ಬುಧವಾರ, ಜೂನ್ 16, 2021
21 °C
‘ಕೋವಿಡ್ ದುರಂತ ತಡೆಯಬಹುದಿತ್ತು’

ತಪ್ಪು ನಿರ್ಧಾರಗಳೇ ಕೋವಿಡ್ ಪಿಡುಗು ವ್ಯಾಪಕವಾಗಲು ಕಾರಣ: ವರದಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಜಿನಿವಾ: ‘ಸೂಕ್ತ ಸಮಯದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳದೇ ಇರುವುದು ಮತ್ತು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಮನ್ವಯದ ಕೊರತೆಯಿಂದ ಕೋವಿಡ್‌ ಮಹಾದುರಂತವಾಗಿ ಬೆಳೆದಿದೆ. ಅಗತ್ಯ ಕ್ರಮ ತೆಗೆದುಕೊಂಡಿದ್ದರೆ ಮತ್ತು ಸಮನ್ವಯ ಸಾಧಿಸಿದ್ದರೆ ಕೋವಿಡ್‌ ಮಹಾದುರಂತವಾಗುವುದನ್ನು ತಡೆಯಬಹುದಿತ್ತು’ ಎಂದು ಜಾಗತಿಕ ಅಧ್ಯಯನ ವರದಿಯೊಂದು ಹೇಳಿದೆ.

ಇಂಡಿಪೆಂಡೆಂಟ್ ಪ್ಯಾನೆಲ್ ಫಾರ್ ಪ್ಯಾಂಡೆಮಿಕ್ ಪ್ರಿಪೇರ್ಡ್‌ನೆಸ್‌ ಅಂಡ್ ರೆಸ್ಪಾನ್ಸ್‌ (ಐಪಿಪಿಪಿಆರ್) ತಂಡವು ಸಿದ್ಧಪಡಿಸಿರುವ ‘ಕೋವಿಡ್-19: ಇದೇ ಕೊನೆಯ ಪಿಡುಗಾಗಲಿ’ ಎಂಬ ವರದಿಯಲ್ಲಿ ಈ ಮಾಹಿತಿ ಇದೆ.  ಈ ವರದಿಯನ್ನು ಸಿದ್ಧಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಐಪಿಪಿಪಿಆರ್‌ ಅನ್ನು ಕೇಳಿಕೊಂಡಿತ್ತು. ಈಗ ಈ ವರದಿ ಬಹಿರಂಗವಾಗಿದೆ.

‘ಕೆಲವು ಆತುರದ ನಿರ್ಧಾರಗಳು, ತ್ವರಿತ ಕ್ರಮಗಳು ಮತ್ತು ವಿಳಂಬ, ನಿರ್ಲಕ್ಷ್ಯ ಮತ್ತು ವೈಜ್ಞಾನಿಕ ಮಾಹಿತಿಯ ನಿರಾಕರಣೆ ಎಲ್ಲವೂ ಸೇರಿ ‘ವಿಷದ ಮಿಶ್ರಣ’ ಸಿದ್ಧವಾಯಿತು. ಕೋವಿಡ್‌-19 ಒಂದು ಮಹಾದುರಂತವಾಗಿ ಬದಲಾಯಿತು. ಕೋವಿಡ್‌ ಕಾಣಿಸಿಕೊಂಡ ಪ್ರತಿಹಂತದಲ್ಲೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್‌ ಒಂದು ಮಹಾದುರಂತವಾಗಿ ಬದಲಾಗುವಲ್ಲಿ ಯಾರೋ ಒಬ್ಬರದ್ದು ಮಾತ್ರ ತಪ್ಪು ಇದೆ ಎಂದು ಬೊಟ್ಟುಮಾಡಲಾಗದು. ಎಲ್ಲೆಡೆಯೂ ತಪ್ಪಾಗಿದೆ. ಈ ತಪ್ಪುಗಳ ಕಾರಣದಿಂದ ವಿಶ್ವದಾದ್ಯಂತ 33 ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಜಾಗತಿಕ ಆರ್ಥಿಕ ವ್ಯವಸ್ಥೆ ಕುಸಿದುಬಿದ್ದಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕೋವಿಡ್‌ ಒಂದು ಜಾಗತಿಕ ಮಹಾಪಿಡುಗಾಗಬಹುದು ಎಂಬ ಎಚ್ಚರಿಕೆ ಆರಂಭದಲ್ಲೇ ಲಭ್ಯವಾಗಿತ್ತು. ವಿಜ್ಞಾನಿಗಳು ಮತ್ತು ತಜ್ಞರೂ ಕಾಲಕಾಲಕ್ಕೆ ಈ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಕಡೆಗಣಿಸಲಾಯಿತು. 2019ರ ಡಿಸೆಂಬರ್‌ನಲ್ಲಿಯೇ ವುಹಾನ್‌ನಲ್ಲಿ ಸೋಂಕು ಕಾಣಿಸಿಕೊಂಡರೂ, ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಲಾಯಿತು. ಸೋಂಕು ಜಾಗತಿಕವಾಗಿ ಹರಡಿದ್ದು, ಫೆಬ್ರುವರಿಯಲ್ಲಿ. ಸೋಂಕು ಜಾಗತಿಕವಾಗಿ ಹರಡುವುದನ್ನು ತಡೆಯಲು ಫೆಬ್ರುವರಿಯಲ್ಲಿ ಅವಕಾಶವಿತ್ತು. ಇಲ್ಲಿ ದೊರೆತಿದ್ದ ಎಚ್ಚರಿಕೆಯನ್ನು ರಾಷ್ಟ್ರಗಳು ಕಡೆಗಣಿಸಿದವು. ಈ ಅವಕಾಶವನ್ನು ಕಳೆದುಕೊಂಡವು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪಿಡುಗು ತೀವ್ರವಾಗಲು ಕಾರಣಗಳು

* ಸೋಂಕು ತಡೆಗಟ್ಟಲು ಚೀನಾ ವಿಳಂಬ ಮಾಡಿತು. ಸೋಂಕು ವ್ಯಾಪಕವಾಗಿ ಹರಡುವವರೆಗೂ ಕಾಯಿತು

* ಕೋವಿಡ್‌ ಒಂದು ಜಾಗತಿಕ ಪಿಡುಗು ಎಂದು ಘೋಷಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಳಂಬ ಮಾಡಿತು. ಅಗತ್ಯ ಕ್ರಮಗಳನ್ನು ಘೋಷಿಸುವಲ್ಲಿಯೂ ವಿಳಂಬ ಮಾಡಿತು. ಸೋಂಕು ವಿಶ್ವದಾದ್ಯಂತ ಹರಡಿದ ನಂತರ ಕ್ರಮಕ್ಕೆ ಮುಂದಾಯಿತು

* ವಿಶ್ವ ಆರೋಗ್ಯ ಸಂಸ್ಥೆಯು ತಡವಾಗಿಯಾದರೂ ನೀಡಿದ ಎಚ್ಚರಿಕೆಯನ್ನು ಬಹುತೇಕ ರಾಷ್ಟ್ರಗಳು ಕಡೆಗಣಿಸಿದವು. ಎಲ್ಲಾ ರಾಷ್ಟ್ರಗಳೂ ತಮ್ಮಲ್ಲಿ ಸೋಂಕು ತೀವ್ರವಾದಾಗ ಮಾತ್ರ ಅದನ್ನು ತಡೆಯಲು ಮುಂದಾದವು.

* ಕೋವಿಡ್‌ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕ್ರಮಗಳನ್ನು, ಹಲವು ರಾಷ್ಟ್ರಗಳು ತ್ವರಿತವಾಗಿ ಹಿಂಪಡೆದವು. ಕೋವಿಡ್‌ ನಿರ್ನಾಮವಾಗಿದೆಯೆಂಬಂತೆ ವರ್ತಿಸಿದವು. ಈ ಆತುರದ ನಿರ್ಧಾರವು ಈಗಿನ ಮಹಾದುರಂತಕ್ಕೆ ಕಾರಣವಾಗಿವೆ.

ಶಿಫಾರಸುಗಳು

* ವಿಶ್ವದ ಶ್ರೀಮಂತ ರಾಷ್ಟ್ರಗಳು ಕೋವಿಡ್‌ ಲಸಿಕೆ ಕಾರ್ಯಕ್ರಮ ನಡೆಸಲು, ವಿಶ್ವದ 92 ಬಡ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸಬೇಕು

* ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ 92 ಬಡ ರಾಷ್ಟ್ರಗಳಿಗೆ 100 ಕೋಟಿ ಡೋಸ್‌ ಲಸಿಕೆ ಪೂರೈಸಬೇಕು. 2022ರ ಮಧ್ಯಂತರದ ವೇಳೆಗೆ ಈ ರಾಷ್ಟ್ರಗಳಿಗೆ 200 ಕೋಟಿಗಿಂತಲೂ ಹೆಚ್ಚು ಡೋಸ್‌ ಲಸಿಕೆಯನ್ನು ಪೂರೈಸಬೇಕು

* ಕೋವಿಡ್‌ ಪತ್ತೆ, ಚಿಕಿತ್ಸೆ ಮತ್ತು ಲಸಿಕೆ ಕಾರ್ಯಕ್ರಮಗಳಗೆ
ತಗಲುವ ವೆಚ್ಚದಲ್ಲಿ ಶೇ 60ರಷ್ಟನ್ನು ಜಿ7 ರಾಷ್ಟ್ರಗಳು ಭರಿಸಬೇಕು. ಉಳಿದ ಶೇ 40ರಷ್ಟು ವೆಚ್ಚವನ್ನು ಜಿ20 ರಾಷ್ಟ್ರಗಳು ಪೂರೈಸಬೇಕು

* ಇದಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಕ್ಷಣವೇ ತೆಗೆದುಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು