ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

100 ಭಾಷೆಗಳಲ್ಲಿ ಶೋಧ ಸೇವೆ: ಸುಂದರ್ ಪಿಚೈ

Published : 19 ಡಿಸೆಂಬರ್ 2022, 21:15 IST
ಫಾಲೋ ಮಾಡಿ
Comments

ನವದೆಹಲಿ: ಗೂಗಲ್ ಕಂಪನಿಯು ಭಾರತದ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿ ಹಾಗೂ ಪಠ್ಯ ಆಧಾರಿತ ಶೋಧ ಸೇವೆಗಳನ್ನು ನೀಡಲು ಸಿದ್ಧತೆ ನಡೆಸಿದೆ. ದೇಶದಲ್ಲಿ ಮಹಿಳೆಯರ ನೇತೃತ್ವದಲ್ಲಿನ ನವೋದ್ಯಮಗಳಿಗೆ ಉತ್ತೇಜನ ನೀಡಲು ₹ 620 ಕೋಟಿ ವೆಚ್ಚ ಮಾಡಲಿದೆ ಎಂದು ಕಂಪನಿಯ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

ಪಿಚೈ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿ ಮಾಡಿದ್ದಾರೆ.

‘ಭಾರತಕ್ಕಾಗಿ ಗೂಗಲ್‌ 2022’ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಚೈ ಅವರು, ‘ಇಂಡಿಯಾ ಡಿಜಿಟೈಸೇಷನ್ ಫಂಡ್‌ನ ಒಂದಿಷ್ಟು ಮೊತ್ತವನ್ನು ದೇಶದ ನವೋದ್ಯಮಗಳಲ್ಲಿ ಹೂಡಿಕೆಗೆ ಬಳಸಿಕೊಳ್ಳಲಾಗುವುದು’ ಎಂದಿದ್ದಾರೆ.

ಪಿಚೈ ಅವರು ಸರಿಸುಮಾರು ಮೂರೂವರೆ ವರ್ಷಗಳ ನಂತರದಲ್ಲಿ ಭಾರತಕ್ಕೆ ಬಂದಿದ್ದಾರೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿ ಮಾಡಿದ್ದಾರೆ. ದೇಶದ ನವೋದ್ಯಮ ವ್ಯವಸ್ಥೆಯು ಸುಧಾರಣೆ ಕಾಣುತ್ತಿರುವುದನ್ನು ತಾವು ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ಗಮನಿಸುತ್ತಿರುವುದಾಗಿ ಪಿಚೈ ಹೇಳಿದ್ದಾರೆ.

‘ನವೋದ್ಯಮ ಆರಂಭಿಸಲು ಈಗಿನ ಸಂದರ್ಭಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ’ ಎಂದು ಹೇಳಿದ್ದಾರೆ.

ಭಾಷಾಂತರ ಹಾಗೂ ಶೋಧ ತಂತ್ರಜ್ಞಾನವನ್ನು ಉತ್ತಮಪಡಿಸಲು ಗೂಗಲ್ ಕಂಪನಿಯು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ದೇಶದ 773 ಜಿಲ್ಲೆಗಳಿಂದ ಮಾತುಗಳ ದತ್ತಾಂಶವನ್ನು
ಸಂಗ್ರಹಿಸಲಾಗುತ್ತದೆ.

ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಅಸಾಮಾನ್ಯ. ಗೂಗಲ್ ಕಂಪನಿಯು ಸಣ್ಣ ಉದ್ದಿಮೆಗಳು ಹಾಗೂ ನವೋದ್ಯಮಗಳಿಗೆ ಒತ್ತಾಸೆಯಾಗಿ ನಿಂತಿದೆ. ಸೈಬರ್ ಭದ್ರತೆ, ಶಿಕ್ಷಣ ಮತ್ತು ಕೌಶಲ ತರಬೇತಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಪಿಚೈ ತಿಳಿಸಿದ್ದಾರೆ.

ಗೂಗಲ್‌ ಕಂಪನಿಯು ಇಂಡಿಯಾ ಡಿಜಿಟೈಸೇಷನ್‌ ಫಂಡ್‌ ಮೂಲಕ ಜಿಯೊ ಕಂಪನಿಯ ಶೇ 7.73ರಷ್ಟು ಷೇರುಗಳನ್ನು ಖರೀದಿಸಿದೆ. ಅಲ್ಲದೆ, ಭಾರ್ತಿ ಏರ್‌ಟೆಲ್‌ ಕಂಪನಿಯಲ್ಲಿ ಶೇ 1.2ರಷ್ಟು ಷೇರುಗಳನ್ನು ಖರೀದಿಸಿದೆ.‌

ಆ್ಯಂಡ್ರಾಯ್ಡ್‌ನಲ್ಲಿ ಡಿಜಿಲಾಕರ್‌

ಗೂಗಲ್‌ ಕಂಪನಿಯು ರಾಷ್ಟ್ರೀಯ ಇ–ಆಡಳಿತ ವಿಭಾಗದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ತಮ್ಮ ಡಿಜಿಟಲ್ ಕಡತಗಳನ್ನು ‘ಫೈಲ್ಸ್‌’ ಆ್ಯಪ್‌ ಮೂಲಕ ‍ಪಡೆದುಕೊಳ್ಳಲು ಸಾಧ್ಯವಾಗಲಿದೆ. ‘ಫೈಲ್ಸ್’ ಆ್ಯಪ್, ಗೂಗಲ್‌ ಕಂಪನಿಯು ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಗಾಗಿ ಅಭಿವೃದ್ಧಿಪಡಿಸಿರುವ ಆ್ಯಪ್‌. ‘ಡಿಜಿಲಾಕರ್‌ ಆ್ಯಪ್‌ ಬಹಳ ಶೀಘ್ರದಲ್ಲಿ ಆ್ಯಂಡ್ರಾಯ್ಡ್‌ ವ್ಯವಸ್ಥೆಯ ಭಾಗವಾಗಲಿದೆ. ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಜಿಲಾಕರ್‌ ಅಳವಡಿಕೆ ಆಗಲಿದೆ’ ಎಂದು ಇ–ಆಡಳಿತ ವಿಭಾಗದ ಅಧ್ಯಕ್ಷ ಅಭಿಷೇಕ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT