ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಾರ್ವಜನಿಕ ಜೀವನದಲ್ಲಿ ಮಹಿಳಾ ನಿಂದನೆ ನಿರಂತರ.. ಏಕೆ ಹೀಗೆ ?

Last Updated 1 ನವೆಂಬರ್ 2020, 15:24 IST
ಅಕ್ಷರ ಗಾತ್ರ
ADVERTISEMENT
""
""
""
""
""

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಬಿಜೆಪಿ ಸಚಿವೆ ಇಮಾರ್ತಿ ದೇವಿ ಅವರನ್ನು 'ಐಟಂ' ಎಂದು ಹೇಳಿ ಮಾದರಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಘಟನೆ ಇತ್ತೀಚೆಗಷ್ಟೇ ನಡೆದಿದೆ. ಈ ಪ್ರಕರಣದ ಬೆನ್ನಲ್ಲೇ ಕಮಲನಾಥ್ ಅವರ ‘ಸ್ಟಾರ್ ಪ್ರಚಾರಕ‘ ಸ್ಥಾನಮಾನವನ್ನು ಚುನಾವಣಾ ಆಯೋಗ ರದ್ದು ಪಡಿಸಿದೆ. ಅದ್ಯಾವುದೇ ಚುನಾವಣೆ ಆಗಿರಲಿ ಪ್ರಚಾರ ಕಾರ್ಯಕ್ರಮ ಅಥವಾ ರ‍್ಯಾಲಿಗಳಲ್ಲಿ ರಾಜಕಾರಣಿಗಳ ವಾಗ್ದಾಳಿಯಲ್ಲಿ ಅವಾಚ್ಯ ಪದಗಳು, ಆಕ್ಷೇಪಾರ್ಹ ಹೇಳಿಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಪಕ್ಷ, ರಾಜ್ಯ ಅಥವಾ ಪ್ರದೇಶ ಯಾವುದೇ ಇರಲಿ ಪ್ರತಿಸ್ಪರ್ಧಿ ಮಹಿಳೆ ಆಗಿದ್ದರೆ ಪುರುಷ ರಾಜಕಾರಣಿಗಳಿಂದ ಆಕೆಯ ವಿರುದ್ಧ ಆಕ್ಷೇಪಾರ್ಹ ಪದಗಳು ಪುಂಖಾನುಪುಂಖವಾಗಿ ಹರಿದು ಬರುತ್ತವೆ. ರಾಜಕಾರಣಿಗಳು ರಾಜಕೀಯ ಕಾರ್ಯಕ್ರಮಗಳಲ್ಲಿ ವಾಗ್ದಾಳಿ ನಡೆಸುವುದು ಒಂದೆಡೆಯಾದರೆ ಅವರ ಅನುಯಾಯಿಗಳು, ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್, ಟೀಕೆಗಳ ಮೂಲಕ ದಾಳಿ ನಡೆಸುತ್ತಿರುತ್ತಾರೆ.

ನಿರ್ಮಲಾ ಸೀತಾರಾಮನ್

ದೇಶದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ, ಜನಪ್ರಿಯವಾಗಿರುವ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಮುಖ ಮಹಿಳೆಯರನ್ನು ಅವರ ವೇಷ ಭೂಷಣ, ಭಾಷಣ ಅಷ್ಟೇ ಅಲ್ಲದೆ ಅವರ ಕುಟುಂಬ ವಿಷಯಗಳನ್ನೂ ಎಳೆದು ತಂದು ಟ್ರೋಲ್ ಮಾಡುವುದು ಕೂಡಾ ರಾಜಕೀಯ ಹೋರಾಟ ಆಗಿಬಿಟ್ಟಿದೆ. ಸೋನಿಯಾ ಗಾಂಧಿ, ಸ್ಮೃತಿ ಇರಾನಿ, ಮಾಯಾವತಿ, ಶೋಭಾ ಕರಂದ್ಲಾಜೆ, ಶೈಲಜಾ ಟೀಚರ್, ಹೇಮಮಾಲಿನಿ, ಮೊಹುವಾ ಮೊಯಿತ್ರಾ, ನಿರ್ಮಲಾ ಸೀತಾರಾಮನ್, ವಸುಂಧರಾ ರಾಜೆ, ಪ್ರಿಯಾಂಕಾ ವಾದ್ರಾ...ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ಟ್ರೋಲ್‌ಗಳಲ್ಲಿ ಟ್ರೆಂಡ್‌ ಆದವರಾಗಿದ್ದಾರೆ.

ಇಂದಿರಾ ಗಾಂಧಿ ರಾಜಕೀಯಕ್ಕೆ ಕಾಲಿರಿಸಿ 1966ರಲ್ಲಿ ಕಾಂಗ್ರೆಸ್‌ನ ಸಂಸದೀಯ ನಾಯಕಿ ಆದಾಗ ವಿಪಕ್ಷ ಅವರನ್ನು ಗೂಂಗಿ ಗುಡಿಯಾ (ಮೌನಿ ಗೊಂಬೆ) ಎಂದು ಕರೆದಿತ್ತು. ಆನಂತರದ ದಿನಗಳಲ್ಲಿ ಸವಾಲುಗಳನ್ನು ಮೀರಿ ರಾಜಕೀಯದಲ್ಲಿ ಪರಿಣಿತರಾಗಿ ದೇಶದ ಪ್ರಧಾನಿ ಪಟ್ಟಕ್ಕೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಇಂದಿರಾ ಗಳಿಸಿದ್ದು ಇತಿಹಾಸ. ಹೇಮಾಮಾಲಿನಿ ನೋಡಲಿಕ್ಕಷ್ಟೇ ಚೆನ್ನಾಗಿರುವುದು. ಆಕೆಗೆ ಯಾರೂ ಮತ ಹಾಕಲ್ಲ ಎಂದು 2014ರ ಚುನಾವಣೆ ವೇಳೆ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳಿದ್ದರು. ನರೇಶ್ ಅಗರವಾಲ್ ಎಂಬ ರಾಜಕಾರಣಿ, ಬಾಲಿವುಡ್‌ ನಟಿ, ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್‌ರನ್ನು 'ನಚ್‌ನೇ ವಾಲಿ' ಅಂದಿದ್ದರು. ನಟಿ, ರಾಜಕಾರಣಿ ಜಯಪ್ರದಾ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದಾಗಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ‘ ಈ ಬಾರಿ ರಾಮ್‌ಪುರದಲ್ಲಿ ಚುನಾವಣೆಯ ಹೊತ್ತು ರಂಗೇರುತ್ತದೆ'ಎಂದು ಹೇಳಿದ್ದರು.

ಹೇಮಾ ಮಾಲಿನಿ

ಸಾಮಾನ್ಯವಾಗಿ ಕಿರುತೆರೆ ಅಥವಾ ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡುವ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡುವುದರಲ್ಲಿ ಪುರುಷ ರಾಜಕಾರಣಿಗಳದ್ದು ಎತ್ತಿದ ಕೈ. ಕನ್ನಡದ ನಟಿ ರಮ್ಯಾ, ತಮಿಳು ನಟಿ ಜಯಲಲಿತಾ, ಖುಷ್ಬೂ, ಕಿರುತೆರೆಯಿಂದ ಬಂದ ಸ್ಮೃತಿ ಇರಾನಿ...ಹೀಗೆ ಸಿನಿಮಾರಂಗದಿಂದ ಬಂದವರನ್ನು ಅವರ ಸಿನಿಮಾ ಡೈಲಾಗ್, ದೃಶ್ಯ ಅಥವಾ ಫೋಟೊ ಬಳಸಿ ಟ್ರೋಲ್ ಮಾಡಲಾಗುತ್ತದೆ. 2016ರಲ್ಲಿ ಸ್ಮೃತಿ ಇರಾನಿ ಜವಳಿ ಖಾತೆ ಸಚಿವೆಯಾದಾಗ ಸಂಯುಕ್ತ ಜನತಾದಳ ಪಕ್ಷದ ನೇತಾರ ಅಲಿ ಅನ್ವರ್, ‘ಆಕೆಯ ದೇಹ ಮುಚ್ಚಲು ಅದು ಸಹಕಾರಿ‘ ಎಂದಿದ್ದರು. ‘ಸ್ಮೃತಿ ಇರಾನಿ ಅವರ ಬೊಟ್ಟಿನ ಗಾತ್ರವು ಅವರು ಗಂಡಂದಿರ ಸಂಖ್ಯೆಯ ನೇರ ಅನುಪಾತದಲ್ಲಿರುತ್ತದೆ‘ ಎಂದು ಪೀಪಲ್ಸ್ ರಿಪಬ್ಲಿಕನ್ ಪಕ್ಷದ ನಾಯಕ ಜೈದೀಪ್ ಕವಾಡೆ ಹೇಳಿದ್ದರು.

ಸ್ಮೃತಿ ಇರಾನಿ

ಮಹಿಳಾ ರಾಜಕಾರಣಿಗಳ ಬಗ್ಗೆ ಪುರುಷ ರಾಜಕಾರಣಿಗಳಷ್ಟೇ ಅಲ್ಲ ಮಹಿಳಾ ರಾಜಕಾರಣಿಗಳು ಕೂಡಾ ಆಕ್ಷೇಪಾರ್ಹ ಮಾತುಗಳನ್ನಾಡಿದ್ದುಂಟು. ಬಿಜೆಪಿ ನಾಯಕಿ ಸಾಧ್‌ನಾ ಸಿಂಗ್‌, ‘ಬಿಎಸ್‌ಪಿ ನಾಯಕಿ ಮಾಯಾವತಿ ಪುರುಷನೂ ಅಲ್ಲ ಸ್ತ್ರೀಯೂ ಅಲ್ಲ. ಆಕೆ ಟ್ರಾನ್ಸ್‌ಜೆಂಡರ್‌ಗಿಂತಲೂ ಕೀಳು‘ ಎಂದು ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಜಯಲಲಿತಾ


ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ದೇಹದ ಬಗ್ಗೆ ಅದೆಷ್ಟೋ ಜೋಕ್‌ಗಳು ಹರಿದಾಡಿತ್ತು. ಅಷ್ಟೇ ಅಲ್ಲದ ಆಕೆಯ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್‌ಗಳು ಸಾಕಷ್ಟು ಕೇಳಿ ಬಂದಿದ್ದವು. ತಮಿಳುನಾಡಿನ ಸರ್ಕಾರವನ್ನು ಟೀಕಿಸುವ ಭರದಲ್ಲಿ ಮಾಧ್ಯಮ ಸಂಸ್ಥೆಗಳುಮಹಿಳಾ ವಿರೋಧಿ ನಿಲುವುತಳೆದಿದ್ದಕ್ಕೆ ಜಯಲಲಿತಾ ಮಾನನಷ್ಟ ಮೊಕದ್ದಮೆ ಹೇರಿದ್ದರು.

2019ರಲ್ಲಿ ಲೋಕಸಭಾ ಕಲಾಪದ ವೇಳೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಸಭಾಧ್ಯಕ್ಷರಾದ ಬಿಜೆಪಿ ಸಂಸದೆ ರಮಾದೇವಿ ಬಗ್ಗೆ ಆಡಿದ ಮಾತು ಟೀಕೆಗೆ ಗುರಿಯಾಗಿತ್ತು. ಆಮೇಲೆ ಆಜಂ ಖಾನ್ ರಮಾದೇವಿಯವರಲ್ಲಿ ಕ್ಷಮೆ ಕೇಳಿದ್ದರು. ಕಳೆದ ಜೂನ್‌ ತಿಂಗಳಲ್ಲಿ ಕೇರಳದ ಕಾಂಗ್ರೆಸ್ ನಾಯಕ ಮುಲ್ಲಪ್ಪಳ್ಳಿ ರಾಮಚಂದ್ರನ್, ಆರೋಗ್ಯ ಸಚಿವೆ ಶೈಲಜಾ ಟೀಚರ್‌ನ್ನು ‘ಕೋವಿಡ್ ರಾಣಿ‘ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು. ಈ ನಡುವೆ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಿದ ಬಿಜೆಪಿ ನಾಯಕ ಮಹದೇವ್ ಸರ್ಕಾರ್‌ ವಿರುದ್ಧ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಕಾನೂನು ಮೆಟ್ಟಿಲೇರಿ ಜಯ ಗಳಿಸಿದ್ದರು.

ಮಹುವಾ ಮೊಯಿತ್ರಾ

ಅಂದಹಾಗೆ ರಾಜಕೀಯ ವಲಯಕ್ಕೆ ಕಾಲಿಡುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ಮಹಿಳಾ ರಾಜಕಾರಣಿಗಳ ವಿರುದ್ಧ ಪುರುಷಾಹಂಕಾರದ ವಾಗ್ದಾಳಿಗಳೇನೂ ಕಡಿಮೆಯಾಗಿಲ್ಲ.ಸಾಂವಿಧಾನಿಕ ನೈತಿಕತೆ ಎನ್ನುವುದು ಸಹಜವಾಗಿ ಹುಟ್ಟುವ ಭಾವನೆಯಲ್ಲ, ಅದನ್ನು ನಮ್ಮೊಳಗೆ ಬೆಳೆಸಿಕೊಳ್ಳಬೇಕು. ನಮ್ಮ ಜನರು ಇದನ್ನು ಇನ್ನೂ ಕಲಿಯಬೇಕಾಗಿದೆ. ಭಾರತದ ನೆಲದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಕೇವಲ ತೋರಿಕೆಯಾಗಿದ್ದು, ಇದು ಮೂಲಭೂತವಾಗಿ ಪ್ರಜಾಪ್ರಭುತ್ವದ ವಿರೋಧಿ ಎಂದಿದ್ದರು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌.

ಸಮಾಜದಲ್ಲಿ ಬದಲಾವಣೆ ತರುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನಿಗೆ ಇದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ತಾರತಮ್ಯ, ದಬ್ಬಾಳಿಕೆ,ಸರ್ವಾಧಿಕಾರ ಕಂಡುಬಂದರೆ ಅದರ ವಿರುದ್ಧ ದನಿಯೆತ್ತುವಂತಿರಬೇಕು. ಹಾಗಿದ್ದರೆ ಮಾತ್ರ ಪಿತೃಪ್ರಧಾನ ಸಮಾಜದಲ್ಲಿನ ಅಹಂಗಳು ದೂರವಾಗಿಲಿಂಗ ಸಮಾನತೆಗೆ ಅರ್ಥ ಬರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT