ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಯ ಆಗಮನಕ್ಕೂ ಪುಟ್ಟ ವಿರಾಮ!

Last Updated 10 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಮ್ಯಾನೇಜ್‌ಮೆಂಟ್‌ ಕಂಪನಿಯೊಂದರಲ್ಲಿ ಕನ್ಸಲ್ಟೆಂಟ್‌ ಆಗಿರುವ ಈಶಾ ಹರಿಹರನ್‌ ಕೆಲಸದ ಸಲುವಾಗಿ ವಿದೇಶಗಳಿಗೆ ಓಡಾಡುವುದು ಮಾಮೂಲು. ಹೀಗಾಗಿ ಮದುವೆಯಾಗಿ ಮೂರು ವರ್ಷಗಳಾದರೂ ಗರ್ಭ ಧರಿಸುವುದನ್ನು ಮುಂದೂಡುತ್ತಲೇ ಬಂದಿದ್ದಳು. ಕಚೇರಿಯಲ್ಲೇ ಕೆಲಸ ಮಾಡುವುದಕ್ಕೆ ಮೇಲಧಿಕಾರಿ ಒಪ್ಪಿಕೊಂಡಾಗ ಗರ್ಭ ಧರಿಸಲು ಈಶಾ ಮತ್ತು ಆಕೆಯ ಪತಿ ಯೋಜನೆ ರೂಪಿಸಿ, ವಾರ ಕಾಲ ಸ್ವಂತ ಊರಾದ ಚೆನ್ನೈಗೂ ಹೋಗಿ ಬಂದಿದ್ದರು. ಆದರೆ ಅಷ್ಟರಲ್ಲೇ ಕೋವಿಡ್‌– 19 ಎಲ್ಲೆಡೆ ಇಣುಕಿ ಹಾಕಲಾರಂಭಿಸಿತ್ತು. ಆರಂಭಿಕ ಲಾಕ್‌ಡೌನ್‌, ಹೊಸ ಜೀವನಶೈಲಿಗೆ ಹೊಂದಿಕೊಳ್ಳುವುದರ ಮಧ್ಯೆ 2021ರ ಆರಂಭದಲ್ಲಿ ಮಗುವಿನ ಆಗಮನಕ್ಕೆ ರೂಪಿಸಿದ್ದ ಯೋಜನೆಯನ್ನು ಈಶಾ ತಾತ್ಕಾಲಿಕವಾಗಿ ತಡೆಹಿಡಿಯಬೇಕಾಯಿತು.

‘ಗರ್ಭದಲ್ಲಿರುವ ಮಗುವಿಗೂ ಕೊರೊನಾ ಸೋಂಕು ಹರಡುವ ಭಯವೇ’ ಎಂಬ ಪ್ರಶ್ನೆಗೆ ಆಕೆಯ ಬಳಿ ನಿಖರವಾದ ಉತ್ತರವಿಲ್ಲ. ಪರೀಕ್ಷೆ, ಸ್ಕ್ಯಾನಿಂಗ್‌ ಎಂದು ಆಸ್ಪತ್ರೆಗೆ ಹೋಗುವುದಕ್ಕೆ ಭಯ, ಹಣಕಾಸು ಪರಿಸ್ಥಿತಿ ಹದಗೆಟ್ಟರೆ ಎಂಬ ಹೆದರಿಕೆ. ಎಲ್ಲಿಯೋ ಅಪರೂಪಕ್ಕೆ ಶಿಶುವಿಗೆ ಕೋವಿಡ್‌ ತಗಲಿ ಮೃತಪಟ್ಟ ವರದಿ ಹುಟ್ಟಿಸುವ ನಡುಕ. ‘ಪರಿಸ್ಥಿತಿ ಸುರಕ್ಷಿತವಾಗಿಲ್ಲ ಅಷ್ಟೆ’ ಎಂಬ ಉತ್ತರ ಏನೆಲ್ಲಾ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ನಡೆಯದ ಅಧ್ಯಯನ
ಈಗ ಗರ್ಭ ಧರಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳನ್ನು ಪ್ರಸೂತಿ ವೈದ್ಯರು ಎದುರಿಸುತ್ತಿದ್ದಾರೆ. ‘ಕೋವಿಡ್‌–19ರಿಂದ ಗರ್ಭಿಣಿಯರಿಗೆ ಗರ್ಭಸ್ರಾವ ಅಥವಾ ಅವಧಿಗೆ ಮುನ್ನದ ಮಗುವಿನ ಜನನವಾಗುವಂತಹ ಅಪಾಯ ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಹೆಚ್ಚು ಅಧ್ಯಯನಗಳು ನಡೆದಿಲ್ಲ ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು’ ಎನ್ನುತ್ತಾರೆ ವೈದ್ಯೆ ಡಾ. ವೈಶಾಲಿ ಎಂ.ಆರ್‌. ಆದರೂ ಗರ್ಭ ಧರಿಸಿದರೆ ಅಪಾಯವೇನಿಲ್ಲ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಕೋವಿಡ್‌– 19ರ ಕುರಿತು ಮಾಹಿತಿಯ ಮಹಾಪೂರ ನಿತ್ಯ ಹರಿದು ಬರುತ್ತಿದ್ದು, ಅಧ್ಯಯನಗಳು ನಡೆಯುತ್ತಲೇ ಇವೆ. ಹೀಗಾಗಿ ಇಂದು ಸರಿ ಎಂದ ವಿಷಯ ನಾಳೆ ತಪ್ಪಾದರೆ..!

ಈಗಾಗಲೇ ಒಂದು ಮಗುವಿನ ತಾಯಿ ಮಾಧವಿ ಎರಡನೇ ಮಗುವನ್ನು ಪಡೆಯಲು ಆಲೋಚನೆ ನಡೆಸುತ್ತಿದ್ದಾಗಲೇ ಕೊರೊನಾ ಸೋಂಕು ಹರಡಲು ಶುರುವಾಗಿದ್ದು. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸದ್ಯ ಮನೆಯಲ್ಲೇ ಇದ್ದು ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ಆಟೊ ಚಾಲಕ ಗಂಡನಿಗೂ ಸರಿಯಾದ ಆದಾಯವಿಲ್ಲ. ಹೀಗಾಗಿ ಇನ್ನೊಂದು ಮಗುವನ್ನು ಹೆತ್ತು ಹಣಕಾಸು ಸಮಸ್ಯೆ, ಅದರಿಂದ ಉದ್ಭವವಾಗುವ ಒತ್ತಡವನ್ನು ತಡೆದುಕೊಳ್ಳಲು ಆಕೆ ಸಿದ್ಧಳಿಲ್ಲ.

‘ಬೇರೆ ಕಾರಣಗಳಿಂದ ಆಸ್ಪತ್ರೆಗೆ ಹೋಗುವುದು ಕಷ್ಟ. ಎಲ್ಲಾದರೂ ಕೊರೊನಾ ಸೋಂಕು ಅಂಟಿಕೊಂಡರೆ... ಬೇಡಪ್ಪ, ಸದ್ಯ ಒಂದೇ ಮಗು ಸಾಕು’ ಎನ್ನುವ ಮಾಧವಿಯ ಮಾತಿನಲ್ಲಿ ಪ್ರಸಕ್ತ ಪರಿಸ್ಥಿತಿಯ ಚಿತ್ರಣವಿರುವುದು ಸುಳ್ಳಲ್ಲ. ಸೋಂಕಿನಿಂದ ಆಗುವ ತೊಂದರೆಗಳ ಬಗ್ಗೆ ಎಲ್ಲರಲ್ಲೂ ಭೀತಿ ಮನೆ ಮಾಡಿದೆ. ಆದರೆ ಗರ್ಭ ಧರಿಸಿದ ಅವಧಿಯಲ್ಲಿ ಅಥವಾ ಹೆರಿಗೆಯಾದಾಗ ಸೋಂಕು ತಗಲಿದರೆ.. ಎಂಬ ಕಲ್ಪನೆ ಹೆಚ್ಚು ಹೆದರಿಕೆ ಮೂಡಿಸುವಂತಹದ್ದು.

ಎಲ್ಲಿಯವರೆಗೆ?
ಸದ್ಯ ಗರ್ಭಿಣಿ ಅಲ್ಲವಲ್ಲ ಎಂದು ನಿಟ್ಟುಸಿರು ಬಿಡುವವರು ಬಹುತೇಕ ಮಂದಿ. ಆದರೆ ಇದರ ಇನ್ನೊಂದು ಮುಖವನ್ನೂ ನೋಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿ ಎಷ್ಟು ದಿನಗಳವರೆಗೆ ಎಂದು ಕರಾರುವಕ್ಕಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆ ವೃತ್ತಿಗೆ, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದರೆ.. ಇನ್ನಷ್ಟು ವಿಳಂಬ ಮಾಡುವ ಸಂದರ್ಭ ಎದುರಾದರೆ..

‘ಒಳ್ಳೆಯ ಉದ್ಯೋಗ, ಒಂದಿಷ್ಟು ಹಣ, ಸೂಕ್ತ ಸಂದರ್ಭ ಎಲ್ಲವನ್ನೂ ಲೆಕ್ಕಾಚಾರ ಹಾಕಬಹುದು. ಎಲ್ಲವೂ ಸರಿ ಹೋಯಿತು ಎನ್ನುವಾಗ ಈ ಕೊರೊನಾ ಸೋಂಕು ಆವರಿಸಿದೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಅಲ್ಲವೇ?’ ಎನ್ನುವಾಗ ಈಶಾ ಕ್ಷಣಕಾಲ ತಡಬಡಾಯಿಸಿದರೂ ‘ಮುಂದೆ ಸರಿಹೋಗಬಹುದು. ಖಂಡಿತ ಚಿಕಿತ್ಸೆ ಪಡೆದಾದರೂ ಮಗುವನ್ನು ಹೆರುವೆ’ ಎಂದು ದೃಢ ವಿಶ್ವಾಸದಿಂದ ಹೇಳುತ್ತಾಳೆ.

ಸಂತಾನಹೀನತೆಗೆ ಚಿಕಿತ್ಸೆಗೂ ಭಯ
ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವವರದ್ದು ಇನ್ನೊಂದು ರೀತಿ. ಈಗಾಗಲೇ ಕೃತಕ ಗರ್ಭಧಾರಣೆ (ಐಯುಐ), ಐವಿಎಫ್‌ನಂತಹ ಚಿಕಿತ್ಸೆ ತೆಗೆದುಕೊಳ್ಳುತ್ತಿರುವವರಲ್ಲಿ ಹಲವರಿಗೆ ಅದನ್ನು ಮುಂದುವರಿಸಲು ಆತಂಕ ಎದುರಾಗಿದೆ. ಇಂತಹ ಚಿಕಿತ್ಸೆಗೆ ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಆದರೆ ಪದೇ ಪದೇ ಕ್ಲಿನಿಕ್‌ಗಳಿಗೆ ಭೇಟಿ ಈ ಸಂದರ್ಭದಲ್ಲಿ ಸಾಧುವೂ ಅಲ್ಲ. ಹೀಗಾಗಿ ಕಾಯದೇ ಬೇರೆ ಮಾರ್ಗವೇ ಇಲ್ಲ.

‘ಒಂದು ವೇಳೆ ಗರ್ಭ ಧರಿಸಲು ಮನಸ್ಸು ಮಾಡಿದರೂ ಕೂಡ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಕ್ಲಿನಿಕ್‌ಗಳಲ್ಲಿ ಸಂತಾನಹೀನತೆಗೆ ಚಿಕಿತ್ಸೆ ತೆಗೆದುಕೊಳ್ಳುವ ಧೈರ್ಯ ಮಾಡಿದರೂ ಸಹ ಯಾರಾದರೂ ‘‘ಇಂತಹ ಸಂಕಷ್ಟದ ಕಾಲದಲ್ಲಿ ಅಪಾಯಕಾರಿ ಅಲ್ಲವೇ? ಯಾಕೆ ತೊಂದರೆ ಮೈ ಮೇಲೆ ಎಳೆದುಕೊಳ್ಳುತ್ತೀರಿ?’’ ಎಂದರೆ ಸಾಕು, ಚಿಂತೆ ಹೆಚ್ಚಾಗಿಬಿಡುತ್ತದೆ. ಒತ್ತಡವಿರುವಾಗ ಗರ್ಭಧಾರಣೆ ನಿರ್ಧಾರ ಸರಿಯಲ್ಲ’ ಎನ್ನುತ್ತಾರೆ ಡಾ.ವೈಶಾಲಿ.

ಒಂದು ಸಮೀಕ್ಷೆಯ ಪ್ರಕಾರ ಯುವತಿಯರಲ್ಲಿ ಫಲವತ್ತತೆ ಮಟ್ಟವೂ ಕುಸಿಯುತ್ತಿದೆ. ನಗರಗಳಲ್ಲಿ ಒಟ್ಟು ಫಲವತ್ತತೆಯ ದರ 2.2. ಅಂದರೆ ಒಬ್ಬಳು ಮಹಿಳೆ ಮಕ್ಕಳನ್ನು ಪಡೆಯುವ ವಯಸ್ಸಿನಲ್ಲಿ ಹೆರಬಹುದಾದ ಮಕ್ಕಳ ಸಂಖ್ಯೆ. ಇದಕ್ಕೆ ಏರುತ್ತಿರುವ ಮದುವೆ ವಯಸ್ಸು ಒಂದು ಕಾರಣವಾದರೆ, ಜೀವನಶೈಲಿಯಿಂದ ಬರಬಹುದಾದ ಸಮಸ್ಯೆಗಳು ಇನ್ನೊಂದು ಕಾರಣ.

‘ಇತ್ತೀಚೆಗೆ ಹದಿಹರೆಯದವರಲ್ಲೇ ಪಿಸಿಒಡಿ (ಪಾಲಿ ಸಿಸ್ಟಿಕ್‌ ಒವೆರಿಯನ್‌ ಡಿಸೀಸ್‌) ಸಮಸ್ಯೆ ಜಾಸ್ತಿಯಾಗುತ್ತಿದೆ. ಇದರಿಂದ ಹಾರ್ಮೋನ್‌ಗಳು ಏರುಪೇರಾಗಿ ಫಲವತ್ತತೆ ಕಡಿಮೆಯಾಗುತ್ತಿದೆ. ಆಹಾರದಲ್ಲಿ ಅಂದರೆ ತರಕಾರಿ, ಮಾಂಸ, ಕ್ಷೀರೋತ್ಪನ್ನಗಳಲ್ಲಿ ಕೀಟನಾಶಕದಿಂದಾಗಿ ಈಸ್ಟ್ರೋಜೆನ್‌ ಹಾರ್ಮೋನ್‌ ಅಧಿಕವಾಗಿರುವುದು ಇದಕ್ಕೆ ಕಾರಣ’ ಎಂದು ವಿಶ್ಲೇಷಿಸುವ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ವೀಣಾ ಭಟ್‌, ‘ಫಲವತ್ತಾಗುವ ಫಾಲಿಕಲ್ಸ್‌ ಸಂಖ್ಯೆ ವಯಸ್ಸಾದ ಮೇಲೆ ಕಡಿಮೆಯಾಗುತ್ತದೆ. ಮುಟ್ಟಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ’ ಎನ್ನುತ್ತಾರೆ.

**

ಕೊರೊನಾ ಸೋಂಕಿತ ತಾಯಿಯಿಂದ ಗರ್ಭದಲ್ಲಿರುವ ಮಗುವಿಗೆ ಅಥವಾ ಹೆರಿಗೆ ಸಂದರ್ಭದಲ್ಲಿ ಅಥವಾ ಎದೆ ಹಾಲಿನ ಮೂಲಕ ಸೋಂಕು ಹರಡುತ್ತದೆ ಎಂದು ಇನ್ನೂ ಸಾಬೀತಾಗಿಲ್ಲ. ಒಳ್ಳೆಯ ಸುದ್ದಿಯೆಂದರೆ ಕೆಲವು ಶಿಶುಗಳಲ್ಲಿ ಕೊರೊನಾ ವಿರುದ್ಧ ಆ್ಯಂಟಿ ಬಾಡೀಸ್‌ ಇರುವುದು ಪತ್ತೆಯಾಗಿದೆ. ಹಾಗೆಯೇ ಗರ್ಭ ಧರಿಸಿದ ಆರಂಭದ ದಿನಗಳಲ್ಲಿ ಗರ್ಭಿಣಿಗೆ ಸೋಂಕು ತಗಲಿದರೆ ಭ್ರೂಣದ ಮೇಲೆ ಏನು ಪರಿಣಾಮ ಬೀರುತ್ತದೆ, ಗರ್ಭಿಣಿಯು ತೀವ್ರವಾಗಿ ಅಸ್ವಸ್ಥಳಾಗಬಹುದೇ ಎಂಬುದರ ಕುರಿತೂ ಅಧ್ಯಯನಗಳು ನಡೆಯಬೇಕಾಗಿದೆ.

ಗರ್ಭ ಧರಿಸಿದಾಗ ವೈದ್ಯರ ಬಳಿ ಸುರಕ್ಷಿತ ತಪಾಸಣೆ, ಸ್ಕ್ಯಾನಿಂಗ್‌, ಹೆರಿಗೆಗೆ ಅನುಕೂಲವಿದ್ದರೆ ಹೆದರುವ ಅಗತ್ಯವಿಲ್ಲ.

ಫಲವತ್ತತೆ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳುವವರು, ವಯಸ್ಸು ಮೀರುತ್ತಿದೆ ಎನ್ನುವವರು ಕೆಲವು ತಿಂಗಳು ಕಾಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT