ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಹಲವೆಡೆ ಕೋವಿಡ್‌ 3ನೇ ಅಲೆ: ಹಲವು ರಾಷ್ಟ್ರಗಳಲ್ಲಿ ಲಸಿಕೆ ಕೊರತೆ

Last Updated 16 ಜುಲೈ 2021, 18:23 IST
ಅಕ್ಷರ ಗಾತ್ರ

ಅತ್ಯಂತ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯವಿರುವ ಡೆಲ್ಟಾ ತಳಿಯ ಕೊರೊನಾವೈರಾಣು 100ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಈ ತಳಿಯ ಕಾರಣದಿಂದಲೇ ವಿಶ್ವದ ಹಲವೆಡೆ ಕೋವಿಡ್‌ನ ಮೂರನೇ ಅಲೆ ಆರಂಭವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಆದರೆ ಈಗಾಗಲೇ ಕೆಲವು ಐರೋಪ್ಯ ದೇಶಗಳು, ದಕ್ಷಿಣ ಅಮೆರಿಕದ ಹಲವು ದೇಶಗಳು ಮತ್ತು ಆಫ್ರಿಕಾದ ಹಲವು ದೇಶಗಳಲ್ಲಿ ಮೂರನೇ ಅಲೆ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಮತ್ತಷ್ಟು ತೀವ್ರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

l ರಷ್ಯಾದಲ್ಲಿ ಮೂರನೇ ಅಲೆ ಕಾಣಿಸಿಕೊಂಡಿದ್ದು, ಈಗಾಗಲೇ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ತೀವ್ರಗೊಳ್ಳುವ ಆತಂಕವಿದೆ. ಈಗ ವಿಶ್ವದಲ್ಲಿ ಪ್ರತಿದಿನ ಅತಿಹೆಚ್ಚು ಕೋವಿಡ್‌ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ರಷ್ಯಾ ಎರಡನೇ ಸ್ಥಾನದಲ್ಲಿದೆ. ಕೋವಿಡ್‌ ಹರಡುವುದನ್ನು ತಡೆಯಲು ಏನು ಕ್ರಮ ತೆಗೆದು
ಕೊಳ್ಳಲಾಗಿದೆ ಎಂಬುದು ಬಹಿರಂಗವಾಗಿಲ್ಲ

l ಬ್ರೆಜಿಲ್‌ನಲ್ಲಿ ಈಗ ಕೋವಿಡ್‌ನ ನಾಲ್ಕನೇ ಅಲೆ ಕಾಣಿಸಿಕೊಂಡಿದೆ. ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈಗ ವಿಶ್ವದಲ್ಲಿ ಪ್ರತಿದಿನ ಅತಿಹೆಚ್ಚು ಪ್ರಕರಣಗಳು
ಪತ್ತೆಯಾಗುತ್ತಿರುವುದು ಬ್ರೆಜಿಲ್‌ನಲ್ಲಿಯೆ. ನಾಲ್ಕನೇ ಅಲೆಯು ಇನ್ನೂ ಎರಡು ತಿಂಗಳವರೆಗೆ ಇರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಗುಂಪುಗೂಡುವಿಕೆ, ಸಭೆ-ಸಮಾರಂಭಗಳ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲಲ್ಲಿ ಲಾಕ್‌ಡೌನ್‌ನಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

l ಐರೋಪ್ಯ ದೇಶಗಳಲ್ಲಿ ಬ್ರಿಟನ್‌ನಲ್ಲೇ ಪ್ರತಿದಿನ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಬ್ರಿಟನ್‌ನಲ್ಲಿ ಡೆಲ್ಟಾ ತಳಿಯ ಕೊರೊನಾವೈರಾಣುವಿನ ಕಾರಣದಿಂದಲೇ ಮೂರನೇ ಅಲೆ ಪ್ರಾರಂಭವಾಗಿದೆ. ದೇಶದ ಹಲವೆಡೆ ಲಾಕ್‌ಡೌನ್‌ನಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೆರೆಯ ದೇಶಗಳಿಗೆ ವಿಮಾನ ಸಂಚಾರ ಮತ್ತು ಹಡಗು ಪ್ರಯಾಣವನ್ನು
ನಿರ್ಬಂಧಿಸಲಾಗಿದೆ

l ದಕ್ಷಿಣ ಅಮೆರಿಕ ಖಂಡದ ದೇಶಗಳಲ್ಲಿ ಈಗ ಪ್ರತಿದಿನ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಕೊಲಂಬಿಯಾ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನ 20,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದ ಶೇ 44ಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಲಸಿಕೆ ನೀಡಲಾಗುತ್ತಿದೆ ಎಂಬ ಕಾರಣದಿಂದಲೇ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಆನಂತರ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಯಿತು. ಕೋವಿಡ್ ನಿರ್ಬಂಧವನ್ನು ಮತ್ತೆ ಹೇರಲಾಗಿದೆ

l ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಕೋವಿಡ್‌ನ ಮೂರನೇ ಅಲೆ ಕಾಣಿಸಿಕೊಂಡಿದೆ. ಹಲವು ದೇಶಗಳಲ್ಲಿ ಆಲ್ಪಾ, ಡೆಲ್ಟಾ, ಡೆಲ್ಟಾ ಪ್ಲಸ್ ತಳಿಗಳು ಪತ್ತೆಯಾಗಿವೆ. ಸಂಪನ್ಮೂಲದ ಕೊರತೆಯಿಂದ ದೊಡ್ಡಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೂರನೇ ಅಲೆ ಎಷ್ಟು ತೀವ್ರವಾಗಿದೆ ಎಂಬುದರ ಸ್ಪಷ್ಟ ಚಿತ್ರಣ ದೊರೆಯುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೆಲವು ಸ್ವಯಂಸೇವಾ ಸಂಸ್ಥೆಗಳು ಪರೀಕ್ಷೆ ನಡೆಸುತ್ತಿವೆ. ಆರ್ಥಿಕ ಮುಗ್ಗಟ್ಟು ಮತ್ತು ರಾಜಕೀಯ ಅಸ್ಥಿರತೆಯ ಕಾರಣ ಹಲವು ದೇಶಗಳಲ್ಲಿ ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ

l ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ಜುಲೈ ಎರಡನೇ ವಾರದ ನಂತರ ಕೋವಿಡ್‌ನ ಮೂರನೇ ಅಲೆ ಕಾಣಿಸಿಕೊಂಡಿದೆ. ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್‌, ವಿಯೆಟ್ನಾಂಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಲಸಿಕೆ ಕೊರತೆ

ಜಗತ್ತಿನ ಬಹುತೇಕ ಎಲ್ಲೆಡೆ ಕೋವಿಡ್‌ ಮೂರನೇ ಅಲೆ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಹಲವು ರಾಷ್ಟ್ರಗಳಲ್ಲಿ ಕೋವಿಡ್‌ ಲಸಿಕೆಯ ಕೊರತೆ ಕಾಡಲಾರಂಭಿಸಿದೆ. ಅದರಲ್ಲೂ ಮುಖ್ಯವಾಗಿ ಬಡ ರಾಷ್ಟ್ರಗಳಲ್ಲಿ ಕೋವಿಡ್‌ ಲಸಿಕೆಯ ಕೊರತೆ ತೀವ್ರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ವಿಶ್ವದ 92 ಬಡ ದೇಶಗಳಿಗೆ ಕೋವಿಡ್‌ ಲಸಿಕೆ ಪೂರೈಸುವ ಕೋವ್ಯಾಕ್ಸ್‌ ಒಪ್ಪಂದದ ಅಡಿ, ವಿಶ್ವ ಆರೋಗ್ಯ ಸಂಸ್ಥೆಯ ಗವಿ ಘಟಕವು 98 ಕೋಟಿ ಡೋಸ್‌ನಷ್ಟು ಲಸಿಕೆಯನ್ನಷ್ಟೇ ಪೂರೈಸಿದೆ. 92 ದೇಶಗಳು ಮಾತ್ರವಲ್ಲದೆ ಕೋವ್ಯಾಕ್ಸ್ ಒಪ್ಪಂದದ ಅಡಿ 131 ದೇಶಗಳಿಗೆ ಲಸಿಕೆ ಪೂರೈಸಲಾಗಿದೆ. ಲಸಿಕೆ ತಯಾರಿಸುವ ಅಮೆರಿಕ, ಬ್ರಿಟನ್, ಭಾರತ, ಚೀನಾ ಮತ್ತು ರಷ್ಯಾದಲ್ಲೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾದ ಕಾರಣ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕಾರಣದಿಂದ ಈ ದೇಶಗಳಲ್ಲಿ ಲಸಿಕೆ ಕೊರತೆ ಉಂಟಾಗಿದೆ.

ಆಫ್ರಿಕಾದ ದೇಶಗಳ ಒಟ್ಟು ಜನಸಂಖ್ಯೆಯಲ್ಲಿ ಶೇ 2ರಷ್ಟು ಜನರಿಗೆ ಮಾತ್ರವೇ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ. ಆದರೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ಹಲವು ದೇಶಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ. ಜರ್ಮನಿ ಮತ್ತು ಅಮೆರಿಕವು ಕಳೆದ ವಾರ 25 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಈ ದೇಶಗಳಿಗೆ ಪೂರೈಸಿವೆ.

ರಷ್ಯಾದ ಸ್ಫುಟ್ನಿಕ್‌-ವಿ ಲಸಿಕೆಯನ್ನು ವಿಶ್ವದ ಹಲವು ದೇಶಗಳಲ್ಲಿ ಬಳಸಲಾಗುತ್ತಿದೆ. ಆದರೆ ರಷ್ಯಾದಲ್ಲೇ ಮೂರನೇ ಅಲೆ ತೀವ್ರವಾಗಿರುವ ಕಾರಣ ಸ್ಫುಟ್ನಿಕ್‌-ವಿ ಲಸಿಕೆ ಪೂರೈಕೆಯಲ್ಲೂ ವ್ಯತ್ಯವಾಗಿದೆ. ಭಾರತಕ್ಕೂ ಈ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ

l 50+ ಚೀನಾದ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 50+ ಅಮೆರಿಕ, ಕೆನಡಾದ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 50+ ಐರೋಪ್ಯ ದೇಶಗಳ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 40-50 ದಕ್ಷಿಣ ಅಮೆರಿಕದ ದೇಶಗಳಲ್ಲಿ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 35 ರಷ್ಯಾದಲ್ಲಿ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 28.4 ಭಾರತದ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 4-8 ಮಧ್ಯಪ್ರಾಚ್ಯ ದೇಶಗಳ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

l 2 ಆಫ್ರಿಕಾ ಖಂಡದ ದೇಶಗಳ ಪ್ರತಿ 100 ಮಂದಿಯಲ್ಲಿ ಲಸಿಕೆಯ ಒಂದು ಡೋಸ್‌ ಪಡೆದುಕೊಂಡವರ ಸಂಖ್ಯೆ

ಆಧಾರ: ವಿಶ್ವ ಆರೋಗ್ಯ ಸಂಸ್ಥೆ, ಪಿಟಿಐ, ರಾಯಿಟರ್ಸ್, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT