ಶುಕ್ರವಾರ, ಅಕ್ಟೋಬರ್ 7, 2022
28 °C

ಗುಂಡು ಹಾರಿಸಿ 29 ನಾಯಿಗಳ ಹತ್ಯೆ: ಕತಾರ್‌ನಲ್ಲಿ ನಡೆಯಿತು ಮನಕಲಕುವ ಕೃತ್ಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

DH FILE IMAGE iStock

ದೋಹಾ: ಕಂಪೌಂಡ್ ಒಂದರ ಒಳಗೆ ಕೂಡಿಹಾಕಿ ರೈಫಲ್‌ನಿಂದ ಗುಂಡು ಹಾರಿಸಿ ಮರಿಗಳ ಸಹಿತ 29 ನಾಯಿಗಳನ್ನು ಹತ್ಯೆ ಮಾಡಿರುವ ಅಮಾನವೀಯ ಕೃತ್ಯ ಕತಾರ್‌ನಲ್ಲಿ ನಡೆದಿದೆ.

ಗಲ್ಫ್ ಒಕ್ಕೂಟದ ರಾಷ್ಟ್ರ ಕತಾರ್‌ನ ದೋಹಾದಲ್ಲಿ ಜುಲೈ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಾಯಿಗಳನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಬಗ್ಗೆ ಪ್ರಾಣಿದಯಾ ಸಂಘಟನೆಯ ಕಾರ್ಯಕರ್ತರು ಮತ್ತು ಹೋರಾಟಗಾರರು ಪ್ರಶ್ನಿಸಿದ ಬಳಿಕವಷ್ಟೇ ಪ್ರಕರಣ ಬಹಿರಂಗವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಹಾದಲ್ಲಿನ ಫ್ಯಾಕ್ಟರಿ ಒಂದರ ಗೇಟ್‌ನೊಳಗೆ ನಾಯಿಗಳನ್ನು ಮೊದಲು ಕೂಡಿಹಾಕಲಾಗಿದೆ. ಬಳಿಕ ಅವುಗಳಿಗೆ ಆಹಾರ ನೀಡುವ ನೆಪದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪ್ರಾಣಿಗಳ ಹಕ್ಕುಗಳ ಹೋರಾಟಗಾರರು ಹೇಳಿದ್ದಾರೆ.

ಗುಂಡೇಟಿನಿಂದ ಮರಿಗಳ ಸಹಿತ 29 ನಾಯಿಗಳು ಮೃತಪಟ್ಟಿವೆ. ಮೂರು ನಾಯಿಗಳು ಗಾಯಗೊಂಡಿದ್ದು, ಅವುಗಳ ಪೈಕಿ ಎರಡು ಗರ್ಭ ಧರಿಸಿದ್ದವುಗಳಾಗಿವೆ.

ಗೇಟ್ ಹಾಕಿದ ಬಳಿಕ ರೈಫಲ್ ಹೊಂದಿದ್ದ ಇಬ್ಬರು ವ್ಯಕ್ತಿಗಳು ನಾಯಿಗಳತ್ತ ಯದ್ವಾತದ್ವಾ ಗುಂಡು ಹಾರಿಸಿದ್ದಾರೆ.

ನಾಯಿಗಳ ಹತ್ಯೆಗೆ ಕಾರಣವೇನು ಎಂದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆ ಬಗ್ಗೆ ತನಿಖೆ ನಡೆಯಲಿದೆ. ಆದರೆ, ಇಸ್ಲಾಂನಲ್ಲಿ ನಾಯಿಗಳನ್ನು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಫ್ಯಾಕ್ಟರಿಯಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳ ಬಳಿ, ನಾಯಿ ನಮ್ಮಲ್ಲೊಬ್ಬರ ಮಗುವಿಗೆ ಕಚ್ಚಿದೆ ಎಂದು ಹೇಳಿ, ಒಳಪ್ರವೇಶಿಸಿದ್ದಾರೆ. ಬಳಿಕ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾಗಿ ಮತ್ತೋರ್ವ ಕಾರ್ಯಕರ್ತ ತಿಳಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ಶೂಟಿಂಗ್ ಅಭ್ಯಾಸ ಮಾಡುವ ಚಟಕ್ಕಾಗಿ ಕೆಲವರು ಗನ್ ತೆಗೆದುಕೊಂಡು, ನಾಯಿ, ಹಕ್ಕಿಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಅಮಾಯಕ ಪ್ರಾಣಿ–ಪಕ್ಷಿಗಳ ಹತ್ಯೆಯಾಗುತ್ತಿದೆ ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ನಾಯಿಗಳ ಸಾಮೂಹಿಕ ಹತ್ಯೆ ಬಗ್ಗೆ ಕತಾರ್ ಆಡಳಿತ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕತಾರ್‌ ಆಡಳಿತಗಾರರ ಸಹೋದರಿ ಶೇಖಾ ಅಲ್ ಮಯಾಸ ಬಿಂಟ್ ಹಮಾದ್ ಅಲ್ ಥಾನಿ ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು