ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಅಮೆರಿಕ

ವಾಷಿಂಗ್ಟನ್: ಉಕ್ರೇನ್ ಸುತ್ತಲೂ ರಷ್ಯಾದ ಮಿಲಿಟರಿ ಪಡೆಗಳ ಸಮರ ಅಭ್ಯಾಸದಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಸನ್ನಿಹಿತವಾಗಿದೆ ಎಂದು ವೈಟ್‌ಹೌಸ್ ಹೇಳಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಬೆದರಿಕೆ ಹಾಕಿರುವ ಬೈಡನ್, ಅಗಾಧವಾದ ಪರಿಣಾಮವನ್ನು ಎದುರಿಸಬೇಕಾದಿತು. ಇಡೀ ಜಗತ್ತನ್ನೇ ಬದಲಾಯಿಸಬಹುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿ ಪುಟಿನ್ ಟೀಕಾಕಾರ ಅಲೆಕ್ಸಿ ನವಾಲ್ನಿ ಹೆಸರು ಉಗ್ರರ ಪಟ್ಟಿಗೆ ಸೇರ್ಪಡೆ!
ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ಹೇರುವ ಕುರಿತು ಚಿಂತನೆ ನಡೆದಿದೆ. ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಹೈಟೆಕ್ ಉಪಕರಣಗಳ ರಫ್ತು ಮೇಲಿನ ನಿರ್ಬಂಧಗಳನ್ನು ಒಳಗೊಂಡಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಬೆದರಿಕೆಯನ್ನು ಪ್ರತಿಧ್ವನಿಸಿದ್ದು, ರಷ್ಯಾ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾದ ಪರಿಣಾಮ ಎದುರಿಸಬೇಕಾದಿತು ಎಂದು ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೆನ್, ತಾವು ಪುಟಿನ್ ಜತೆ ದೂರವಾಣಿ ಮೂಲಕ ಮಾತನಾಡಲಿದ್ದು, ರಷ್ಯಾ ಉದ್ದೇಶವೇನು ಎಂಬುದರ ಬಗ್ಗೆ ಸ್ಪಷ್ಟನೆ ಬಯಸುವುದಾಗಿ ಹೇಳಿದ್ದಾರೆ.
ಉಕ್ರೇನ್ ಸುತ್ತಲೂ ಮಿಲಿಟರಿ ಸನ್ನದ್ಧತೆ ನಡೆಸಿರುವ ರಷ್ಯಾ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದು, ಉಕ್ರೇನ್ ಮೇಲೆ ದಾಳಿ ನಡೆಸಲು ಸನ್ನದ್ಧತೆ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಇದನ್ನು ಎದುರಿಸಲು ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಸೇನೆಯನ್ನು ಸಜ್ಜುಗೊಳಿಸಿದೆ.
ಆದರೆ ದಾಳಿ ಮಾಡುವ ಸಾಧ್ಯತೆಯನ್ನು ರಷ್ಯಾ ನಿರಾಕರಿಸಿದೆ. ಉಕ್ರೇನ್‌ನಲ್ಲಿ ಸಂಘರ್ಷ ತೀವ್ರವಾದರೆ ಅದು ಜಾಗತಿಕ ಮಟ್ಟದಲ್ಲೂ ಭಾರಿ ಪರಿಣಾಮ ಬೀರುವ ಅಪಾಯವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.