ಶನಿವಾರ, ಮೇ 30, 2020
27 °C

ತೆರೆಮರೆಯ ಕೊರೊನಾ ವಾರಿಯರ್ಸ್, ಛಿದ್ರ ಬದುಕಿಗೆ ಭದ್ರ ಹೊಲಿಗೆ

ಹರ್ಷವರ್ಧನ ವಿ. ಶೀಲವಂತ Updated:

ಅಕ್ಷರ ಗಾತ್ರ : | |

prajavani

ಕಾಡಿನ ತೊರೆಯ ಜಾಡಿನಂತೆ ಈ ಬದುಕಿಗೆ ಅಸಾಧ್ಯ ಸಾಧ್ಯತೆಗಳಿವೆ. ನಾವು ಕಂಡುಕೊಂಡಷ್ಟೂ ಕಟ್ಟಿಕೊಳ್ಳಬಹುದಾದ ಅವಕಾಶಗಳಿವೆ.

ಅಂಥ ಅವಕಾಶಗಳನ್ನೇ ಹುಡುಕಿಕೊಂಡು, ಸಂಕಷ್ಟದಲ್ಲಿದ್ದ ಅನೇಕರ ಬದುಕಿನ ದೋಣಿಗೆ ನಾವಿಕರಾದವರು ಯಾಸ್ಮಿನ್. ನಿಸಾರ್ ಮಂಗಳವಾಡೇಕರ್‌ ಎಂಬ ದಿಟ್ಟ ‘ಮಾಸ್ಟರ್ ಟೇಲರ್’.

ಛಿದ್ರವಾಗಬಹುದಾಗಿದ್ದ ಅನೇಕ ಮಹಿಳೆಯರ ಬದುಕಿಗೆ ಭದ್ರ ಹೊಲಿಗೆ ಹಾಕಿದವರು.


ಮಾಸ್ಕ್ ಹೊಲಿಯುತ್ತಿರುವುದಕ್ಕೆ ಸಿದ್ಧತೆ
ನಡೆಸುತ್ತಿರುವುದು

ಕೋವಿಡ್ - 19 ದೆಸೆಯಿಂದ 50 ದಿನಗಳ ಲಾಕ್‌ಡೌನ್ ಸಂದರ್ಭದಲ್ಲಿ, ತಾವೂ ಆರ್ಥಿಕವಾಗಿ ಕಷ್ಟದಲ್ಲಿದ್ದರೂ, 25ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ ಒದಗಿಸಿದ್ದಾರೆ. ಅವರು ಯಾರ ಮುಂದೆಯೂ ಕೈಯೊಡ್ಡದೇ ಸ್ವಾಭಿಮಾನದಿಂದ, ಇದ್ದಷ್ಟನ್ನು ಪರಸ್ಪರ ಹಂಚಿಕೊಂಡು ಸಂಕಷ್ಟ ಸಮಯ ಎದುರಿಸುವಂತೆ ಪ್ರೇರೇಪಿಸಿದಾಕೆ!

ಎಂಥ ಸಂದಿಗ್ಧ ಪರಿಸ್ಥಿತಿ ಗೊತ್ತೇ? ಲಾಕ್‌ಡೌನ್‌ನಿಂದಾಗಿ ಕೆಲಸ ಕೊಡುವವರ ಬಳಿಯೂ ಕೂಡಲೇ ಮುಂಗಡ ಹಣ ಕೇಳುವ ಸ್ಥಿತಿಯೂ ಇಲ್ಲ. ಮೇಲಾಗಿ, ಸಾಮಾಜಿಕ ಜವಾಬ್ದಾರಿ ಅರಿತು, ಸಂಯಮದಿಂದ ನಡೆದುಕೊಳ್ಳಬೇಕಾದ ಅನಿವಾರ್ಯತೆ. ಪಟ್ಟು ಹಿಡಿದು ನಮ್ಮ ಕೆಲಸಕ್ಕೆ ಇಷ್ಟೇ ಧಾರಣೆ ಕೊಡಿ ಅಂತ ಹೇಳುವಂತೆಯೂ ಇಲ್ಲ. ವಿಶ್ವಾಸದ ಮೇಲೆ ಕಚ್ಚಾ ಮಾಲು ಕಡ ತಂದು, ವಾಯಿದೆ
ಯಂತೆ ಬೇಡಿಕೆ ಪೂರೈಸಬೇಕಾದ ಹೊಣೆಗಾರಿಕೆ ಬೇರೆ.

ಯಾಸ್ಮಿನ್ ಎಂಬ ದೀವಟಿಗೆ

ಬಾಸೆಲ್ ಮಿಷನ್ ಹೈಸ್ಕೂಲ್‍ನಲ್ಲಿ 10ನೇ ತರಗತಿ ಓದಿದ್ದು. 20ನೇ ವರ್ಷಕ್ಕೆ ಮದುವೆ. 15 ವರ್ಷ ಕೊಲ್ಹಾಪುರದಲ್ಲಿ ಸಂಸಾರ. 2 ಹೆಣ್ಣು ಮತ್ತು 1 ಗಂಡು ಮಗು. ಕುಡಿತಕ್ಕೆ ಅಂಟಿದ ಗಂಡ. ದೂರವಾಗಿ, ಧಾರವಾಡದ ತವರಿಗೆ ಆಗಮನ. ರ‍್ಯಾಪಿಡ್‍ನ ನೀರಜಾ ಅವರ ಸಂಪರ್ಕ. 36ನೇ ವರ್ಷಕ್ಕೆ ಸ್ವಾವಲಂಬಿಯಾಗಿ ಬದುಕುವ ಛಲ. ಟೇಲರಿಂಗ್, ಎಂಬ್ರಾಯಿಡರಿ ಮತ್ತು ಕುಚ್ಚು ಕಟ್ಟುವ ತರಬೇತಿ. ಎರಡೂ ಹೆಣ್ಣುಮಕ್ಕಳಿಗೆ 10ನೇ ತರಗತಿವರೆಗೆ ಓದಿಸಿ, ವರದಕ್ಷಿಣೆ ಇಲ್ಲದೇ ಮದುವೆ ಮಾಡಿಕೊಟ್ಟು, ಮಗನಿಗೆ ಡಿಪ್ಲೊಮಾ (ಎ.ಸಿ. ಮೆಕ್ಯಾನಿಕ್) ಓದಿಸುವವರೆಗೆ ಬದುಕು ಬಂದಿದೆ. 20ಕ್ಕೂ ಹೆಚ್ಚು ಬಡ ಮಹಿಳೆಯರಿಗೆ 20ಕ್ಕೂ ಹೆಚ್ಚು ನಮೂನೆಯ ವಸ್ತ್ರವಿನ್ಯಾಸ ಮತ್ತು ಹೊಲಿಗೆ, ತಿಂಗಳಿಗೆ ₹ 400 ಶುಲ್ಕ ಪಡೆದು, ನೂರಾರು ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ ಟೇಲರಿಂಗ್ ಕಲಿಸಿ, ಕೋವಿಡ್ ಆತಂಕದ ಮಧ್ಯೆಯೂ ಸ್ವಾವಲಂಬಿ ಬದುಕಿಗೆ ಆಸರೆಯಾಗಿದ್ದಾರೆ 46 ವರ್ಷದ ಈ ಅಕ್ಕ.

ಮಾಸ್ಟರ್ ಟೇಲರ್ ಯಾಸ್ಮಿನ್ ತಾವೇ ಕಟ್ಟಿದ ‘ಆಲೀಷಾ ಫ್ಯಾಶನ್ಸ್’ನಲ್ಲಿ ತಲೆ ಮೇಲೆ ಕೈ ಹೊತ್ತು ಕೂಡಲಿಲ್ಲ. ತಾವಿರುವ ಧಾರಾವಾಡದ ಲಕ್ಷ್ಮೀಸಿಂಗನ ಕೆರೆ ಕೊಳಚೆ ಪ್ರದೇಶದ ಅನೇಕ ಹೆಣ್ಣುಮಕ್ಕಳು ಇವರ ಬಳಿ ತರಬೇತಿ ಪಡೆದು, ಕೈಗೆ ಕೆಲಸವಿಲ್ಲದೇ ಖಾಲಿ ಕುಳಿತವರ ಮಾಹಿತಿ ಕಲೆ ಹಾಕಿದರು. ಮನೆಯಲ್ಲಿ ಹೊಲಿಗೆ ಯಂತ್ರ ಇದ್ದವರ ಪಟ್ಟಿ ಮಾಡಿದರು. ಅವಶ್ಯಕತೆ ಇದೆ ಎಂಬ ಮಹಿಳೆಯರಿಗೆ ತಮ್ಮ ಟೇಲರಿಂಗ್ ಇನ್‌ಸ್ಟಿಟ್ಯೂಟ್‍ನಲ್ಲಿರುವ 5 ಹೊಲಿಗೆ ಯಂತ್ರಗಳನ್ನು ‘ಸೋಷಿಯಲ್ ಡಿಸ್ಟೆನ್ಸಿಂಗ್’ನಲ್ಲಿ ವ್ಯವಸ್ಥೆಗೊಳಿಸಿ, ದಿನಕ್ಕೆ 8-10 ತಾಸು ಮುಖಗವಚ (ಮಾಸ್ಕ್) ಹೊಲಿಯುವ ಕೆಲಸ ನೀಡುವ ನಿರ್ಧಾರ ಮಾಡಿದರು.

25 ಹೆಣ್ಣುಮಕ್ಕಳು ತುಂಬ ಆಸ್ಥೆ ಮತ್ತು ಶ್ರದ್ಧೆಯಿಂದ ಲಾಕ್‌ಡೌನ್ ಅವಧಿಯಲ್ಲಿ ಪ್ರಥಮ ಕಂತಿನಲ್ಲಿ 10 ಸಾವಿರ, ಬಳಿಕ 5, ಕೊನೆಗೆ 10 ಹೀಗೆ ಒಟ್ಟು 25 ಸಾವಿರ ಮಾಸ್ಕ್‌ಗಳನ್ನು ₹ 2 ಒಂದರಂತೆ ಹೊಲಿದು ಕೊಟ್ಟರು. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‍ನ ಪ್ರವೀಣ್, ಧಾರವಾಡ ರ‍್ಯಾಪಿಡ್‌ (ರಿಹ್ಯಾಬಿಲಿಟೇಟಿವ್ ಅಸಿಸ್ಟನ್ಸ್ ಫಾರ್ ಪೀಪಲ್ ಇನ್ ಡಿಸ್ಟ್ರೆಸ್)ನ ಸಿಇಓ ವಾಣಿ ವಿಲಾಸ್ ಅವರ ಸಹಾಯದಿಂದ, ಯಾಸ್ಮಿನ್ ಒಂದೊಪ್ಪತ್ತಿನ ಊಟಕ್ಕೂ ತತ್ವಾರವಾಗಿದ್ದ ಮಹಿಳೆಯರಿಗೆ ದಿನಗೂಲಿ ಒದಗಿಸಿ, ಜೀವನೋತ್ಸಾಹ ತುಂಬಿದರು. ಒಬ್ಬಂಟಿತನದಿಂದ ಬಳಲದಂತೆ, ಕೈತುಂಬ ಕೆಲಸ ಕೊಟ್ಟು, ಒತ್ತಡ ನಿವಾರಿಸಿದರು.


ಮಾಸ್ಕ್ ತಯಾರಿಯಲ್ಲಿ ತೊಡಗಿರುವುದು

ಒಂದು ಹಂತದಲ್ಲಿ, ಯಾಸ್ಮಿನ್ ತಮ್ಮ ಬಳಿ ಇದ್ದ ಸ್ಟಾಕ್ ಕಟ್ ಪೀಸ್ ಬಟ್ಟೆಯನ್ನೂ ನೀಡಿ, ಮಾಸ್ಕ್ ಹೊಲಿಯುವ ಕೆಲಸ ನಿಲ್ಲದಂತೆ ನೋಡಿಕೊಂಡರು. ಬಳಿಕ, ಪರಿಚಯಸ್ಥ ವ್ಯಾಪಾರಿಯೊಬ್ಬರ ಗೋದಾಮು ತೆರೆಸಿ, ದಿನದ 12 ತಾಸು ತಾವೂ ಕೂಡ ಹೆಗಲು ಕೊಟ್ಟು ಗೆಳತಿಯರೊಂದಿಗೆ ದುಡಿದರು. ಪರಿಣಾಮ ಈ ಸ್ವಾವಲಂಬಿ ಮಹಿಳಾ ತಂಡದ ಸದಸ್ಯರು ತೆರೆಯ ಮರೆಯ ‘ಕೊರೋನಾ ವಾರಿಯರ್ಸ್’ ಆದರು. ಕೋವಿಡ್ -19 ಸೋಂಕು ಹರಡುವಿಕೆ ತಡೆಯುವಲ್ಲಿ ತಮ್ಮ ಸಹಾಯ ಹಸ್ತ ಚಾಚಿದರು.

‘ನಾವು ದಿನಕ್ಕ 12 ತಾಸು ದುಡೀಲಿಕ್ಕೆ ತಯಾರ ಅದೇವ್ರಿ. ಮನೆ ಕೆಲಸಕ್ಕ 4 ತಾಸು ಸಾಕು. ದಿನಕ್ಕ 16 ರಿಂದ 18 ಗಂಟೆ ದುಡಿಯೋವಷ್ಟು ಗಟ್ಟಿ ಇರೋ ನಮಗ ದುಡಿಮೆಗೆ ತಕ್ಕ ಕೂಲಿ ಸಿಕ್ಕರ, ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾವಲಂಬನೆ ಮತ್ತ ಅವರ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲಿಕ್ಕೆ ಸಾಧ್ಯ ಐತ್ರಿ. ಸಮಸ್ಯೆ ಅಂದ್ರ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ಸ್ಪರ್ಧಾತ್ಮಕ ಮಾರಾಟ. ಗ್ರಾಹಕರಿಗೂ ನಮಗೂ ನೇರ ಸಂಪರ್ಕ ದೊರಕಿಸಿಕೊಟ್ಟರ ನಾವು ಗೌರವದಿಂದ ಬದುಕೋತೇವಿ’ ಎಂಬ ಯಾಸ್ಮಿನ್ ಮಾತು ಮನನೀಯ. ಯಾಸ್ಮಿನ್ ಮಂಗಳವಾಡಿಕರ್ ಸಂಪರ್ಕಕ್ಕೆ– 8722620230

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು