ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನ್: ಗೆಲುವಿನ ನಗೆ ಬೀರಿದ ಬರದರ್‌; ಪಾಕಿಸ್ತಾನ ಮಾನ್ಯತೆ ನೀಡುವ ಸಾಧ್ಯತೆ

Last Updated 16 ಆಗಸ್ಟ್ 2021, 21:54 IST
ಅಕ್ಷರ ಗಾತ್ರ

ಲಂಡನ್‌: ಅಮೆರಿಕದ ವಿನಂತಿಯಂತೆ ಮೂರು ವರ್ಷಗಳ ಹಿಂದೆ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾದ ಅಬ್ದುಲ್‌ ಘನಿ ಬರದರ್‌ ಈಗ ಅಪ್ಗಾನಿಸ್ತಾನ ಯುದ್ಧದ ವಿಜೇತನಾಗಿ ಹೊರ ಹೊಮ್ಮಿದ್ದಾನೆ ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿವೆ.

ಹೈಬತ್‌ ಉಲ್ಲಾ ಅಖುಂದ್ಜಾದಾ ತಾಲಿಬಾನ್‌ನ ಅತ್ಯುನ್ನತ ನಾಯಕ. ಬರದರ್‌, ಅದರ ರಾಜಕೀಯ ವಿಭಾಗದ ಮುಖ್ಯಸ್ಥ. ಜನರಿಗೆ ಹೆಚ್ಚು ಕಾಣಿಸಿಕೊಂಡಿರುವ ಮುಖ ಈತನದ್ದು ಮಾತ್ರ. ಕತಾರ್‌ನ ದೋಹಾದಲ್ಲಿದ್ದ ಈಗ ಭಾನುವಾರ ಸಂಜೆಯೇ ಕಾಬೂಲ್‌ನತ್ತ ಹೊರಟಿದ್ದಾನೆ ಎನ್ನಲಾಗಿದೆ.

ಅಫ್ಗಾನಿಸ್ತಾನವು ತಾಲಿಬಾನ್‌ ವಶವಾದ ಬಳಿಕ ಈತ ಹೇಳಿಕೆಯನ್ನೂ ನೀಡಿದ್ದಾನೆ. ಇದು ಆರಂಭ, ಮುಂದೆ ದೇಶ ಸೇವೆಮಾಡಬೇಕಿದೆ ಎಂದು ಈತ ಹೇಳಿದ್ದಾಗಿ ದಿ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ.

ಬರದರ್‌ ನಿರಂತರ ಸಂಘರ್ಷದಲ್ಲಿಯೇ ಇದ್ದವನು. 1968ರಲ್ಲಿ ಉರುಜ್ಗನ್‌ ಪ್ರಾಂತ್ಯದಲ್ಲಿ ಜನಿಸಿದ ಈತ 1980ರ ದಶಕದಲ್ಲಿ ರಷ್ಯಾ ವಿರುದ್ಧ ಅಫ್ಗನ್‌ ಮುಜಾಹಿದೀನ್‌ ಪರವಾಗಿ ಹೋರಾಡಿದ್ದ. 1992ರಲ್ಲಿ ರಷ್ಯಾ ಹೊರ ನಡೆದ ಬಳಿಕ ಕಂದಹಾರ್‌ನಲ್ಲಿ ಮದರಸವೊಂದನ್ನು ಆರಂಭಿಸಿದ್ದ. ತನ್ನ ಸೋದರ ಸಂಬಂಧಿ ಮುಲ್ಲಾ ಮುಹಮ್ಮದ್‌ ಉಮರ್‌ ಜತೆಗೂಡಿ ಈತ ತಾಲಿಬಾನ್‌ ಸ್ಥಾಪಿಸಿದೆ.

ತಾಲಿಬಾನ್‌ 20 ವರ್ಷ ಅಜ್ಞಾತವಾಗಿದ್ದಾಗ ಅದರ ಸೇನಾ ಕಮಾಂಡರ್‌ ಮತ್ತು ರಾಜಕೀಯ ವಿಭಾಗದ ಮುಖ್ಯಸ್ಥನಾಗಿ ಈತ ಇದ್ದ ಎನ್ನಲಾಗಿದೆ.

ದಾಸ್ಯದ ಸಂಕೋಲೆ ಕಳಚಿದೆ: ಪಾಕ್‌

ಅಫ್ಗಾನಿಸ್ತಾನವನ್ನು ಕೈವಶ ಪಡೆದಿರುವ ತಾಲಿಬಾನ್‌ ಸರ್ಕಾರಕ್ಕೆ ಪಾಕಿಸ್ತಾನ ಮಾನ್ಯತೆ ನೀಡುವ ಸಾಧ್ಯತೆ ಇದೆ. ಅಫ್ಗಾನಿಸ್ತಾನವು ‘ದಾಸ್ಯದ ಸಂಕೋಲೆ ಕಳಚಿದೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಅಫ್ಗಾನಿಸ್ತಾನದ ಬೆಳವಣಿಗೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು ಜನರು ದಾಸ್ಯದ ಸಂಕೋಲೆ ಕಿತ್ತೆಸೆದಿದ್ದಾರೆ ಎಂದರು. ಅಫ್ತಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರವನ್ನು ಕಿತ್ತೊಗೆದ ತಾಲಿಬಾನ್‌ಗೆ ಪಾಕಿಸ್ತಾನವು ಬೆಂಬಲ ನೀಡಿದೆ ಎಂಬ ಆರೋಪ ಇದೆ.

ಅಫ್ಗಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ಇರಬೇಕು ಎಂಬುದು ಪಾಕಿಸ್ತಾನದ ಅಧಿಕೃತ ನಿಲುವು. ಅಧಿಕಾರ ಹಸ್ತಾಂತರವು ಸುಗಮವಾಗಿ ನಡೆಯಲು ಈ ಹಿಂದೆಯೇ ಪಾಕಿಸ್ತಾನವು ಅಫ್ಗಾನಿಸ್ತಾನ ನಾಯಕರ ಸಭೆಯನ್ನೂ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT