ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ 104 ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಡೆಲ್ಟಾ ತಳಿ: ಡಬ್ಲ್ಯುಎಚ್ಒ ಆತಂಕ

Last Updated 13 ಜುಲೈ 2021, 8:00 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ ಜಿನೀವಾ: ’ವಿಶ್ವದಾದ್ಯಂತ ವೇಗವಾಗಿ ಸೋಂಕು ಹರಡುತ್ತಾ, ಸಾವಿನ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಿರುವ ’ಕೋವಿಡ್‌–19’ ಡೆಲ್ಟಾ ರೂಪಾಂತರ ತಳಿಯು ಪ್ರಸ್ತುತ 104 ರಾಷ್ಟ್ರಗಳಲ್ಲಿ ವಿಸ್ತರಿಸಿದ್ದು, ಶೀಘ್ರದಲ್ಲೇ ಇದೊಂದು ಪ್ರಬಲ ರೂಪಾಂತರ ತಳಿಯಾಗಿ, ವಿಶ್ವವವನ್ನೇ ಕಾಡುವ ಸಾಧ್ಯತೆ ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮುಖ್ಯಸ್ಥ ಟೆಡ್ರೊಸ್‌ ಗೆಬ್ರೇಷಿಯಸ್‌ ಎಚ್ಚರಿಸಿದ್ದಾರೆ.

’ನಾಲ್ಕು ವಾರಗಳಿಂದ ವಿಶ್ವದಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಆರು ವಲಯಗಳ ಪೈಕಿ,ಒಂದು ವಲಯದಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ’ಸೋಂಕು ಇಳಿಕೆಯಾಗಿ 10 ವಾರಗಳ ನಂತರ, ಮತ್ತೆ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಡೆಲ್ಟಾ ರೂಪಾಂತರ ಸೋಂಕಿನಿಂದ, ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಜನರ ಜೀವ, ಜೀವನೋಪಾಯ ಮತ್ತು ಜಾಗತಿಕ ಆರ್ಥಿಕ ಚೇತರಿಕೆ ಮೇಲೂ ಪರಿಣಾಮ ಉಂಟಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಆದರೆ, ಯಾವ ದೇಶದಲ್ಲೂ ಸಾಂಕ್ರಾಮಿಕ ರೋಗ ಪರಿಪೂರ್ಣವಾಗಿ ನಿವಾರಣೆಯಾಗಿಲ್ಲ’ ಎಂದು ಹೇಳಿದ ಟೆಡ್ರೊಸ್‌, ’ಈ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಇಡೀ ವಿಶ್ವವೇ ಒಟ್ಟಾಗಿ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

ಡೆಲ್ಟಾ ರೂಪಾಂತರ ಸೋಂಕು ಹರಡುತ್ತಿದ್ದರೂ, ಎಲ್ಲ ಕಡೆಯೂ ಒಂದೇ ರೀತಿಯಲ್ಲಿ ದಾಳಿ ಮಾಡುತ್ತಿಲ್ಲ ಎಂದು ಹೇಳಿದ ಟೆಡ್ರೊಸ್‌, ’ನಾವೀಗ ಎರಡು ಸಾಂಕ್ರಾಮಿಕಗಳ ನಡುವೆ ಜೀವನ ನಡೆಸುತ್ತಿದ್ದೇವೆ. ಇವೆರಡರ ನಡುವೆ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಿದೆ ಎಂದು ಅವರು ಸಲಹೆ ನೀಡಿದರು.

ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಪರಿಸ್ಥಿತಿ ತೀರ ಕೆಟ್ಟದಾಗಿದೆ ಎಂದು ಎಚ್ಚರಿಕೆ ನೀಡಿದ ಟೆಡ್ರೊಸ್‌ ಗೆಬ್ರೇಷಿಯಸ್‌ ಅವರು, ’ಡೆಲ್ಟಾ ಸೇರಿದಂತೆ ಹೆಚ್ಚು ವೇಗವಾಗಿ ಸೋಂಕು ಹರಡಬಲ್ಲ ರೂಪಾಂತರಿ ತಳಿಗಳು ಅಷ್ಟೇ ವೇಗವಾಗಿ ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತವೆ. ಸಾವಿನ ಪ್ರಮಾಣ ಏರಿಕೆಗೂ ಕಾರಣವಾಗುತ್ತವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT