ಸೋಮವಾರ, ಸೆಪ್ಟೆಂಬರ್ 20, 2021
29 °C

ಚೀನಾಕ್ಕೂ ತಲೆನೋವಾಗಿರುವ ಡೆಲ್ಟಾ ವೈರಸ್‌: ಅನುಭವಿಸುತ್ತಿರುವ ಸಮಸ್ಯೆ ಏನು?

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕೊರೊನಾ ವೈರಾಣುವಿನ ಡೆಲ್ಟಾ ರೂಪಾಂತರವು ಚೀನಾದಲ್ಲೂ ವಿಸ್ತರಣೆ ಆಗುತ್ತಿರುವುದು ಅಲ್ಲಿನ ನಾಯಕರಿಗೆ ತಲೆನೋವು ತರಿಸಿದೆ. ಕೋವಿಡ್‌ ತಡೆಗಾಗಿ ಚೀನಾ ತನ್ನ ಪ್ರಮುಖ ನಗರಗಳಲ್ಲಿ ಜಾರಿಗೊಳಿಸಿರುವ ಕಠಿಣ ನಿಯಮಗಳಿಗೂ ಡೆಲ್ಟಾ ಸವಾಲಾಗಿ ಪರಿಣಮಿಸಿದೆ.

ಈ ರೂಪಾಂತರ ವೈರಸ್‌ ನಿಯಂತ್ರಣಕ್ಕೆ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಇತರ ದೇಶಗಳಲ್ಲಿನ ನಾಯಕರು ತಮ್ಮ ದೇಶಗಳಲ್ಲಿ ಕೋವಿಡ್‌ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯ ಜತೆಗೆ ವಿವಿಧ ಬಗೆಯ ನಿರ್ಬಂಧಗಳನ್ನು ಹೇರಲು ಮುಂದಾಗಿದ್ದಾರೆ. ಚೀನಾ ಸಹ ವುಹಾನ್‌ ಒಳಗೊಂಡಂತೆ ತನ್ನ ವಿವಿಧ ನಗರಗಳಲ್ಲಿ ಕಟ್ಟೆಚ್ಚರವಹಿಸಿದೆ. 15 ಲಕ್ಷ  ಜನಸಂಖ್ಯೆ ಹೊಂದಿರುವ ವುಹಾನ್‌ ನಗರಕ್ಕೆ ಪ್ರವೇಶವನ್ನು ಕಡಿತಗೊಳಿಸಿದೆ. ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಸಾಮೂಹಿಕ ಪರೀಕ್ಷೆಗೆ ಚೀನಾ ಆದೇಶಿಸಿದೆ.

ಆದರೆ ಕಳೆದ ವರ್ಷದ ರೀತಿಯೇ ದೇಶದಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಿದರೆ ಎದುರಾಗಬಹುದಾದ ಆರ್ಥಿಕ ಸಂಕಷ್ಟದ ಬಗ್ಗೆಯೂ ಚೀನಾ ಚಿಂತಿತವಾಗಿದೆ. ಇದಕ್ಕಾಗಿ ಚೀನಾ ತನ್ನ ಯೋಚನೆಯನ್ನು ಬದಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ವೈರಸ್‌ನೊಂದಿಗೆ ಹೇಗೆ ಸಹಭಾಳ್ವೆ ನಡೆಸಬಹುದು ಎಂಬುದನ್ನು ಜಗತ್ತು ಕಲಿಯಬೇಕು’ ಎಂದು ಶಾಂಘೈ ವೈದ್ಯ ಜಾಂಗ್ ವೆನ್ಹೋಂಗ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ 30 ಲಕ್ಷ ಫಾಲೋವರ್‌ಗಳಿದ್ದಾರೆ.

ಬೀಜಿಂಗ್‌ನಲ್ಲಿ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ಗೆ ಸಾವಿರಾರು ಕ್ರೀಡಾಪುಟಗಳು, ವರದಿಗಾರರು ಮತ್ತು ಇತರರು ಪ್ರವೇಶಿಸಿದಾಗ ಚೀನಾಗೆ ನಿಜವಾದ ಸವಾಲು ಎದುರಾಗಲಿದೆ. ಹೀಗಾಗಿಯೇ ಚೀನಾದ ನಾಯಕರು ದೇಶದಲ್ಲಿ ಉತ್ತಮ ಆರ್ಥಿಕ ಪರಿಸ್ಥಿತಿಗಳನ್ನು ಇರಬಯಸಿದ್ದಾರೆ.

ಕಳೆದ ಜುಲೈ 10ರಂದು ನಾನ್ಜಿಂಗ್‌ನಲ್ಲಿ ರಷ್ಯಾ ವಿಮಾನವನ್ನು ಸ್ವಚ್ಛಗೊಳಿಸಿದ ಸಿಬ್ಬಂದಿಯಲ್ಲಿ ಕೋವಿಡ್‌ ದೃಢಪಟ್ಟಿತ್ತು. ಜುಲೈ 14ರಿಂದ ವರದಿಯಾದ 1,142 ಸೋಂಕುಗಳಲ್ಲಿ ಅನೇಕವು ನಾನ್ಜಿಂಗ್‌ಗೆ ಸಂಬಂಧಿಸಿರುವುದು, ಚೀನಾ ನಾಯಕರನ್ನು ಚಿಂತೆಗೀಡು ಮಾಡಿದೆ. ಆದರೆ ಚೀನಾದಲ್ಲಿ ಫೆಬ್ರವರಿ ಆರಂಭದಿಂದ ಕೋವಿಡ್‌ ಸಾವಿನ ವರದಿಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು