ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ ಕಂಪ್ಯೂಟರ್‌ ಫ್ರಾಂಟಿಯರ್‌

Last Updated 28 ಜೂನ್ 2022, 19:30 IST
ಅಕ್ಷರ ಗಾತ್ರ

ಒಂದು ಮಿಲಿಯನ್‌ ಅಂದರೆ 10 ಲಕ್ಷ, ಒಂದು ಬಿಲಿಯನ್‌ ಅಂದರೆ 100 ಕೋಟಿ, ಒಂದು ಟ್ರಿಲಿಯನ್‌ ಅಂದರೆ ಒಂದು ಲಕ್ಷ ಕೋಟಿಗಳಷ್ಟಾಗುತ್ತದೆ. ಹಾಗಾದರೆ ಕ್ವಿನ್‌ಟ್ರಿಲಿಯನ್‌ ಅಂದರೆಷ್ಟು?

ಒಂದು ಕ್ವಿನ್‌ಟ್ರಿಲಿಯನ್‌ ಅಂದರೆ ಹತ್ತು ಸಾವಿರ ಕೋಟಿ ಕೋಟಿಗಳಷ್ಟಾಗುತ್ತದೆ.

ಒಂದು ಕ್ಷಣದಲ್ಲಿ ಒಂದು ಕ್ವಿನ್‌ಟಿಲಿಯನ್‌ ಲೆಕ್ಕ ಮಾಡುವ ಸಾಮರ್ಥ್ಯವುಳ್ಳ ‘ಫ್ರಾಂಟಿಯರ್‌’ ಅನ್ನು, ವಿಶ್ವದ ಅತ್ಯಂತ ವೇಗದ ಮತ್ತು ಸಾಮರ್ಥ್ಯವುಳ್ಳ ಸೂಪರ್‌ ಕಂಪ್ಯೂಟರ್‌ ಎಂದು ಹೇಳಲಾಗಿದೆ. ಅಮೆರಿಕಾದ ಓಕ್‌ ರಿಡ್ಜ್‌ ರಾಷ್ಟ್ರೀಯ ಪ್ರಯೋಗಾಲಯ(ಓಆರ್‌ಎನ್‌ಎಲ್‌)ದಲ್ಲಿ ಕೆಲಸ ಮಾಡುತ್ತಿರುವ ಫ್ರಾಂಟಿಯರ್‌, ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಸಂಚಲನವನ್ನುಂಟುಮಾಡಿದೆ.

ಅಂದಾಜು 60 ಕೋಟಿ ಡಾಲರ್‌ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ಸೂಪರ್‌ ಕಂಪ್ಯೂಟರ್‌, 7300 ಚದರ ಅಡಿ ಪ್ರದೇಶವನ್ನು ಬಳಸಿಕೊಂಡಿದೆ. ಫ್ರಾಂಟಿಯರ್‌ ಕೆಲಸ ಮಾಡಲು ಸುಮಾರು 21 ಮೆಗಾವ್ಯಾಟ್‌ ವಿದ್ಯುತ್‌ ಅನ್ನು ಬಳಸಲಾಗುತ್ತದೆ.

ಫ್ರಾಂಟಿಯರನ್ನು ಜನಸಾಮಾನ್ಯರಿಗೆ ಉಪಯುಕ್ತವಾಗುವಂತೆ, ವಿಜ್ಞಾನ ಮತ್ತು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸಂಶೋಧನೆಗಾಗಿ ಬಳಸಲು ನಿರ್ಧರಿಸಲಾಗಿದೆ. ಉದಾಹರಣೆಗೆ, ನ್ಯೂಕ್ಲಿಯರ್‌ ಫ್ಯೂಷನ್‌ ಮೂಲಕ ವಿದ್ಯುತ್‌ ಉತ್ಪಾದನೆಯನ್ನು ಕುರಿತು ವಿಜ್ಞಾನಿಗಳು ನಡೆಸಿರುವ ಪ್ರಯತ್ನಕ್ಕೆ, ಫ್ರಾಂಟಿಯರ್‌ ದೈತ್ಯಬಲವನ್ನು ನೀಡಲಿದೆ. ಸಂಪೂರ್ಣವಾದ ನ್ಯೂಕ್ಲಿಯರ್‌ ಫ್ಯೂಷನ್‌ ರಿಯಾಕ್ಟರ್‌ ಮಾದರಿಯನ್ನು ಫ್ರಾಂಟಿಯರ್‌ನಲ್ಲಿ ಅಭಿವೃದ್ಧಿ ಮಾಡಿ, ಅದು ಕೆಲಸ ಮಾಡುವಾಗ ಏನಾಗುತ್ತದೆ ಎಂದು ತಿಳಿದುಕೊಳ್ಳಲು ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. ಇದರಿಂದಾಗಿ, ನಿಕಟ ಭವಿಷ್ಯದಲ್ಲಿ ಅತ್ಯಂತ ಸುರಕ್ಷಿತವಾದ ನ್ಯೂಕ್ಲಿಯರ್‌ ಫ್ಯೂಷನ್‌ ಆಧಾರಿತ ವಿದ್ಯುತ್‌ ಉತ್ಪಾದನೆ ಘಟಕಗಳನ್ನು ಸ್ಥಾಪಿಸಲು ಮತ್ತು ಪರಿಸರಕ್ಕೆ ಮಾರಕವಾದ ಶಾಖೋತ್ಪನ್ನ ಮೊದಲಾದ ವಿದ್ಯುತ್‌ ಉತ್ಪಾದನೆ ಘಟಕಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವನ್ನು ಓಆರ್‌ಎನ್‌ಎಲ್‌ ವಿಜ್ಞಾನಿಗಳು ವ್ಯಕ್ತಪಡಿಸುತ್ತಾರೆ.

ವಾಹನೋದ್ಯಮದಲ್ಲಿ ಹೆಚ್ಚು ಸಮರ್ಥವಾದ ಮತ್ತು ಪರಿಸರಸ್ನೇಹಿಯಾಗಿ ಕೆಲಸ ಮಾಡುವ ಇಂಜಿನ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಫ್ರಾಂಟಿಯರನ್ನು ಬಳಸಲು ಉದ್ದೇಶಿಸಲಾಗಿದೆ. ಇಂತಹ ಇಂಜಿನ್‌ಗಳ ಅಭಿವೃದ್ಧಿಯಿಂದ, ಸರಕು ಸಾಗಾಣಿಕೆ ಮತ್ತು ಸಾರ್ವಜನಿಕರಿಗೆ ವೈಯಕ್ತಿಕ ಹಾಗೂ ಸಮೂಹ ಸಾರಿಗೆ ವ್ಯವಸ್ಥೆಯ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ.

ಹವಾಗುಣ ಬದಲಾವಣೆಯಿಂದ ಅತಿವೃಷ್ಟಿ, ಪ್ರವಾಹ, ಬರ ಮತ್ತು ಚಂಡಮಾರುತಗಳಂತಹ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಇದರ ನೇರ ಪರಿಣಾಮ ರೈತರ ಮೇಲಾಗುತ್ತಿದೆ. ಶ್ರಮಕ್ಕೆ ತಕ್ಕ ಬೆಳೆ ಮತ್ತು ಬೆಳೆಗೆ ತಕ್ಕ ಬೆಲೆ ಎರಡೂ ಇಲ್ಲದೆ ಕಂಗಾಲಾಗಿರುವ ರೈತರಿಗೆ ಹವಾಮಾನ, ಮಳೆ, ಜಲ, ಕೀಟಬಾಧೆ, ಇತ್ಯಾದಿ ಮಾಹಿತಿಯನ್ನು ಹೋಬಳಿ ಮಟ್ಟದಲ್ಲಿ ನಿಖರವಾಗಿ ನೀಡಲು ಫ್ರಾಂಟಿಯರ್‌ ನೆರವಾಗುತ್ತದೆ. ಪ್ರಕೃತಿವಿಕೋಪಗಳ ಸಂಭವ ಕುರಿತು ಮುನ್ನೆಚ್ಚರಿಕೆಯನ್ನು ಸಾಕಷ್ಟು ಮುಂಚಿತವಾಗಿ ಹಾಗೂ ಹೆಚ್ಚು ನಿಖರವಾಗಿ ನೀಡಲು ಫ್ರಾಂಟಿಯರ್‌ ಬಳಸಬಹುದಾಗಿದೆ.

ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಹೊಸ ಚಿಕಿತ್ಸೆ ಮತ್ತು ಔಷಧಗಳ ಅಭಿವೃದ್ಧಿಯಲ್ಲಿ ಫ್ರಾಂಟಿಯರ್‌ ನೆರವಾಗಲಿದೆ. ಈ ಬಳಕೆಯಲ್ಲಿರುವ ಕೆಲವು ಔಷಧಗಳಿಗೆ ನಿರೋಧಕಶಕ್ತಿ ಬೆಳೆಸಿಕೊಂಡಿರುವ ಸೂಪರ್‌ ಬಗ್‌ಗಳಿಂದ ಉಂಟಾಗುವ ಆರೋಗ್ಯಸಮಸ್ಯೆಗಳು, ಕೋಟ್ಯಂತರ ಜನರ ಸಾವುನೋವಿಗೆ ಕಾರಣವಾದ ಕೋವಿಡ್‌-19ರಂತಹ ಸಾಂಕ್ರಾಮಿಕಗಳು – ಹೀಗೆ ವಿವಿಧ ರೀತಿಯ ಆರೋಗ್ಯಸಮಸ್ಯೆಗೆ ಕಡಿಮೆ ಸಮಯದಲ್ಲಿ, ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಔಷಧಗಳನ್ನು ಅಭಿವೃದ್ಧಿಪಡಿಸಲು ಫ್ರಾಂಟಿಯರನ್ನು ಬಳಸಬಹುದಾಗಿದೆ. ಪರಿಸರ ಮಾಲಿನ್ಯದ ಅಗಾಧ ಸಮಸ್ಯೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ತ್ಯಾಜ್ಯ ನಿರ್ವಹಣೆ ಸಮಸ್ಯೆ – ಹೀಗೆ ಹಲವು ಸಮಸ್ಯೆಗಳನ್ನು ಕುರಿತು ಆಳವಾದ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಫ್ರಾಂಟಿಯರನ್ನು ಬಳಸಬಹುದಾಗಿದೆ.

ಹೊಸ ಉತ್ಪನ್ನಗಳ ಅಭಿವೃದ್ಧಿ, ಬಾಹ್ಯಾಕಾಶ ಸಂಶೋಧನೆ, ಹೊಸ ಆವಿಷ್ಕಾರಗಳ ಅಭಿವೃದ್ಧಿ – ಹೀಗೆ ಅನೇಕ ಕ್ಷೇತ್ರಗಳಲ್ಲಿ ಫ್ರಾಂಟಿಯರನ್ನು ಬಳಸಲು ಸಾಧ್ಯವಿದೆ.

ಭಾರತಕ್ಕೆ ವಿಜ್ಞಾನ ಮತ್ತು ಸಂಶೋಧನೆಗೆ ಅಗತ್ಯವಾದ ಸೂಪರ್‌ ಕಂಪ್ಯೂಟರ್‌ ನೀಡಲು ಕೆಲವು ದೇಶಗಳು ನಿರಾಕರಿಸಿದಾಗ, 1980ರಲ್ಲಿ ಭಾರತದಲ್ಲಿ ಸೂಪರ್‌ ಕಂಪ್ಯೂಟರ್‌ ಅಭಿವೃದ್ಧಿ ಮಾಡುವ ಯೋಜನೆಯನ್ನು ಭಾರತ ಸರ್ಕಾರ ಪ್ರಾರಂಭಿಸಿತು. ಆದರೆ 2015ರಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಸೂಪರ್‌ ಕಂಪ್ಯೂಟಿಂಗ್‌ ಮಿಷನ್‌ ಪ್ರಾರಂಭಿಸಿತು. ಏಳು ವರ್ಷಗಳಲ್ಲಿ 4500 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದಾದ್ಯಂತ, ಭಾರತದಲ್ಲೇ ಅಭಿವೃದ್ಧಿ ಮಾಡಲಾದ ಒಟ್ಟು 73 ಸೂಪರ್‌ ಕಂಪ್ಯೂಟರ್‌ಗಳನ್ನು ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.

ಈ ಯೋಜನೆಯಡಿಯಲ್ಲಿ ಬೆಂಗಳೂರಿನ ಐಐಎಸ್ಸಿಯಲ್ಲಿ ಭಾರತದ ಅತ್ಯಂತ ಸಮರ್ಥ ಸೂಪರ್‌ ಕಂಪ್ಯೂಟರ್‌ ‘ಪರಮ್‌ ಪ್ರವೇಗಾ’ವನ್ನು ಈ ವರ್ಷ ಸ್ಥಾಪಿಸಲಾಗಿದೆ. ಈ ಮೊದಲು 2015ರಲ್ಲಿ ಆಗ ಭಾರತದಲ್ಲಿ ಅತ್ಯಂತ ಸಮರ್ಥ ಸೂಪರ್‌ ಕಂಪ್ಯೂಟರ್‌ ಆಗಿದ್ದ ‘ಸಹಸ್ರ ಟಿ’ ಹೆಸರಿನ ಸೂಪರ್‌ ಕಂಪ್ಯೂಟರ್‌ ಅನ್ನು ಬೆಂಗಳೂರಿನ ಐಐಎಸ್ಸಿಯಲ್ಲಿ ಸ್ಥಾಪಿಸಲಾಗಿತ್ತು. ಐಐಎಸ್ಸಿ ಸೇರಿದಂತೆ ಭಾರತದ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಸ್ಥಾಪಿಸಲಾಗಿರುವ ಸೂಪರ್‌ ಕಂಪ್ಯೂಟರ್‌ಗಳನ್ನು ಆರೋಗ್ಯ, ಪರಿಸರ, ಹವಾಮಾನ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗಾಗಿ ಬಳಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಲ್ಲಿ ಅಭಿವೃದ್ಧಿಯಾದ ಸೂಪರ್‌ ಕಂಪ್ಯೂಟರ್‌ಗಳು ಸ್ಥಾನ ಪಡೆಯುತ್ತವೆ ಎಂದು ನಿರೀಕ್ಷಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT