ಮಂಗಳವಾರ, ಸೆಪ್ಟೆಂಬರ್ 21, 2021
28 °C

ಇಪ್ಪತ್ತರ ನಂತರ: ಮಗಳ ಮದುವೆ; ಸುಮುಹೂರ್ತೇ ಸಾವಧಾನ!

ವಿನಯಾ ಒಕ್ಕುಂದ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ಏರಿಸುವ ಕುರಿತು ಇತ್ತೀಚೆಗಷ್ಟೇ ಪ್ರಧಾನಿಯವರು ಪ್ರಸ್ತಾಪ ಮಾಡಿದ್ದಾರೆ. ಹೌದು ಹೆಣ್ಣು–ಗಂಡಿನ ಮದುವೆ ವಯೋಮಿತಿಯಲ್ಲಿ ಇದುವರೆಗೆ ವ್ಯತ್ಯಾಸವನ್ನು ಉಳಿಸಿಕೊಂಡು ಬಂದಿದ್ದು ಏಕೆ? ಹೆಣ್ಣುಮಕ್ಕಳ ಮದುವೆಗೆ ಸೂಕ್ತ ವಯಸ್ಸಾದರೂ ಯಾವುದು? ವೈದ್ಯಕೀಯ ಹಾಗೂ ಕಾನೂನು ವಲಯಗಳು ಬೀರುವ ಒಳನೋಟಗಳೇನು? ಇಲ್ಲಿದೆ ಭಿನ್ನ ವಿಶ್ಲೇಷಣೆ

ಮನುಷ್ಯ ಚರಿತ್ರೆಯಲ್ಲಿ ಹೆಣ್ಣಿನ ಕುರಿತ ಮಾತುಗಳು ಬಹಳ ಕೇಳಿಯಾಗಿದೆ. ಕಾಲ ಕ್ರಮಿಸಿದೆ.

ಅತ್ತೀಯ ಮನಿಯಾಗ ಮುತ್ತಾಗಿ ಇರಬೇಕ

ಹೊತ್ತಾಗಿ ನೀಡಿದರೂ ಉಣಬೇಕ/ ನನ ಮಗಳ

ತವರೀಗ ಹೆಸರ ತರಬೇಕ

ಈ ಪುಟ್ಟ ಪದ್ಯ ಉಣ್ಣಲು, ತಿನ್ನಲು ಹಟ ಮಾಡಬಲ್ಲ ಎಳೆಯ ಬಾಲೆಯ ಹೆಗಲಿಗೆ ‘ತವರಿಗೆ ಹೆಸರು ತರುವ’ ಹೊಣೆ ಹೊರಿಸಿದ ಚರಿತ್ರೆಯ ಕದ ತೆರೆಯುತ್ತಿದೆ. ಆಗಲೂ, ಹೆಗಲು ಸೋಲುವ ಈ ಹೆಣ್ಣುಬಾಳಿನ ಇಕ್ಕಟ್ಟುಗಳೇ ಧರ್ಮಸಂಹಿತೆಗಳಾಗಿದ್ದವು. ಮನುಧರ್ಮಶಾಸ್ತ್ರದಲ್ಲಿ ‘ಪಿತೃವು ಮಗಳು ಎಂಟು ವರ್ಷದವಳಾಗುವ ಮೊದಲೇ ವಿವಾಹ ಮಾಡಬೇಕು. ಗುಣಾಢ್ಯನಾದ ವರ ಸಿಗದಿದ್ದರೆ ಗುಣಹೀನನಾದರೂ ಸರಿಯೇ’ ಎಂಬ ಮಾತಿದೆ. ಈ ತಪ್ಪುಗಳಿಂದಾಗಿ, ಹೆಣ್ಣಿಗೆ ಬದುಕು, ಜೀವನ್ಮರಣದ ಪ್ರಶ್ನೆಯಾಗಿತ್ತು. ಗಂಡು ನಿರಂತರವಾದ ಯಜಮಾನ್ಯತೆಯ ನಿರ್ವಹಣೆಯ ಅತೃಪ್ತಿಯಲ್ಲಿ ಬಳಲುವಂತಾಯ್ತು. ಹಾಗಿದ್ದೂ ಮನುಷ್ಯ ಬದುಕು ಸಂತಸ–ಸಮೃದ್ಧಿಯನ್ನು ಕಂಡಿದ್ದರೆ ಅದು ಹೆಣ್ಣಿನ ಸಹನೆ ಮತ್ತು ಧಾರಣ ಗುಣಗಳಿಂದ. ಆಧುನಿಕ ಕಾಲದ ಬದಲಾದ ಬದುಕಿನ ನೆಲೆಗಳಲ್ಲಿ ಹೆಣ್ಣು ತಾನು ಮನುಷ್ಯಳೆಂದು ಪ್ರತಿಪಾದಿಸಿಕೊಳ್ಳಲು ಹೋರಾಟವನ್ನು ನಡೆಸಬೇಕಾಯಿತು. ಪಿತೃತ್ವ ಹಿಸಾಸಕ್ತ ಜೀವನಕ್ರಮದಲ್ಲಿ ಹೆಣ್ಣು ತನ್ನೆಲ್ಲ ಜ್ಞಾನಾಕಾಂಕ್ಷೆಯನ್ನು ದಮನಿಸಿಕೊಂಡು, ಅಥವಾ ಅದನ್ನು ಪಿತೃತ್ವದಾಳ್ವಿಕೆಗೆ ಒಪ್ಪಿತವಾಗಿಸಿಕೊಂಡು ಬದುಕಬೇಕಾಯಿತು.

ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ಸಾಮಾಜಿಕ ಬೆಳವಣಿಗೆಗಳು ಹೆಣ್ಣಿನ ಸ್ಥಾಪಿತ ಬಿಂಬವನ್ನು ಕದಲಿಸಿದವು. ಹೆಣ್ಣನ್ನು ಸಹಜೀವಿಯಾಗಿ ಒಪ್ಪಿತಗೊಳಿಸುವ ಹಲವು ಪ್ರಯತ್ನಗಳು ನಡೆದವು. ಈ ಎಲ್ಲ ಪರಿಣಾಮವಾಗಿ ಹೆಣ್ಣಿನ ಬದುಕು ಬಹಿರಂಗವಾಗಿ ಹಲವು ಬದಲಾವಣೆಗಳನ್ನು ಒಳಗೊಂಡಿತು. ಅಂತರಂಗದಲ್ಲಿ ಮಾತ್ರ ಅದೇ ಸನಾತನ ಹಳಸಲು ಪಳೆಯುಳಿಕೆಗಳ ಭಾರ. ಹೆಣ್ಣಿನ ದಮನಿತ ಚರಿತ್ರೆಯಲ್ಲಿ ಹಲವು ರೂಪಾಂತರಗಳು ನಡೆದವು ಅಷ್ಟೆ. ಇಂದಿಗೂ ಹೆಣ್ಣಿನ ವ್ಯಕ್ತಿತ್ವ ನಿರ್ಮಿತಿಯ ಪ್ರಶ್ನೆಯೇ ಅರ್ಥಹೀನ ಎಂಬ ಸ್ಥಿತಿಯಿದೆ. ಇದಕ್ಕೆ ಮುಖ್ಯ ಕಾರಣ ವಿವಾಹ ವ್ಯವಸ್ಥೆ. ಹೆಣ್ಣಿನ ಐಡೆಂಟಿಟಿ ಎನ್ನುವುದು ಪರಿಚಾರಿಕೆಯದು. ಅದೇ ಆದರ್ಶ ಎಂಬುದು ಪರಂಪರೆಗೆ ಮಾತ್ರವಲ್ಲ, ವರ್ತಮಾನಕ್ಕೂ ಸರಿ ಎನಿಸಿಕೊಂಡಿದೆ. ವಿವಾಹ ವ್ಯವಸ್ಥೆಯು ಪುರುಷ ಪ್ರಾಧಾನ್ಯತೆಯನ್ನು ಅತಿನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿದೆ. ಗಂಡಿಗಿಂತ ಹೆಣ್ಣು, ಎತ್ತರ, ದಪ್ಪ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ ಹೀಗೆ ಎಲ್ಲದರಲ್ಲೂ ಕಡಿಮೆ ಇರಬೇಕು ಎಂಬ ನಿಯಮ ಲಿಂಗರಾಜಕಾರಣದ ಉತ್ಪತ್ತಿಯೇ ಆಗಿದೆ. ಗಂಡಿನ ಹಿತಾಕಾಂಕ್ಷಿ ಸ್ಥಿತಿಯಲ್ಲಿ ಮಾತ್ರ ಇವುಗಳೊಂದಿಗಿನ ಮರುಹೊಂದಾಣಿಕೆ ಸಾಧ್ಯವಾಗಿದೆ.

ಆದರೆ, ಹೆಣ್ಣಿನ ವಿವಾಹ ವಯೋಮಿತಿಯಲ್ಲಿ ಮಾತ್ರ ಇಂತಹ ಹೊಂದಾಣಿಕೆಗಳು ಅಸಾಧ್ಯ ಎನಿಸಿವೆ. ಹೆಣ್ಣಿನ ಸಹಜಶಕ್ತಿ ಜಾಣ್ಮೆಯ ಬಗ್ಗೆ, ಪ್ರಜನನ ಸಾಮರ್ಥ್ಯದ ಬಗ್ಗೆ ದಿಗಿಲುಗೊಂಡ ಲಿಂಗರಾಜಕಾರಣದ ಫಲಿತವಿದು. ಮದುವೆ ಹೆಣ್ಣಿನ ಒಟ್ಟಾರೆ ಬದುಕನ್ನೇ ರೂಪಿಸುವ ಇತಿವೃತ್ತವಾದ್ದರಿಂದ ಸಮಸ್ಯೆ ಇನ್ನಷ್ಟೂ ಸಂಕೀರ್ಣಗೊಳ್ಳುತ್ತಲೇ ಬಂತು. ಹೆಣ್ಣನ್ನು ಎರಡನೆಯವಳಾಗಿ ನೋಡುವ ದೃಷ್ಟಿಕೋನ ಕದಲಿಲ್ಲ. ಹೀಗಾಗಿ, ಮಹಿಳಾಪರ ಚಿಂತನೆಯು ಮದುವೆಯನ್ನು ಕೇಂದ್ರವಾಗಿಟ್ಟುಕೊಂಡೇ ತನ್ನ ಪ್ರತಿರೋಧಗಳನ್ನು ದಾಖಲಿಸಬೇಕಾಯಿತು.

ಸ್ವಾತಂತ್ರ್ಯಪೂರ್ವದಲ್ಲಿ, ಅಂದರೆ 1930ರಲ್ಲಿ ಜಾರಿಗೆ ಬಂದ ಸಾರ್ದಾ ಆ್ಯಕ್ಟ್ ಹೆಣ್ಣುಮಕ್ಕಳ ಮದುವೆ ವಯಸ್ಸಿನ ಕುರಿತ ಮೊದಲ ದಾಖಲೆ. 1978ರಲ್ಲಿ ಇದು ನಿಖರಗೊಂಡು ಹೆಣ್ಣಿಗೆ 18 ವಯಸ್ಸು ಮತ್ತು ಗಂಡಿಗೆ 21 ವಯಸ್ಸು ಆಗಿರಬೇಕು ಎಂದು ದೃಢೀಕರಿಸಲಾಯಿತು. ಆದರೆ, ಅತಿ ಸಂಕೀರ್ಣವಾಗಿರುವ ಭಾರತೀಯ ಸಾಮಾಜಿಕತೆಯು ಹೆಣ್ಣುಮಗುವು 18 ತುಂಬುವವರೆಗಾದರೂ ಸ್ವಾತಂತ್ರ್ಯದ ಸೌಖ್ಯವನ್ನು ಅನುಭವಿಸಲು ಆಸ್ಪದ ಕೊಡುವುದಿಲ್ಲ.

1998ರ ಯುನಿಸೆಫ್‌ ಸರ್ವೇ ಪ್ರಕಾರ 18 ವರ್ಷದೊಳಗಿನ ಹೆಣ್ಣುಮಕ್ಕಳ ವಿವಾಹ ಪ್ರಮಾಣ ಶೇಕಡ 47ರಷ್ಟಿತ್ತು. ಈಗಲೂ ಶೇ 17ರಷ್ಟು ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುತ್ತಾರೆ ಎನ್ನುತ್ತವೆ ವರದಿಗಳು. ಭಾರತವನ್ನು ಜಗತ್ತಿನಲ್ಲಿಯೇ ಅತಿಹೆಚ್ಚು ಬಾಲವಧುಗಳಿರುವ ದೇಶವೆಂದು ಯುನಿಸೆಪ್‌ ದಾಖಲಿಸಿದೆ.

ಈ ಸ್ಥಿತಿಗತಿಗಳನ್ನು ಗಮನಿಸಿದಾಗ ಹೆಣ್ಣಿನ ಮದುವೆಯ ವಯೋಮಿತಿಯನ್ನು ಹಿಗ್ಗಿಸುವುದು– ಅವಳ ವ್ಯಕ್ತಿತ್ವ ನಿರ್ಮಿತಿಯ ಅವಕಾಶವನ್ನು ಒಂದಿಷ್ಟು ಉಳಿಸಿದಂತೆ. ಅವಳ ದೇಹ ಸುಪುಷ್ಟವಾಗಲು, ಶಿಶುಮರಣ, ತಾಯ್ಮರಣ, ದುರ್ಬಲ ಶಿಶುಗಳ ಜನನವಷ್ಟೇ ಅಲ್ಲದೆ ಜನಸಂಖ್ಯೆಯ ಹೆಚ್ಚಳವನ್ನೂ ತಡೆದಂತೆ. ಆದರೆ, ಕಾನೂನಿನ ಒಂದು ಎಳೆ ಮಹಿಳಾ ಬದುಕಿನ ಬಿಕ್ಕಟ್ಟುಗಳನ್ನು ಬಿಡಿಸುವಷ್ಟು ಶಕ್ತಿಶಾಲಿ ಎಂದು ಅನಿಸುತ್ತಿಲ್ಲ. ದಿನಂಪ್ರತಿ ಇದೇ ವಯೋಮಾನದ ಹುಡುಗಿಯರೊಂದಿಗೆ ಒಡನಾಡುವ ನನಗೆ, ಅವರ ಬೇಗುದಿಯ ಸ್ಥೂಲ–ಸೂಕ್ಷ್ಮಗಳು ಅರಿವಿನ ಭಾಗವಾಗುತ್ತಿರುತ್ತವೆ. ಈ ವರ್ಷ ಕ್ಲಾಸಿಗೆ ಜೀವತುಂಬುತ್ತಿದ್ದ ಚೂಪುಗಣ್ಣಿನ, ಕುಶಲ ಮನಸ್ಸಿನ, ತುಟಿಯಂಚಿನ ನೂರು ಪ್ರಶ್ನೆಗಳ ಚೆಲುವೆಯರು ಮುಂದಿನ ವರ್ಷದಷ್ಟೊತ್ತಿಗೆ ಕಾಣೆಯಾಗಿರುತ್ತಾರೆ. ಮದುವೆ ಅವರನ್ನು ಎತ್ತಲೋ ಒಯ್ದಿರುತ್ತದೆ.

ಕೆಲವೊಮ್ಮೆ ಗಂಡನ ಮನೆಯವರು ಓದಿನ ಅವಕಾಶವನ್ನು ದಯಪಾಲಿಸುತ್ತಾರೆ. ಆದರೆ, ವಿವಾಹದ ವಿಧಿನಿಯಮಗಳನ್ನು ಪೂರೈಸಿ ಏದುಸಿರುಬಿಡುತ್ತ ನಿಸ್ತೇಜರಾಗಿ ಪದವಿ ಪಡೆಯಬಲ್ಲರೇ ಹೊರತು ಓದಿನ ಮೂಲಕ ದೊರೆವ ಚೈತನ್ಯವನ್ನಲ್ಲ. ಅವರ ಪ್ರತಿಭೆ, ಜ್ಞಾನಾಸಕ್ತಿಗಳನ್ನು ಮುರುಟಿಸಿ; ಗೃಹಿಣಿತನದ ಸ್ಟಿಕ್ಕರ್‌ ಹಚ್ಚಲಾಗುತ್ತದೆ. ಹೆಣ್ಣು ಜೀವದ ಶಕ್ತಿ, ಸೃಜನ ಸಾಮರ್ಥ್ಯಗಳೆಲ್ಲ ಸಹಜವೆಂಬಂತೆ ಕಳೆದುಹೋಗುತ್ತದೆ. ಇದರಿಂದ ಸಮಾಜವೇ ಶಕ್ತಿಹೀನವಾಗುತ್ತದೆಂಬ ಎಚ್ಚರವೂ ಇಲ್ಲವಾಗಿದೆ. ವಿವಾಹದ ವಯೋಮಾನದ ಹೆಚ್ಚಳ ಈ ಒತ್ತುವರಿಯನ್ನು ಕಿಂಚಿತ್ತಾದರೂ ಪಡೆಯಬಹುದೇ ಎಂಬ ಆಶಾವಾದವಿದೆ. ಗ್ರಾಮೀಣ ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣವು ಸಾಮಾನ್ಯವಾಗಿ ಪಿಯುಸಿ ಮಟ್ಟದ್ದಾಗಿರುವುದಕ್ಕೂ; ಮದುವೆಯ ವಯೋಮಿತಿ 18 ಆಗಿರುವುದಕ್ಕೂ ಇರುವ ಅಂತರ್‌ ಸಂಬಂಧವನ್ನು ನಿರ್ಲಕ್ಷಿಸಲಾಗದು. ಎರಡು ವರ್ಷಗಳ ಅವಕಾಶ ದೊಡ್ಡದಲ್ಲವಾದರೂ ಅವಳ ಪ್ರಬುದ್ಧ ವಿಚಾರಶಕ್ತಿಗದು ಆಸ್ಪದವಾಗಬಲ್ಲದು. ಪ್ರತಿಭಾ ನಂದಕುಮಾರ್‌ ಕವಿತೆಯೊಂದರ ಹುಡುಗಿ ಪ್ರಶ್ನಿಸಿಕೊಳ್ಳುತ್ತಾಳೆ. ‘ಹದಿನೆಂಟರ ಏರುಹರೆಯದಲ್ಲಿ ಕಣ್ಣಿಗೆ ಕಂಡವರೆಲ್ಲರೂ ರಾಜಕುಮಾರರು, ಇಪ್ಪತ್ತರ ನಂತರ ಕಣ್ಣರಳಿಸಿ ಲೋಕ ನೋಡ ತೊಡಗಿದರೆ ಆ ಹುಡುಗ ಯಾಕಿಷ್ಟು ‍ಪೆದ್ದು ಪೆದ್ದಾಗಿದ್ದಾನೆ?’

ಸ್ವನಿರ್ಣಯ ಸಾಮರ್ಥ್ಯವನ್ನು, ಲೋಕದ ಕುರಿತ ತನ್ನ ನಿಲುವನ್ನು ಪರಾಮರ್ಶಿಸಿಕೊಳ್ಳಲಿದು ಸಾಧ್ಯಮಾಡೀತು. ಆದರೆ, ಹೆಣ್ಣನ್ನು ಪಿತೃಸ್ವಾಮ್ಯದಿಂದ ಬೆಲೆಗಟ್ಟುವ ಸಾಮಾಜಿಕ ರೋಗ ಗುಣವಾಗುವವರೆಗೂ ಇಂತಹ ಸವಲತ್ತುಗಳು ‘ತೋರಿ ಉಂಬ ಲಾಭ’ಗಳಾಗಿರುತ್ತವೆ ಅಷ್ಟೆ. ಅದರಲ್ಲೂ ಅಧಿಕಾರ ರಾಜಕಾರಣ ಹೆಣ್ಣಿನ ವಿಷಯಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುತ್ತದೆ. 2006ರಲ್ಲಿ ಮುಸ್ಲಿಂ ಆರ್ಗನೈಸೇಶನ್‌ಗಳು, ಹುಡುಗಿಯ ವಿವಾಹ ವಯೋಮಿತಿ 18 ಇರುವುದನ್ನು ಪ್ರಶ್ನಿಸಿ, ವೈಯಕ್ತಿಕ ಕಾನೂನು ಸಹಾಯದಿಂದ ಅದನ್ನು ಎದುರಿಸಿದ್ದವು. ಅದೊಂದು ತಪ್ಪು ಅಪೀಲೇ ಸರಿ. ಆ ತೀರ್ಪು ಇನ್ನೂ ನಿರ್ಣಯವಾಗಿಲ್ಲ. ಈಗಿನ ಕಾನೂನನ್ನು ಅವರು ಮರಳಿ ಪ್ರಶ್ನಿಸಿದರೆ, ದೊರೆವ ರಾಜಕೀಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೆ, ಅದು ಒಂದು ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆವ ತಂತ್ರವಾಗುತ್ತದೆ ಅಷ್ಟೇ. ಹಾಗಾಗದಿರಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು