ಈ ಬ್ರೌಸರನ್ನು ಡಿಸೇಬಲ್ ಮಾಡಿ, ಕ್ರೋಮ್, ಫೈರ್‌ಫಾಕ್ಸ್ ಅಥವಾ ಸಫಾರಿ ಮುಂತಾದ ಬ್ರೌಸರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರಾಯಿತು. ಇಂಟರ್ನೆಟ್ ಜಾಲಾಟಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಇನ್ನು ಮುಂದೆ ಮಾರುಕಟ್ಟೆಗೆ ಬರುವ ಫೋನ್‌ಗಳಲ್ಲಿ ಈ ನಿಷೇಧಿತ ಆ್ಯಪ್‌ಗಳಿರುವುದಿಲ್ಲ ಮತ್ತು ತಾವು ಸರ್ಕಾರದ ನೀತಿ ಸೂತ್ರಗಳಿಗೆ ಬದ್ಧರಾಗುತ್ತೇವೆ ಎಂಬುದನ್ನು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT