ಮಂಗಳವಾರ, ಸೆಪ್ಟೆಂಬರ್ 28, 2021
22 °C

ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ; ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ

‘ರಾಷ್ಟ್ರೀಯ ಶಿಕ್ಷಣ ನೀತಿ’ ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳು, ‘ಶಿಕ್ಷಣದ ಹಕ್ಕು ಕಸಿದುಕೊಳ್ಳುವ ಹೊಸ ನೀತಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು. ನೀತಿಯ ಪ್ರತಿಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನ ನಡೆಯುತ್ತಿದ್ದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ವಿದ್ಯಾರ್ಥಿಗಳ ಮೇಲೆ, ಪೊಲೀಸರು ಲಾಠಿ ಬೀಸಿದರು. ರಸ್ತೆ ಮೇಲೆ ಕುಳಿತಿದ್ದ ವಿದ್ಯಾರ್ಥಿಗಳು ಎಳೆದೊಯ್ದು ಬಸ್‌ಗಳಲ್ಲಿ ಹತ್ತಿಸಿ ಕರೆದೊಯ್ದರು. ವಿಧಾನಸೌಧದತ್ತ ಮೆರವಣಿಗೆಯಲ್ಲಿ ಹೊರಡಲು ಸಜ್ಜಾದಾಗ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮುಗಿಬಿದ್ದರು. ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಲಾಠಿ ಬೀಸಿದರು.

ವಿದ್ಯಾರ್ಥಿಯೊಬ್ಬರ ತಲೆಗೆ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು. ಅದೇ ಸ್ಥಿತಿಯಲ್ಲೇ ಆತನನ್ನು ಎಳೆದೊಯ್ದು, ಪೊಲೀಸ್ ಜೀಪು ಹತ್ತಿಸಿ ಸ್ಥಳದಿಂದ ಕರೆದೊಯ್ಯಲಾಯಿತು ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನೂ ರಸ್ತೆಯಲ್ಲಿ ಎಳೆದೊಯ್ಯಲಾಯಿತು. ಪೊಲೀಸರ ವರ್ತನೆಗೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.