ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ, ಅಮೆರಿಕದಿಂದ ಫ್ರಾನ್ಸ್‌ ರಾಯಭಾರಿ ವಾಪಾಸ್‌

Last Updated 18 ಸೆಪ್ಟೆಂಬರ್ 2021, 6:21 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಒಪ್ಪಂದವನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿರುವ ತನ್ನ ರಾಯಭಾರಿಯನ್ನು ಫ್ರಾನ್ಸ್‌ ಹಿಂದಕ್ಕೆ ಕರೆಸಿಕೊಂಡಿದೆ. ಹಾಗೆಯೇ ತನ್ನ ಅತ್ಯಂತ ಹಳೆಯ ಮಿತ್ರ ರಾಷ್ಟ್ರ ಅಮೆರಿಕದಿಂದಲೂ ಫ್ರಾನ್ಸ್‌ ರಾಯಭಾರಿಯನ್ನು ಶುಕ್ರವಾರ ವಾಪಾಸು ಕರೆಸಿಕೊಂಡಿದೆ.

ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಚೀನಾ ಪ್ರಭಾವವನ್ನು ತಗ್ಗಿಸಲು ಆಸ್ಟ್ರೇಲಿಯಾ, ಬ್ರಿಟನ್‌ನೊಂದಿಗೆ ಅಮೆರಿಕವು ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಈ ಮೈತ್ರಿಯಡಿ ಅಮೆರಿಕ, ಬ್ರಿಟನ್‌ ಎಂಟು ಪರಮಾಣು– ಚಾಲಿತ ಜಲಾಂತರ್ಗಾಮಿ ನೌಕೆಗಳ ಅಭಿವೃದ್ಧಿಗೆ ಆಸ್ಟ್ರೇಲಿಯಾಗೆ ನೆರವು ನೀಡಲಿವೆ.

2016ರಲ್ಲಿ ಆಸ್ಟ್ರೇಲಿಯಾವು ಫ್ರಾನ್ಸ್‌ನೊಂದಿಗೆ 12 ಸಾಂಪ್ರದಾಯಿಕ ಡೀಸೆಲ್-ವಿದ್ಯುತ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಹೊಸದಾಗಿ ತ್ರಿಪಕ್ಷೀಯ ಮೈತ್ರಿ ಬಗ್ಗೆ ಘೋಷಣೆಯಾದ ಬೆನ್ನಲ್ಲೇ ಆಸ್ಟ್ರೇಲಿಯಾವು ಫ್ರಾನ್ಸ್‌ ಜತೆಗಿನ ಈ ಒಪ್ಪಂದವನ್ನು ರದ್ದುಗೊಳಿಸಿದೆ.

‘ಆಸ್ಟ್ರೇಲಿಯಾದಲ್ಲಿರುವ ತನ್ನ ರಾಯಭಾರಿಯನ್ನು ಫ್ರಾನ್ಸ್‌ ಹಿಂದಕ್ಕೆ ಕರೆಸಿಕೊಂಡಿದೆ. ಇದು ನಿಜಕ್ಕೂ ಬೇಸರದ ಸಂಗತಿ. ನಮ್ಮ ನಿರ್ಧಾರದಿಂದ ಫ್ರಾನ್ಸ್‌ಗೆ ನಿರಾಶೆಯಾಗಿದೆ ಎಂಬುದು ಅರ್ಥವಾಗುತ್ತದೆ. ಆದರೆ ನಾವು ರಾಷ್ಟ್ರೀಯ ಭದ್ರತೆ ಹಿತಾಸಕ್ತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮಾರಿಸ್ ಪೇನ್ ಅವರ ಕಚೇರಿಯು ಹೇಳಿಕೆ ಬಿಡುಗಡೆ ಮಾಡಿದೆ.

‘ಆಸ್ಟ್ರೇಲಿಯಾ ಒಪ್ಪಂದ ರದ್ಧತಿ ಬಗ್ಗೆ ಒಮ್ಮೆಯೂ ಪ್ರಸ್ತಾಪಿಸಿಲ್ಲ. ಏನಾದರೂ ಮಹತ್ವದ ಬದಲಾವಣೆಗಳು ಬೇಕೇ ಎಂಬುದನ್ನೂ ಉಲ್ಲೇಖಿಸಿಲ್ಲ. ಇದಕ್ಕೆ ಹಲವು ಅವಕಾಶಗಳಿದ್ದವು ಎಂದು ಆಸ್ಟ್ರೇಲಿಯಾದಲ್ಲಿನ ಫ್ರಾನ್ಸ್ ರಾಯಭಾರಿ ಜೀನ್‌–ಪೀರ್‌ ಅವರು ಹೇಳಿರುವುದಾಗಿ’ ದಿ ಬಾಲ್ಟ್‌ ಪತ್ರಿಕೆ ವರದಿ ಮಾಡಿದೆ.

ಅಮೆರಿಕ–ಫ್ರಾನ್ಸ್‌ ಸಂಬಂಧದಲ್ಲಿ ಬಿರುಕು

ಫ್ರಾನ್ಸ್‌ ತನ್ನ ಅತ್ಯಂತ ಹಳೆಯ ಮಿತ್ರ ರಾಷ್ಟ್ರ ಅಮೆರಿಕದಿಂದಲೂ ತನ್ನ ರಾಯಭಾರಿಯನ್ನು ಶುಕ್ರವಾರ ವಾಪಾಸು ಕರೆಸಿಕೊಂಡಿದೆ. 18ನೇ ಶತಮಾನದಲ್ಲಿ ರೂ‍ಪುಗೊಂಡ ಎರಡು ರಾಷ್ಟ್ರಗಳ ಸಂಬಂಧದಲ್ಲಿ ಬಿರುಕು ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ, ಬ್ರಿಟನ್‌ನೊಂದಿಗಿನ ಮೈತ್ರಿಕೂಟದಲ್ಲಿ ತನ್ನನ್ನು ಹೊರಗಿಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಫ್ರಾನ್ಸ್‌ ಇ‌ದೇ ಮೊದಲ ಬಾರಿ ಅಮೆರಿಕದಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಪ್ರತಿಭಟನೆ ದಾಖಲಿಸಿದೆ.

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ಸೂಚನೆಯಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವ ಜೀನ್‌– ಜೀನ್-ವೈವ್ಸ್ ಲೆ ಡ್ರಿಯಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT