ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವಂತೆ ಕಿರಣ್

Last Updated 10 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಮಹಿಳೆಯೊಬ್ಬಳು ಬಿಯರ್‌ ತಯಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಲು, ಬಿಯರ್ ತಯಾರಿಕಾ ಘಟಕ ಆರಂಭಿಸಿ ಅದನ್ನು ಯಶಸ್ವಿ ಉದ್ದಿಮೆಯಾಗಿ ಬೆಳೆಸಲು ಅಸಾಧಾರಣ ಛಲ ಬೇಕು, ಬಹಳಷ್ಟು ಕಷ್ಟಗಳನ್ನು ಮೆಟ್ಟಿನಿಲ್ಲುವ ಗುಣ ಬೇಕು. ಬಯೋಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಿರಣ್ ಮಜುಂದಾರ್‌ ಶಾ ಅವರು ಮಾಡಿದ್ದು ಈ ಅಸಾಧಾರಣ ಕೆಲಸವನ್ನು.

ಕಿರಣ್ ಅವರು ಜನಿಸಿದ್ದು 1953ರಲ್ಲಿ, ಬೆಂಗಳೂರಿನಲ್ಲಿ. ಪ್ರಾಣಿವಿಜ್ಞಾನದಲ್ಲಿ ಪದವಿ ಪಡೆದ ಅವರು ನಂತರ, ಬಿಯರ್ ತಯಾರಿಕಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಸ್ಟ್ರೇಲಿಯಾ ಕಡೆ ಮುಖ ಮಾಡಿದರು. ಬಿಯರ್ ತಯಾರಿಕಾ ಘಟಕದ ಮೇಲ್ವಿಚಾರಣೆಯ ಜವಾಬ್ದಾರಿ ನಿರ್ವಹಿಸಿದ ನಂತರ, ಬಯೋಕಾನ್‌ ಸಂಸ್ಥೆ ಹುಟ್ಟುಹಾಕಿದರು. 1978ರಲ್ಲಿ ಈ ಸಂಸ್ಥೆಯನ್ನು ಅವರು ₹ 10 ಸಾವಿರ ಮೂಲ ಬಂಡವಾಳ ಬಳಸಿ ಆರಂಭಿಸಿದ್ದು. ಅದು ಕೂಡ ಬೆಂಗಳೂರಿನಲ್ಲಿನ ಒಂದು ಬಾಡಿಗೆ ಮನೆಯಲ್ಲಿ.

ಆ ಸಂದರ್ಭದಲ್ಲಿ ದೇಶದ ವಾಣಿಜ್ಯೋದ್ಯಮ ಸ್ಥಿತಿ ಮಹಿಳೆಯರ ಪಾಲಿಗೆ ಅಷ್ಟೇನೂ ಪೂರಕವಾಗಿ ಇರಲಿಲ್ಲ. ಅದರಲ್ಲೂ, ಜೈವಿಕ ತಂತ್ರಜ್ಞಾನ (ಬಿ.ಟಿ) ಕ್ಷೇತ್ರವು ಶೈಶವಾವಸ್ಥೆಯಲ್ಲಿ ಇತ್ತು. ತೀರಾ ಅಪರೂಪದ ವಹಿವಾಟಿಗೆ ಕಾಲಿರಿಸುವ ಇರಾದೆ ಇದ್ದ ಕಿರಣ್ ಅವರಿಗೆ ಯಾವ ಬ್ಯಾಂಕುಗಳೂ ಸಾಲ ಕೊಡಲು ಮುಂದೆ ಬರುತ್ತಿರಲಿಲ್ಲ. ಅಷ್ಟೇ ಅಲ್ಲ, ಅವರ ಜೊತೆ ಕೆಲಸ ಮಾಡಲು ಕೂಡ ವೃತ್ತಿಪರರು ಮುಂದೆ ಬರುತ್ತಿರಲಿಲ್ಲ!

ಉನ್ನತ ತಂತ್ರಜ್ಞಾನದ ಬಿ.ಟಿ. ಕ್ಷೇತ್ರವು ಒಂಚೂರೂ ತಡೆ ಇಲ್ಲದ ವಿದ್ಯುತ್ ಸಂಪರ್ಕವನ್ನು ಬೇಡುತ್ತಿತ್ತು. ಉತ್ತಮ ಗುಣಮಟ್ಟದ ನೀರಿನ ಪೂರೈಕೆ ಅದಕ್ಕೆ ಅಗತ್ಯವಿತ್ತು. ವಿದೇಶಗಳಿಂದ ತರಿಸಿಕೊಂಡ ಸಂಶೋಧನಾ ಉಪಕರಣಗಳು ಬೇಕಿದ್ದವು. ಈ ಎಲ್ಲ ಅಡೆತಡೆಗಳನ್ನು ದಾಟಿ ಮುನ್ನಡೆದ ಕಿರಣ್, ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕಂಪನಿಯನ್ನು ಕಟ್ಟಿದರು. ಈಗ ಬಯೋಕಾನ್ ಕಂಪನಿಯು, ಉನ್ನತ ತಂತ್ರಜ್ಞಾನ ಮತ್ತು ಸಂಶೋಧನೆಯ ನೆರವಿನೊಂದಿಗೆ ಕಡಿಮೆ ವೆಚ್ಚದ ಆರೋಗ್ಯ ಸೇವಾ ಉತ್ಪನ್ನಗಳನ್ನು ಒದಗಿಸುವ ಕಂಪನಿಯಾಗಿ ಬೆಳೆದಿದ್ದು, ಇದು ವಿಶ್ವದ ಅತ್ಯುತ್ತಮ 20 ಬಿ.ಟಿ. ಕಂಪನಿಗಳಲ್ಲಿ ಒಂದಾಗಿದೆ. ಕಿರಣ್ ಅವರಿಗೆ ಪದ್ಮಭೂಷಣ, ನಿಕ್ಕೈ ಏಷ್ಯಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT