ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಬಳಕೆದಾರರ ಖಾಸಗಿ ಮಾಹಿತಿ ರಕ್ಷಿಸುವ ಕಾನೂನಿಗೆ ಚೀನಾ ಅಸ್ತು

ನವೆಂಬರ್‌ 1ರಿಂದ ಜಾರಿ: ಮಾಹಿತಿ ತಂತ್ರಜ್ಞಾನ ಕಂಪನಿಗಳ ಮೇಲೆ ನಿಗಾ
Last Updated 20 ಆಗಸ್ಟ್ 2021, 9:09 IST
ಅಕ್ಷರ ಗಾತ್ರ

ಶಾಂಘೈ: ಆನ್‌ಲೈನ್‌ ಬಳಕೆದಾರರ ವೈಯಕ್ತಿಕ ಮಾಹಿತಿ ರಕ್ಷಿಸುವ ಕಾನೂನಿಗೆ ಚೀನಾದ ಸಂಸತ್‌ ’ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌’ ಶುಕ್ರವಾರ ಅನುಮೋದನೆ ನೀಡಿದೆ.

‘ವೈಯಕ್ತಿಕ ಮಾಹಿತಿ ರಕ್ಷಣೆ ಕಾಯ್ದೆ’ ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಸೈಬರ್‌ ಚಟುವಟಿಕೆಗಳ ಮೇಲೆ ನಿಗಾವಹಿಸುವ ಕಾಯ್ದೆ ಇದಾಗಿದೆ. ಇದರಿಂದ, ಕಂಪನಿಗಳು ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಮೂಲಕ ಕಂಪನಿಗಳು ಸಂಗ್ರಹಿಸುವ ಮಾಹಿತಿ ಮೇಲೆಯೂ ನಿಯಂತ್ರಣ ಸಾಧಿಸಲು ಅವಕಾಶ ದೊರೆಯಲಿದೆ.

ಉದ್ದಿಮೆಗಳು ವೈಯಕ್ತಿಕ ಸೂಕ್ಷ್ಮ ಮಾಹಿತಿ ಸಂಗ್ರಹಿಸುವುದನ್ನು ಈ ಕಾನೂನು ತಡೆಯುತ್ತದೆ. ಹಲವಾರು ಇಂಟರ್‌ನೆಟ್‌ ಹಗರಣಗಳು ಬಯಲಿಗೆ ಬಂದಿದ್ದರಿಂದ ಚೀನಾ ಸರ್ಕಾರ ಈ ಕಠಿಣ ಕ್ರಮಕೈಗೊಂಡಿದೆ.

‘ಬಳಕೆದಾರರ ಖಾಸಗಿತನವನ್ನು ಕಾಪಾಡುತ್ತಿಲ್ಲ ಮತ್ತು ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ ತಮಗೆ ಗೊತ್ತಿಲ್ಲದಂತೆಯೇ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಲಾಗಿದೆ’ ಎಂದು ಸಾರ್ವಜನಿಕರು ಕಂಪನಿಗಳ ವಿರುದ್ಧ ದೂರಿದ್ದರು. ಹೀಗಾಗಿ, ಮಾಹಿತಿ ರಕ್ಷಿಸುವ ನಿಟ್ಟಿನಲ್ಲಿ ಈ ಕಾಯ್ದೆ ರೂಪಿಸಲಾಗಿದೆ.

ಕಂಪನಿಗಳು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಪಟ್ಟ ವ್ಯಕ್ತಿಯ ಅನುಮತಿ ಪಡೆಯಬೇಕು ಹಾಗೂ ಸ್ಪಷ್ಟವಾದ ಕಾರಣಗಳಿರಬೇಕು ಎಂದು ಸೂಚಿಸಲಾಗಿದೆ.

ಈ ಕಾನೂನಿಗೆ ಸಂಬಂಧಪಟ್ಟ ಮಾಹಿತಿಯನ್ನು ಏಪ್ರಿಲ್‌ನಲ್ಲಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿತ್ತು.

ವೈಯಕ್ತಿಕ ಮಾಹಿತಿ ರಕ್ಷಣೆ ಕಾಯ್ದೆ ಮತ್ತು ಡೇಟಾ ಭದ್ರತೆ ಕಾಯ್ದೆಗಳು ಪ್ರಮುಖವಾಗಿದ್ದು, ಭವಿಷ್ಯದಲ್ಲಿ ಚೀನಾದ ಇಂಟರ್‌ನೆಟ್‌ ಚಟುವಟಿಕೆಗಳ ಮೇಲೆ ನಿಗಾವಹಿಸಲಿವೆ ಎಂದು ವಿಶ್ಲೇಷಿಸಲಾಗಿದೆ. ಡೇಟಾ ಭದ್ರತಾ ಕಾಯ್ದೆಯು ಸೆಪ್ಟೆಂಬರ್‌ 1ರಿಂದ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT