ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಫೈಝರ್ ಲಸಿಕೆಗೆ ಬ್ರಿಟನ್‌ ಅನುಮತಿ

ಸರ್ಕಾರದ ಅನುಮತಿ ಪಡೆದ ಮೊದಲ ಲಸಿಕೆ
Last Updated 2 ಡಿಸೆಂಬರ್ 2020, 20:36 IST
ಅಕ್ಷರ ಗಾತ್ರ

ಲಂಡನ್‌: ಫೈಝರ್‌ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್‌–19 ತಡೆ ಲಸಿಕೆಗೆ ಬ್ರಿಟನ್ ಮಾನ್ಯತೆ ನೀಡಿದೆ.

ಸರ್ಕಾರದ ಮಾನ್ಯತೆ ಪಡೆದ ಮೊದಲ ಕೋವಿಡ್‌ ತಡೆ ಲಸಿಕೆ ಎಂಬ ಹಿರಿಮೆಗೆ ಈ ಲಸಿಕೆ ಪಾತ್ರವಾಗಿದೆ. ಬ್ರಿಟನ್‌ನಲ್ಲಿ ಮುಂದಿನ ವಾರವೇಈ ಲಸಿಕೆ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, ಕೋವಿಡ್‌ ಆರೈಕೆ ಸಿಬ್ಬಂದಿ, ವೃದ್ಧರು ಮತ್ತು ಕೋವಿಡ್‌ನಿಂದ ಆರೋಗ್ಯ ತೀರಾ ಹದಗೆಟ್ಟಿರುವವರಿಗೆ ಲಸಿಕೆ ನೀಡಲಾಗುತ್ತದೆ

ಅಮೆರಿಕದ ಫೈಝರ್ ಮತ್ತು ಜರ್ಮನಿಯ ಬಯೊಎನ್‌ಟೆಕ್‌ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯು ಎಲ್ಲಾ ವಯಸ್ಸಿನವರಲ್ಲಿಯೂ ಕೋವಿಡ್‌ ತಡೆಯಲು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿತ್ತು.

‘ಫೈಝರ್ ಕಂಪನಿಯ ಲಸಿಕೆಯು ಕೋವಿಡ್‌-19 ವಿರುದ್ಧ ಶೇ 95ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೆ ಈ ಲಸಿಕೆ ಬಳಕೆಗೆ ಸುರಕ್ಷಿತವಾಗಿದೆ. ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಬಹುದು’ ಎಂದು ಬ್ರಿಟನ್‌ನ ‘ಮೆಡಿಸಿನ್ ಅಂಡ್ ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ) ಹೇಳಿದೆ.

‘ಕ್ಲಿನಿಕಲ್ ಟ್ರಯಲ್‌ನ ದತ್ತಾಂಶವನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಶೀಲನಾ ಕಾರ್ಯ ನಡೆಸಿದ್ದರೂ, ಯಾವುದೇ ರಾಜಿ ಮಾಡಿಕೊಂಡಿಲ್ಲ’ ಎಂದು ಬ್ರಿಟನ್ ಸರ್ಕಾರ ಹೇಳಿದೆ.

ಆದ್ಯತೆ ಮತ್ತು ಮಾರ್ಗಸೂಚಿ

* ಮುಂದಿನ ವಾರದಿಂದಲೇ ಬ್ರಿಟನ್‌ನಾದ್ಯಂತ ಲಸಿಕೆ ಲಭ್ಯವಾಗಲಿದೆ

* ಬ್ರಿಟನ್‌ನ ನ್ಯಾಷನಲ್ ಹೆಲ್ತ್ ಸರ್ವಿಸ್‌ ದೇಶದಾದ್ಯಂತ ಲಸಿಕಾ ಕಾರ್ಯಕ್ರಮ ನಡೆಸಲಿದೆ

* ಲಸಿಕೆ ನೀಡಿಕೆಯ ಆದ್ಯತೆ ಮತ್ತು ಮಾರ್ಗಸೂಚಿಯ ರಚನೆ ಕೆಲಸ ಪ್ರಗತಿಯಲ್ಲಿ ಇದೆ

* ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, ಕೋವಿಡ್‌ ಆರೈಕೆ ಸಿಬ್ಬಂದಿ, ವೃದ್ಧರು ಮತ್ತು ಕೋವಿಡ್‌ನಿಂದ ಆರೋಗ್ಯ ತೀರಾ ಹದಗೆಟ್ಟಿರುವವರಿಗೆ ಲಸಿಕೆ ನೀಡಲಾಗುತ್ತದೆ

* 50 ಆಸ್ಪತ್ರೆಗಳು ಮತ್ತು ಲಸಿಕೆ ಕೇಂದ್ರಗಳು, ಲಸಿಕಾ ಕಾರ್ಯಕ್ರಮಕ್ಕೆ ಸಜ್ಜಾಗಿವೆ. ಕಾರ್ಯಕ್ರಮ ನಿರ್ವಹಣೆ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಗಿದೆ

* ಲಸಿಕೆ ಸಾಗಾಟ ಮತ್ತು ವಿತರಣೆ ಜವಾಬ್ದಾರಿಯನ್ನು ಸೇನೆಗೆ ಒಪ್ಪಿಸಲಾಗಿದೆ

* 2021ರ ಅಂತ್ಯದ ವೇಳೆಗೆ 4 ಕೋಟಿ ಡೋಸ್‌ನಷ್ಟು ಲಸಿಕೆ ಬ್ರಿಟನ್‌ಗೆ ಲಭ್ಯವಾಗಲಿದೆ

ವಿತರಣೆಯ ಸವಾಲು

ಫೈಝರ್ ಕಂಪನಿಯ ಲಸಿಕೆಯನ್ನು ಸಾಗಾಟದ ವೇಳೆ ಮೈನಸ್‌ 70 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ತಯಾರಿಕಾ ಘಟಕದಿಂದ ಲಸಿಕಾ ಕೇಂದ್ರಗಳಿಗೆ ಇವನ್ನು ಪೂರೈಸಲು ‘ಎಕ್ಸ್‌ಟ್ರೀಂ ರೆಫ್ರಿಜರೇಟೆಡ್ ಟ್ರಕ್’ಗಳ ಅವಶ್ಯಕತೆ ಇದೆ. ದೇಶದಲ್ಲಿ ಲಭ್ಯವಿರುವಷ್ಟು ಇಂತಹ ಟ್ರಕ್‌ಗಳನ್ನು ಲಸಿಕೆ ವಿತರಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.

ಇಂತಹ ಟ್ರಕ್‌ಗಳು ಇದ್ದರೂ, ಲಸಿಕೆಗಳನ್ನು ಸಾಗಿಸಲು ವಿಪರೀತ ಪ್ರಮಾಣದ ‘ಡ್ರೈ ಐಸ್‌’ ಬೇಕಾಗುತ್ತದೆ. ಲಸಿಕಾ ಕೇಂದ್ರಗಳಿಗೆ ತಲುಪಿಸಿದ ನಂತರ ಅವನ್ನು ಮತ್ತೆ ರೆಫ್ರಿಜರೇಟರ್‌ನಲ್ಲಿ ಇಡಬೇಕಾಗುತ್ತದೆ. 2ರಿಂದ 8 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಈ ಲಸಿಕೆಗಳನ್ನು ಗರಿಷ್ಠ 5 ದಿನ ಮಾತ್ರ ಸಂಗ್ರಹಿಸಿ ಇಡಬಹುದು. ಹೀಗಾಗಿ ವಿತರಣೆ ಮತ್ತು ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಕರಾರುವಕ್ಕಾಗಿ ಯೋಜಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಕಷ್ಟಸಾಧ್ಯ

ಈ ಲಸಿಕೆಗಳನ್ನು ಮೈನಸ್‌ 70 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸಾಗಾಟ ಮಾಡಲು ಅಗತ್ಯವಿರುವ ಟ್ರಕ್‌ಗಳು ಭಾರತದಲ್ಲಿ ಲಭ್ಯವಿಲ್ಲ. ಅಲ್ಲದೆ ನೂರಾರು ಕೋಟಿ‌ ಡೋಸ್‌ಗಳಷ್ಟು ಲಸಿಕೆಗಳನ್ನು ಹೀಗೆ ಸಾಗಿಸುವುದು ಕಾರ್ಯಸಾಧುವೂಅಲ್ಲ. ಲಸಿಕೆಗಳನ್ನು ಸಂಗ್ರಹಿಸಿ ಇಡಲು ಅಗತ್ಯವಿರುವ ಮೂಲಸೌಕರ್ಯಗಳು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿಲ್ಲ. ಹೀಗಾಗಿ ಫೈಝರ್ ಕಂಪನಿಯ ಲಸಿಕೆಯಿಂದ ಭಾರತಕ್ಕೆ ಹೆಚ್ಚು ಅನುಕೂಲವೇನೂ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಕಂಪನಿಯ ಜತೆ ಭಾರತದ ಯಾವ ಕಂಪನಿಯೂ ಲಸಿಕೆಗಾಗಿ ಒಪ್ಪಂದ ಮಾಡಿಕೊಂಡಿಲ್ಲ. ಹೀಗಾಗಿ ಈ ಲಸಿಕೆಯು ಶೀಘ್ರದಲ್ಲೇ ಭಾರತಕ್ಕೆ ಲಭ್ಯವಾಗುವ ಸಾಧ್ಯತೆ ಅತ್ಯಂತ ಕಡಿಮೆ. ಅಲ್ಲದೆ ಈ ಲಸಿಕೆಯು ಅತ್ಯಂತ ದುಬಾರಿಯೂ ಹೌದು.

ಐರೋಪ್ಯ ಒಕ್ಕೂಟ ಕಳವಳ

ಬ್ರಿಟನ್ ಅತ್ಯಂತ ಕ್ಷಿಪ್ರಗತಿಯಲ್ಲಿ ಕೋವಿಡ್ ಲಸಿಕೆಯನ್ನು ಪರಿಶೀಲಿಸಿ, ಅನುಮತಿ ನೀಡಿರುವುದರ ಬಗ್ಗೆ ಐರೋಪ್ಯ ಒಕ್ಕೂಟವು ಕಳವಳ ವ್ಯಕ್ತಪಡಿಸಿದೆ. ‘ಲಸಿಕೆಗೆ ಅನುಮತಿ ನೀಡುವಲ್ಲಿ ಬ್ರಿಟನ್‌ನಂತೆ ಯಾರೂ ಆತುರ ತೋರಬಾರದು’ ಎಂದು ಐರೋಪ್ಯ ಒಕ್ಕೂಟವು ಸದಸ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ.

‘ಲಸಿಕೆ ಬಳಕೆಗೆ ಅನುಮತಿ ನೀಡುವುದು ಅತ್ಯಂತ ದೀರ್ಘವಾದ ಪ್ರಕ್ರಿಯೆ. ನಿಧಾನವಾಗಿ ನಡೆದಾಗ ಮಾತ್ರ ಈ ಪ್ರಕ್ರಿಯೆ ಕರಾರುವಾಕ್ಕಾಗಿ ಇರುತ್ತದೆ. ಏಕೆಂದರೆ, ದೀರ್ಘಕಾಲ ಹೆಚ್ಚು ಸಾಕ್ಷ್ಯಗಳನ್ನು ಅವಲೋಕಿಸಬೇಕಾಗುತ್ತದೆ ಮತ್ತು ಬ್ರಿಟನ್‌ ನಡೆಸಿದ್ದಕ್ಕಿಂತ ಹೆಚ್ಚು ತಪಾಸಣೆಗಳನ್ನು ನಡೆಸಬೇಕಾಗುತ್ತದೆ. ಇಂತಹ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ, ಷರತ್ತುಬದ್ಧ ವಾಣಿಜ್ಯ ಅನುಮತಿ ನೀಡುವುದು ಹೆಚ್ಚು ಸೂಕ್ತ’ ಎಂದು ಯುರೋಪಿ ಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT