ಮಂಗಳವಾರ, ಸೆಪ್ಟೆಂಬರ್ 28, 2021
21 °C

ಸೋವಿ ಸ್ಮಾರ್ಟ್‌ಫೋನ್‌: ಜಿಯೊ ಜೊತೆ ಗೂಗಲ್‌ ಸಹಯೋಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ ತಯಾರಿಸಲು ಜಿಯೊ ಜೊತೆಗಿನ ನಿಕಟ ಒಡನಾಟ ಮುಂದುವರಿಯುವುದು ಎಂದು ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುಂದರ್‌ ಪಿಚೈ ಗುರುವಾರ ತಿಳಿಸಿದ್ದಾರೆ.

ಗೂಗಲ್‌ ಕಂಪನಿಯು ಕಳೆದ ವರ್ಷ ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇಕಡ 7.7ರಷ್ಟು ಷೇರನ್ನು ₹ 33,737 ಕೋಟಿಗೆ ಖರೀದಿಸಿತ್ತು. ಅಲ್ಲದೆ, ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೊನ್‌ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡಿತ್ತು.

‘ಕಡಿಮೆ ಬೆಲೆಯ ಫೋನ್‌ ತಯಾರಿಕೆಯತ್ತ ನಾವು ಗಮನ ಹರಿಸಿದ್ದೇವೆ. ಅದಕ್ಕಾಗಿ ಜಿಯೊ ಜೊತೆ ಕೆಲಸ ಮಾಡುತ್ತಿದ್ದೇವೆ’ ಎಂದು ಪಿಚೈ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ, ಈ ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಮತ್ತು ಬೆಲೆಯ ಕುರಿತು ಅವರು ಮಾಹಿತಿ ನೀಡಿಲ್ಲ.

ಗೂಗಲ್‌ ಕಂಪನಿ ಕಳೆದ ವರ್ಷ ‘ಗೂಗಲ್‌ ಫಾರ್‌ ಇಂಡಿಯಾ ಡಿಜಿಟಲೈಸೇಷನ್‌ ಫಂಡ್‌’ ಯೋಜನೆ ಘೋಷಿಸಿತ್ತು. ಅದರ ಭಾಗವಾಗಿಯೇ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಹೂಡಿಕೆ ಮಾಡಿದೆ. ಭಾರತದಲ್ಲಿ ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆಗೆ ವೇಗ ನೀಡಲು ಮುಂದಿನ ಐದರಿಂದ ಏಳು ವರ್ಷಗಳಲ್ಲಿ ₹ 75 ಸಾವಿರ ಕೋಟಿ ಹೂಡಿಕೆ ಮಾಡುವ ಯೋಜನೆಯನ್ನು ಪಿಚೈ ಅವರು ಕಳೆದ ವರ್ಷದ ಜುಲೈನಲ್ಲಿ ಪ್ರಕಟಿಸಿದ್ದರು. ಈ ಮೊತ್ತದಲ್ಲಿ ಒಂದಷ್ಟನ್ನು ಹೊಸ ಅವಕಾಶಗಳಲ್ಲಿ ಹೂಡಿಕೆ ಮಾಡುವ ಬಗ್ಗೆಯೂ ಗೂಗಲ್‌ ಆಲೋಚನೆ ನಡೆಸುತ್ತಿದೆ. ಈ ಬಗ್ಗೆ ಈ ವರ್ಷದ ನಂತರ ಕೆಲವು ಘೋಷಣೆಗಳನ್ನು ಮಾಡಲಾಗುವುದು ಎಂದು ಅವರು ಗುರುವಾರ ತಿಳಿಸಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕವು ಜನರ ಜೀವನದಲ್ಲಿ ತಂತ್ರಜ್ಞಾನದ ಮಹತ್ವವನ್ನು ತೋರಿಸಿದೆ. ಎಲ್ಲಾ ನೆಟ್‌ವರ್ಕ್‌ಗಳಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲ ಗೂಗಲ್ ಮೀಟ್‌ನಂತಹ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟಿಂಗ್‌ ಸಾಧನಗಳನ್ನು ಹೆಚ್ಚು ಕೈಗೆಟಕುವಂತೆ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು