ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್ ಹಗ್ಗಜಗ್ಗಾಟ; ದೇಶೀಯ 'ಎಲಿಮೆಂಟ್ಸ್‌' ಆ್ಯಪ್ ಪರ್ಯಾಯ?

Last Updated 12 ಜನವರಿ 2021, 16:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಮಾಹಿತಿಯ ಸುರಕ್ಷತೆ,ಗೋಪ್ಯತೆಯ ಬಗ್ಗೆ ವಾಟ್ಸ್‌ಆ್ಯಪ್‌ ಬಳಕೆದಾರರಲ್ಲಿ ಎದ್ದಿರುವ ಅನುಮಾನ, ಗೊಂದಲುಗಳು ಇನ್ನೂ ಬಗೆಹರಿದಿಲ್ಲ. ಅದಾಗಲೇ ಹಲವು ಬಳಕೆದಾರರು 'ಸಿಗ್ನಲ್‌' ಮೆಸೇಜಿಂಗ್‌ ಅಪ್ಲಿಕೇಷನ್‌ ಕಡೆಗೆ ಹೊರಳಿದ್ದರೆ, ಇನ್ನೂ ಕೆಲವರು ನಮಗೆ 'ಟೆಲಿಗ್ರಾಂ' ಸಾಕು ಎಂದು ಸುಮ್ಮನಾಗಿದ್ದಾರೆ. ಆದರೆ, ಭಾರತೀಯ ಮೂಲದ ಆ್ಯಪ್‌ಗಳನ್ನೇ ಭಾರತೀಯರು ಮರೆತಿರುವಂತಿದೆ!

ಚೀನಾದ ಆ್ಯಪ್‌ಗಳಿಗೆ ಸೆಡ್ಡು ಹೊಡೆದು, ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕಳೆದ ವರ್ಷ ಹಲವು ದೇಶೀಯ ಆ್ಯಪ್‌ಗಳು ಬಿಡುಗಡೆಯಾಗಿವೆ. ಮಿತ್ರೋಂ, ಚಿಂಗಾರಿ ರೀತಿಯ ವಿಡಿಯೊ ಶೇರಿಂಗ್‌ ಆ್ಯಪ್‌ಗಳ ಜೊತೆಗೆ ಗಮನ ಸೆಳೆದಿದ್ದ 'ಎಲಿಮೆಂಟ್ಸ್‌' ಆ್ಯಪ್‌ ಈಗ ಇನ್ನಷ್ಟು ಪ್ರಸ್ತುತವಾಗಿ ತೋರುತ್ತಿದೆ.

ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್‌ ಲಿವಿಂಗ್‌ನ 1000ಕ್ಕೂ ಹೆಚ್ಚು ಸ್ವಯಂ ಸೇವಕರು (ಎಂಜಿನಿಯರ್‌ಗಳು) ಜೊತೆಗೂಡಿ ದೇಶೀಯ ಸೋಶಿಯಲ್‌ ಅಪ್ಲಿಕೇಷನ್‌ ಎಲಿಮೆಂಟ್ಸ್‌ (Elyments) ಅಭಿವೃದ್ಧಿ ಪಡಿಸಿದರು. ಈಗಾಗಲೇ ಆ್ಯಂಡ್ರಾಯ್ಡ್‌ ಒಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಬಾರಿ ಈ ಆ್ಯಪ್‌ ಡೌನ್‌ಲೋಡ್‌ ಆಗಿದೆ. ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಎರಡಕ್ಕೂ ಪರ್ಯಾಯವೆಂದೇ ಈ ಆ್ಯಪ್‌ ಬಿಂಬಿತವಾಗಿದೆ. ಫೇಸ್‌ಬುಕ್‌ನಲ್ಲಿ ಇರುವಂತೆ ಪೋಸ್ಟ್‌ ಪ್ರಕಟಿಸುವುದು, ಫೀಡ್ಸ್‌, ಫೋಟೊ ಹಂಚಿಕೊಳ್ಳುವುದು; ವಾಟ್ಸ್‌ಆ್ಯಪ್‌ನಲ್ಲಿ ಇರುವಂತೆ ಸ್ನೇಹಿತರೊಂದಿಗೆ ಚಾಟ್‌ ಮತ್ತು ವಿಡಿಯೊ ಕಾಲ್‌ ಎಲ್ಲವೂ ಈ ಒಂದೇ ಅಪ್ಲಿಕೇಷನ್‌ನಲ್ಲಿ ಲಭ್ಯವಿದೆ.

ಕನ್ನಡ ಸೇರಿದಂತೆ 10 ಭಾಷೆಗಳು ಇದರಲ್ಲಿ ಆಯ್ಕೆಗೆ ಲಭ್ಯವಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 4.3 ಸ್ಟಾರ್‌ ಪಡೆದಿರುವ ಈ ಆ್ಯಪ್‌, ಖಾಸಗಿ ದತ್ತಾಂಶಗಳು ಬಳಕೆದಾರರ ಅನುಮತಿ ಇಲ್ಲದೆ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಮೇರು ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಮೂಲಕ ಬಿಡುಗಡೆಯಾಗಿರುವ ಎಲಿಮೆಂಟ್ಸ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿರುವಂತೆ ಗಣ್ಯರು, ಸೆಲೆಬ್ರಿಟಿಗಳನ್ನು ಫಾಲೋ ಮಾಡಬಹುದಾಗಿದೆ. ಇದರೊಂದಿಗೆ ಫೋಟೊ ಕ್ಲಿಕ್ಕಿಸುವಾಗ ಫಿಲ್ಟರ್‌ಗಳನ್ನು ಬಳಸುವ ಆಯ್ಕೆಯೂ ಇದೆ. ಬಳಸುತ್ತಿರುವ ಸರ್ವರ್‌ಗಳು ಭಾರತದಲ್ಲಿಯೇ ಇವೆ, ಸಂದೇಶಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ ಇರುವುದಾಗಿ ಎಲಿಮೆಂಟ್ಸ್‌ ಹೇಳಿಕೊಂಡಿದೆ.

ವಾಟ್ಸ್‌ಆ್ಯಪ್‌ ಸ್ಪಷ್ಟನೆ

ಮಂಗಳವಾರ ವಾಟ್ಸ್‌ಆ್ಯಪ್‌ ಸಂದೇಶಗಳ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ ಕುರಿತು ಸ್ಪಷ್ಟನೆ ನೀಡಿದೆ. ವಾಟ್ಸ್‌ಆ್ಯಪ್‌ನಲ್ಲಿ ಬಿಸಿನೆಸ್‌ ಮಾಡುವವರಿಗೆ ಮಾತ್ರ ಪರಿಷ್ಕರಿಸಿದ ನೀತಿಗಳು ಅನ್ವಯವಾಗಲಿವೆ, ಸ್ನೇಹಿತರು, ಕುಟುಂಬದವರೊಂದಿಗೆ ನಡೆಸುವ ಖಾಸಗಿ ಸಂದೇಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದೆ.

* ವಾಟ್ಸ್‌ಆ್ಯಪ್‌ ನಿಮ್ಮ ಖಾಸಗಿ ಸಂದೇಶಗಳನ್ನು ನೋಡಲು ಸಾಧ್ಯವಿಲ್ಲ ಅಥವಾ ಕರೆಗಳನ್ನು ಆಲಿಸುವುದಿಲ್ಲ; ಫೇಸ್‌ಬುಕ್‌ಗೂ ಇದು ಸಾಧ್ಯವಿಲ್ಲ.
* ಬಳಕೆದಾರರು ಮಾಡುವ ಕರೆಗಳು ಅಥವಾ ಸಂದೇಶಗಳ ಪಟ್ಟಿಯನ್ನು ಸಂಗ್ರಹಿಸಿಕೊಳ್ಳುವುದಿಲ್ಲ.
* ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ನೀವು ಶೇರ್‌ ಮಾಡಿದ ಲೊಕೇಶನ್‌ ನೋಡಲು ಸಾಧ್ಯವಿಲ್ಲ.
* ನಿಮ್ಮ ಸಂಪರ್ಕಗಳನ್ನು ವಾಟ್ಸ್‌ಆ್ಯಪ್‌ ಫೇಸ್‌ಬುಕ್‌ ಜೊತೆಗೆ ಹಂಚಿಕೊಳ್ಳುವುದಿಲ್ಲ.
* ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಖಾಸಗಿಯಾಗಿರಲಿವೆ.
* ಸಂದೇಶಗಳು ಅಳಿಸುವ ಆಯ್ಕೆಯನ್ನು (disappear) ಬಳಕೆದಾರರು ಅಳವಡಿಸಿಕೊಳ್ಳಬಹುದು.
* ನಿಮ್ಮ ಮಾಹಿತಿಯನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಯಾವುದೇ ಆ್ಯಪ್ ಡೌನ್‌ಲೋಡ್‌ ಮಾಡಿದರೂ, ನಿಮ್ಮ ಮೊಬೈಲ್‌ ಸಂಖ್ಯೆ, ಸಂಪರ್ಕ, ಮೀಡಿಯಾ, ಸಂದೇಶ, ಲೊಕೇಶನ್‌,...ಹೀಗೆ ಒಂದಿಲ್ಲೊಂದು ಮಾಹಿತಿ ಬಳಕೆಗೆ ಅನುಮತಿ ಕೇಳುತ್ತವೆ. ಅದನ್ನು ಅನುಮೋದಿಸದಿದ್ದರೆ, ಆ್ಯಪ್‌ ಮುಂದುವರಿಯುವುದೇ ಇಲ್ಲ ಅಥವಾ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇನ್ನು ಯಾವ ಅಪ್ಲಿಕೇಷನ್‌ ಬಳಸಬೇಕು ಎಂಬ ನಿರ್ಧಾರವಂತೂ ನಮ್ಮದೇ ತಾನೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT