ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹೊಸ ತಳಿ: ಎಲ್ಲೆಡೆ ದಿಗಿಲು; ಬ್ರಿಟನ್‌, ಜರ್ಮನಿಯಲ್ಲೂ ಪತ್ತೆ!

ಆಫ್ರಿಕಾದ ದೇಶಗಳಿಗೆ ವಿಮಾನ ಪ್ರಯಾಣ ನಿರ್ಬಂಧಿಸುವ ಧಾವಂತ
Last Updated 27 ನವೆಂಬರ್ 2021, 20:00 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್/ ಲಂಡನ್/ ಬರ್ಲಿನ್:ಕೊರೊನಾ ಹೊಸ ರೂಪಾಂತರ ತಳಿ ‘ಓಮಿಕ್ರಾನ್’ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾದ ದೇಶಗಳಿಗೆ ಹಲವು ದೇಶಗಳು ತಾತ್ಕಾಲಿಕವಾಗಿ ವಿಮಾನ ಪ್ರಯಾಣ ನಿರ್ಬಂಧಿಸಿವೆ.

ಅಮೆರಿಕ, ಬ್ರೆಜಿಲ್, ಕೆನಡಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ, ಥಾಯ್ಲೆಂಡ್, ಜಪಾನ್, ಫಿಲಿಪ್ಪೀನ್ಸ್, ಯುಎಇ, ಮಾರಿಷಸ್, ಒಮಾನ್ ದೇಶಗಳುಶನಿವಾರ ಈ ನಿರ್ಧಾರ ತೆಗೆದುಕೊಂಡಿವೆ.

ಜರ್ಮನಿ, ಆಸ್ಟ್ರಿಯಾ, ಜೆಕ್ ಗಣರಾಜ್ಯ, ಸೈಪ್ರಸ್, ನೆದರ್ಲೆಂಡ್ಸ್‌ ಮತ್ತು ಬ್ರಿಟನ್ ದೇಶಗಳು ಶುಕ್ರವಾರವೇ ವಿಮಾನ ಪ್ರಯಾಣ ನಿರ್ಬಂಧಿಸಿವೆ. ಅಮೆರಿಕದಲ್ಲಿ ಸೋಮವಾರದಿಂದ ಈ ಆದೇಶ ಜಾರಿಗೆ ಬರಲಿದೆ.

27 ಸದಸ್ಯ ದೇಶಗಳು ಕಠಿಣ ಪ್ರಯಾಣದ ನಿರ್ಬಂಧಗಳನ್ನು ತೆಗೆದುಕೊಳ್ಳುವಂತೆ ಐರೋಪ್ಯ ಒಕ್ಕೂಟದ ತುರ್ತು ಸಭೆಯಲ್ಲಿ ಸೂಚಿಸಲಾಗಿದೆ. ಈಗಾಗಲೇ ಒಕ್ಕೂಟದ ಕೆಲವು ದೇಶ
ಗಳು ವಿಮಾನಯಾನ ನಿರ್ಬಂಧಿಸಿವೆ.

ಒಂದೊಂದೇ ದೇಶಗಳ ಸರ್ಕಾರಗಳು ಅಂತರರಾಷ್ಟ್ರೀಯ ವಿಮಾನಯಾನವನ್ನು ನಿರ್ಬಂಧಿಸುತ್ತಿವೆ. ಆದಷ್ಟು ಬೇಗ ದಕ್ಷಿಣ ಆಫ್ರಿಕಾವನ್ನು ತೊರೆಯುವ ಉದ್ದೇಶದಿಂದ ಜೊಹಾನ್ಸ್‌ಬರ್ಗ್‌ ವಿಮಾನ ನಿಲ್ದಾಣಕ್ಕೆ ಪ್ರವಾಸಿಗರು ಧಾವಿಸಿ ಬರುತ್ತಿದ್ದಾರೆ. ‘ವಿಶ್ವದ ವಿವಿಧ ದೇಶಗಳು ವಿಮಾನಯಾನ ನಿರ್ಬಂಧಿಸುತ್ತಿರುವುದು ಕ್ರೂರ ನಡೆ’ ಎಂದುದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವಾಲಯ ಕಿಡಿಕಾರಿದೆ. ಹೊಸ ತಳಿಯನ್ನು ಪತ್ತೆ ಮಾಡಿದ್ದಕ್ಕೆ ಪ್ರಶಂಸಿಸಬೇಕೇ ಹೊರತು ಶಿಕ್ಷಿಸಬಾರದು ಎಂದೂ ಹೇಳಿದೆ.

ಏಷ್ಯಾ ಖಂಡವನ್ನು ಓಮಿಕ್ರಾನ್ ತಲುಪಿದ್ದು, ಹಾಂಗ್‌ಕಾಂಗ್‌ನಲ್ಲಿ ಒಂದು ಪ್ರಕರಣ ಶುಕ್ರವಾರ ಪತ್ತೆಯಾಗಿತ್ತು. ಆಫ್ರಿಕಾ ದೇಶಗಳಿಗೆ ವಿಮಾನ ಸಂಚಾರವನ್ನು ಥಾಯ್ಲೆಂಡ್ ಸ್ಥಗಿತಗೊಳಿಸಿದೆ.

ಹೊಸ ತಳಿಯನ್ನು ಎದುರಿಸಲು ಕಠಿಣ ಕ್ರಮಕ್ಕೆ ನೆದರ್ಲೆಂಡ್ಸ್‌ ಮುಂದಾಗಿದೆ. ಅಂಗಡಿಗಳು, ಬಾರ್, ರೆಸ್ಟೊರೆಂಟ್‌ಗಳನ್ನು ಬೇಗನೇ ಮುಚ್ಚುವಂತೆ ಸೂಚಿಸಲಾಗಿದೆ. ಭಾನುವಾರದಿಂದ ಅನ್ವಯವಾಗುವಂತೆ, ಇಡೀ ದೇಶದಲ್ಲಿ ಸಂಜೆ 5 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಆಫ್ರಿಕಾದ ದೇಶಗಳಿಂದಬರುವ ಪ್ರಯಾಣಿಕರಿಗೆ ಜಪಾನ್ 10 ದಿನಗಳ ಕ್ವಾರಂಟೈನ್ವಿಧಿಸಲಿದೆ.

ಆಸ್ಟ್ರೇಲಿಯಾ ಕೆಲವು ಕ್ರಮಗಳನ್ನು ಪ್ರಕಟಿಸಿದೆ. ಆಫ್ರಿಕಾದ 9 ದೇಶಗಳಿಂದ ಬರುವ ಆಸ್ಟ್ರೇಲಿಯಾ ನಾಗರಿಕರಲ್ಲದವರಿಗೆ ದೇಶ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲಿಂದ ಬರುವ ಆಸ್ಟ್ರೇಲಿಯಾ ನಿವಾಸಿಗಳು ಮತ್ತು ಅವರ ಅವಲಂಬಿತರಿಗೆ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ. 14 ದಿನಗಳ ಹಿಂದೆ ದೇಶ ಪ್ರವೇಶಿಸಿರುವ 20 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ‘ಇದಕ್ಕಿಂತಲೂ ಹೆಚ್ಚಿನ ನಿರ್ಬಂಧ ವಿಧಿಸಬೇಕಾದ ಸ್ಥಿತಿ ಎದುರಾದರೆ ನಿರ್ದಾಕ್ಷಿಣ್ಯವಾಗಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ತಿಳಿಸಿದ್ದಾರೆ.

l ಬೂಸ್ಟರ್‌ ಡೋಸ್ ನೀಡಿಕೆಯನ್ನು ತುರ್ತಾಗಿ ಮುಗಿಸುವಂತೆ ಬ್ರಿಟನ್‌ನ ಲೇಬರ್ ಪಕ್ಷವು ಸರ್ಕಾರವನ್ನು ಆಗ್ರಹಿಸಿದೆ. ಎರಡನೇ ಡೋಸ್ ಮತ್ತು ಮತ್ತು ಬೂಸ್ಟರ್ ಡೋಸ್ ನಡುವಿನ 6 ತಿಂಗಳ ಅಂತರವನ್ನು ಐದು ತಿಂಗಳಿಗೆ ಕಡಿತಗೊಳಿಸಲು ಮನವಿ ಮಾಡಿದೆ

lಓಮಿಕ್ರಾನ್ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ, ಜಿಂಜಾಬ್ವೆ, ಮೊಜಾಂಬಿಕ್ ದೇಶಗಳ ಪ್ರಯಾಣಿಕರನ್ನು ಕತಾರ್ ಏರ್‌ವೇಸ್ ನಿರ್ಬಂಧಿಸಿದೆ

lನವೆಂಬರ್ 30ರಿಂದ ಜಿನೀವಾದಲ್ಲಿ ನಡೆಯಬೇಕಿದ್ದ ಸಚಿವರ ಮಟ್ಟದ ಸಭೆಯನ್ನು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಅನಿರ್ದಿಷ್ಟಾವಧಿಗೆ ಮುಂದೂಡಿದೆ

lದೇಶದ ಶೇ 100ರಷ್ಟು ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಶೇ 90ರಷ್ಟು ಜನರಿಗೆ ಎರಡೂ ಡೋಸ್ ನೀಡಲಾಗಿದೆ ಎಂದು ಯುಎಇ
ತಿಳಿಸಿದೆ

ಬ್ರಿಟನ್‌, ಜರ್ಮನಿಯಲ್ಲಿ ‘ಓಮಿಕ್ರಾನ್’

ಲಂಡನ್: ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ನ ಹೊಸ ತಳಿಯ ಎರಡು ಪ್ರಕರಣಗಳು ಶನಿವಾರ ಪತ್ತೆಯಾಗಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಇಬ್ಬರೂ ಸೋಂಕಿತರು ದಕ್ಷಿಣ ಆಫ್ರಿಕಾಗೆ ಹೋಗಿ ಬಂದಿದ್ದಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ತಿಳಿಸಿದ್ದಾರೆ.

ಜರ್ಮನಿಯಲ್ಲಿಓಮಿಕ್ರಾಮ್ ತಳಿಯ ಮೊದಲ ಶಂಕಿತ ಪ್ರಕರಣ ಪತ್ತೆಯಾಗಿದೆ.ದಕ್ಷಿಣ ಆಫ್ರಿಕಾದಿಂದ ಬಂದಿರುವ ವ್ಯಕ್ತಿಯಲ್ಲಿ ವೈರಾಣು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

61 ಜನರಿಗೆ ಕೋವಿಡ್‌: ಆಫ್ರಿಕಾದ ದೇಶಗಳಿಂದ ಬಂದಿರುವ 61 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ನೆದರ್ಲೆಂಡ್ಸ್ ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇವರಲ್ಲಿ ಎಷ್ಟು ಜನರಲ್ಲಿ ಓಮಿಕ್ರಾನ್ ತಳಿ ಇದೆ ಎಂಬುದರ ತಪಾಸಣೆ ನಡೆಯುತ್ತಿದೆ.

ಇವರನ್ನು ಆಮ್‌ಸ್ಟರ್‌ಡ್ಯಾಮ್‌ನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. 600 ಜನರು ಜೊಹಾನ್ಸ್‌ಬರ್ಗ್‌ನಿಂದ ಎರಡು ವಿಮಾನಗಳಲ್ಲಿ ಇಲ್ಲಿಗೆ ಬಂದಿದ್ದರು.

ಆಗ್ನೇಯ ಏಷ್ಯಾ ದೇಶಗಳಿಗೆ ಎಚ್ಚರಿಕೆ

ನವದೆಹಲಿ: ಕೊರೊನಾ ಹೊಸ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ಹೆಚ್ಚಿಸುವಂತೆ ಆಗ್ನೇಯ ಏಷ್ಯಾದ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಶನಿವಾರ ಸೂಚಿಸಿದೆ.

ಜನರು ಸೇರುವ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಹಬ್ಬಗಳು, ಸಮಾರಂಭಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದೆ.

‘ದೇಶದ ಹಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ತಗ್ಗಿವೆ. ಆದರೆ ಹೊಸ ತಳಿ ಕಳವಳ ಮೂಡಿಸಿದೆ. ವೈರಾಣು ಹರಡದಂತೆ ತಡೆಯುವ ಹಾಗೂ ರಕ್ಷಿಸಿಕೊಳ್ಳುವ ಅಗತ್ಯವಿದೆ’ ಎಂದು ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಆಧಾರ: (ರಾಯಿಟರ್ಸ್/ ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT