ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಪ್‍ಫೇಕ್ ಹೇಳುವ ಕಟ್ಟುಕಥೆ!

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಇದು ಚುನಾವಣೆಯ ಕಾಲ. ನಾಯಕರ ಆರೋಪ ಪ್ರತ್ಯಾರೋಪ, ಕೆಸೆರೆಚಾಟದ ಕಾಲ. ಇದುವರೆಗೆ ಪಕ್ಷ‘ನಿಷ್ಠ’ರಾಗಿದ್ದವರ ಪಕ್ಷಾಂತರದ ಕಾಲ. ತಂತ್ರ, ಷಡ್ಯಂತ್ರ ಎಲ್ಲವೂ ಸಹಜವಾಗಿ ಅನಾವರಣಗೊಳ್ಳುವ ಪರ್ವಕಾಲ. ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿದ ಹೊಸ ರೀತಿಯ ತಂತ್ರಗಾರಿಕೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಬಳಕೆಯಾದರೆ ಆಶ್ಚರ್ಯಪಡುವಂತಿಲ್ಲ. ಡೀಪ್‍ಫೇಕ್ ಇಂತಹ ಒಂದು ತಂತ್ರಜ್ಞಾನ. ಈ ಕುರಿತು ಒಂದು ವಿಶ್ಲೇಷಣೆ...

ಚಿತ್ರದುರ್ಗದಲ್ಲಿ ಪಕ್ಷವೊಂದರ ಸಂಭಾವ್ಯ ಅಭ್ಯರ್ಥಿಯೊಬ್ಬರು ಪ್ರಬಲ ಸಮುದಾಯವೊಂದರ ಬಗ್ಗೆ ಹಗುರವಾಗಿ ಮಾತನಾಡಿ ದರೆನ್ನಲಾದ ಆಡಿಯೊ ಕ್ಲಿಪ್ ಇತ್ತೀಚೆಗೆ ಸದ್ದು ಮಾಡಿತ್ತು. ‘ಸಾಮಾಜಿಕ ಜಾಲತಾಣಗಳ ಮೂಲಕ ನನ್ನದೇ ಧ್ವನಿ ಹೋಲುವ ನಕಲಿ ಆಡಿಯೊ ಬಳಸಿಕೊಂಡು ಸಮುದಾಯವೊಂದರ ಬಗ್ಗೆ ಹಗುರವಾಗಿ ಮಾತನಾಡಿದ್ದಾಗಿ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವೆ’ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಏನೇ ಇದ್ದರೂ ಇಂಥ ನಕಲಿ ಆಡಿಯೊ, ವಿಡಿಯೊ, ಮಾರ್ಫ್‌ ಮಾಡಲಾದ ಚಿತ್ರಗಳು ರಾಜಕಾರಣದಲ್ಲಿ ಎದುರಾಳಿಗಳನ್ನು ಹಣಿಯಲು ಬಳಸಲಾಗುವ ಯೋಜಿತ ಪ್ರಚಾರದ ಸಾಮಾನ್ಯ ತಂತ್ರಗಳು ಎನ್ನುವುದಂತೂ ಸತ್ಯ.

ಯೋಜಿತ ಪ್ರಚಾರದ ಪರಿಕಲ್ಪನೆ ಇಂದು ನೆನ್ನೆಯದಲ್ಲ. ಇತಿಹಾಸದುದ್ದಕ್ಕೂ ಪರಿಣಾಮಕಾರಿ ಸಂವಹನ ಮತ್ತು ಯೋಜಿತ ಪ್ರಚಾರ ಕುರಿತ ಹಲವಾರು ಕೃತಿಗಳು, ಸಿದ್ಧಾಂತಗಳು ಬಂದು ಹೋಗಿವೆ. ಅಧಿಕೃತ ಇತಿಹಾಸದ ಸೋಗಿನಲ್ಲಿರುವ ಅಸಂಖ್ಯ ಕಟ್ಟುಕಥೆಗಳ ನಿದರ್ಶನಗಳು ಜಗತ್ತಿನಾದ್ಯಂತ ಕಾಣಸಿಗುತ್ತವೆ. ಅರಿಸ್ಟಾಟಲ್‍ನಿಂದ ಹಿಡಿದು ಪ್ರಶಾಂತ್ ಕಿಶೋರ್‌ವರೆಗೂ ಎಲ್ಲ ಕಾಲದಲ್ಲಿಯೂ ರಾಜಕೀಯ ಪಂಡಿತರು ಅಧಿಕಾರದ ಮೇಲೆ ಬಿಗಿಹಿಡಿತ ಸಾಧಿಸುವ ನಿಟ್ಟಿನಲ್ಲಿ ಜನರ ಮನವೊಲಿಸಲು ತಂತ್ರಗಾರಿಕೆ ಹೆಣೆಯುವುದರತ್ತ ಗಮನಹರಿಸಿದವರೇ.

ಅರಿಸ್ಟಾಟಲ್ ತನ್ನ ರೆಟಾರಿಕ್ ಸಿದ್ಧಾಂತದಲ್ಲಿ ಸಂವಹನಕಾರ ಎಷ್ಟು ಪರಿಣಾಮಕಾರಿಯಾಗಿ ಉದ್ದೇಶಪೂರ್ವಕ ಸಂದೇಶವನ್ನು ಜನರಿಗೆ ತಲುಪಿಸಿ ಅವರ ಮನವೊಲಿಸಲು ಪ್ರಯತ್ನಿಸುತ್ತಾನೆ ಎಂಬುದನ್ನು ವಿವರಿಸುತ್ತಾನೆ. ಮೆಕಿಯಾವೆಲ್ಲಿ ‘ಪ್ರಿನ್ಸ್’ ಕೃತಿಯಲ್ಲಿ ರಾಜನೊಬ್ಬ ಆಡಳಿತ ಯಂತ್ರದ ಮೇಲೆ ಸ್ಥಿರವಾದ ಹಿಡಿತ ಸಾಧಿಸಲು ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರಗಳು ಅನೈತಿಕ ವಾಗಿದ್ದರೂ, ಅರಾಜಕತೆ ಸೃಷ್ಟಿಸಿದರೂ ಚಿಂತೆಯಿಲ್ಲ ಎನ್ನುತ್ತಾನೆ.

ಇನ್ನು ಆಧುನಿಕ ಇತಿಹಾಸಕ್ಕೆ ಬಂದರೆ, ಅಮೆರಿಕದ ರಾಜಕೀಯ ತಜ್ಞ ವಾಲ್ಟರ್ ಲಿಪ್‍ಮನ್, ಕೆಲವೇ ವ್ಯಕ್ತಿಗಳ ವೈಯುಕ್ತಿಕ ಹಿತಾಸಕ್ತಿಗಳು, ಸ್ಟಿರಿಯೊಟೈಪ್‍ಗಳು, ಮತ್ತು ಮಿಥ್‍ಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಬಳಕೆಯಾಗುವ ಬಗೆಯನ್ನು ವಿವರಿಸುವ ‘ಪಬ್ಲಿಕ್ ಒಪೀನಿಯನ್’ ಕೃತಿಯನ್ನೇ ರಚಿಸಿದ್ದಾನೆ. ಈ ಹೊತ್ತಿಗೂ ರಾಜಕೀಯ ಸಂವಹನದ ಬಹುಮುಖ್ಯವಾದ ಕೃತಿಯೆಂದು ಇದನ್ನು ಗುರುತಿಸಲಾಗುತ್ತದೆ.

ಹಿಟ್ಲರ್‌ನ ರಕ್ತಸಿಕ್ತ ನಾಜಿ ಆಡಳಿತದಲ್ಲಿ ಯೆಹೂದ್ಯರ ನರಮೇಧ ನಡೆಯುವಾಗ ದೇಶದ ಮುಖ್ಯವಾಹಿನಿಯ ಅಂದಿನ ನಾಗರಿಕ ಸಮಾಜ ವಿಲಕ್ಷಣ ಮೌನ ವಹಿಸಿದ್ದು, ಮಾನವೀಯತೆಯ ಅತಃಕರಣವನ್ನು ಸೈತಾನನಿಗೆ ಅಡವಿಟ್ಟ ಐತಿಹಾಸಿಕ ಕಟುಸತ್ಯ. ಒಂದೆಡೆ, ನಾಜಿ ಕಾನ್ಸನ್ಟ್ರೇಷನ್ ಕ್ಯಾಂಪ್‍ಗಳ ಬಂಕರ್‌ಗಳಲ್ಲಿ ಇಲಿಗಳ ಹಾಗೆ ಬಂಧಿಸಲ್ಪಟ್ಟ ಮುಗ್ಧ ಯೆಹೂದ್ಯರು ಅನ್ನ ನೀರಿಲ್ಲದೆ ನರಕಯಾತನೆ ಅನುಭವಿಸುತ್ತಾ, ಸಾವಿಗಾಗಿ ಕಾಯುತ್ತಿದ್ದರೆ, ಇನ್ನೊಂದೆಡೆ ಹಿಟ್ಲರ್‌ನ ಆತ್ಮರತಿಯ ಪ್ರವಾಹದ ಎದುರು ಈಜಲು ಪ್ರಯತ್ನಿಸುತ್ತಿದ್ದ ಸ್ವಚ್ಛ ಮನಸ್ಸಿನ ಜವಾಬ್ದಾರಿಯುತ ಜರ್ಮನ್ನರು ಭೀತಿಯ ನಿಶ್ಯಬ್ದದ ಸುರುಳಿಯಲ್ಲಿ ಮೂಲೆಗುಂಪಾಗುವ ಒತ್ತಡಕ್ಕೆ ಸಿಲುಕಿ ಬಹುಸಂಖ್ಯಾತರ ಒಪ್ಪಿತ ಅಭಿಪ್ರಾಯಕ್ಕೆ ಜೋತುಬೀಳಬೇಕಾಯಿತು ಎಂದು ಜರ್ಮನಿಯ ರಾಜಕೀಯ ತಜ್ಞೆ ಎಲಿಜೆಬೆತ್ ನೋಯೆಲ್ ನ್ಯೂಮನ್ ವಿಶ್ಲೇಷಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ ಸರ್ಕಾರ ಸರ್ವಜನರ ಕಲ್ಯಾಣಕ್ಕಾಗಿ ಧರ್ಮನಿರಪೇಕ್ಷ ಮತ್ತು ಜಾತ್ಯತೀತ ಆಡಳಿತ ನೀಡುವುದೆಂಬ ಯಾವ ಭರವಸೆಯನ್ನೂ ಇರಿಸಿಕೊಳ್ಳುವಂತಿಲ್ಲ. ಪ್ರಬಲ ಬಹುಮತ ಹೊಂದಿದ ಪ್ರಜಾ ತಾಂತ್ರಿಕ ಸರ್ಕಾರ ನಿರಂಕುಶ ಧೋರಣೆಯತ್ತ ಹೊರಳುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಇದಕ್ಕೆ ಇತಿಹಾಸವೇ ಸಾಕ್ಷಿ. ಅದೇ ರೀತಿ ಆಡಳಿತ ಪಕ್ಷ ಪ್ರಬಲವಾಗಿದ್ದ ಮಾತ್ರಕ್ಕೆ ಪ್ರತಿರೋಧ ಇರುವುದಿಲ್ಲವೆಂದೂ ಅಲ್ಲ. ಅಲ್ಲಲ್ಲಿ ಪ್ರತಿರೋಧದ ಕಿಚ್ಚು ಹೊತ್ತಿಕೊಳ್ಳುತ್ತಲೇ ಇರುತ್ತದೆ. ಆದರೆ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಪುಟಿದೇಳುವ ಮುನ್ನವೇ ಹುಸಿನುಡಿಯ ನಿರಂತರ ದಾಳಿಯ ಮೂಲಕ ಅದನ್ನು ನಂದಿಸಲಾಗುತ್ತದೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಹಲವು ತಂತ್ರಗಳಿವೆ. ನಕಲಿ ಚಿತ್ರಗಳು, ಪೋಸ್ಟ್‌ಗಳು, ವಿಡಿಯೊಗಳು, ಕಾಸಿಗಾಗಿ ಟ್ವೀಟ್‍ಗಳು, ಖರೀದಿಸಿದ ಟ್ವಿಟರ್ ಟ್ರೆಂಡ್‍ಗಳು, ಹಣತೆತ್ತು ಸೃಷ್ಟಿಸುವ ವೈರಲ್ ವಿಷಯಗಳು, ಎ.ಐ. ಅನಾಲಿಟಿಕ್ಸ್ ಆಧಾರಿತ ಯೋಜಿತ ಮಾರ್ಕೆಟಿಂಗ್ ಅಭಿಯಾನಗಳು, ಹೀಗೆ ಹತ್ತು ಹಲವು ಡಿಜಿಟಲ್ ಮಾರುಕಟ್ಟೆ ತಂತ್ರಗಳನ್ನು ರಾಜಕೀಯ ಪಕ್ಷಗಳು ಬಳಸುತ್ತಲಿವೆ.

ಮುಖ್ಯವಾಹಿನಿ ಮಾಧ್ಯಮದ ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾ, ಸದಾ ಚುನಾವಣಾ ಪ್ರಚಾರದ ಧಾವಂತದಲ್ಲಿರುವ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಇತ್ತೀಚೆಗೆ ಜನಪ್ರಿಯರಾಗುತ್ತಿದ್ದಾರೆ.

ಇಂಥ ವಂಚಕ ತಂತ್ರಗಾರಿಕೆಯ ಬತ್ತಳಿಕೆಗೆ ಹೊಸದೊಂದು ಸೇರ್ಪಡೆ 2017ರಲ್ಲಿ ಮೊತ್ತಮೊದಲಿಗೆ ಬೆಳಕಿಗೆ ಬಂದ ಡೀಪ್‍ಫೇಕ್! ಅಸಲಿ ನಕಲಿಯ ನಡುವೆ ವ್ಯತ್ಯಾಸವನ್ನೇ ಗುರುತಿಸಲಾಗದ ಕೃತಕ ಬುದ್ಧಿಮತ್ತೆಯನ್ನು (Artificial Intelligence) ಆಧರಿಸಿದ, ನಡುಕ ಹುಟ್ಟಿಸುವ ಡೀಪ್‍ಫೇಕ್ ತಂತ್ರಜ್ಞಾನವು ಈಗಾಗಲೇ ಕಲುಷಿತಗೊಂಡಿರುವ ಸಾರ್ವಜನಿಕ ವಲಯವನ್ನು ಇನ್ನೂ ಹದಗೆಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಏನಿದು ಡೀಪ್‍ಫೇಕ್?: ಡೀಪ್ ಲರ್ನಿಂಗ್ ಎಂಬ ಕೃತಕ ಬುದ್ಧಿಮತ್ತೆಯ ವಿಧಾನವೊಂದರ ಮೂಲಕ ಯಾವುದೋ ಘಟನೆ, ವಿದ್ಯಮಾನ ಅಥವಾ ವ್ಯಕ್ತಿಯೊಬ್ಬನ ದೃಶ್ಯಗಳಿಗೆ ಇನ್ಯಾವುದೋ ಸಮಾನ ರೂಪದ ಚಿತ್ರ, ದೃಶ್ಯ ಅಥವಾ ಧ್ವನಿ ಅಳವಡಿಸಿ ಅಸಲಿಯೇ ಎನ್ನಿಸುವ ನಕಲಿ ದೃಶ್ಯಗಳನ್ನು ಸೃಷ್ಟಿಸುವ ತಂತ್ರಜ್ಞಾನವೇ ಡೀಪ್‍ಫೇಕ್. 2020ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ‘ಸಂಪೂರ್ಣ ಅಸಮರ್ಥ’ (Complete dipshit) ಎಂದು ಮೂದಲಿಸಿದ ವಿಡಿಯೊ, ‘ಕೋಟ್ಯಂತರ ಜನರ ವೈಯುಕ್ತಿಕ ವಿವರಗಳು’ ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿವೆ ಎಂದು ಫೇಸ್‍ಬುಕ್‍ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಮಾತನಾಡಿದ ವಿಡಿಯೊಗಳನ್ನು ನೋಡಿದ್ದರೆ, ನೀವು ಈಗಾಗಲೇ ಡೀಪ್‍ಫೇಕ್ ಸಂಪರ್ಕಕ್ಕೆ ಬಂದಿದ್ದೀರಿ ಎಂದರ್ಥ.

ಡೀಪ್‍ಫೇಕ್ ಮತ್ತು ನಕಲಿ ವಿಡಿಯೊಗಳಿಗೆ ವ್ಯತ್ಯಾಸವಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಬಿಹಾರಿ ವಲಸೆ ಕಾರ್ಮಿಕರ ಮೇಲೆ ಹಲ್ಲೆಗಳಾಗುತ್ತಿವೆ ಎಂದು ಬಿಂಬಿಸುವಂಥ ನಕಲಿ ವಿಡಿಯೊವೊಂದನ್ನು ಮನೀಷ್‌ ಕಶ್ಯಪ್ ಎಂಬ ಬಿಹಾರ ಮೂಲದ ಯೂಟ್ಯೂಬರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಹೊಸ ವಿವಾದ ಸೃಷ್ಟಿಯಾಗಿತ್ತು. ನಂತರ ಈತನನ್ನು ತಮಿಳುನಾಡು ಪೊಲೀಸರ ಮನವಿ ಮೇರೆಗೆ ಬಿಹಾರದ ಪೊಲೀಸರು ಬಂಧಿಸಿದ್ದಾರೆ. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡಿದ ಈತನ ಮೇಲೆ ತಮಿಳುನಾಡಿನಲ್ಲಿಯೇ 13 ಕೇಸ್‍ಗಳು ದಾಖಲಾಗಿವೆ.

ಮನೀಷ್‌ ಕಶ್ಯಪ್ ಹಂಚಿಕೊಂಡದ್ದು ನಕಲಿ ವಿಡಿಯೊ. ಅಂದರೆ, ಬಿಹಾರದಲ್ಲಿ ಚಿತ್ರೀಕರಣಗೊಂಡ ದೃಶ್ಯವನ್ನು ತಮಿಳುನಾಡಿನಲ್ಲಿ ನಡೆದ ಘಟನೆಯೆಂದು ಬಿಂಬಿಸಿ, ರಾಜ್ಯದಲ್ಲಿ ಬಿಹಾರಿ ಮೂಲದ ವಲಸೆ ಕಾರ್ಮಿಕರನ್ನು ತಾಲಿಬಾನ್ ಮಾದರಿಯಲ್ಲಿ ಹಿಂಸೆಗೆ ಗುರಿಪಡಿಸಲಾಗುತ್ತಿದೆ ಎಂದು ಸುಳ್ಳು ಹರಡಿದ, ಸಂಬಂಧವೇ ಇಲ್ಲದ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದು ಸುಳ್ಳು ಮಾಹಿತಿ ಹಬ್ಬಿಸುವ ನಕಲಿ ಸುದ್ದಿಯ ಒಂದು ವಿಧ ಅಷ್ಟೆ. ನಕಲಿ ಸುದ್ದಿಯಲ್ಲಿ ಹಲವಾರು ವಿಧಗಳಿವೆ. ಇವೆಲ್ಲವನ್ನೂ ಗುರುತಿಸಲು ಆ್ಯಪ್‍ಗಳೂ ಇವೆ. ರಿವರ್ಸ್ ಸರ್ಚಿಂಗ್ ಮೂಲಕ ಮಾಹಿತಿ ಅಸಲಿಯೋ, ನಕಲಿಯೋ ಎಂದು ಬಳಕೆದಾರರೇ ಸುಲಭವಾಗಿ ಪತ್ತೆ ಹಚ್ಚಬಹುದಾದ ಅವಕಾಶವೂ ಇದೆ. ಆದರೆ ಡೀಪ್‍ಫೇಕ್ ಇದುವರೆಗೆ ನಮಗೆ ತಿಳಿದಿರುವ ನಕಲಿ ವಿಡಿಯೊಗಳಿಗಿಂತ ತೀರ ಭಿನ್ನ. ಡೀಪ್‍ಫೇಕ್ ವಿಡಿಯೊಗಳು ಸಂಪೂರ್ಣ ಅಸಲಿಯಂತೆಯೇ ಇರುತ್ತವೆ. ಉದಾಹರಣೆಗೆ ಟ್ರಂಪ್‌ ಅವರನ್ನು ದೂಷಿಸಿದ ವಿಡಿಯೊದಲ್ಲಿರುವುದು ಬರಾಕ್ ಒಬಾಮ ಅವರ ಅಸಲಿ ದೃಶ್ಯವೇ! ಧ್ವನಿ ಕೂಡ ಒಬಾಮ ಅವರದ್ದೇ. ಆದರೆ ಇದು ಅಸಲಿಯಲ್ಲ. ಡೀಪ್‍ಫೇಕ್! ಅಸಲಿ ದೃಶ್ಯಕ್ಕೆ ಅವರದ್ದೇ ಎನಿಸುವಂತಹ ನಕಲಿ ಧ್ವನಿ ಅಳವಡಿಸುವ ಡೀಪ್ ಲರ್ನಿಂಗ್ ತಂತ್ರಜ್ಞಾನ. ಲಿಪ್ ಸಿಂಕಿಂಗ್ ಕೂಡ ಬಹುತೇಕ ಕರಾರುವಕ್ಕಾಗಿಯೇ ಇರುತ್ತದೆ. ವಿಡಿಯೊ ನೋಡಿದ ಎಂಥವರೂ ಅಸಲಿಯೆಂದೇ ನಂಬಿಬಿಡಬಹುದಾದ ಮಹಾನಕಲು ಇದು! ಅಸಲಿ ವಿಡಿಯೊದಲ್ಲಿ ಒಬಾಮಾ ಮಾತನಾಡಿರುವುದೇ ಬೇರೆ. ಡೀಪ್‍ಫೇಕ್ ವಿಡಿಯೊದಲ್ಲಿ ಇರುವುದೇ ಬೇರೆ.

ಅಂತರ್ಜಾಲದಲ್ಲಿ ಲಭ್ಯವಿರುವ ಬಹುತೇಕ ಡೀಪ್‍ಫೇಕ್ ವಿಡಿಯೊಗಳು ಪೋರ್ನೋಗ್ರಫಿಗೆ ಸಂಬಂಧಪಟ್ಟವು. ಡೀಪ್‍ಟ್ರೇಸ್ ಎಂಬ ಎ.ಐ. ತಂತ್ರಜ್ಞಾನ ಸಂಸ್ಥೆಯ ಪ್ರಕಾರ 2020ರ ವೇಳೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಡೀಪ್‍ಫೇಕ್ ಪೋರ್ನ್ ವಿಡಿಯೊಗಳ ಪ್ರಮಾಣ ಶೇ 96ರಷ್ಟಿದ್ದು, ಇದರಲ್ಲಿ ಶೇ 99ರಷ್ಟು ವಿಡಿಯೊಗಳಲ್ಲಿ ಡೀಪ್‍ಫೇಕ್ ತಂತ್ರಜ್ಞಾನದ ಮೂಲಕ ಪೋರ್ನ್ ನಟಿಯರ ಮುಖಕ್ಕೆ ಜನಪ್ರಿಯ ನಟಿಯರ ಮುಖ ಅಳವಡಿಸಿದ ವಿಡಿಯೊಗಳೇ ಇದ್ದವು.

ಡೀಪ್‍ಫೇಕ್ ಮೂಲಕ ಆಡಿಯೊ ಮತ್ತು ವಿಡಿಯೊ ತದ್ರೂಪಿಗಳನ್ನು ಸೃಷ್ಟಿಸಬಹುದು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವ್ಯಕ್ತಿಯೇ ಇಲ್ಲದ ನಕಲಿ ಪ್ರೊಫೈಲ್‍ಗಳನ್ನು ಪ್ರಾರಂಭಿಸಬಹುದು. ರಾಜಕಾರಣಿಗಳ ಅಸಲಿ ವಿಡಿಯೊಗಳಲ್ಲಿ, ಅವರದ್ದೇ ಧ್ವನಿಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಸೃಷ್ಟಿಸಬಹುದು. ಪೋರ್ನೋಗ್ರಫಿಯ ಜೊತೆಗೆ ಹಾಸ್ಯ, ವಿಡಂಬನೆ, ರಾಜಕೀಯ ಪ್ರೇರಿತ ವಿಡಿಯೊಗಳನ್ನು ಡೀಪ್‍ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗುತ್ತಿದೆ. ಪತ್ತೆಹಚ್ಚಲು ಸಾಧ್ಯವೇ ಇಲ್ಲದಂತಹ ಡೀಪ್‍ಫೇಕ್ ವಿಡಿಯೊಗಳು ಸಮಾಜದಲ್ಲಿ ಅಪನಂಬಿಕೆಯನ್ನು ಹುಟ್ಟುಹಾಕಬಹುದು. 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಫೇಸ್‍ಬುಕ್ ಸಂಸ್ಥೆಯು ಡೀಪ್‍ಫೇಕ್ ವಿಡಿಯೊಗಳನ್ನು ನಿಷೇಧಿಸಿತ್ತು. ‘ರಾಜಕೀಯ ನಾಯಕರು ಆಡದ ಮಾತುಗಳನ್ನು ಅವರ ಬಾಯಿಯಲ್ಲಿ ಆಡಿಸುವ’ ಡೀಫ್‍ಫೇಕ್ ವಿಡಿಯೊಗಳು ಚುನಾವಣಾ ವಾತಾವರಣ ಕಲುಷಿತಗೊಳಿಸುತ್ತವೆ ಎಂದು ಫೇಸ್‍ಬುಕ್ ಈ ನಿರ್ಧಾರ ಕೈಗೊಂಡಿತ್ತು.

ಕ್ಯಾಮರೂನ್ ದೇಶದಲ್ಲಿ ಸೈನಿಕರು ಅಲ್ಲಿನ ನಾಗರಿಕರ ಹತ್ಯೆ ಮಾಡುತ್ತಿರುವ ವಿಡಿಯೊವನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹಂಚಿಕೊಂಡಿತ್ತು. ಆದರೆ ಅದು ಡೀಪ್‍ಫೇಕ್ ವಿಡಿಯೊ ಎಂಬ ಅಂಶ ನಂತರ ಬೆಳಕಿಗೆ ಬಂತು. ಈ ಎಲ್ಲ ನಿದರ್ಶನಗಳು ಈಗಾಗಲೇ ನಕಲಿ ಸುದ್ದಿಯ ದಾಳಿಗೆ ಬೆಂದು ಬಸವಳಿದಿರುವ ಸಾರ್ವಜನಿಕ ವಲಯಕ್ಕೆ ಡೀಪ್‌ಫೇಕ್ ಎಂಬ ಹೊಸ ಮಾಹಿತಿಯ ಮಾರಿ ಶೀಘ್ರದಲ್ಲಿಯೇ ಧಾಂಗುಡಿಯಿಡಲಿದೆ ಎಂದು ಸಾರಿ ಹೇಳುತ್ತಿವೆ. ಮುಂಬರುವ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಬೇಕಾದ ಮಾತುಗಳನ್ನು ಎದುರಾಳಿಗಳ ಅಸಲಿ ದೃಶ್ಯಗಳಿಗೆ ಅಳವಡಿಸುವ ಡೀಪ್‍ಫೇಕ್‍ನ ಹೊಸ ಆಟ ದೇಶದ ರಾಜಕಾರಣದಲ್ಲಿ ಶುರುವಾದರೆ ಆಶ್ಚರ್ಯಪಡುವಂತಿಲ್ಲ. ಚುನಾವಣೆಯ ಕಾಲದಲ್ಲಿ ಅಭ್ಯರ್ಥಿಗಳು, ಪಕ್ಷಗಳ ಎಲ್ಲ ವಿಶ್ಲೇಷಣೆಗಳು ಮತ್ತು ಲೆಕ್ಕಾಚಾರ ಬುಡಮೇಲು ಮಾಡುವಷ್ಟು ಶಕ್ತಿಯಿರುವ ಡೀಪ್‍ಫೇಕ್ ತಂತ್ರಜ್ಞಾನ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಮತ್ತೊಂದು ದೊಡ್ಡ ಗಂಡಾಂತರ ತಂದೊಡ್ಡುವುದು ನಿಶ್ಚಿತ. ಡೀಪ್‌ಫೇಕ್ ತಂತ್ರಜ್ಞಾನ ನಮ್ಮಲ್ಲಿಯೂ ಮತದಾರರ ಮನವೊಲಿಕೆಗೆ ಎಗ್ಗಿಲ್ಲದೆ ಬಳಸಲ್ಪಟ್ಟರೆ ಆಶ್ಚರ್ಯಪಡುವಂತಿಲ್ಲ. ಹಾಗೇನಾದರೂ ಆದಲ್ಲಿ ಅಸಲಿ ನಕಲಿಯ ವ್ಯತ್ಯಾಸ ಗುರುತಿಸುವುದೇ ಈ ಕಾಲದ ಬಹುದೊಡ್ಡ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT