ಸೋಮವಾರ, ಜುಲೈ 4, 2022
21 °C

PV Web Exclusive: ಜಿಲ್ಲೆಯ ಸಮಗ್ರ ಮಾಹಿತಿ ಈಗ ‘ಸ್ಮಾರ್ಟ್‌, ಸ್ಮಾರ್ಟ್‌...’

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಜನಪ್ರತಿನಿಧಿಗಳು, ಅತಿ ಗಣ್ಯ ವ್ಯಕ್ತಿಗಳು ಹಾಗೂ ಮುಖ್ಯಮಂತ್ರಿ ಹೀಗೆ ಯಾರೇ ಜಿಲ್ಲೆಗೆ ಬಂದರೆ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಬೆರಳ ತುದಿಯಿಂದಲೇ ಪಡೆದುಕೊಳ್ಳಬಹುದು.

ಜಿಲ್ಲೆಯ ಜಲಾಶಯಗಳಲ್ಲಿರುವ ನೀರು ಸಂಗ್ರಹಣಾ ಪ್ರಮಾಣ, ಹುಬ್ಬಳ್ಳಿ–ಧಾರವಾಡ ನಡುವೆ ಸಂಚರಿಸುವ ಬಿಆರ್‌ಟಿಎಸ್‌ ಬಸ್‌ಗಳ ಮಾಹಿತಿ, ಕಸ ವಿಲೇವಾರಿ ಪ್ರಕ್ರಿಯೆ, ವಿದ್ಯುತ್‌ ಸ್ಥಗಿತದ ಹಾಗೂ ಪೂರೈಕೆಯ ಮಾಹಿತಿ, ಪಾಲಿಕೆಗೆ ಸಂಗ್ರಹವಾದ ಕರ, ಪ್ರತಿಭಟನೆ ಅಥವಾ ಹೋರಾಟಗಳ ಸಮಯದಲ್ಲಿ ಪೊಲೀಸ್‌ ಇಲಾಖೆ ಕೈಗೊಂಡ ಬಂದೋಬಸ್ತ್‌ ಹೀಗೆ ಜಿಲ್ಲೆಯ ಪ್ರತಿ ಮಾಹಿತಿ ಈಗ ಒಂದು ಕ್ಲಿಕ್‌ ಅಂತರದಲ್ಲಿ ಸಿಗುತ್ತದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜಲಮಂಡಳಿ, ಮಹಾನಗರ ಪಾಲಿಕೆ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಆಯುಕ್ತರ ಕಚೇರಿ, ಜಿಲ್ಲಾ ವರಿಷ್ಠಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಪಂಚಾಯ್ತಿ ಹೀಗೆ ಪ್ರತಿ ಕಚೇರಿಯಲ್ಲಿ ಮಾಹಿತಿ ಸಂಗ್ರಹವಾಗುತ್ತದೆ. ಈ ಮಾಹಿತಿ ಹುಬ್ಬಳ್ಳಿಯ ನೀಲಿಜನ್‌ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಇಂಟಿಗ್ರೇಟೆಡ್‌ ಕಮಾಂಡ್‌ ಮತ್ತು ಕಂಟ್ರೋಲ್‌’ ಕೇಂದ್ರಕ್ಕೆ ರವಾನೆಯಾಗುತ್ತದೆ. ಜಿಲ್ಲೆಗೆ ಬರುವ ಪ್ರತಿನಿಧಿ ಒಮ್ಮೆ ಈ ಕೇಂದ್ರಕ್ಕೆ ಭೇಟಿಕೊಟ್ಟರೆ ಸಾಕು; ಎಲ್ಲ ಮಾಹಿತಿಯೂ ಸುಲಭವಾಗಿ ಸಿಗುತ್ತದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹43.93 ಕೋಟಿ ವೆಚ್ಚದಲ್ಲಿ ಕಮಾಂಡೊ ಕೇಂದ್ರ ಆರಂಭಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಎನ್‌ಇಸಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್‌‌ ಲಿಮಿಟೆಡ್‌ ಸಂಸ್ಥೆ ಕಮಾಂಡೊ ಕೇಂದ್ರದ ನಿರ್ವಹಣೆ ಮಾಡಲಿದೆ. ಕಮಾಂಡೊ ಕೇಂದ್ರದಲ್ಲಿ ತಂತ್ರಜ್ಞಾನದ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದ್ದು, ಸದ್ಯಕ್ಕೆ ತಾತ್ಕಾಲಿಕವಾಗಿ ಇರುವ ಕಚೇರಿಯಲ್ಲಿಯೇ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹುಬ್ಬಳ್ಳಿ–ಧಾರವಾಡದ ಪ್ರತಿ ಮನೆಮನೆಗೆ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಆರ್‌ಎಫ್‌ಐಡಿ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌) ಟ್ಯಾಗ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಮನೆಮನೆಗೆ ಹೋಗಿ ಕಸ ಸಂಗ್ರಹ ಮಾಡಿದ ಬಳಿಕ ತಮ್ಮಲ್ಲಿನ ರೀಡರ್‌ ಯಂತ್ರವನ್ನು ಮನೆಯ ಗೋಡೆಗೆ ಹಾಕಿರುವ ಆರ್‌ಎಫ್‌ಐಡಿ ಟ್ಯಾಗ್‌ಗೆ ತೋರಿಸಿದರೆ; ’ಬೀಪ್‌‘ ಶಬ್ದ ಬರುತ್ತದೆ. ಆಗ ಪೌರ ಕಾರ್ಮಿಕರು ಯಾವ ಬಡಾವಣೆಯಲ್ಲಿ ಹಾಗೂ ಯಾರ ಮನೆಯಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಕಮಾಂಡೊ ಕೇಂದ್ರದಲ್ಲಿ ದಾಖಲಾಗುತ್ತದೆ. ಕಸ ಸಂಗ್ರಹಿಸುವ ಟಿಪ್ಪರ್‌ಗಳಿಗೂ ಟ್ರ್ಯಾಕಿಂಗ್‌ ಸೌಲಭ್ಯ ಅಳವಡಿಸಲಾಗಿದೆ. ಇದರಿಂದ ಪರಿಣಾಮಕಾರಿಯಾಗಿ ಕಸ ಸಂಗ್ರಹಣೆಯಾಗಿ ಜನರ ದೂರುಗಳು ಕಡಿಮೆಯಾಗುತ್ತವೆ.

ರೀಡರ್‌ ಯಂತ್ರ ಬಳಕೆ ಮಾಡುವುದು ಹೇಗೆ? ಎನ್ನುವುದರ ಬಗ್ಗೆ ಪೌರ ಕಾರ್ಮಿಕರಿಗೆ ಅನುಭವಿಗಳ ತಂಡ ತರಬೇತಿ ನೀಡುತ್ತಿದೆ. ಹೀಗಾಗಿ ಪೌರ ಕಾರ್ಮಿಕರು ನಿತ್ಯ ಕಸ ಸಂಗ್ರಹಿಸುವ ಜೊತೆಗೆ ರೀಡರ್‌ ಯಂತ್ರ ಹೊತ್ತು ತರುತ್ತಿದ್ದಾರೆ.

’ನೆರೆ ಹಾವಳಿ ಹಾಗೂ ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸಲು, ಅವಳಿ ನಗರಗಳಲ್ಲಿ ಇರುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ಒಂದೇ ಕಡೆ ಸಿಗಬೇಕು ಎನ್ನುವ ಉದ್ದೇಶದಿಂದ ಕಮಾಂಡೊ ಕೇಂದ್ರ ಆರಂಭಿಸಲಾಗಿದೆ. ಹೊರ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾಹಿತಿ ಪಡೆಯುವುದು ಇದರಿಂದ ಸುಲಭವಾಗುತ್ತದೆ. ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಹಿಂದೆ ಅನೇಕ ದೂರುಗಳು ಇರುತ್ತಿದ್ದವು. ಮುಂದಿನ ದಿನಗಳಲ್ಲಿ ಈ ಸಮಸ್ಯೆಯೂ ಇರುವುದಿಲ್ಲ‘ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್ ಭರವಸೆ ವ್ಯಕ್ತಪಡಿಸಿದರು.

ನಿರ್ವಹಣೆಗೂ ಇರಲಿ ಆದ್ಯತೆ: ಹುಬ್ಬಳ್ಳಿ–ಧಾರವಾಡದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅನೇಕ ಯೋಜನೆಗಳನ್ನು‌ ಜಾರಿಗೆ ತರಲಾಗುತ್ತಿದೆ. ಅದರಲ್ಲಿ ಕಮಾಂಡೊ ಕೇಂದ್ರ ಬಹುಪಯೋಗಿ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಮಗಾರಿಗೆ ಗುತ್ತಿಗೆ ಪಡೆದುಕೊಂಡ ಸಿಬ್ಬಂದಿ ತಮಗೆ ನೀಡಿರುವ ಅವಧಿಯವರೆಗೆ ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ನಂತರ ನಿರ್ವಹಣೆಯ ಹೊಣೆ ಯಾರಿಗೆ? ಎನ್ನುವುದು ಸ್ಪಷ್ಟವಾಗಬೇಕು. ಆಗ ಮಾತ್ರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು ಸಾರ್ಥಕವಾಗುತ್ತದೆ ಎನ್ನುವುದು ಜನರ ಆಗ್ರಹ.

ವಿದ್ಯಾನಗರದ ನಿವಾಸಿ ಬಸಮ್ಮ ಎ. ಹೂಗಾರ ಪ್ರತಿಕ್ರಿಯಿಸಿ ’ಕಮಾಂಡೊ ಕೇಂದ್ರದಲ್ಲಿ ಮಾಹಿತಿ ದಾಖಲಾಗುವುದರಿಂದ ಕಸ ವಿಲೇವಾರಿ ಮೊದಲಿಗಿಂತಲೂ ಚೆನ್ನಾಗಿ ಆಗುತ್ತಿದೆ. ಇದು ಕೆಲ ದಿನಗಳಿಗಷ್ಟೇ ಸೀಮಿತವಾಗಬಾರದು. ಇದರ ಬಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು‘ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು