ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳ ಬಿಡಿಭಾಗಗಳಿಂದ ತಯಾರಾಯಿತು ವೆಂಟಿಲೇಟರ್‌

ಜಾವಾ ಬೈಕ್‌, ಬೊಲೆರೊ ಎಸ್‌ಯುವಿ ವಾಹನಗಳ ಬಿಡಿಭಾಗ ಬಳಕೆ
Last Updated 4 ಜೂನ್ 2020, 21:54 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಕೋವಿಡ್‌ 19 ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಂತೆಯೇ ರೋಗಿಗಳ ಚಿಕಿತ್ಸೆಗೆ ವೆಂಟಿಲೇಟರ್‌ಗಳ ಅಗತ್ಯವೂ ಹೆಚ್ಚುತ್ತಿದೆ. ಈ ಅನಿವಾರ್ಯ ಪರಿಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯು ಮೈಸೂರಿನ ಸ್ಕ್ಯಾನ್‌ರೇ ಕಂಪನಿ ಅಭಿವೃದ್ಧಿಪಡಿಸಿರುವ ಮೂಲವಿನ್ಯಾಸ ಆಧರಿಸಿ ವೆಂಟಿಲೇಟರ್‌ನ ಹೊಸ ವಿನ್ಯಾಸ ಅಭಿವೃದ್ಧಿಪಡಿಸಿದೆ. ಅಂದಹಾಗೆ, ಇದಕ್ಕೆ ಬಳಸಿದ್ದು ವಾಹನಗಳ ಬಿಡಿಭಾಗಗಳನ್ನು.

ಜಾವಾ ಮೋಟರ್‌ ಬೈಕ್‌ನ ಪ್ರೆಷರ್‌ಗೇಜ್‌, ವಾಹನದ ಬ್ಯಾಟರಿ ಮತ್ತು ಬೊಲೆರೊ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ನ (ಎಸ್‌ಯುವಿ) ಸೆಂಟ್ರಲ್‌ ಕನ್ಸೋಲ್‌ ಬಳಸಿ ಈ ವೆಂಟಿಲೇಟರ್‌ನ ವಿನ್ಯಾಸ ರೂಪಿಸಲಾಗಿದೆ. ಜಿಗಣಿಯ ಎಸಿಇ ಸುಹಾಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಜಗದೀಶ್‌ ಹಿರೇಮಠ ಈ ಯೋಜನೆಗೆ ಮುಖ್ಯಸಲಹೆಗಾರರಾಗಿದ್ದಾರೆ.

‘ದೇಶದಲ್ಲಿ ವೆಂಟಿಲೇಟರ್‌ಗಳ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಕೋವಿಡ್‌ ಹಾವಳಿ ಹೆಚ್ಚಿದ ಬಳಿಕ ಬಿಡಿಭಾಗಗಳ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ತುರ್ತಾಗಿ ವೆಂಟಿಲೇಟರ್‌ ಅಭಿವೃದ್ಧಿ ಪಡಿಸಬೇಕಾದರೆ ದೇಶದಲ್ಲೇ ಸಿಗುವ ಬಿಡಿಭಾಗಗಳನ್ನು ಬಳಸಬೇಕಿತ್ತು. ನಾವು ಜಾವಾ ಹಾಗೂ ಬೊಲೆರೊ ವಾಹನಗಳ ಬಿಡಿಭಾಗಗಳನ್ನು ಬಳಸಿ ವೆಂಟಿಲೇಟರ್‌ ರೂಪಿಸಿದ್ದೇವೆ’ ಎಂದು ಡಾ.ಜಗದೀಶ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಐದು ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿದ್ದೇವೆ. ಈ ವಿನ್ಯಾಸವನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವು ಎಚ್‌ಎಲ್‌ಎಲ್ ಸಂಸ್ಥೆಗೆ ಸೂಚಿಸಿದೆ. ಅವರಿಂದ ಅನುಮೋದನೆ ಲಭಿಸಿದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ಅನುಮೋದನೆ ದೊರೆತರೆ ಕೆಲವೇ ತಿಂಗಳಲ್ಲಿ 3 ಲಕ್ಷ ವೆಂಟಿಲೇಟರ್‌ಗಳನ್ನು ತಯಾರಿಸಬಹುದು. ಪ್ರತಿ ವೆಂಟಿಲೇಟರ್‌ ಬೆಲೆ ಹೆಚ್ಚೆಂದರೆ ₹1.5 ಲಕ್ಷ ಆಗಬಹುದು’ ಎಂದು ಅವರು ವಿವರಿಸಿದರು.

‘ವಿಶ್ವದಾದ್ಯಂತ ವಾಹನ ತಯಾರಿಕಾ ಕಂಪನಿಗಳೇ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿವೆ. ಆದರೆ, ಭಾರತದಲ್ಲಿ ಅಂತಹ ಪ್ರಯತ್ನ ನಡೆದಿರಲಿಲ್ಲ. ದೇಶದಲ್ಲಿ ವೆಂಟಿಲೇಟರ್‌ ತಯಾರಿಸುವ ಬಹುತೇಕ ಕಂಪನಿಗಳು ಉಚ್ಛ್ವಾಸ ಮತ್ತು ನಿಶ್ವಾಸಕ್ಕೆ ಸಂಬಂಧಿಸಿದ ಕವಾಟಗಳು ಶ್ವಾಸಕೋಶಗಳ ಒಳಗೆ ಗಾಳಿಯ ಒತ್ತಡ ಹರಿವು ಮತ್ತು ಒತ್ತಡ ಸೂಚಿಸುವ ಸಂವೇದಕಗಳು, ಪ್ರತಿ ನಿಮಿಷಕ್ಕೆ 500 ಲೀಟರ್‌ಗಳಷ್ಟು ಗಾಳಿಯನ್ನು 50 ಸಾವಿರ ಬಾರಿ ತಿರುಗುವಂತೆ ಮಾಡುವ ಬ್ಲೋವರ್ಸ್‌ ಮತ್ತು ವಾತಾವರಣದ ಆಮ್ಲಜನಕವನ್ನು ಮಿಶ್ರಮಾಡಿ ನಿಯಂತ್ರಿಸುವ ಜೋಡಣಾ ಉಪಕರಣಗಳನ್ನು (ಬ್ಲೆಂಡರ್ಸ್‌) ಅಮೆರಿಕ, ಸ್ವೀಡನ್‌ ಅಥವಾ ಫ್ರಾನ್ಸ್‌ಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಸರಕುಗಳ ಪೂರೈಕೆ ಸರಪಣಿಯೇ ತುಂಡಾಗಿರುವ ಸದ್ಯದ ಸಂದರ್ಭದಲ್ಲಿ ಬಿಡಿಭಾಗಗಳ ಆಮದನ್ನೇ ನೆಚ್ಚಿಕೊಂಡಿರುವ ವೆಂಟಿಲೇಟರ್‌ಗಳ ತಯಾರಿ ಸಾಧ್ಯವಾಗುತ್ತಿಲ್ಲ’ ಎಂದು ತೀವ್ರ ನಿಗಾ ಘಟಕದ ಪರಿಣತರೂ ಆಗಿರುವ ಡಾ. ಹಿರೇಮಠ ತಿಳಿಸಿದರು.

‘ಲಕ್ಷಾಂತರ ಮಂದಿ ಕೋವಿಡ್‌ 19 ಸೋಂಕಿಗೆ ಒಳಗಾದಾಗ ದೇಶದಲ್ಲಿ ವೆಂಟಿಲೇಟರ್‌ ಕೊರತೆ ಎದುರಾಗಲಿದೆ. ತೀವ್ರ ಉಸಿರಾಟದ ಸಮಸ್ಯೆ ಹೊಂದಿರುವ ರೋಗಿಗಳಿಗೆ ಗಂಭೀರ ಸ್ವರೂಪದ ಚಿಕಿತ್ಸೆ ಒದಗಿಸಲು ಬಹಳಷ್ಟು ಸಂಖ್ಯೆಯಲ್ಲಿ ವೆಂಟಿಲೇಟರ್ ಗಳು ಬೇಕಾಗುತ್ತವೆ. ಅಷ್ಟೊಂದು ಪ್ರಮಾಣದಲ್ಲಿ ವೆಂಟಿಲೇಟರ್‌ಗಳು ಲಭ್ಯ ಇವೆಯೇ ಎನ್ನುವ ಪ್ರಶ್ನೆಯು ಮಾರ್ಚ್‌ ಮಧ್ಯಭಾಗದಲ್ಲಿ ಎದುರಾಗಿತ್ತು.ಆಗ ವಾಹನಗಳ ಬಿಡಿಭಾಗಗಳನ್ನು ಬಳಸಿ ವೆಂಟಿಲೇಟರ್‌ ತಯಾರಿಸುವ ಬಗ್ಗೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯು ಮೈಸೂರಿನ ಸ್ಕ್ಯಾನ್‌ರೇ ಕಂಪನಿಯನ್ನು ಸಂಪರ್ಕಿಸಿ ವೆಂಟಿಲೇಟರ್‌ ತಯಾರಿಕೆಯಲ್ಲಿ ಅವರ ಜೊತೆ ಕೈಜೋಡಿಸಲು ಮುಂದಾಗಿತ್ತು ಎಂದು ಡಾ. ಹಿರೇಮಠ ತಿಳಿಸಿದರು. ‌

‘ಆರಂಭದಲ್ಲಿ ನಾವು ಕಾರು, ಬೈಕ್‌, ಟ್ರ್ಯಾಕ್ಟರ್‌ ಮತ್ತಿತರ ವಾಹನಗಳ ಬಿಡಿಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದೆವು. ಸ್ಕ್ಯಾನ್‌ರೇ ತಂಡವು ಅಭಿವೃದ್ಧಿಪಡಿಸಿರುವ ವಿನ್ಯಾಸ ಆಧರಿಸಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ತಂಡವು ವೆಂಟಿಲೇಟರ್‌ ಮಾದರಿ ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಕೆಲಸಮಾಡಿದೆ. ಈ ವೆಂಟಿಲೇಟರ್‌ ಮಾದರಿಯು ಸಶಕ್ತವಾಗಿದ್ದು ನಾನು ಅದನ್ನು ಪರೀಕ್ಷಿಸಿರುವೆ. ಅತ್ಯಂತ ಗರಿಷ್ಠಮಟ್ಟದ ನಿಖರತೆ ಬಯಸುವ ಈ ಕೆಲಸವು ಭಾರಿ ಸವಾಲಿನದಾಗಿತ್ತು’ ಎಂದು ಡಾ. ಹಿರೇಮಠ ತಿಳಿಸಿದ್ದಾರೆ.

‘ಆಮ್ಲಜನಕದ ಒತ್ತಡ ಅಳೆಯುವ ಸಾಧನವಾಗಿ ನಾವು ಜಾವಾ ಮೋಟರ್‌ ಬೈಕ್‌ನ ಉತ್ಪನ್ನಗಳನ್ನು ಬಳಸಿದ್ದೇವೆ. ಬೈಕ್‌ನ ಸ್ಪೀಡೊಮೀಟರ್‌ ಅನ್ನು ಒತ್ತಡ ಅಳೆಯುವ, ಆಮ್ಲಜನಕ ಸೂಚಿಸುವ ಮತ್ತು ಪ್ರಮಾಣ ಸೂಚಿಸುವ ಸಾಧನವನ್ನಾಗಿ ಬಳಸಿಕೊಂಡಿದ್ದೇವೆ. ಕಾಯಿಲೆ ಪೀಡಿತರ ದೇಹದ ಒಳಗೆ ಎಷ್ಟು ಪ್ರಮಾಣದಲ್ಲಿ ಆಮ್ಲಜನಕವು ಒಳಸೇರಿದೆ, ಎಷ್ಟು ಲೀಟರ್‌ ಆಮ್ಲಜನಕವನ್ನು ರೋಗಿಯು ಸೇವಿಸಿದ್ದಾನೆ, ರೋಗಿಯ ಶ್ವಾಸಕೋಶಗಳಲ್ಲಿನ ಒತ್ತಡದ ವ್ಯತ್ಯಾಸವನ್ನು ಈ ಸ್ಪೀಡೊಮೀಟರ್‌ ಸೂಚಿಸುತ್ತದೆ’ ಎಂದು ಅವರು ವಿವರಿಸಿದರು.

ಈ ಮೀಟರ್‌ನ ಸೂಜಿಗಳು ಆಮ್ಲಜನಕದ ಮಟ್ಟವನ್ನುಸೂಚಿಸುತ್ತವೆ. ಒಂದು ವೇಳೆ ಕಾಯಿಲೆ ಪೀಡಿತರು ಪ್ರತಿ ನಿಮಿಷಕ್ಕೆ 6 ಲೀಟರ್‌ ಆಮ್ಲಜನಕ ಉಸಿರಾಡಿದರೆ ಬಾಣದ ಗುರುತು 6 ಲೀಟರ್‌ ಸೂಚಿಸುತ್ತದೆ. ಸ್ಪೀಡೊಮೀಟರ್‌ನಲ್ಲಿನ ಕಿ.ಮಿ ಗುರುತುಗಳನ್ನು ಅಳಿಸಿ ಅಲ್ಲಿ ಲೀಟರ್‌ ಸೂಚಕ ಅಳವಡಿಸಲಾಗಿದೆ. ಅದರೊಳಗೆ ಆಮ್ಲಜನಕ ಸಂವೇದಕ ಮಾಪನವನ್ನು ಅಳವಡಿಸಲಾಗಿದ್ದು ಅದು ರೋಗಿಯ ದೇಹದ ಒಳಗೆ ಹೋಗುವ ಆಮ್ಲಜನಕದ ಪ್ರಮಾಣವನ್ನುಸೂಚಿಸುತ್ತದೆ. ಮಹೀಂದ್ರಾ ಆಟೊ ಬ್ಯಾಟರಿಯು ವೆಂಟಿಲೇಟರ್‌ಗೆ ವಿದ್ಯುತ್‌ ಸೌಲಭ್ಯ ಒದಗಿಸುತ್ತದೆ.

’ಬೊಲೆರೊದ ಫ್ರಂಟ್‌ ಕನ್ಸೋಲ್‌, ವ್ಯಕ್ತಿಯು ಪ್ರತಿಬಾರಿ ಉಸಿರಾಟ ನಡೆಸಿದಾಗ ಸೇವಿಸಿದ ಗಾಳಿ ಮತ್ತು ಹೊರಹಾಕಿದ ಗಾಳಿಯ ಏರಿಳಿತದ ಪ್ರಮಾಣ ಸೂಚಿಸುತ್ತದೆ. ಎಚ್ಚರಿಕೆಯ ಗಂಟೆಯಾಗಿ ಜಾವಾದ ಸ್ಪೀಡೊಮೀಟರ್ ಬಳಸಲಾಗಿದೆ. ಒಂದು ವೇಳೆ ರೋಗಿಯು ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇಲ್ಲವೆ ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡಿದರೆ, ವಿದ್ಯುತ್‌ ಪೂರೈಕೆ ಸಂಪರ್ಕ ಕಡಿತಗೊಂಡರೆ, ರೋಗಿಗೆ ಜೋಡಿಸಿರುವ ಕೊಳವೆಯ ಸಂಪರ್ ಕಕಡಿತ ಗೊಂಡರೆ ಅದನ್ನು ಜಾವಾ ಸ್ಪೀಡೊ ಮೀಟರ್‌ ಕನ್ಸೋಲ್‌ ಸೂಚಿಸುತ್ತದೆ’ ಎಂದು ಡಾ.ಹಿರೇಮಠ ತಿಳಿಸಿದರು.

ಸರಳ ನಿರ್ವಹಣೆ: ‘ಸಾಮಾನ್ಯ ವೆಂಟಿಲೇಟರ್‌ಗಳು ಪ್ರಮಾಣ ನಿಯಂತ್ರಣ, ಒತ್ತಡ ನಿಯಂತ್ರಣ ಮತ್ತಿತರ ನಿಯಂತ್ರಣಗಳಿಗಾಗಿ 12 ರಿಂದ15 ಬಗೆಯ ವಿಧಾನಗಳನ್ನು ಒಳಗೊಂಡಿರುತ್ತವೆ. ನಾವು ಒತ್ತಡ ನಿಯಂತ್ರಣದ ಗಾತ್ರ ನಿಯಂತ್ರಣ (ಪಿಆರ್‌ವಿಸಿ) ಮಾದರಿ ಮಾತ್ರ ಬಳಸಲು ನಿರ್ಧರಿಸಿದ್ದೇವೆ‘ ಎಂದರು.

‘ರೋಗಿಯನ್ನು ವೆಂಟಿಲೇಟರ್ ಬಳಕೆಯಿಂದ ಬೇರ್ಪಡಿಸಿದ ನಂತರ ಆರೈಕೆ ಮಾಡುವುದೂ ಮುಖ್ಯವಾಗಿರುತ್ತದೆ. ರೋಗಿಯು ತಮ್ಮಷ್ಟಕ್ಕೆ ತಾವೇ ಸಹಜವಾಗಿ ಉಸಿರಾಡುವುದಕ್ಕೆ ನೆರವಾಗುವ ಚಿಕಿತ್ಸಾ ವಿಧಾನವನ್ನೂ ನಾವು ವಿನ್ಯಾಸ ಮಾಡಿದ್ದೇವೆ. ಇದನ್ನು ಪ್ರಮಾಣಕ್ಕೆ ಅನುಗುಣವಾದ ನೆರವು ವಿಧಾನ ಎನ್ನುತ್ತೇವೆ. ಉಸಿರಾಟಕ್ಕೆ ನೀಡಿದ್ದ ಬೆಂಬಲವನ್ನು ಪ್ರತಿ ನಿಮಿಷಕ್ಕೆ ಶೇ20ರಷ್ಟು ಕಡಿಮೆ ಮಾಡಿ, ಅವರು ಸಹಜವಾಗಿ ಉಸಿರಾಡಲು ಅವಕಾಶ ಮಾಡಿಕೊಡುತ್ತೇವೆ. ಉದಾಹರಣೆಗೆ ರೋಗಿಯೊಬ್ಬ ಪ್ರತಿ ನಿಮಿಷಕ್ಕೆ7 ಲೀಟರ್‌ನಷ್ಟು ಆಮ್ಲಜನಕ ಉಸಿರಾಡುತ್ತಿದ್ದರೆ ನಾವು ಅದನ್ನು ಶೇ 20ರಷ್ಟು (1.5 ಲೀಟರ್‌) ಕಡಿಮೆ ಮಾಡುತ್ತೇವೆ. ಆನಂತರ ರೋಗಿಯು ಯಾವ ರೀತಿ ಉಸಿರಾಡುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ. ರೋಗಿಯು ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾದ ನಂತರ ಆತನನ್ನು ವೆಂಟಿಲೇಟರ್‌ ಸೌಲಭ್ಯದಿಂದ ಬೇರ್ಪಡಿಸಲಾಗುವುದು’ ಎಂದು ವಿವರಿಸಿದರು.

*
ಪ್ರತಿಕೂಲ ಸಂದರ್ಭಗಳಲ್ಲಿ ದೇಶಿ ಕಂಪನಿಗಳು ಮತ್ತು ಸ್ಥಳೀಯ ವೈದ್ಯರ ಅವಿರತ ಪ್ರಯತ್ನ, ಸೃಜನಶೀಲತೆ ಮತ್ತು ಸಂಶೋಧನೆಗಳ ವಿಶೇಷ ಪ್ರಯತ್ನ ಇದಾಗಿದೆ. ಇದು ಅನೇಕರಿಗೆ ಸ್ಪೂರ್ತಿಯಾಗಬಲ್ಲುದು.
–ಡಾ.ಜಗದೀಶ ಹಿರೇಮಠ, ವೆಂಟಿಲೇಟರ್‌ ವಿನ್ಯಾಸ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT