ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗ ಸ್ಥಳದಲ್ಲಿ ಮೂರು ದಿನಗಳ ನೋವಿಗೆ ವಿರಾಮದ ಮುಲಾಮು

ಉದ್ಯೋಗ ಸ್ಥಳದಲ್ಲಿ
Published : 4 ಜೂನ್ 2022, 0:30 IST
ಫಾಲೋ ಮಾಡಿ
Comments

‘ಅಮ್ಮ, ನಿನ್ನೆ ಕಚೇರಿಯಲ್ಲಿನನ್ನ ಸಹೋದ್ಯೋಗಿ ಸೀಮಾಗೆ ಹೊಟ್ಟೆನೋವು ಶುರುವಾಯ್ತು. ಅವಳಿಗೆ ಪಿರಿಯಡ್ಸ್ ಸಮಯ. ತುಂಬಾ ಒದ್ದಾಡುತ್ತಿದ್ದಳು. ಕೆಲಸ ಮಾಡೋಕೂ ಆಗದೆ ರಜೆ ಹಾಕಿ ಮನೆಗೆ ಹೋದಳು‘ – ಕಚೇರಿಯ ಹಿಂದಿನ ದಿನದ ವಾರ್ತೆ ಹೇಳಿದಳುಸೊಸೆ ಅನುಪಮಾ.

ಆಕೆಯ ಮಾತು ಕೇಳುತ್ತಲೇ,‘ಯಾಕೆ, ನಿಮ್ಮ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ ಇಲ್ವಾ?‘ ಎಂದೆ.

‘ಇಲ್ಲಮ್ಮ. ಪ್ರತಿ ತಿಂಗಳೂ ಒಬ್ಬರಲ್ಲ ಒಬ್ಬರು ಇಂಥದ್ದೇ ಪರಿಸ್ಥಿತಿ ಅನುಭವಿಸುತ್ತಿರುತ್ತಾರೆ‘ ಎಂದು ಪ್ರತಿಕ್ರಿಯಿಸಿದಳು ಅನು. ಈಕೆಯ ಮಾತಿಗೆ ಮತ್ತೊಬ್ಬ ಸೊಸೆ ದಿವ್ಯಾ ದನಿಗೂಡಿಸುತ್ತಾ, ‘ನಮ್ಮ ಕಚೇರಿಯಲ್ಲೂ ಇದೇ ಕಥೆ‘ ಎಂದಳು.

‘ನಿಮ್ಮ ಕಚೇರಿಗಳಲ್ಲಿರುವ ಎಲ್ಲಾ ಮಹಿಳಾ ಉದ್ಯೋಗಿಗಳು ಸೇರಿ ವಿಶ್ರಾಂತಿ ಕೊಠಡಿ ಬೇಕು ಅಂತ ಮುಖ್ಯಸ್ಥರನ್ನು ಕೇಳಿ. ಇಲ್ಲದಿದ್ದರೆ, ಆ ಸಮಯದಲ್ಲಿ ತೀವ್ರನೋವು ಇರುವವರಿಗೆ ರಜೆ ಕೊಡಿ ಅಂತ ಮನವಿ ಮಾಡಿ‘ ಎಂದು ಸಲಹೆ ಕೊಟ್ಟೆ.

***

ಹೌದು, ಮುಟ್ಟಿನ ಅವಧಿಯಲ್ಲಿ ಇಂಥ ನೋವು, ಮನಸ್ಸಿಗೆ ಕಿರಿಕಿರಿ ಎನ್ನಿಸುವುದು ಸಾಮಾನ್ಯ. ಯಾರು ಮಾತನಾಡಿಸಿದರೂ ಸಿಡಿ ಸಿಡಿ ಎನ್ನವ ಹಾಗಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತವೆ. ಕೆಲಸವೂ ಸಾಗುವುದಿಲ್ಲ. ‘ಕೋವಿಡ್‌’ ನಂತರದಲ್ಲಂತೂ ಈ ಸಮಸ್ಯೆಗಳು ತುಸು ಹೆಚ್ಚಾಗಿವೆ. ವರ್ಕ್‌ ಫ್ರಂ ಹೋಮ್ ಮುಗಿಸಿ ಕಚೇರಿಗೆ ತೆರಳಿರುವ ಕೆಲವರಿಗೆ ಸಮಸ್ಯೆಯ ತೀವ್ರತೆ ಅನುಭವವಾಗುತ್ತಿದೆ. ಇದನ್ನು ಅರಿತೇ ಕೆಲವು ಕೆಲವು ದೇಶಗಳು, ಉದ್ಯೋಗಿಗಳಿಗೆ ಮುಟ್ಟಿನ ಅವಧಿಯಲ್ಲಿ ವಿರಾಮ ನೀಡುವಂತಹ ವ್ಯವಸ್ಥೆಯೊಂದನ್ನು ಜಾರಿಗೊಳಿಸಿವೆ.

ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮುಟ್ಟಿನ ಸಮಸ್ಯೆಗಳು ಮಾತ್ರ ಬದಲಾವಣೆ ಆಗಲಾರವು. ಪ್ರತಿ ತಿಂಗಳೂ ಮಹಿಳೆಯರು ಈ ಕಿರಿಕಿರಿ, ನೋವು ಅನುಭವಿಸಲೇಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯದಾಗಿರುತ್ತವೆ. ಪ್ರತಿ ತಿಂಗಳೂ ಹೊಟ್ಟೆನೋವು, ಸೊಂಟನೋವು, ಸ್ತನಗಳಲ್ಲಿ ನೋವು, ಕಾಲು, ತೊಡೆಗಳಲ್ಲಿ ಸೆಳೆತ, ಅಧಿಕ ರಕ್ತಸ್ರಾವ, ಉರಿಮೂತ್ರ, ಮಲಬದ್ಧತೆ ಮತ್ತು ಮಾನಸಿಕವಾಗಿ ಆತಂಕ, ಬೇಸರ, ಕೋಪ ಮತ್ತು ಖಿನ್ನತೆ ಸಾಮಾನ್ಯ. ಬಹಳಷ್ಟು ಮಹಿಳೆಯರು ಈ ನೋವನ್ನು ಸಹಿಸಿ ಕೊಳ್ಳುತ್ತಾರೆ, ಆದರೆ, ಅದನ್ನು ವ್ಯಕ್ತಪಡಿಸುವುದಿಲ್ಲ.

ಋತುಸ್ರಾವದ ಸಮಯದಲ್ಲಿ ಮುಟ್ಟಿನ ಹೊಟ್ಟೆ ನೋವು ಅನುಭವಿಸದಿರುವ ಮಹಿಳೆಯರೇ ಅಪರೂಪ. ಎಲ್ಲರಲ್ಲೂ ಸ್ವಾಭಾವಿಕವಾಗಿ ಮುಟ್ಟಿನ ಆರಂಭಕ್ಕೆ ಮುಂಚೆ ಮತ್ತು ಆರಂಭದ ದಿನ ಈ ನೋವು ಅಧಿಕ. ಉದರದ ಮಾಂಸ ಖಂಡಗಳಲ್ಲಿ ಜರುಗುವ ಆಕುಂಚನ, ಸಂಕೋಚನಗಳಿಂದಾಗಿ ಸಲೀಸಾಗಿ ರಕ್ತಸ್ರಾವವಾಗಲು ಈ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಆರಂಭದಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲವರಲ್ಲಿ ‘ಕಾಪರ್ ಟಿ’ ಧಾರಣೆ ನಂತರ ಕಾಣಿಸಿಕೊಳ್ಳಬಹುದು. ಗರ್ಭಕೋಶದ ಸೋಂಕು ಇದ್ದಲ್ಲಿ ಮತ್ತು ಹುಟ್ಟಿನಿಂದಲೇ ಕೆಲವರಲ್ಲಿ ಹಿಂದಕ್ಕೆ ಬಾಗಿದ ಗರ್ಭಕೋಶ ಇದ್ದಲ್ಲಿ ನೋವು ಸದಾ ಇದ್ದೇ ಇರುತ್ತದೆ.

ವಿದೇಶಗಳಲ್ಲಿ ‘ಮುಟ್ಟಿನ ರಜೆ’

ಇಂಥ ಹಲವು ಕಾರಣಗಳಿಂದಾಗಿಯೇ ಮಹಿಳೆಯರಿಗೆ ಪಿರಿಯಡ್ಸ್‌ ಸಮಯದಲ್ಲಿ ವಿಶ್ರಾಂತಿ ಖಂಡಿತಾ ಅಗತ್ಯ. ಈ ಹಿನ್ನೆಲೆಯಲ್ಲಿ ಉದ್ಯೋಗದ ಸ್ಥಳಗಳಲ್ಲಿ ಮುಟ್ಟಿನ ರಜೆ ನೀಡುವ ಕುರಿತು ಬಹಳ ಕಾಲದಿಂದಲೂ ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಸೇರಿದಂತೆ ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳು ಈಗಾಗಲೇ ‘ಮುಟ್ಟಿನ ರಜೆ’ ಸೌಲಭ್ಯ ಅನುಷ್ಠಾನಗೊಳಿಸಿವೆ. ಇಂಡೋನೇಷ್ಯಾ ಸರ್ಕಾರ ಉದ್ಯೋಗಿ ಗಳಿಗೆ ತಿಂಗಳಿಗೆ ಎರಡು ದಿನಗಳ ಮುಟ್ಟಿನ ರಜೆಯ ಹಕ್ಕನ್ನು ನೀಡಿದೆ. ಆದರೆ ಇವು ಹೆಚ್ಚುವರಿ ರಜೆಗಳಲ್ಲ. ಜಪಾನ್‌ನಲ್ಲಿ ಈ ಕಾನೂನು 70 ವರ್ಷಗಳಿಂದ ಜಾರಿಯಲ್ಲಿದೆ. ತೈವಾನ್‌ನಲ್ಲಿ ಮಹಿಳೆಯರಿಗೆ ವರ್ಷಕ್ಕೆ ಮೂರು ದಿನಗಳ ‘ಮುಟ್ಟಿನ ರಜೆ’ ನೀಡುತ್ತದೆ. ಇದನ್ನು 30 ದಿನಗಳ ‘ಸಾಮಾನ್ಯ ಅನಾರೋಗ್ಯ ರಜೆ’ಯ ಲೆಕ್ಕಕ್ಕೆ ಸೇರಿಸುವುದಿಲ್ಲ.

ಆಫ್ರಿಕಾದ ಜಾಂಬಿಯಾದಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ ಒಂದು ದಿನ ರಜೆ ತೆಗೆದುಕೊಳ್ಳುವುದನ್ನು ಕಾನೂನುಬದ್ಧ ಗೊಳಿಸಲಾಗಿದೆ. ಈ ರಜೆ ಕೊಡಲು ನಿರಾಕರಿಸಿದರೆ ಆ ಉದ್ಯೋಗಿಯು ತನ್ನ ಉದ್ಯೋಗದಾತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಬಹುದು.

ಸ್ಪೇನ್‌ನಲ್ಲಿ ಮಸೂದೆ ಪ್ರಸ್ತಾವನೆ

ಕೋವಿಡ್‌ ಬಿಕ್ಕಟ್ಟಿನ ನಂತರ ಸ್ಪೇನ್ ದೇಶದಲ್ಲಿ ‘ಮುಟ್ಟಿನ ರಜೆ’ ತೆಗೆದುಕೊಳ್ಳುವ ಅವಕಾಶ ನೀಡುವಂತಹ ಹೊಸ ಕಾನೂನು ರಚಿಸಲು ಸಂಸತ್ತಿನಲ್ಲಿ ಮಸೂದೆಯೊಂದು ಮಂಡನೆಯಾಗಿದೆ. ಅದಕ್ಕೆ ಅನುಮೋದನೆ ದೊರೆತರೆ, ಮಹಿಳೆಯರಿಗಾಗಿ ಇಂಥ ಕಾನೂನು ರೂಪಿಸಿದ ಮೊದಲ ಪಾಶ್ಚಿಮಾತ್ಯ ರಾಷ್ಟ್ರವಾಗಲಿದೆ. ‘ಸಂತಾನೋತ್ಪತ್ತಿ ಆರೋಗ್ಯ ಮತ್ತು ಗರ್ಭಪಾತ ಹಕ್ಕುಗಳ’ ಕುರಿತಾದ ವಿಸ್ತೃತ ಕರಡು ಮಸೂದೆಯ ಭಾಗವಾಗಿ ಸ್ಪೇನ್‌ ಸರ್ಕಾರ ಈ ಕ್ರಮವನ್ನು ಅನುಮೋದಿಸುವ ನಿರೀಕ್ಷೆಯಿದೆ. ಈ ಪ್ರಸ್ತಾವಿತ ಕಾನೂನು ಪ್ರಕಾರ, ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ತೀವ್ರ ನೋವಿನಿಂದ ಬಳಲುತ್ತಿರುವ ಮಹಿಳೆ ಯರು ಕನಿಷ್ಠ ಮೂರು ದಿನ ಅನಾರೋಗ್ಯದ ರಜೆ (ಸಿಕ್ ಲೀವ್‌) ತೆಗೆದುಕೊಳ್ಳಬಹುದು. ಗಳಿಕೆ ಅಥವಾ ಗಳಿಕೆಯಿಲ್ಲದ (ಪೇಡ್/ಅನ್ ಪೇಡ್) ರಜೆಯನ್ನು ತೆಗೆದುಕೊಳ್ಳುವ ಆಯ್ಕೆಯೂ ಇದೆ.

ಕಾನೂನಿನ ಪ್ರಕಾರ ಕಂಪನಿಗಳಲ್ಲಿ ಮಹಿಳೆಯರಿಗೆ ರಜೆ ತೆಗೆದುಕೊಳ್ಳಲು ಅವಕಾಶವಿದ್ದರೂ, ಮುಟ್ಟಿನ ಸಮಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವೇತನ ಸಹಿತ ರಜೆ ಅಥವಾ ಹೆಚ್ಚುವರಿ ವೇತನವನ್ನು ನೀಡುವುದನ್ನು ಕಡ್ಡಾಯಗೊಳಿಸುವುದಿಲ್ಲ. ಆದರೆ, ದಕ್ಷಿಣ ಕೊರಿಯಾದಲ್ಲಿ, ಉದ್ಯೋಗಿಗಳು ಮುಟ್ಟಿನ ರಜೆ ತೆಗೆದುಕೊಳ್ಳದಿದ್ದರೆ ಅವರಿಗೆ ಹೆಚ್ಚುವರಿ ವೇತನವನ್ನು ಖಾತ್ರಿಪಡಿಸಲಾಗುತ್ತದೆ. ಆದರೂ ಇದರ ಪ್ರಯೋಜನವನ್ನು ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ 2017ರಲ್ಲಿ ಜಪಾನ್‌ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೇವಲ ಶೇ 0.9ರಷ್ಟು ಮಹಿಳಾ ಉದ್ಯೋಗಿಗಳು ಈ ರಜೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲಿ ಕೇವಲ ಶೇ 19.7ರಷ್ಟು ಮಹಿಳೆಯರು ಇಂತಹ ಕಾನೂನಿನ ಉಪಯೋಗ ಪಡೆದಿದ್ದಾರೆ.

ಭಾರತದಲ್ಲಿ ಹೇಗಿದೆ?

ಮುಟ್ಟಿನ ಸಮಯದಲ್ಲಿ ಸರ್ಕಾರದಿಂದ ಅನುಮೋದಿತ ರಜೆ ಇರುವ ನಮ್ಮ ದೇಶದ ಏಕೈಕ ರಾಜ್ಯ ಬಿಹಾರ. 1992ರ ಜನವರಿಯಲ್ಲಿ ಬಿಹಾರ ಸರ್ಕಾರ ಈ ಕುರಿತ ಆದೇಶವೊಂದನ್ನು ಹೊರಡಿಸಿ ‘ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ತಮ್ಮ ಸಾಮಾನ್ಯ ರಜೆಯ ಹೊರತಾಗಿ ಪ್ರತಿ ತಿಂಗಳು ಎರಡು ಸತತ ರಜೆ ಪಡೆಯುವ ಹಕ್ಕಿದೆ’ ಎಂದು ಘೋಷಿಸಿತು. ಇದರ ಜೊತೆಗೆಕೆಲವು ಖಾಸಗಿ ಕಂಪನಿಗಳು ತಮ್ಮ ತಮ್ಮ ಇತಿಮಿತಿಯಲ್ಲಿ ‘ಮಹಿಳಾ ಉದ್ಯೋಗಿ ಸ್ನೇಹಿ’ ನೀತಿಗಳನ್ನು ಅಳವಡಿಸಿಕೊಂಡಿವೆ.

ಇದಲ್ಲದೇ 2017ರಲ್ಲಿ ಅರುಣಾಚಲ ಪ್ರದೇಶದ ಸಂಸದ ನಿನೊಂಗ್ ಎರಿಂಗ್ ಅವರು ಸಂಸತ್ತಿನಲ್ಲಿ ‘ದಿ ಮೆನ್ಸ್ಟ್ರುಯೇಷನ್ ಬೆನಿಫಿಟ್ಸ್ ಬಿಲ್ 2017’ ಎಂಬ ಖಾಸಗಿ ಮಸೂದೆ ಮಂಡಿಸಿದ್ದಾರೆ. ಇದರ ಅಡಿಯಲ್ಲಿ ಕೇಂದ್ರ/ರಾಜ್ಯ ಸರ್ಕಾರಗಳಲ್ಲಿ ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ಎರಡು ದಿನಗಳ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ. ಇದು ವಾರ್ಷಿಕವಾಗಿ ಒಟ್ಟಾರೆ 24 ದಿನಗಳ ರಜೆಯಾಗುತ್ತದೆ. ಈ ಬಗ್ಗೆ ಚರ್ಚೆಯಾಗಿ ಇದೊಂದು ಕಾನೂನಾಗಬೇಕಾಗಿದೆ.

ಒಟ್ಟಾರೆ ಮುಟ್ಟಿನ ಸಮಯದಲ್ಲಿ ಪ್ರತಿ ಉದ್ಯೋಗದ ಸ್ಥಳದಲ್ಲಿ ಮಹಿಳೆಯರಿಗೆ ರಜೆ ನೀಡುವ ಸೌಲಭ್ಯ ಅಥವಾ ವಿಶ್ರಾಂತಿ ತೆಗೆದುಕೊಳ್ಳಲು ಒಂದು ಕೊಠಡಿ ಇರಲೇಬೇಕು. ಈ ಅವಧಿಯಲ್ಲಿ ವಿಶ್ರಾಂತಿ ತೆಗೆದುಕೊಂಡಲ್ಲಿ ಅವರ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚುತ್ತದೆ. ಜೊತೆಗೆ,ಇಂಥದೊಂದು ಕಾನೂನು ಬಂದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ದಿನಗಳು ಹೆಚ್ಚು ಸಹನೀಯವಾಗಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT