ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ಟಾಕ್‌ಗೆ ಪರ್ಯಾಯ: ಭಾರತದಲ್ಲಿ ಯುಟ್ಯೂಬ್‌ನಿಂದ 'ಶಾರ್ಟ್ಸ್‌' ಪ್ರಯೋಗ

Last Updated 15 ಸೆಪ್ಟೆಂಬರ್ 2020, 3:18 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಟಿಕ್‌ಟಾಕ್‌ ನಿಷೇಧದ ನಂತರ ಹಲವು ಟೆಕ್‌ ಕಂಪನಿಗಳು ಚಿಕ್ಕ ವಿಡಿಯೊಗಳನ್ನು ಹಂಚಿಕೊಳ್ಳುವ ವೇದಿಕೆಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ತೊಡಗಿಸಿಕೊಂಡಿವೆ. ಗೂಗಲ್‌ ಯುಟ್ಯೂಬ್‌ ವೇದಿಕೆಯ ಮೂಲಕ 'ಯುಟ್ಯೂಬ್‌ ಶಾರ್ಟ್ಸ್‌' ವ್ಯವಸ್ಥೆಗೆ ಚಾಲನೆ ನೀಡಿದೆ.

ಸದ್ಯ ಭಾರತದಲ್ಲಿ ಮಾತ್ರ ಟಿಕ್‌ಟಾಕ್‌ಗೆ ಪರ್ಯಾಯವಾಗಿ ಯುಟ್ಯೂಬ್‌ ಶಾರ್ಟ್ಸ್‌ ಪರೀಕ್ಷಾರ್ಥವಾಗಿ ಕಾರ್ಯಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಜಗತ್ತಿನ ಇತರೆ ರಾಷ್ಟ್ರಗಳಲ್ಲಿಯೂ ಬಿಡುಗಡೆ ಮಾಡುವುದಾಗಿ ಯುಟ್ಯೂಬ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಮೆರಿಕದಲ್ಲಿ ಟಿಕ್‌ಟಾಕ್‌ ಮಾರಾಟ ಮಾಡುವಂತೆ ಒತ್ತಡ ಹೇರಿದ್ದರು. ಆದರೆ, ಒರಾಕಲ್‌ ಜೊತೆಗೆ ಬೈಟ್‌ಡ್ಯಾನ್ಸ್‌ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಮೆರಿಕದಲ್ಲಿ ಟಿಕ್‌ಟಾಕ್‌ ಉದ್ಯಮ ಮಾರಾಟದಿಂದ ಹಿಂದೆ ಸರಿದಿದೆ. ಈ ನಡುವೆ ಯುಟ್ಯೂಬ್‌ ಹೊಸ ಪ್ರಯೋಗ ನಡೆಸುತ್ತಿದೆ.

'ಕಲಾವಿದರು, ವಿಡಿಯೊ ಕ್ರಿಯೇಟರ್‌ಗಳು ಮೊಬೈಲ್‌ ಫೋನ್‌ ಬಳಸಿಯೇ ಗಮನ ಸೆಳೆಯುವಂತಹ, ಕಡಿಮೆ ಅವಧಿಯ ವಿಡಿಯೊಗಳನ್ನು ಚಿತ್ರೀಕರಿಸಲು ಹಾಗೂ ಹಂಚಿಕೊಳ್ಳಲು ಶಾರ್ಟ್ಸ್ ಸಹಕಾರಿಯಾಗಲಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ ಯುಟ್ಯೂಬ್ ಶಾರ್ಟ್ಸ್‌ನ ಬೀಟಾ ಆವೃತ್ತಿ ಹೊರಬರಲಿದ್ದು, ವಿಡಿಯೊ ಕ್ರಿಯೇಷನ್‌ಗಾಗಿ ಹೊಸ ಟೂಲ್‌ಗಳನ್ನು ಒಳಗೊಂಡಿರಲಿದೆ' ಎಂದು ಯುಟ್ಯೂಬ್‌ನ ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ ಉಪಾಧ್ಯಕ್ಷ ಕ್ರಿಸ್‌ ಜಾಫಿ ಬ್ಲಾಗ್‌ನಲ್ಲಿ ಹೇಳಿದ್ದಾರೆ.

ಯುಟ್ಯೂಬ್‌ ಶಾರ್ಟ್ಸ್‌ ವಿಡಿಯೊ 15 ಸೆಕೆಂಡ್‌ಗಳಿಗೆ ಸೀಮಿತವಾಗಿರುತ್ತದೆ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಶಾರ್ಟ್ಸ್‌ನಲ್ಲಿ ಬದಲಾವಣೆಗಳನ್ನು ತರುವುದಾಗಿ ಕಂಪನಿ ಹೇಳಿದೆ. ಜಗತ್ತಿನಾದ್ಯಂತ ಸುಮಾರು 200 ಕೋಟಿ ಜನರು ಯುಟ್ಯೂಬ್‌ ಬಳಸುತ್ತಿದ್ದಾರೆ. ಜನಪ್ರಿಯವಾಗಿರುವ ವೈರಲ್‌ ವಿಡಿಯೊಗಳನ್ನು ಶಾರ್ಟ್ಸ್‌ ಸಂಗ್ರಹದಲ್ಲಿ ಸಿಗಲಿವೆ.

ಯುಟ್ಯೂಬ್‌ ಅಪ್ಲಿಕೇಷನ್‌ನಲ್ಲಿ (+) ಐಕಾನ್‌ ಆಯ್ಕೆ ಮಾಡಿ ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳಬಹುದು. ಬೇರೆಬೇರೆ ವಿಡಿಯೊ ತುಣುಕುಗಳನ್ನು ಸೇರಿಸಲು ಅವಕಾಶವಿದೆ. ಇದರೊಂದಿಗೆ ವಿಡಿಯೊಗೆ ಮ್ಯೂಸಿಕ್‌ಗೆ ಸೇರಿಸುವುದು ಅಥವಾ ಮ್ಯೂಸಿಕ್‌ ಜೊತೆಗೆ ರೆಕಾರ್ಡ್‌ ಮಾಡುವುದು, ಸ್ಪೀಡ್‌ ಕಂಟ್ರೋಲ್‌ ಹಾಗೂ ಸಮಯ ನಿಗದಿಪಡಿಸಿ ಆಟೋ ರೆಕಾರ್ಡ್‌ ಮಾಡುವ ಆಯ್ಕೆಗಳು ಇರಲಿವೆ ಎಂದು ಯುಟ್ಯೂಬ್‌ ಬ್ಲಾಗ್‌ನಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT