ಸೋಮವಾರ, ಏಪ್ರಿಲ್ 19, 2021
24 °C

ನೋಯಿಸದಿರಿ ಮನಸುಗಳ ಹೊಸಕದಿರಿ ಕನಸುಗಳ..

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣುಮಗಳನ್ನು ನೋಡುವ ಮತ್ತು ಆಕೆಯೊಂದಿಗೆ ವ್ಯವಹರಿಸುವ ನಮ್ಮ ನಡವಳಿಕೆ ಇನ್ನಷ್ಟು ಮಾನವೀಯಗೊಳ್ಳಬೇಕಿದೆ. ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಸಮಾಜ ಇನ್ನಷ್ಟು ಅನುವು ಮಾಡಿಕೊಡಬೇಕಿದೆ.

ಆಕೆಗಿನ್ನೂ 30 ವರ್ಷ ವಯಸ್ಸು. ಮದುವೆ ಆಗಿ ಆರು ತಿಂಗಳು ಕಳೆದಿತ್ತು ಅಷ್ಟೆ. ಚಂದದ ಸಂಸಾರ. ಆದರೆ ದಾಂಪತ್ಯ ಬದುಕಿನ ಖುಷಿ ಅಲ್ಲಿಗೇ ಮೊಟಕಾಯಿತು. ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಗಂಡ ತೀರಿಕೊಂಡ.

‘ಗಂಡ ತೀರಿಕೊಂಡು ಒಂದು ತಿಂಗಳು ಕಳೆದಿತ್ತು ಅಷ್ಟೆ. ನನ್ನ ಹುಟ್ಟಿದ ದಿನ ಬಂದಿತ್ತು. ನನ್ನ ತಮ್ಮ, ಅಕ್ಕ ಸೇರಿಕೊಂಡು ನನಗೆ ಗೊತ್ತಿಲ್ಲದಂತೆ ಕೇಕ್‌ ತಂದಿದ್ದರು. ಸಂಭ್ರಮಾಚರಣೆಗಲ್ಲ, ಉತ್ಸಾಹ ತುಂಬಲು. ಇದನ್ನು ತಿಳಿದ ನನ್ನ ದೂರದ ಸಂಬಂಧಿಕರೊಬ್ಬರು ‘‘ಗಂಡ ಸತ್ತು ಇನ್ನೂ ಒಂದು ತಿಂಗಳು ಕಳೆದಿಲ್ಲ, ಎಲ್ಲ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಳು’’ ಎಂದು ವ್ಯಂಗ್ಯವಾಡಿದ್ದು ನನ್ನ ಕಿವಿಗೆ ಬಿತ್ತು’ ಎಂದ ಆಕೆಯ ಮಾತಿನಲ್ಲಿ ನೋವಿನ ಜೊತೆಗೆ ಈ ಸಮಾಜ ಹಾಕಿದ ಕಟ್ಟುಪಾಡುಗಳ ಬಗ್ಗೆ ವಿಷಾದದ ಛಾಯೆಯಿತ್ತು.

ಇನ್ನೊಬ್ಬಳು ಯುವತಿ ಸರ್ಕಾರಿ ಉದ್ಯೋಗಿ. ಬಹಳ ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡರು. ಬದುಕನ್ನು ಒಂಟಿಯಾಗಿ ಎದುರಿಸುವ ಛಲ ಹೊಂದಿದಾಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರು. ‘ಫೇಸ್‌ಬುಕ್‌ನಲ್ಲಿ, ವಾಟ್ಸ್‌ಆ್ಯಪ್‌ನಲ್ಲಿ ನಾನು ಮತ್ತು ನನ್ನ ಗಂಡ ಇರುವ ಫೋಟೊವನ್ನು ಡಿ.ಪಿ ಮಾಡಿಕೊಂಡಿದ್ದೆ. ನನ್ನ ಗಂಡನ ಕುಟುಂಬದವರು, ‘‘ಇಬ್ಬರೂ ಜೊತೆಯಲ್ಲಿರುವ ಫೋಟೊ ನೋಡಲು ಸಂಕಟ ಆಗುತ್ತದಮ್ಮ. ನಿನ್ನ ಜೀವನ ಹೀಗೆ ಆಯಿತಲ್ಲ ಎನ್ನಿಸುತ್ತದೆ. ಆ ಫೋಟೊ ತೆಗೆದುಬಿಡು’’ ಎಂದರು. ನಾನು ಆ ಫೋಟೊ ತೆಗೆದು ನನ್ನ ಯಾವುದೋ ಹಳೆಯ ಫೋಟೊವನ್ನು ಡಿ.ಪಿ ಮಾಡಿಕೊಂಡೆ. ನನ್ನ ಕಚೇರಿಯ ಸಹೋದ್ಯೋಗಿಗಳು ನೇರವಾಗಿ, ‘‘ಏನ್ರಿ ಮ್ಯಾಡಂ, ಗಂಡನನ್ನು ಇಷ್ಟು ಬೇಗ ಮರೆತು ಬಿಟ್ಟಿರಾ. ಡಿ.ಪಿ ಚೇಂಚ್‌ ಮಾಡಿದೀರಾ?’’ ಎಂದು ಹೇಳಿ ನಕ್ಕರು’ ಎಂದು ಬಹಳ ನೋವಿನಿಂದ ಹೇಳಿಕೊಂಡರು.

ಸಹಜತೆಗೆ ಇಂಬು ಕೊಡದವರು..
ಗಂಡ ಅಥವಾ ಹೆಂಡತಿ ತೀರಿಕೊಂಡಾಗ ಸಂಗಾತಿಗೆ ದುಃಖ, ನೋವು ಭರಿಸಲು ಸಾಧ್ಯವಿಲ್ಲದಂಥದ್ದು. ಹೆಂಡತಿ ಮೃತಪಟ್ಟ ನಂತರ ಸಹಜ ಚಟುವಟಿಕೆಗಳಲ್ಲಿ ತೊಡಗುವ ಪುರುಷನ ಬಗ್ಗೆ ಅಂತಹ ಕುತ್ಸಿತ ಮಾತುಗಳು ಬರುವುದು ಕಡಿಮೆ. ‘ಅಳುತ್ತ ಕೂತರೆ ಜೀವನ ಸಾಗಬೇಕಲ್ಲ..!’ ಎಂದು ಸಮರ್ಥಿಸಿಕೊಳ್ಳುವವರಿಗೇನೂ ಕಮ್ಮಿಯಿಲ್ಲ. ಆದರೆ ಮದುವೆ, ನಂತರದ ಬದುಕಿನಲ್ಲಿ ಖುಷಿಯಾಗಿರುವ ಯುವತಿ ಪತಿ ತೀರಿಕೊಂಡ ನಂತರ ಸಹಜ ಜೀವನಕ್ಕೆ ಹಿಂದಿರುಗಿದರೂ ನೂರೆಂಟು ಮಾತುಗಳನ್ನು ಕೇಳಬೇಕು. ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಸಾಮಾನ್ಯರಂತೆ ಬೆರೆತರೂ, ತಮಾಷೆ ಮಾಡಿಕೊಂಡು ನಕ್ಕರೂ ಇತರ ಮಹಿಳೆಯರೇ ಕೊಂಕು ಮಾತನಾಡುವುದು ಈಗಲೂ ಇದೆ.

ಈಗ ಕಾಲ ಬದಲಾಗಿದೆ; ಹಿಂದೆ ಇದ್ದಂತಹ ಕಠೋರ ಪರಿಸ್ಥಿತಿಯನ್ನು ವಿಧವೆಯರು ಈಗ ಎದುರಿಸಬೇಕಾಗಿಲ್ಲ; ಒಂಟಿ ಬದುಕು ಈಗ ಅನಿವಾರ್ಯವಲ್ಲ. ಸಮಾಜ ಸಹ ಅಷ್ಟರ ಮಟ್ಟಿಗೆ ಸುಧಾರಿಸಿದೆ. ಆದರೆ, ಇಂಥ ಆಧುನಿಕ ಕಾಲಘಟ್ಟದಲ್ಲೂ ಸುತ್ತಲಿನ ಸಮಾಜ ವಿಧವೆಯನ್ನು ನೋಡುವ ನೋಟವೇ ಬೇರೆ. ಗಂಡ ಇದ್ದ ಎನ್ನುವ ಕಾರಣಕ್ಕಷ್ಟೆ ಆಕೆಗೊಂದು ಬದುಕು ಮತ್ತು ವ್ಯಕ್ತಿತ್ವವೇ ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ‘ಗಂಡನ ಹೊರತಾಗಿಯೂ ಆಕೆಗೆ ಬದುಕಿದೆ’ ಎನ್ನುತ್ತಾರೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌.

‘ಮೊದಲಿಗೆ, ಗಂಡ ತೀರಿಕೊಂಡ ನೋವನ್ನು ನಿರಾಕರಿಸಬಾರದು; ಒಪ್ಪಿಕೊಳ್ಳಬೇಕು. ಹೆಂಡತಿ ಆಗಿರುವುದು ಸರಿ, ಇದಕ್ಕೂ ಮೀರಿದ ನಿಮ್ಮದೇ ವ್ಯಕ್ತಿತ್ವ ಇರುತ್ತದಲ್ಲ, ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ವ್ಯಕ್ತಿ ಆಗಿ ನಾನು ಏನು ಎಂದು ಪ್ರಶ್ನೆ ಹಾಕಿಕೊಂಡು ಉತ್ತರ ಕಂಡುಕೊಳ್ಳಬೇಕು’ ಎನ್ನುತ್ತಾರೆ ಅವರು.

ಸಾಮಾಜಿಕ ಜಾಲತಾಣದಲ್ಲೂ ಟ್ರೋಲಿಂಗ್‌
ಒಂದು ಕಡೆ ಕೆಲವು ಸಮುದಾಯಗಳಲ್ಲಿ ವಿಧವಾ ವಿವಾಹ ಸಾಮಾನ್ಯ ಎಂಬಂತಾಗಿದೆ; ಬೆಳೆದ ಮಕ್ಕಳಿದ್ದರೂ ವಿಧವೆಯನ್ನು ಮದುವೆ ಮಾಡಿಕೊಂಡು, ಆ ಮಕ್ಕಳಿಗೂ ಬದುಕು ನೀಡಿದವರಿದ್ದಾರೆ. ಅತ್ತೆ– ಮಾವನೇ ಮುಂದೆ ನಿಂತು ಮಗ ತೀರಿಕೊಂಡ ನೋವಿನಲ್ಲೂ ತಮ್ಮ ಸೊಸೆಗೆ ಮರು ಮದುವೆ ಮಾಡಿಕೊಟ್ಟ ಉದಾಹರಣೆಗಳು ಬೇಕಾದಷ್ಟಿವೆ. ಮಗಳಂತೆ ನೋಡಿಕೊಂಡವರೂ ಇದ್ದಾರೆ. ಹಳ್ಳಿಗಳಲ್ಲಿ ಕೂಡ ಗಂಡ ಸತ್ತ ನಂತರ ತಾಳಿ, ಕಾಲುಂಗುರ ಇಟ್ಟುಕೊಳ್ಳುವುದನ್ನೂ ಸಾಮಾನ್ಯವೆಂಬಂತೆ ಜನ ಒಪ್ಪಿಕೊಂಡಿದ್ದಾರೆ. ಆದರೆ ಇನ್ನೊಂದು ಕಡೆ ಒಳ್ಳೆಯ ಉಡುಪು ತೊಟ್ಟು, ಖುಷಿಯಾಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದರೂ ಟ್ರೋಲಿಂಗ್‌ ಮಾಡುವಂತಹ ವಿಕೃತ ಮನಸ್ಥಿತಿಯ ಜನರಿದ್ದಾರೆ. ಸಂಗಾತಿಯನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಸಣ್ಣಪುಟ್ಟ ಖುಷಿಗೂ ಸಮಾಜದಿಂದ ಬರುವ ಇಂಥ ಮಾತುಗಳಿಂದ ಖಿನ್ನತೆಗೆ ಒಳಗಾಗದೇ ಬದುಕು ಕಟ್ಟಿಕೊಳ್ಳುವುದು ಹೇಗೆ? 

‘ನಮ್ಮ ಹವ್ಯಾಸಗಳು, ನಮ್ಮ ಆಸಕ್ತಿ ಇವೆಲ್ಲದರ ಕಡೆ ಹೆಚ್ಚು ಗಮನ ನೀಡಬೇಕು. ಇಲ್ಲಿಯವರೆಗೆ ಸರಿ, ಇನ್ನು ಮುಂದೆ ನಾನು ಯಾವ ರೀತಿ ಜೀವನ ನಡೆಸಬೇಕು ಎಂಬುದರ ಕಡೆಗೆ ನಮ್ಮ ಎಲ್ಲ ಗಮನ ಕೇಂದ್ರೀಕರಿಸಿಕೊಂಡರೆ ಬೇರೆ ಯಾವ ವಿಚಾರ, ಯಾರ ಮಾತೂ ನಮಗೆ ಕೇಳಿಸುವುದಿಲ್ಲ’ ಎನ್ನುತ್ತಾರೆ ನಡಹಳ್ಳಿ ವಸಂತ್‌.

**
ಸಣ್ಣ ವಯಸ್ಸು, ಮತ್ತೊಂದು ಮದುವೆ ಮಾಡಿಬಿಡೋಣ ಎನ್ನುವ ಒತ್ತಡವನ್ನೂ ನಾವು ಹೇರಬಾರದು. ಅದು ಅವರ ಆಯ್ಕೆ. ಮುಂದೆ ಬದುಕಿನಲ್ಲಿ ಇನ್ನೊಬ್ಬ ಬೇಕು ಎನ್ನಿಸಿದಾಗ ಆ ವಿಷಯ ಚರ್ಚೆಗೆ ಅರ್ಹ. ಇಲ್ಲವಾದಲ್ಲಿ ಇನ್ನೊಂದು ಮದುವೆ ಆಗಲೇ ಬೇಕು ಎಂದು ಒತ್ತಾಯ ಮಾಡುವುದು ಸಲ್ಲ.
– ನಡಹಳ್ಳಿ ವಸಂತ್‌, ಮನೋಚಿಕಿತ್ಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು