ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮಹಿಳಾ ದಿನಕ್ಕಷ್ಟೇ ಮಹಿಳೆಯರ ಸಾಧನೆ ಪರಿಗಣಿಸುವುದು ಸರಿಯೆ?

Last Updated 11 ಮಾರ್ಚ್ 2021, 5:45 IST
ಅಕ್ಷರ ಗಾತ್ರ

ಮಹಿಳೆಯರೆನ್ನುವ ಒಂದೇ ಕಾರಣಕ್ಕೆ ಮಾರ್ಚ್‌ ಮಾಹೆಯಲ್ಲಿ ಮಹತ್ವ ಕೊಟ್ಟರೆ, ಮಹಿಳಾ ದಿನಾಚರಣೆಗೆ ಅರ್ಥವಿದೆಯೇ? ಒಳಗೊಳ್ಳುವಿಕೆ ಹೆಚ್ಚಲೆಂಬುದೇ ಈ ದಿನದ ಉದ್ದೇಶವಾಗಿರುವಾಗ ಮತ್ತೆ ಈ ತಿಂಗಳನ್ನು ಮಹಿಳೆಯರಿಗೆ ಮೀಸಲಾಗಿರಿಸುವುದು ಪ್ರತ್ಯೇಕಗೊಳಿಸಿದಂತೆ ಅಲ್ಲವೆ?

***

‘ನೀವು ನಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಬೇಕು ಅಂತ ನಮ್ಮ ಆಸೆ’

‘ಇಲ್ಲ, ಅವೊತ್ತು ಆಗೂದಿಲ್ಲ’

‘ಹಂಗಲ್ರಿ, ಮಾರ್ಚ್‌ ತಿಂಗಳದ ಅಲ್ಲ.. ಮತ್ತ ಯಾರಿಗರೆ ಯಾಕ ನೋಡಬೇಕು? ಮಹಿಳೆಯರೇ ಬೇಕು. ಅದಕ್ಕ ನೀವೆ ಬರ‍್ರಿ’

‘ಇಲ್ಲ, ಇದು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ, ನನಗ ಬರಾಕ ಆಗೂದಿಲ್ರಿ. ಮತ್ತ ಬರೇ ಹೆಣ್ಣುಮಗಳು ಅನ್ನುವ ಕಾರಣಕ್ಕ ಕರೀತಿದ್ರಂತೂ ಮೊದಲು ಬರೂದಿಲ್ಲ’

‘ಹಂಗಾದ್ರ... ನೀವೆ ಮತ್ತ ಯಾರರೆ ಹೆಣ್ಮಕ್ಕಳಿದ್ದರ ಹೇಳ್ರಿ.. ನಾವೆಲ್ಲಿ ಹುಡುಕೂನು?’

***

ಇದೆಂಥ ಮನೋಭಾವ? ಎಂಥ ಉಡಾಫೆತನ? ನಾವೆಲ್ಲಿ ಹುಡುಕೂನು.. ಯಾರಾದರೂ ಇದ್ರ ಹೇಳ್ರಿ.. ಹೆಣ್ಮಕ್ಕಳಾಗಿದ್ರ ಸಾಕು..!

ಬರಿಯ ಹೆಣ್ಣುಮಕ್ಕಳಾಗಿರುವ ಕಾರಣಕ್ಕೇನೆ ಯಾರೂನು ಒಂದು ಹುದ್ದೆ ಅಥವಾ ಒಂದು ಗುರಿಯನ್ನು ತಲುಪಿರುವುದಿಲ್ಲ. ಅದರ ಹಿಂದೆ ಅವರ ಸಂಘರ್ಷ, ಅವರ ಕುಟುಂಬದ ತ್ಯಾಗ ಎಲ್ಲವೂ ಇರುತ್ತವೆ. ಇವೆಲ್ಲವನ್ನೂ ಕಡೆಗಣಿಸಿ, ಕೇವಲ ಮಾರ್ಚ್‌ ತಿಂಗಳು ಬಂದಿದೆ. ಒಬ್ಬರು ಹೆಣ್ಮಕ್ಕಳು ವೇದಿಕೆಯನ್ನು ಅಲಂಕರಿಸಬೇಕು. ಅವರಿಗೊಂದು ಶಾಲು ಹೊದಿಸಬೇಕು. ಹಣ್ಣಿನ ಬುಟ್ಟಿ ಕೊಡಬೇಕು. ಜೊತೆಗೆ ಹಾಡಿಹೊಗಳಬೇಕು. ಮತ್ತೆ ಮುಂದಿನ ಹನ್ನೊಂದು ತಿಂಗಳು..?

ಶುಭಾಶಯಗಳನ್ನು ಕೋರುವಾಗಲೂ ಅಷ್ಟೆ. ತಾಯಿಯಾಗಿ, ಸಹೋದರಿಯಾಗಿ, ಹೆಂಡ್ತಿಯಾಗಿ, ಮಗಳಾಗಿ... ಹೀಗೆ ಕೇವಲ ಬಾಂಧವ್ಯಗಳು ಹಾಗೂ ಅವುಗಳ ಜವಾಬ್ದಾರಿಗಳನ್ನು ನೆನಪಿಸುತ್ತ, ನಾವು ನಾವಾಗಿರುವುದನ್ನು ನೇಪಥ್ಯಕ್ಕೆ ಸರಿಸುತ್ತ ಹೋಗುತ್ತಾರೆ. ಇದೊಂಥರ ನಾಜೂಕಿನ ಹೇರಿಕೆ.

ನಿಮ್ಮ ಮಗಳು ಬೈಕ್‌ ರೈಡರ್ ಆಗಿದ್ದರೆ, ಹೆಂಡ್ತಿ ಉಪನ್ಯಾಸಕಿ, ಬರಹಗಾರ್ತಿಯಾಗಿದ್ದರ, ಅಮ್ಮ ಉದ್ಯಮಿಯಾಗಿದ್ರ... ಇವು ಯಾವೂ ನೆನಪಾಗುವುದಿಲ್ಲ. ಅಮ್ಮನಾಗಿ ಮಮತೆ, ಹೆಂಡ್ತಿಯಾಗಿ ಪ್ರೀತಿ, ಪ್ರೇಯಸಿಯಾಗಿ ಪ್ರೇಮ, ಸಹೋದರಿಯಾಗಿ ಚಂದದ ಜಗಳ, ಹೀಗೆ ಮುದ್ಮುದ್ದಾಗಿ ಹೇಳುತ್ತಲೇ ನಮ್ಮ ಪಾತ್ರ ಮತ್ತು ಜವಾಬ್ದಾರಿಗಳನ್ನು ನೆನಪಿಸುವುದು ಅತಿ ಸಹಜವಾಗಿದೆ.

ಇವರು ಕೃತಜ್ಞರಾಗಿರುವುದು, ಇವರ ಅನುಕೂಲಕ್ಕೆ ನಾವಿರುವುದರಿಂದ ಮಾತ್ರ. ಮಹಿಳೆಯರ ಸಾಮರ್ಥ್ಯ, ಜಾಣ್ಮೆ, ಚಾಣಾಕ್ಷತನ, ಪರಿಸ್ಥಿತಿ ನಿಭಾಯಿಸುವ ಕಲೆ ಇವ್ಯಾವುದೂ ವಿಶೇಷ ಅನಿಸುವುದಿಲ್ಲ. ಇವುಗಳಿಂದಾಗಿ ಅಭಿನಂದಿಸಬೇಕು ಅಂತಲೂ ಅನಿಸುವುದಿಲ್ಲ.

ಹಾಗಾದರೆ ನಾವಿಂಥ ದಿನಾಚರಣೆಗಳಿಂದ ಸಾಧಿಸಿದ್ದೇನು? ಮೇಜು ಕುಟ್ಟಿ ಪ್ರತಿಪಾದಿಸುವ ಹಕ್ಕು, ಅಧಿಕಾರಗಳೆಂಬ ಸವಕಲು ಪದಗಳೇ? ಇದು ಹೀಗೆಂದು ಹೇಳಿದರೆ ಹೀಗಳೆದಂತೆಯೇ ಅನಿಸಬಹುದು. ಒಂದು ಕಾಲಕ್ಕೆ ಅದಕ್ಕೂ ಅವಕಾಶವಿರಲಿಲ್ಲ. ಈಗ ಇಂಥವೆಲ್ಲ ಸಂವಿಧಾನಾತ್ಮಕವಾಗಿಯೇ ದೊರೆತಿವೆಯಲ್ಲ, ಆದರೂ ಕೃತಘ್ನರು. ಕೊಟ್ಟಷ್ಟೂ ಅಲ್ಪತೃಪ್ತರು ಮಹಿಳೆಯರು ಎಂಬಂಥ ಜೋಕುಗಳು ಬೇರೆ.

ಕಾಲ ಬದಲಾಗಿದೆ. ಹಕ್ಕು, ಅಧಿಕಾರಗಳನ್ನು ಹೋರಾಡಿಯಾದರೂ ಪಡೆದಿದ್ದಾಗಿದೆ. ಬದಲಾವಣೆ ಆಗಬೇಕಿರುವುದು ಮನೋಭಾವದಲ್ಲಿ. ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸುವ ಮನೋಭಾವದಲ್ಲಿ. ಈಗಲೂ ಒಂದೋ ದೇವತೆಯಂತೆ ಪೀಠಕ್ಕೆ ಏರಿಸಿ, ಕೂರಿಸುವುದು. ಇಲ್ಲವೇ ಗುಲಾಮಳಂತೆ ದುಡಿಯುವ, ಜೀವವಾಗಿಸುವುದು. ಇವೆರಡರ ನಡುವೆ ಮನುಷ್ಯರಂತೆ ಕಾಣುವುದು ಯಾವಾಗ?

ಕಾಲ ಬದಲಾಗಿದೆ. ನಮ್ಮನ್ನು ನೋಡುವ, ಶ್ಲಾಘಿಸುವ ಕ್ರಮವೂ ಬದಲಾಗಬೇಕು. ಸಾಧಕಿಯರನ್ನು ಹುಡುಕುವುದು ಆಕ್ಷೇಪಾರ್ಹವಲ್ಲ. ಆದರೆ ಮಾರ್ಚ್‌ ತಿಂಗಳಾಗಿರುವುದರಿಂದ, ಹುಡುಕಲೇಬೇಕು. ಕೊಡಲೇಬೇಕು. ನೀಡಲೇಬೇಕು. ಬೇರೆ ದಾರಿ ಇಲ್ಲ ಎನ್ನುವಂತೆ ಹುಡುಕುವುದಿದೆಯಲ್ಲ, ಅದೊಂದು ಥರ ಅವಮಾನವೇ ಹೊರತು ಸ್ವೀಕಾರ್ಹವಾದ ಶ್ಲಾಘನೆ ಅಲ್ಲ.

ಮಹಿಳಾ ದಿನದ ಆಚರಣೆಯ ಕುರಿತು, ಕೃತಜ್ಞತೆ ಸಲ್ಲಿಸುವ ಬಗ್ಗೆ ಗಂಭೀರವಾಗಿ ಯೋಚಿಸುವುದಾದರೆ, ವರ್ಷವಿಡೀ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವಳ ಪಾತ್ರಗಳನ್ನು ಹೊರತುಪಡಿಸಿಯೂ ಅವಳದ್ದೇ ಆಗಿರುವ ವ್ಯಕ್ತಿತ್ವವನ್ನು ಮೆಚ್ಚಬೇಕು. ಮೆಚ್ಚುವುದಷ್ಟೇ ಅಲ್ಲ, ಆದರಿಸಬೇಕು. ಆದರದಿಂದ ಕಂಡರೆ ಮಾತ್ರ, ಸಮನ್ವಯಗೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆ. ಇಲ್ಲದಿದ್ದಲ್ಲಿ ಇದೊಂದು ಅನಗತ್ಯದ ಮೀಸಲು ಆಗಿಯೇ ಉಳಿಯುತ್ತದೆ. ಇಂಥ ಮೀಸಲಿನ ಅಗತ್ಯ ಮಹಿಳೆಯರಿಗೆ ಖಂಡಿತವಾಗಿಯೂ ಇಲ್ಲ.

ಒಂದಿನ ಅಡುಗೆಮನೆಗೆ ಬಿಡುವು ಕೊಟ್ಟು, ಹೊರ ಕರೆತಂದು, ಒಂದಷ್ಟು ಸೆಲ್ಫಿ ತೆಗೆದುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಿಸಿದ್ದು ನೋಡಿದರೆ ಅನುಕಂಪ ಹುಟ್ಟುತ್ತದೆ. ಈ ಹೊರಗಡೆಯ ಆಚರಣೆಯೊಂದಿಗೆ ಪ್ರತಿದಿನವೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತಾದರೆ ಅದು ನಿಜವಾಗಿಯೂ ಕೆಲಸ ಹಂಚಿಕೊಂಡಂತೆ. ವೇತನವಿಲ್ಲದ, ಕೃತಜ್ಞತೆಯಿಲ್ಲದ ಕೆಲವು ಸರಳ ಕೆಲಸಗಳಿರುತ್ತವಲ್ಲ... ತಾವೇ ನೀರು ಕುಡಿಯುವುದು, ತಮ್ಮ ತಟ್ಟೆ ತಾವೇ ಎತ್ತಿಡುವುದು, ಸಂಜೆ ಇಬ್ಬರೂ ದುಡಿದು ಬಂದಾಗ, ಅಂತಃಕರುಣೆಯಿಂದ ವಿಚಾರಿಸುವುದು, ಕೆಲಸ ಹಂಚಿಕೊಳ್ಳುವುದು.. ಇವೆಲ್ಲವೂ ಪಾಲ್ಗೊಳ್ಳುವಿಕೆಯನ್ನು ಬಯಸುತ್ತವೆ.

ಮಕ್ಕಳಿಗೆ ಹುಷಾರಿಲ್ಲವೆಂದರೆ ಏನೇ ಆಗಲಿ, ಹೆಂಡ್ತಿಯೇ ಆಸ್ಪತ್ರೆಗೆ ಕರೆದೊಯ್ಯಬೇಕು, ಅವಳೇ ರಜೆ ಹಾಕಬೇಕು ಅನ್ನುವ ಮನೋಭಾವ ಇದೆಯಲ್ಲ, ಉದ್ಯೋಗಂ ಪುರುಷ ಲಕ್ಷಣಂ ಅನ್ನುವ ಹಳತಿಗೆ ಜೋತುಬೀಳುವ ಮನೋಭಾವವಾಗಿದೆ. ಶ್ರಮ ಸಂಸ್ಕೃತಿಯಲ್ಲಿ ವೃತ್ತಿ ಗೌರವ ಮೂಡಿದರೆ, ಕೆಲಸಗಳನ್ನು ಕೆಲಸಗಳೆಂದಷ್ಟೆ ಭಾವಿಸಿದರೆ ನಿಜವಾದ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಆರಂಭವಾಗುತ್ತದೆ.

ಕೆಲಸಗಳನ್ನೂ ಹೆಂಗೆಲಸ, ಗಂಡು ಕೆಲಸ ಎಂದು ಗೆರೆ ಕೊರೆದಂತೆ ಇಟ್ಟಿರುವುದು ಮತ್ತು ಅದನ್ನು ಲಕ್ಷ್ಮಣ ರೇಖೆಯಂತೆ ಯಾರೂ ದಾಟದೇ ಇರುವುದು, ಈ ಹಿಂದುಳಿಯುವಿಕೆಗೆ ಕಾರಣವಾಗಿದೆ. ದುಡಿಯುವ ಮಹಿಳೆಯರು ಎರಡನೆಯ ಮತ್ತು ಮೂರನೆಯ ತಲೆಮಾರಿನವರಾದರೆ, ಬದಲಾವಣೆಯನ್ನು ಒಂಚೂರು ಕಾಣಬಹುದಾಗಿದೆ. ಆದರೆ ಪಾಳೇಗಾರಿಕೆ ಮನೋಭಾವ ಇರುವ ಕೆಲವು ಪ್ರದೇಶಗಳಲ್ಲಿ ಈಗಲೂ ಮಹಿಳೆಯರ ಕೆಲಸ, ಸ್ಥಾನಮಾನಗಳನ್ನು ಮಹಿಳೆಯರೇ ನಿರ್ದಾಕ್ಷಿಣ್ಯವಾಗಿ ನಿರ್ಧರಿಸುತ್ತಾರೆ.

ಆದರ್ಶ ನಾರಿ ಅಂದ್ರೆ; ಸೂಪರ್‌ ಮೊಮ್‌ ಅಂತೆಲ್ಲ ‘ಸೂಪರ್‌’ ಎಂಬುದನ್ನು ಅಂಟಿಸಿ, ಎಲ್ಲವನ್ನೂ ನಿಭಾಯಿಸು ಎಂಬಂಥ ಸೂಚನೆಗಳನ್ನು ಕೊಡುವ ಮನೋಭಾವ ಬದಲಾಗಬೇಕಿದೆ.

ನಾವು ನಿಮ್ಮಂತೆಯೇ.. ‘ತೇರೆ ಜೈಸೆ ಮೈ ಹೂಂ... ಮೇರೆ ಜೈಸೆ ತೂ...’ ಅನ್ನುವ ಹಾಡಿದೆ. ’ನನ್ನಂತೆಯೇ ನೀನಿರುವೆ.. ನಿನ್ನಂತೆಯೇ ನಾನು’ ಎಂಬ ಅರಿವು ಮತ್ತು ಅಂತಃಕರುಣೆಗಳು ಹುಟ್ಟಿದರೆ, ಹೀಗೆ ಉಡಾಫೆತನದಿಂದ ಕರೆಯುವ, ಕಾಟಾಚಾರಕ್ಕೆ ಸನ್ಮಾನಿಸುವ ಪದ್ಧತಿ ಹಿಂಜರಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT