ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಗೆಲುವು ಘೋಷಣಾ ಪ್ರಹಸನ

Last Updated 4 ನವೆಂಬರ್ 2020, 19:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಜಯಗಳಿಸಿರುವುದಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ ಎಣಿಕೆ ಮುಗಿಯುವ ಮುನ್ನವೇ ಘೋಷಿಸಿದರು. ಇದು ಗೊಂದಲಕ್ಕೆ ಕಾರಣವಾಗಿತ್ತು.

ಮತ ಎಣಿಕೆ ನಡೆಯುತ್ತಿದ್ದ ಸಂದರ್ಭದಲ್ಲೇ, ತಡರಾತ್ರಿ 2 ಗಂಟೆಗೆ ಟ್ರಂಪ್ ಅವರು ಶ್ವೇತಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದರು. ‘ಬಹುತೇಕ ರಾಜ್ಯಗಳಲ್ಲಿ ನಾವು ಗೆಲ್ಲಲಿದ್ದೆವು. ವಾಸ್ತವದಲ್ಲಿ ನಾವು ಈಗಾಗಲೇ ಗೆದ್ದಿದ್ದೇವೆ. ಗೆಲುವು ಘೋಣೆಯಾಗುವುದಷ್ಟೇ ಬಾಕಿಇದೆ. ಆದರೆ ಅಷ್ಟರಲ್ಲಿ ಮತ ಎಣಿಕೆಯಲ್ಲಿ ವಂಚನೆ ನಡೆಯಿತು. ಈಗಷ್ಟೇ ಹಲವಾರು ಮುಂಚಿತ ಮತಗಳನ್ನು ಎಣಿಕೆಗೆ ಸೇರಿಸಲಾಗಿದೆ. ಇದು ಕಾನೂನು ಬಾಹಿರ.ಇದು ಅಮೆರಿಕದ ಜನರಿಗೆ ಮಾಡಿದ ವಂಚನೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಮತ ಎಣಿಕೆ ನಿಲ್ಲಿಸುತ್ತೇವೆ’ ಎಂದು ಅವರು ಹೇಳಿದರು.

ಆದರೆ, ಚುನಾವಣೆ ಅವಧಿ ಮುಗಿಯುವ ಮುನ್ನವೇ ಹಲವರು ಇ-ಮೇಲ್ ಮೂಲಕ ಮತ ಚಲಾಯಿಸಿದ್ದಾರೆ. ಹೀಗಾಗಿ ಅವುಗಳನ್ನು ಮಾನ್ಯ ಮಾಡಬೇಕಾಗುತ್ತದೆ ಎಂದು ಚುನಾವಣಾ ಮಂಡಳಿ ಹೇಳಿದೆ.

ಮಾಧ್ಯಮಗೋಷ್ಠಿಯ ಬೆನ್ನಲ್ಲೇ, ‘ನಾನು ಗೆದ್ದಿದ್ದೇನೆ’ ಎಂದು ಟ್ರಂಪ್‌ ಟ್ವೀಟ್‌ಸಹ ಮಾಡಿದರು. ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಟ್ರಂಪ್ ಅವರ ಈ ಘೋಷಣೆಯನ್ನು ಸಂಭ್ರಮಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅವರು ತಮ್ಮ ಈ ಟ್ವೀಟ್‌ ಅನ್ನು ಡಿಲೀಟ್ ಮಾಡಿದರು.

ರಿಪಬ್ಲಿಕನ್‌ ಸದಸ್ಯರಿಂದಲೇ ಆಕ್ಷೇಪ: ಟ್ರಂಪ್ ಅವರು ಮತ ಎಣಿಕೆಗೂ ಮುನ್ನವೇ ಗೆಲುವು ಘೋಷಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಟ್ರಂಪ್ ಅವರ ಪಕ್ಷದ ಸದಸ್ಯರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಟ್ರಂಪ್ ಅವರೇ ಮತಎಣಿಕೆ ಪೂರ್ಣಗೊಳ್ಳುವ ಮುನ್ನ ಗೆಲುವು ಘೋಷಿಸುವುದು ಸರಿಯಲ್ಲ. ಯಾರಾದರೂ ಗೆಲ್ಲಬಹುದು, ನೀವಾದರೂ ಗೆಲ್ಲಬಹುದು, ಡೆಮಾಕ್ರಟಿಕ್ ಪಕ್ಷದಬೈಡನ್ ಅವರಾದರೂ ಗೆಲ್ಲಬಹುದು. ಮತ ಎಣಿಕೆಯ ಫಲಿತಾಂಶ ಏನು ಬರುತ್ತದೋ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಲ್ಲಿಯವರೆಗೆ ಕಾಯುತ್ತೇವೆ’ ಎಂದು ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್‌ ಸದಸ್ಯರೊಬ್ಬರು ಟ್ವೀಟ್ ಮಾಡಿದ್ದರು.

ಕಾನೂನು ತಂಡ ಸಿದ್ಧವಿದೆ: ಬೈಡನ್

ಟ್ರಂಪ್ ಟವರು ತಮ್ಮ ಗೆಲುವು ಘೋಷಿಸಿದ್ದನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು, 'ಟ್ರಂಪ್ ಅವರ ಹೇಳಿಕೆ ಅತಿರೇಕ ಮತ್ತು ಅಸಾಧಾರಣ. ಅವರು ಮತ ಎಣಿಕೆ ನಿಲ್ಲಿಸಲು ಸುಪ್ರೀಂ ಕೋರ್ಟ್‌ಗೆ ಹೋಗುವಾದರೆ, ಅದನ್ನು ಎದುರಿಸಲು ನಮ್ಮ ಕಾನೂನು ತಂಡ ಸಿದ್ಧವಿದೆ. ಆದರೆ ಯಾವ ಕಾರಣಕ್ಕೂ ಮತ ಎಣಿಕೆಯನ್ನು ನಿಲ್ಲಿಸಲು ಬಿಡುವುದಿಲ್ಲ. ಚಲಾವಣೆಯಾಗಿರುವ ಪ್ರತಿಯೊಂದು ಮತವೂ ಎಣಿಕೆಯಾಗಬೇಕು' ಎಂದು ಜೋ ಬೈಡನ್ ಹೇಳಿದ್ದಾರೆ.

'ಹಲವು ರಾಜ್ಯಗಳಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ. ನಮ್ಮ ಗೆಲುವು ನಿಶ್ಚಿತ. ಆದರೆ ಮತ ಎಣಿಕೆ ಇನ್ನೂ ನಡೆಯುತ್ತಿದೆ. ಅದು ಮುಗಿಯುವವರೆಗೂ ಕಾಯೋಣ' ಎಂದು ಬೈಡನ್ ಅವರು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT