ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಮುಖಿ ಎಂಬ ಹೆಮ್ಮೆ..

Last Updated 25 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಗೆ ಮಂಗಳಮುಖಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದ್ದು ಇದೇ ಮೊದಲು. ಈ ಗೌರವಕ್ಕೆ ಪಾತ್ರರಾದ ಮೊದಲ ಮಂಗಳಮುಖಿ ಮಂಜಮ್ಮ ಜೋಗತಿ. ಜೋಗತಿ ನೃತ್ಯ ಪರಂಪರೆಯ ಉಳಿವಿಗೆ ಹೋರಾಡಿದ ಆಕೆಯ ಸಾಧನೆಯ ಹಿಂದೆ ಕಲ್ಲುಮುಳ್ಳುಗಳ ಹಾದಿಯಿದೆ. ಮಂಜುನಾಥ ಶೆಟ್ಟಿ ಮಂಜಮ್ಮ ಜೋಗತಿಯಾದ ಕಥನವೇ ಸೋಜಿಗದ್ದು.

ಮಂಗಳಮುಖಿಯೆಂದು ಧೈರ್ಯದಿಂದ ಬದುಕು ಕಟ್ಟಿಕೊಂಡ ಮಂಜಮ್ಮ ‘ನನಗೆ ಆತ್ಮವಿಶ್ವಾಸವಿದೆ. ಮುಂದೊಂದು ದಿನ ಈ ಮಂಗಳಮುಖಿಯೂ ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರಂತೆ ಗೌರವಯುತವಾದ ದಾರಿಯಲ್ಲಿಯೇ ಮುನ್ನಡೆಯುತ್ತಾಳೆ’ ಎಂದು ತನ್ನ ಭವಿಷ್ಯವನ್ನು ತನ್ನ 17ನೇ ವಯಸ್ಸಿಗೆ ನುಡಿದಿದ್ದು ಈಗ ನಿಜವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾನ್ವಿತ ಮಂಗಳಮುಖಿ ಮಂಜಮ್ಮಗೆ ಮೊದಲ ಬಾರಿಗೆ ಲಿಂಗಬೇಧವಿಲ್ಲದೇ ಅಧ್ಯಕ್ಷ ಸ್ಥಾನ ನೀಡಿದ್ದು ದಾಖಲೆ.

ಮಂಜಮ್ಮನ ಜಾನಪದ ಜೋಗತಿ ನೃತ್ಯದ ಸಾಧನೆ ಎಣೆಯಿಲ್ಲದ್ದು. ರಂಗಭೂಮಿ ಕಲಾವಿದರೂ ಹೌದು. ಮಂಗಳಮುಖಿಯರ ಈ ‘ತಾಯಿ’ಗೆ ತಾನು ಕುಣಿದು ಇನ್ನೊಬ್ಬರ ನೆತ್ತಿ ಹೊಟ್ಟೆ ಕಾಯಲು ಜೋಗತಿ ನೃತ್ಯ ಕಲೆ ಕೈ ಹಿಡಿದಿದೆ. ಸಾಧನೆಯ ಕೊಡ ಹೊತ್ತು ಕುಣಿವ ಇವರನ್ನು ಪುರುಷರಾದಿಯಾಗಿ ಹೆಣ್ಣುಮಕ್ಕಳೆಲ್ಲ ಕರೆಯುವುದು ‘ಮಾತಾ ಮಂಜಮ್ಮ’ನೆಂದು.

ಉರುಳಾದ ಕರುಳು ಸಂಬಂಧ
ಮಂಜುನಾಥನಾಗಿದ್ದ ಮಂಜಮ್ಮನ ಜನ್ಮಭೂಮಿ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ. ಈಗ ಕರ್ಮಭೂಮಿ ಮರಿಯಮ್ಮನ ಹಳ್ಳಿ. ತಂದೆ ಹನುಮಂತಪ್ಪ ಶೆಟ್ಟಿ. ತಾಯಿ ಜಯಲಕ್ಷ್ಮಿ. 21 ಮಕ್ಕಳಲ್ಲಿ ಉಳಿದ ಐವರಲ್ಲಿ ಎರಡನೇ ಮಗ ಮಂಜು. ತಂದೆ ಕಂಪ್ಲಿ ಶುಗರ್ ಫ್ಯಾಕ್ಟರಿ ಉದ್ಯೋಗಿ. ಆರು ಎಕರೆ ಜಮೀನು ಅಥವಾ ವ್ಯಾಪಾರ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ತಂದೆ–ತಾಯಿಗೆ ಒಪ್ಪಿಗೆ ಇತ್ತು. ಆದರೆ ತಾನು ಹುಡುಗನಾಗಿ ದುಡಿಯಲಾರೆ, ಹುಡುಗಿಯಂತೆ ನೃತ್ಯ ಮಾಡುವೆ ಎಂದಾಗ ಯಾರೂ ಒಪ್ಪಲಿಲ್ಲ. ಎಸ್.ಎಸ್.ಎಲ್.ಸಿ. ಮುಗಿದ ಮೇಲೆ ದೇಹದ ಚಿತ್ರ ಬದಲಾದಂತೆ ಮನೆಯ ಚಿತ್ರವೂ ಬದಲಾಯಿತು. ಹೆಣ್ಣಂತೆ ಇರುವುದನ್ನು ಸಹಿಸದ ಸಮಾಜದ ಅವಹೇಳನ ಶುರುವಾಯಿತು. ಕುಟುಂಬದವರು ಕಂಬಕ್ಕೆ ಕಟ್ಟಿ ಹೊಡೆದರು. ಸಂಬಂಧಕ್ಕೆ ಬೇಲಿ ಹಾಕಿದರು. ದುಡಿಯಲೆಂದು ಪಿಗ್ಮಿ ತುಂಬಲು ಹಚ್ಚಿದರು. ಅಣ್ಣನೊಂದಿಗೆ ಕಿರಾಣಿ ಅಂಗಡಿ ಕೆಲಸಕ್ಕೆ ಕೂಡಿಸಿದರು. ಸ್ವತಃ ಜೋಗಪ್ಪನಾಗಿದ್ದಸೋದರಮಾವ ಬುದ್ಧಿ ಕಲಿಸಲು ಮನ ಬಂದಂತೆ ಒದ್ದರೂ ಹೆಣ್ಣಿನ ನಡೆ– ನುಡಿಗಳು ನಿಲ್ಲಲಿಲ್ಲ. ಕೊನೆಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ಪೂಜಾರಿಯಿಂದ ಸೀರೆ ಬಳೆ ತೊಡಿಸಿ, ಹೂವು ಮುಡಿಸಿ, ಮುತ್ತು ಕಟ್ಟಿಸಿದರೂ ಮನೆಯಲ್ಲಿ ಮಾತ್ರ ಪರಕೀಯಭಾವ ಕೊಲ್ಲತೊಡಗಿತು.

ನೆರೆಹೊರೆಯಲ್ಲಿ ಉರಿಗಣ್ಣಿಗೆ ತುತ್ತಾಗಿ ಬದುಕುವುದು ಕಷ್ಟ. ಆದರೆ ಮಂಗಳಮುಖಿ ವೇಷ ಕಳಚಿದರೆ ಹೋಗುವಂತದ್ದಲ್ಲ ಎಂಬುದು ಮನವರಿಕೆಯಾಯಿತು. ಮನೆ, ಮನ ಎರಡನ್ನೂ ಎದುರಿಸಲಾಗದೇ ಸಾಯಲು ನಿರ್ಧರಿಸಿ ವಿಷ ಕುಡಿದರೆ ಇನ್ನಷ್ಟು ಸಂಕಟ ತಂದಿತು. ದಾವಣಗೆರೆ ಆಸ್ಪತ್ರೆಯಲ್ಲಿ ಸಾಯದೇ ಬದುಕಿದ್ದೂ ಪವಾಡ. 45 ದಿನಗಳಾದರೂ ತಂದೆ, ಅಮ್ಮ, ತಮ್ಮ, ತಂಗಿ ಸುಳಿವಿಲ್ಲ. ತುಂಬಿದ ತಂಬಿಗೆ ಹೊತ್ತು ಕುಣಿತ ಶುರು ಮಾಡಿದರು. ಆಸ್ಪತ್ರೆಯ ವಾರ್ಡನ್, ರೋಗಿಗಳು ಖುಷಿಯಾಗಿ ಹತ್ತಿಪ್ಪತ್ತು ಪೈಸೆ ಭಿಕ್ಷೆ ಹಾಕಿದರು. ತಪ್ಪೋ ಒಪ್ಪೋ ಕುಣಿದರೆ ಹೊಟ್ಟೆ ತುಂಬುತ್ತದೆ ಎಂಬ ಭಾವ ಬಲಿತು ಕಾಲಿಗೆ ಗೆಜ್ಜೆ ಕಟ್ಟಿದರು.

ಗುರುವಾಗಿ ಉಡಿತುಂಬಿದ ಕಾಳವ್ವ
ಕೊಡ ಹೊತ್ತು ಕುಣಿದದ್ದು ಹೊಟ್ಟೆ ತುಂಬಿಸುವುದಿಲ್ಲ. ಇಡ್ಲಿ ಮಾರಿದ್ದಾಯಿತು. ಟ್ಯೂಷನ್ ಹೇಳಿದ್ದಾಯಿತು. ದೇವರ ಗುಡಿ ಸಾರಿಸಿ, ದೀಪ ಹಚ್ಚಿ ನೈವೇದ್ಯ ಸಿಗುವುದೆಂದು ಕಾದಿದ್ದೂ ಆಯಿತು. ಒಂದು ದಿನದ ಊಟಕ್ಕೂ ಗತಿ ಇಲ್ಲವಾದಾಗ ಆಸರೆಗೆ ಸಿಕ್ಕಿದ್ದು ಮರಿಯಮ್ಮನ ಹಳ್ಳಿ ಕಾಳವ್ವ ಜೋಗತಿ. ಜಾನಪದ ಜೋಗತಿ ನೃತ್ಯದ ರೇಣುಕಾ ಯಲ್ಲಮ್ಮ ಕಥನ ಗೀತದ ಪ್ರಸಿದ್ಧ ಕಲಾವಿದೆ. ತನ್ನ ನಂತರ ಈ ಕಲೆಯನ್ನು ಉಳಿಸಿ ಬೆಳೆಸುವ ಉತ್ತರಾಧಿಕಾರಿಗೆ ಹುಡುಕುತ್ತಿರುವಾಗಲೇ ಮಂಜಮ್ಮನ ಜೋಗತಿ ನೃತ್ಯ ಕಂಡು ಮನೆಗೆ ಕರೆದುಕೊಂಡು ಹೋದಳು.

ಕಲಿಯುವ, ಸಾಧಿಸುವ ಹಂಬಲ...
ಜಾತ್ರೆ, ಉತ್ಸವ, ಹಬ್ಬ, ಸಮ್ಮೇಳನ, ಸಮಾವೇಶ.. ಎಲ್ಲೇ ಇದ್ದರೂ ಎಲ್ಲಮ್ಮನ ಕೊಡ ಹೊತ್ತು ಕೈ ಬಿಟ್ಟು ಕುಣಿದು ಜಾನಪದ ಜೋಗತಿ ಕಲೆ ಕರಗತ ಮಾಡಿಕೊಂಡರು. ಜೊತೆಗೆ ನಾಟಕದ ಹವ್ಯಾಸವೂ ಕೈ ಹಿಡಿಯಿತು. ಸುಮಧುರವಾಗಿ ಹಾಡುವ ಜಾನಪದ ಚೌಡಕಿ ಪದಗಳು ಜನಮನ ಸೂರೆಗೊಂಡವು. ಜೋಗತಿ ನೃತ್ಯಕ್ಕೊಂದು ಅಕಾಡೆಮಿಕ್‌ ವಲಯದಲ್ಲಿ ಸ್ಥಾನ ಸಿಗುವಂತೆ ಮಾಡಿದ ಶ್ರೇಯಸ್ಸು ಮಂಜಮ್ಮನಿಗೆ ಸಿಕ್ಕಿದೆ.

ಗಮನಿಸಬೇಕಾದ ಸಂಗತಿಯೆಂದರೆ ಎಲ್ಲಮ್ಮನ ಚರಿತೆಗೆ ಜಾನಪದ ನಾಟಕ ರೂಪ ಕೊಟ್ಟು ನಿರ್ದೇಶಿಸಿದ್ದು ಮಂಜಮ್ಮ ಜೋಗತಿಯೇ. ಈಗಲೂ ಶ್ರೀ ರೇಣುಕಾ ಚರಿತೆ ನಾಟಕದ ಮುಖ್ಯ ಹಾಡುಗಾತಿ. ರೇಣುಕಾ ಪಾತ್ರ, ಗೌಡಶಾನಿ, ಕಾಮಧೇನು, ಪರಶುರಾಮ ಪಾತ್ರ ನಿರ್ವಹಣೆ ಹೆಸರು ತಂದಿವೆ.

ರಂಗಭೂಮಿ ಕಲಾವಿದೆ
ಮಂಗಳಮುಖಿ ದೇವಿ ಪಾತ್ರ ನಿರ್ವಹಿಸಬಾರದೆಂದು ಗೌಡರ ಹಳ್ಳಿಯಲ್ಲಿ ಅಪಮಾನ ಮಾಡುತ್ತಾರೆ. ಆಗ ಮರಿಯಮ್ಮನಹಳ್ಳಿ ರಂಗ ಕಲಾವಿದೆ ಡಾ. ನಾಗರತ್ನಮ್ಮ ಮೋಹಿನಿ ಭಸ್ಮಾಸುರದಲ್ಲಿ ಭಸ್ಮಾಸುರನ ಪಾತ್ರ ಮಾಡಿಸಿದರು. ಅದೇ ಮಂಗಳಮುಖಿಯರ ರಂಗ ಪ್ರವೇಶಕ್ಕೆ ಮುನ್ನುಡಿ. ಹೇಮರಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ಮೋಹಿನಿ ಭಸ್ಮಾಸುರ ಮುಂತಾದ ನಾಟಕಗಳಲ್ಲಿ ವೇಷ ತೊಟ್ಟಿದ್ದು ಹೆಣ್ಣು ಗಂಡು ಎರಡೂ. ಪೌರಾಣಿಕ ಪಾತ್ರಗಳಾದ ಕೀಚಕ, ಭಸ್ಮಾಸುರ, ತಾರಕಾಸುರ, ಬಯಲಾಟದ ಪಾತ್ರಗಳಲ್ಲಿ ಆಜಾನುಬಾಹು ಮಂಜಮ್ಮ ವೇಷ ತೊಟ್ಟರೆ ಇಡೀ ರಂಗಸ್ಥಳವೇ ನಡುಗುತ್ತದೆ. ಭಿಕ್ಷೆ, ಲೈಂಗಿಕ ವೃತ್ತಿಯನ್ನು ತೊರೆದು ಸಾಂಸ್ಕೃತಿಕ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಿದ್ಧವಿದ್ದ 15– 20 ಮಂಗಳಮುಖಿಯರೊಳಗೊಂಡ ರಂಗ ತಂಡ ಕಟ್ಟಿದ್ದಾರೆ.

ಕೆಂಗುಲಾಬಿ ಚಲನಚಿತ್ರ, ರಸಋಷಿ, ದಂತ ಪುರಾಣ, ನಿರ್ಣಯ ಎಂಬ ಕಿರು ಚಿತ್ರಗಳಲ್ಲಿನ ಅಭಿನಯ ಹೆಸರು ತಂದಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪುಸ್ತಕ ಪ್ರಕಟಿಸಿದೆ. ಡಾ ಚಂದ್ರಪ್ಪ ಸೊಗಟಿಯವರ ‘ಮಂಜಮ್ಮ ಜೋಗತಿ ಆತ್ಮಕಥೆ’ಯನ್ನು ಪ್ರಕಟಿಸಿದ್ದಾರೆ. ತೆಲುಗಿನ ಮಾಸ ಪತ್ರಿಕೆ ಮಂಜಮ್ಮನ ಜೀವನ ಕಥನವನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಿದೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಚ್.ಎಲ್.ನಾಗೇಗೌಡ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿ ಸೇರಿದಂತೆ ರಾಜ್ಯದ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.

ಮಂಜಮ್ಮ ಜೋಗತಿ
ಮಂಜಮ್ಮ ಜೋಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT