ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರಿಕಿರಿಯೇ? ‘ಪಾಶ್’ ಅಡಿ ದೂರು ಕೊಡಿ!

Last Updated 24 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಉದ್ಯೋಗ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಉಂಟಾಗದಂತೆ ತಡೆಯುವುದು ‘ಪಾಶ್’ನ ಮುಖ್ಯ ಉದ್ದೇಶ. ಉದ್ಯೋಗದ ಸ್ಥಳದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಅಲ್ಲಿ ‘ಪಾಶ್’ ಕಾಯ್ದೆಯಡಿ ಆಂತರಿಕ ದೂರು ಸಮಿತಿ ರಚಿಸಬೇಕು.

ಉದ್ಯೋಗ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ‘ಪಾಶ್’ 2013 ಕಾಯ್ದೆಯಡಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕೆಂದು ಸೂಚಿಸಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಈಚೆಗೆ ಸರ್ಕಾರಿ ಮತ್ತು ಖಾಸಗಿ ವಲಯದ 5 ಸಾವಿರ ಸಂಸ್ಥೆಗಳಲ್ಲಿ ‘ಪಾಶ್’ ಕುರಿತು ಕೇಳಿದ ಮಾಹಿತಿಗೆ ಉತ್ತರ ನಿರಾಶದಾಯಕವಾಗಿತ್ತು. ಶೇ 70ರಷ್ಟು ಸಂಸ್ಥೆಗಳು ಇಂಥ ಸಮಿತಿಗಳ ಬಗ್ಗೆ ನಿರ್ಲಕ್ಷ್ಯವಹಿಸಿದ್ದು, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವಂತಿದೆ.

ಉದ್ಯೋಗದ ಸ್ಥಳದಲ್ಲಿ ಅನುಭವಿಸುವ ಲೈಂಗಿಕ ದೌರ್ಜನ್ಯ, ಕಿರುಕುಳವನ್ನು ಬಹುತೇಕ ಮಹಿಳೆಯರು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ. ಇದನ್ನು ಎದುರಿಸುವ ಬಗೆ ತಿಳಿಯಲಾರದೇ ಒಳಗೊಳಗೆ ನೋವು ತಿನ್ನುತ್ತಿರುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಆದರೆ, ವಿಶಾಖಾ ಮಾರ್ಗಸೂಚಿಯ ಪರಿಣಾಮ ರೂಪುಗೊಂಡ ಉದ್ಯೋಗದ ಸ್ಥಳದಲ್ಲಿ ದುಡಿಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ (ಪಾಶ್) ಬಂದಾಗಿನಿಂದ ಇಂಥ ಹಲವು ದೌರ್ಜನ್ಯಗಳಿಗೆ ತಕ್ಕಮಟ್ಟಿಗೆ ಕಡಿವಾಣ ಬಿದ್ದಿರುವುದು ಸಮಾಧಾನಕರ.

ಏನಿದು ‘ಪಾಶ್’, ಇದರ ಮಹತ್ವವೇನು?

ಪ್ರಿವೆನ್ಷನ್ ಆಫ್ ಸೆಕ್ಷುಯೆಲ್ ಹೆರಾಸ್‌ಮೆಂಟ್‌ನ ಸಂಕ್ಷಿಪ್ತ ರೂಪವೇ ‘ಪಾಶ್’ (POSH). ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಉಂಟಾಗದಂತೆ ತಡೆಯುವುದು ‘ಪಾಶ್’ನ ಮುಖ್ಯ ಉದ್ದೇಶ. ಉದ್ಯೋಗದ ಸ್ಥಳದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಅಲ್ಲಿ ‘ಪಾಶ್’ ಕಾಯ್ದೆಯಡಿ ಆಂತರಿಕ ಸಮಿತಿ ರಚಿಸಬೇಕು.

ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಿಸಿದ ದೂರುಗಳನ್ನು ಆಂತರಿಕ ದೂರು ಸಮಿತಿಯು ಪರಿಹರಿಸುತ್ತದೆ. ಉದ್ಯೋಗದ ಸ್ಥಳದಲ್ಲಿ ಮಹಿಳೆಯರಿಗೆ ಘನತೆ ಮತ್ತು ಸುರಕ್ಷತೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ‘ಪಾಶ್’ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆಂತರಿಕ ಸಮಿತಿಯಲ್ಲಿ ಮಹಿಳೆಯರು ಇರುವುದರಿಂದ ಸಂತ್ರಸ್ತೆ ದೂರು ನೀಡಲು ಹಿಂಜರಿಯಬೇಕಿಲ್ಲ. ಈ ಸಮಿತಿಯ ವರದಿಯನ್ನಾಧರಿಸಿ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ. ಸರ್ಕಾರಿ, ಅರೆ ಸರ್ಕಾರಿ, ಸಂಘಟಿತ, ಅಸಂಘಟಿತ ಹೀಗೆ ಯಾವುದೇ ಕೆಲಸದ ಸ್ಥಳದಲ್ಲಿ ‘ಪಾಶ್’ ಕಾಯ್ದೆಯಡಿ ಆಂತರಿಕ ದೂರು ಸಮಿತಿ ಇರಬೇಕಾದದ್ದು ಕಡ್ಡಾಯ.

ಕೋವಿಡ್ ಸಮಯದಲ್ಲೂ ತಪ್ಪಿಲ್ಲ ಕಿರುಕುಳ!

ಕೋವಿಡ್–19 ಸಾಂಕ್ರಾಮಿಕ ರೋಗದ ಕಾರಣ ಹಲವೆಡೆ ಉದ್ಯೋಗಸ್ಥ ಮಹಿಳೆಯರು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಮಯದಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಪ್ಪಿಲ್ಲ ಎನ್ನುತ್ತವೆ ರಾಷ್ಟ್ರೀಯ ಮಹಿಳಾ ಆಯೋಗದ ವರದಿಗಳು.

‘ಮಹಿಳೆ ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ, ಎಲ್ಲೇ ದೌರ್ಜನ್ಯಕ್ಕೀಡಾದರೂ ದೂರು ಸಲ್ಲಿಸಬಹುದು. ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 2021ರ ಮಾರ್ಚ್‌ನಿಂದ ನವೆಂಬರ್ ತನಕ ರಾಜ್ಯ ಮಹಿಳಾ ಆಯೋಗಕ್ಕೆ ಒಟ್ಟು 161 ದೂರುಗಳು ಬಂದಿವೆ. ಇದರಲ್ಲಿ 28 ಪ್ರಕರಣಗಳು ಪರಿಹಾರವಾಗಿವೆ. ಇನ್ನುಳಿದ 133 ಪ್ರಕರಣಗಳನ್ನು ಆಯಾ ಸಂಬಂಧಿಸಿದ ಇಲಾಖೆಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು.

‘ಕಚೇರಿಗಳಲ್ಲಿನ ಆಂತರಿಕ ದೂರು ಸಮಿತಿಯು ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ಮುಖ್ಯ. ಮುಖ್ಯವಾಗಿ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳದ ಸ್ವರೂಪ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಉದ್ಯೋಗಿಗಳಿಗೆ ಸೂಕ್ತ ಮಾಹಿತಿ, ತರಬೇತಿ ನೀಡುವುದು ಅತ್ಯಗತ್ಯ. ಕೆಲಸದ ಸ್ಥಳಗಳಲ್ಲಿ ದೌರ್ಜನ್ಯಕ್ಕೀಡಾಗುವವರು ಬಹುತೇಕ ಕೆಳ ವರ್ಗದ ಮಹಿಳೆಯರೇ ಆಗಿರುತ್ತಾರೆ. ಕೆಲಸ ಕಳೆದುಕೊಳ್ಳುವ ಭೀತಿ, ಕೋವಿಡ್ ಒಡ್ಡಿದ ಆರ್ಥಿಕ ದುಸ್ಥಿತಿ, ಮುಂದಿನ ಭವಿಷ್ಯ ಇವುಗಳ ಕಾರಣಕ್ಕಾಗಿ ದೂರು ನೀಡಲು ಹಿಂಜರಿಯುವವರೇ ಹೆಚ್ಚು’ ಎಂದು ವಿಶ್ಲೇಷಿಸುತ್ತಾರೆ ವಕೀಲರಾದ ಆರ್. ಮಂಜುಳಾದೇವಿ.

ದೂರು ನೀಡಿದರೆ ಪರಿಹಾರ ಸಾಧ್ಯ

‘ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಹೋದ್ಯೋಗಿಯೊಬ್ಬರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಮಹಿಳೆ ಎಲ್ಲಿಯೂ ತನ್ನ ಹೆಸರನ್ನಾಗಲೀ, ಗುರುತನ್ನಾಗಲೀ ಹೇಳಿಕೊಂಡಿರಲಿಲ್ಲ. ಇದು ‘ಪಾಶ್’ನ ಆಂತರಿಕ ದೂರು ಸಮಿತಿಗೆ ಬಂದೊಡನೆ ಆ ಕಂಪನಿ, ದೌರ್ಜನ್ಯ ಎಸಗಿದ್ದ ಉದ್ಯೋಗಿಗೆ ಡಿಮೋಷನ್ ಮಾಡಿ ಕ್ರಮ ಕೈಗೊಂಡಿತ್ತು. ‘ಪಾಶ್’ನಿಂದಾಗಿ ಆ ಮಹಿಳೆ ಈಗ ಕಚೇರಿಯಲ್ಲಿ ನೆಮ್ಮದಿಯಾಗಿ ಕೆಲಸ ಮಾಡುವಂತಾಗಿದೆ’ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಆಂತರಿಕ ದೂರು ಸಮಿತಿಯಲ್ಲಿ ಸದಸ್ಯರಾಗಿರುವ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ಶೋಭಾ ಎಸ್.

ಉದ್ಯೋಗದ ಸ್ಥಳದಲ್ಲಿ ಉಂಟಾಗುವ ಲೈಂಗಿಕ ಕಿರುಕುಳಗಳಿಂದ ಬೇಸತ್ತ ಹಲವು ಮಹಿಳೆಯರು ಕೆಲಸ ಬಿಡುವುದನ್ನೋ ಅಥವಾ ಬದಲಾಯಿಸುವುದನ್ನೋ ಮಾಡುತ್ತಾರೆ. ಆದರೆ, ಇಂಥ ಕಿರುಕುಳಗಳನ್ನು ‘ಪಾಶ್‌’ ಕಾಯ್ದೆಯಡಿ ದಿಟ್ಟತನದಿಂದ ಎದುರಿಸಿದಲ್ಲಿ ದೌರ್ಜನ್ಯ ಎಸಗಿದವರಿಗೆ ತಕ್ಕಪಾಠ ಕಲಿಸಿದಂತಾಗುತ್ತದೆ. ಈ ಪಾಠ ಇತರರಿಗೂ ಎಚ್ಚರಿಕೆ ನೀಡಿದಂತಾಗುತ್ತದೆ. ಕಾನೂನಿನ ಬೆಂಬಲವಿರುವಾಗ ಶೋಷಣೆ ಸಹಿಸಿಕೊಳ್ಳದೇ ಸಮಸ್ಯೆಗಳಿಂದ ಮುಕ್ತರಾಗುವುದೊಳಿತು.

****

ದೌರ್ಜನ್ಯ ಸಹಿಸಿಕೊಳ್ಳದಿರಿ

ಮಹಿಳೆಯರ ಸಹಿಸಿಕೊಳ್ಳುವ ಗುಣವೇ ಸಮಸ್ಯೆಯಾಗಿದೆ. ಲೈಂಗಿಕ ದೌರ್ಜನ್ಯದ ಕುರಿತು ಯಾರಾದರೂ ಪ್ರಶ್ನಿಸಿದರೆ ಆಕೆಯನ್ನು ಮೇಲ್ನೋಟಕ್ಕೆ ‘ಗಟ್ಟಿಗಿತ್ತಿ’ ಎಂದು ಕರೆದರೂ, ಮುಂದಿನ ಪರಿಣಾಮಗಳು ಅವಳ ವಿರುದ್ಧವಾಗಿರುತ್ತವೆ. ಆದರೆ, ಕೆಲ ಹೆಣ್ಣುಮಕ್ಕಳು ಇವುಗಳನ್ನು ಮೀರಿಯೂ ದೂರು ನೀಡಿ ಪರಿಹಾರ ಕಂಡುಕೊಂಡ ನಿದರ್ಶನಗಳಿವೆ. ಎಷ್ಟೋ ಪ್ರಕರಣಗಳಲ್ಲಿ ಪುರುಷರೇ ಮಹಿಳೆಗೆ ಬೆಂಬಲ ನೀಡಿದ ಉದಾಹರಣೆಗಳಿವೆ.

- ಆರ್. ಮಂಜುಳಾ ದೇವಿ, ವಕೀಲರು

***

ಸಮಾನತೆ ಇದ್ದಲ್ಲಿ ಕಿರುಕುಳ ತಪ್ಪುತ್ತದೆ

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದಾರೆ. ಆದರೆ, ಕೆಲಸ ಕಳೆದುಕೊಳ್ಳುವ ಭೀತಿಯಿಂದ ದೂರು ನೀಡುವುದು ವಿರಳ. ಎಲ್ಲ ಪ್ರಕರಣಗಳು ಸುಖಾಂತ್ಯವಾಗದಿದ್ದರೂ, ‘ಪಾಶ್’ ಕಾಯ್ಡೆಯಡಿ ಕನಿಷ್ಠ ದೂರನ್ನಾದರೂ ನೀಡಬಹುದು ಎನ್ನುವುದು ಸಮಾಧಾನಕಾರ. ಕೆಲವು ಪ್ರಕರಣಗಳಲ್ಲಿ ದೌರ್ಜನ್ಯ ಎಸಗಿದವರನ್ನು ಕೆಲಸದಿಂದ ತೆಗೆದುಹಾಕಿದ ನಿದರ್ಶನಗಳೂ ಇವೆ. ಆದರೆ, ಕೆಲಸದ ಸ್ಥಳದಲ್ಲಿ ಹೆಣ್ಣು–ಗಂಡು ಇಬ್ಬರೂ ಸಮಾನರು ಎನ್ನುವ ಭಾವ ಬಾರದ ಹೊರತು ಇಂಥ ಕಿರುಕುಳಗಳು ತಪ್ಪಲ್ಲ.

- ಪ್ರತಿಭಾ ಆರ್., ಅಧ್ಯಕ್ಷೆ ಗಾರ್ಮೆಂಟ್ ಅಂಡ್ ಟೆಕ್ಸ್‌ಟೈಲ್ ವರ್ಕರ್ಸ್‌ ಯೂನಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT